ETV Bharat / state

ಕೆಎಸ್‍ಐಐಡಿಸಿ ಅಧ್ಯಕ್ಷರಿಂದ ಶಿವಮೊಗ್ಗ ವಿಮಾನ ನಿಲ್ದಾಣ ಪರಿವೀಕ್ಷಣೆ: ತಿಂಗಳಾಂತ್ಯಕ್ಕೆ ಪ್ರಧಾನಿಯಿಂದ ಉದ್ಘಾಟನೆ

author img

By

Published : Feb 1, 2023, 8:21 PM IST

ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣಕ್ಕೆ ಕೆಎಸ್‍ಐಐಡಿಸಿ ತಂಡ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದೆ.

Inspection of Shivamogga Airport by KSIIDC Chairman
ಕೆಎಸ್‍ಐಐಡಿಸಿ ಅಧ್ಯಕ್ಷರಿಂದ ವಿಮಾನ ನಿಲ್ದಾಣ ಪರಿವೀಕ್ಷಣೆ

ಶಿವಮೊಗ್ಗ: ಫೆಬ್ರವರಿ‌ 27 ರಂದು ಉದ್ಘಾಟನೆಯಾಗಲಿರುವ ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣಕ್ಕೆ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್ (ಕೆಎಸ್‍ಐಐಡಿಸಿ)ನ ಅಧ್ಯಕ್ಷ ಡಾ.ಕೆ.ಶೈಲೇಂದ್ರ ಬೆಲ್ದಾಳೆ ಅವರು ಮತ್ತು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 3,050 ಮೀ ಉದ್ದ, 45 ಮೀ ಅಗಲದ ರನ್‍ವೇ, ಆರ್​ಇಎಸ್‍ಎ, ಬಾಹ್ಯ(ಪೆರಿಫಿರಲ್) ರಸ್ತೆ, ಎಪ್ರಾನ್, ಟ್ಯಾಕ್ಸಿ ವೇ, ಕಾಂಪೌಂಡ್, ಕಾರ್ ಪಾರ್ಕಿಂಗ್ ಏರಿಯಾ ಇತರೆ ಕಾಮಗಾರಿಗಳು ಹಾಗೂ 4,340 ಚದರ ಮೀಟರ್ ಅಳತೆಯಲ್ಲಿ ಪ್ಯಾಸೆಂಜರ್ ಟರ್ಮಿನಲ್ ಬಿಲ್ಡಿಂಗ್, 2,347 ಚದುರ ಮೀಟರ್ ಅಳತೆಯಲ್ಲಿ ಎಟಿಸಿ ಕಟ್ಟಡ, 02 ಎಲೆಕ್ಟ್ರಿಕ್ ಸಬ್ ಸ್ಟೇಷನ್, 01 ಫೈರ್ ಸ್ಟೇಷನ್ ಹಾಗೂ ಇತರೆ ಕಾಮಗಾರಿಗಳನ್ನು ಅವರು ಪರಿವೀಕ್ಷಿಸಿದರು.

ಪ್ರಧಾನಮಂತ್ರಿಗಳ ಆಗಮನದ ಹಿನ್ನೆಲೆಯಲ್ಲಿ ವಿಮಾನ ಹಾರಾಟದ ಅನುಮತಿಗೆ ಬೇಕಾದ ಪ್ರಕ್ರಿಯೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿ ಅವರು ಸೂಚನೆ ನೀಡಿದರು. ಅತ್ಯಂತ ಶೀಘ್ರ ಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಶ್ರಮಿಸಿದ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರರಿಗೆ ಇದೇ ವೇಳೆ ಅಭಿನಂದನೆ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಕೆಎಸ್‍ಐಐಡಿಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಎಂ.ಆರ್ ರವಿ, ನಿಗಮದ ನಿರ್ದೇಶಕರುಗಳಾದ ಸಿ.ಎನ್.ಗಾಯತ್ರಿ ದೇವಿ, ಭಾರತಿ ಮಲ್ಲಿಕಾರ್ಜುನಪ್ಪ ಅಲವಂಡಿ, ಎಸ್ ಮಹಾದೇವಿಸ್ವಾಮಿ ಉಪಸ್ಥಿತರಿದ್ದರು.

ಯಡಿಯೂರಪ್ಪ ಕನಸು: ಬಿ.ಎಸ್. ಯಡಿಯೂರಪ್ಪ ಅವರು 2008ರಲ್ಲಿ ಸಿಎಂ ಆಗಿದ್ದ ವೇಳೆ ವಿಮಾನ ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ್ದರು. ಬಳಿಕ ನಡೆದ ರಾಜಕೀಯ ವಿದ್ಯಮಾನಗಳಿಂದ ವಿಮಾನ ನಿಲ್ದಾಣ ಕಾಮಗಾರಿ ಕುಂಟುತ್ತಾ ಸಾಗಿತ್ತು. ಯಡಿಯೂರಪ್ಪ ಮತ್ತೆ ಸಿಎಂ ಆದ ಬಳಿಕ ಕಾಮಗಾರಿಗೆ ವೇಗ ನೀಡಿದ್ದರು. ಇದೀಗ ಕಾಮಗಾರಿಗೆ ಕೊನೆಯ ಹಂತಕ್ಕೆ ಬಂದಿದ್ದು ಫೆಬ್ರವರಿ 27ರಂದು ಪ್ರಧಾನಿಯಿಂದ ಲೋಕಾರ್ಪಣೆ ಆಗಲಿದೆ. ವಿಮಾನ ನಿಲ್ದಾಣದ ಟರ್ಮಿನಲ್​ ಅ​ನ್ನು ಕಮಲದ ಆಕೃತಿಯಲ್ಲಿ ಮಾಡಲಾಗಿದ್ದು, ಈ ಬಗ್ಗೆ ಕಾಂಗ್ರೆಸ್​ ಬಿಜೆಪಿ ಚಿಹ್ನೆ ಎಂದು ಟೀಕಿಸಿತ್ತು. ಇದಕ್ಕೆ ಭಾಜಪದವರು ಕಮಲ ಲಕ್ಷ್ಮೀ ಸಂಕೇತ ಎಂದು ತಿರುಗೇಟು ನೀಡಿದ್ದರು.

ನಾಮಕರಣ ವಿಚಾರ: ವಿಮಾನ ನಿಲ್ದಾಣಕ್ಕೆ ಕುವೆಂಪು, ಶಾಂತವೇರಿ ಗೋಪಾಲಗೌಡ, ಕೆಳದಿ ಶಿವಪ್ಪನಾಯಕ, ಅಕ್ಕಮಹಾದೇವಿ, ಎಸ್.ಬಂಗಾರಪ್ಪ ಹಾಗೂ ಬಿ.ಎಸ್.ಯಡಿಯೂರಪ್ಪ ಅವರ ಹೆಸರಿಡುವಂತೆ ಒತ್ತಾಯ ಕೇಳಿಬಂದಿತ್ತು. ಆದರೆ ರಾಜ್ಯ ಸರ್ಕಾರವು ಯಡಿಯೂರಪ್ಪ ಅವರ ಹೆಸರಿಡುವುದಾಗಿ ಕಳೆದ ವರ್ಷ ಘೋಷಿಸಿತ್ತು. ಈ ಬೆನ್ನಲ್ಲೇ ಯಡಿಯೂರಪ್ಪ ಅವರು ಪತ್ರ ಬರೆದು, ತನ್ನ ಹೆಸರು ಇಡುವುದು ಬೇಡ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದರು. ಹಲವು ಮಹನೀಯರಿದ್ದಾರೆ ಅವರ ಹೆಸರಿಡಿ ಎಂದು ಮಾಜಿ ಸಿಎಂ ಪತ್ರದಲ್ಲಿ ಉಲ್ಲೇಖಿಸಿದ್ದರು.

ಇದನ್ನೂ ಓದಿ: ಶಿವಮೊಗ್ಗ ಏರ್ಪೋರ್ಟ್​ಗೆ 20 ಸ್ವಾಮೀಜಿಗಳ ಜೊತೆ ಬಿವೈ ಸಹೋದರರ ಭೇಟಿ: ಕೊನೆ ಹಂತದ ಕಾಮಗಾರಿ ವೀಕ್ಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.