ETV Bharat / state

ಶಿವಮೊಗ್ಗ: 300 ಅಡಿಕೆ ಗಿಡ ಕಿತ್ತೆಸೆದ ದುಷ್ಕರ್ಮಿಗಳು, ದೂರು ದಾಖಲು

author img

By ETV Bharat Karnataka Team

Published : Sep 1, 2023, 10:48 PM IST

ರೈತರೊಬ್ಬರ ಜಮೀನಿನಲ್ಲಿದ್ದ 300 ಅಡಿಕೆ ಗಿಡಗಳನ್ನು ಕಿತ್ತು ಹಾಕಿರುವ ಕುರಿತು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಡಿಕೆ ಗಿಡ ಕಿತ್ತುಹಾಕಿರುವುದು
ಅಡಿಕೆ ಗಿಡ ಕಿತ್ತುಹಾಕಿರುವುದು

ಅಡಿಕೆ ಗಿಡಗಳನ್ನು ಕಿತ್ತುಹಾಕಿರುವ ಬಗ್ಗೆ ಲೋಕೇಶಪ್ಪ ಅವರು ಪ್ರತಿಕ್ರಿಯಿಸಿದ್ದಾರೆ

ಶಿವಮೊಗ್ಗ: ಖಾತೆ ಜಮೀನು ಹೊಂದಿದ್ದ ಲೋಕೇಶಪ್ಪ ಎಂಬವರ ಜಮೀನಿನಲ್ಲಿದ್ದ ಸುಮಾರು 300 ಅಡಿಕೆ ಗಿಡಗಳನ್ನು ಕಿಡಿಗೇಡಿಗಳು ಕಿತ್ತು ಹಾಕಿರುವ ಕುರಿತು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭದ್ರಾವತಿ ತಾಲೂಕು ಜಂಗಮನಹಳ್ಳಿ ಸರ್ವೆ 14ರಲ್ಲಿ ಲೋಕೇಶಪ್ಪ ಎಂಬವರಿಗೆ ಸೇರಿದ ಅರ್ಧ ಎಕರೆ ಭೂಮಿ ಇದೆ. ಇವರು ತಮ್ಮ ಜಮೀನಿನಲ್ಲಿ ಕಳೆದೊಂದು ತಿಂಗಳ ಹಿಂದೆ 300 ಅಡಿಕೆ ಸಸಿಗಳನ್ನು ನೆಟ್ಟಿದ್ದರು.

ಲೋಕೇಶಪ್ಪ ಭದ್ರಾವತಿ ತಾಲೂಕು ಆನವೇರಿ ಗ್ರಾಮದ ನಿವಾಸಿಯಾಗಿದ್ದು, ಜಂಗಮನಹಳ್ಳಿಯಲ್ಲಿ ಭೂಮಿ ಹೊಂದಿದ್ದಾರೆ. ಇದೇ ಜಮೀನು ತಮಗೆ ಸೇರಬೇಕೆಂದು ಆನವೇರಿ ಗ್ರಾಮದ ರಫೀಕ್ ಹಾಗೂ ಅವರ ಸಹೋದರ ಫಯಾಜ್ ಆಗಾಗ್ಗೆ ಜಗಳವಾಡುತ್ತಿದ್ದರು. ಲೋಕೇಶಪ್ಪನವರು ತಮ್ಮ ಜಮೀನಿನಲ್ಲಿ ಲಕ್ಷಾಂತರ ರೂ. ಸಾಲ ಮಾಡಿ ಅಡಿಕೆ ಸಸಿಗಳನ್ನು ನೆಟ್ಟಿದ್ದರು.

ನಿನ್ನೆ ರಾತ್ರಿ (31-08-2023) ರಫೀಕ್ ಹಾಗೂ ಫಯಾಜ್ ರಾತ್ರಿ 10 ಗಂಟೆಯ ನಂತರ ತೋಟಕ್ಕೆ ನುಗ್ಗಿ 300 ಅಡಿಕೆ ಸಸಿಗಳನ್ನು ಕಿತ್ತು ಹಾಕಿದ್ದಾರೆ. ಈ ಕುರಿತು ಇಂದು ಬೆಳಗ್ಗೆ ರಫೀಕ್ ಹಾಗೂ ಫಯಾಜ್ ಅವರನ್ನು ಪ್ರಶ್ನಿಸಿದಾಗ ಲೋಕೇಶಪ್ಪನವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದೇ ವೇಳೆ ಆನವೇರಿ ಗ್ರಾಮದ ರಾಜಪ್ಪ ಬಂದು ಜಗಳ ಬಿಡಿಸಿದ್ದಾರೆ.

ರಫೀಕ್ ಹಾಗೂ ಫಯಾಜ್ ತಮಗೆ ಜೀವ ಬೆದರಿಕೆ ಹಾಕಿದ್ದಾರೆ. ತಮಗೆ ತಮ್ಮ ಜಮೀನು ಉಳಿಸಿಕೊಡಿ, ಇಬ್ಬರಿಂದ ಜೀವ ಬೆದರಿಕೆ ಇದೆ. ಅಡಿಕೆ ಗಿಡ ನಾಶವಾಗಿರುವ ನಷ್ಟ ತುಂಬಿಸಿಕೊಡುವಂತೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ಲೋಕೇಶಪ್ಪ ತಿಳಿಸಿದ್ದಾರೆ.

ಅಡಿಕೆ ಗಿಡ ಕಡಿದುಹಾಕಿ ಕಿಡಿಗೇಡಿಗಳ ಅಟ್ಟಹಾಸ: ಸುಮಾರು 750ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ದುಷ್ಕರ್ಮಿಗಳು ಕಡಿದು ಹಾಕಿರುವ ಘಟನೆ ದಾವಣಗೆರೆ ತಾಲ್ಲೂಕಿನ ಮುದಹದಡಿ-ದುರ್ಗಾಂಭಿಕಾ ಕ್ಯಾಂಪ್​ನಲ್ಲಿ (ಆಗಸ್ಟ್​- 7-2023) ನಡೆದಿತ್ತು. ಮುದಹದಡಿ ಗ್ರಾಮದ ರೈತ ಬೀರಪ್ಪ ಎಂಬವರಿಗೆ ಸೇರಿದ ಅಡಿಕೆ ತೋಟ ನಾಶವಾಗಿತ್ತು. ಹದಡಿ ಪೊಲೀಸ್​ ಠಾಣೆಯಲ್ಲಿ ಅವರು ಪ್ರಕರಣ ದಾಖಲಿಸಿದ್ದರು. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಭೇಟಿ ಪರಿಶೀಲನೆ ನಡೆಸಿದ್ದರು.

ಅಡಿಕೆಗೆ ಚಿನ್ನದ ಬೆಲೆ ಇರುವ ಕಾರಣ ಸಾಕಷ್ಟು ರೈತರು ಭತ್ತದ ಬೆಳೆ ಬೆಳೆಯುವ ಬದಲು ಅಡಿಕೆ ಬೆಳೆಯಲು ಮುಂದಾಗಿದ್ದರು. ಬೀರಪ್ಪ ಕೂಡ ಅಡಿಕೆಗೆ ಉತ್ತಮ ದರ ಸಿಗುತ್ತಿದೆ ಎಂದು ಭತ್ತದ ಬದಲು ಮೂರು ವರ್ಷಗಳ ಹಿಂದೆ 5 ಲಕ್ಷ ರೂ. ಖರ್ಚು ಮಾಡಿ ಅಡಿಕೆ ಗಿಡಗಳನ್ನು ಬೆಳೆಸಿದ್ದರು. ಇನ್ನೆರಡು ವರ್ಷ ಕಳೆದರೆ ಫಸಲು ಕೈ ಸೇರುತ್ತಿತ್ತು. ಆದರೆ ಕಿಡಿಗೇಡಿಗಳ ಅಟ್ಟಹಾಸಕ್ಕೆ ಗಿಡಗಳು ನೆಲಕಚ್ಚಿವೆ. ರೈತ ಹಾಗು ಆತನ ಕುಟುಂಬಸ್ಥರಿಗೆ ದಿಕ್ಕೇ ತೋಚದಂತಾಗಿದೆ. ನಾಶವಾದ ಅಡಿಕೆ ತೋಟ ಕಂಡು ವೃದ್ದೆ ಗೋಳಾಡಿದ ದೃಶ್ಯ ಮನಕಲಕುವಂತಿತ್ತು.

ಇದನ್ನೂ ಓದಿ: ದಾವಣಗೆರೆ: 750ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ಕಡಿದುಹಾಕಿ ಕಿಡಿಗೇಡಿಗಳ ಅಟ್ಟಹಾಸ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.