ETV Bharat / state

ಮಳೆಗೆ ಕುಸಿದು ಬಿದ್ದ ಮನೆ ಗೋಡೆ: ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ

author img

By

Published : Jul 15, 2022, 8:49 PM IST

ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರೆದಿದೆ. ಶಿವಮೊಗ್ಗ ನಗರದ ಸೋಮಿನಕೊಪ್ಪ ಬಡಾವಣೆಯಲ್ಲಿ ಮನೆಯೊಂದರ ಗೋಡೆ ಸಂಪೂರ್ಣ ಕುಸಿದು ಬಿದ್ದಿದೆ. ಅದೇ ರೀತಿಯಾಗಿ ಸೊರಬ ತಾಲೂಕಿನ ಕತವಾಯಿ ಗ್ರಾಮದಲ್ಲಿ ಮನೆ ಮೇಲೆ ಮರಗಳು ಉರುಳಿ ಬಿದ್ದಿವೆ.

house-wall-collapsed-due-to-rain-in-shivamogga
ಮಳೆಗೆ ಕುಸಿದು ಬಿದ್ದ ಮನೆ ಗೋಡೆ: ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ

ಶಿವಮೊಗ್ಗ: ನಗರದ ಸೋಮಿನಕೊಪ್ಪ ಬಡಾವಣೆಯ ಮಸೀದಿ ರಸ್ತೆಯಲ್ಲಿ ಮಳೆಯ ಕಾರಣದಿಂದ ಶುಕ್ರವಾರ ಮುಂಜಾನೆ ಮನೆಯೊಂದರ ಗೋಡೆ ಸಂಪೂರ್ಣ ಕುಸಿದು ಬಿದ್ದಿದ್ದು, ಮನೆಯಲ್ಲಿ ನಿದ್ರಿಸುತ್ತಿದ್ದ ಕುಟುಂಬದವರು ಕೂದಲೆಳೆ ಅಂತರದಲ್ಲಿ ಅನಾಹುತದಿಂದ ಪಾರಾಗಿದ್ದಾರೆ.

ಕೂಲಿ ಕೆಲಸ ಮಾಡಿ ಜೀವನ ನಿರ್ವಹಿಸುವ, ಬಡ ವರ್ಗದ ಅಬ್ದುಲ್ ಜಬ್ಬಾರ್ ಎಂಬುವರಿಗೆ ಈ ಮನೆ ಸೇರಿದ್ದಾಗಿದೆ. ಇತ್ತೀಚೆಗೆ ಬೀಳುತ್ತಿರುವ ಭಾರಿ ಮಳೆಯಿಂದ ಮನೆಯ ಗೋಡೆ ನೆನೆದಿತ್ತು. ಮುಂಜಾನೆ 2 ಗಂಟೆ ಸುಮಾರಿಗೆ ಏಕಾಏಕಿ ಕುಸಿದು ಬೀಳಲಾರಂಭಿಸಿತ್ತು. ಗೋಡೆ ಏನಾದರೂ ಒಳಭಾಗದಲ್ಲಿ ಬಿದ್ದಿದ್ದರೆ ಪಕ್ಕದಲ್ಲಿಯೇ ಮಲಗಿದ್ದ ಕುಟುಂಬ ಸದಸ್ಯರಿಗೆ ಅಪಾಯವಾಗುತ್ತಿತ್ತು. ಸ್ವಲ್ಪದರಲ್ಲಿಯೇ ಅನಾಹುತ ತಪ್ಪಿದೆ ಎಂದು ಅಬ್ದುಲ್ ಜಬ್ಬಾರ್ ತಿಳಿಸಿದ್ದಾರೆ.

ಕುಟುಂಬಕ್ಕೆ ಆಧಾರವಾಗಿದ್ದ ಮನೆಯೇ ಕುಸಿದು ಬಿದ್ದಿದೆ. ಉಳಿದ ಗೋಡೆಯೂ ಅಪಾಯಕಾರಿ ಸ್ಥಿತಿಯಲ್ಲಿದೆ. ಬಡ ಕುಟುಂಬಕ್ಕೆ ತಕ್ಷಣವೇ ಜಿಲ್ಲಾಡಳಿತ ಸೂಕ್ತ ಪರಿಹಾರ ಕಲ್ಪಿಸಬೇಕು. ವಾಸಕ್ಕೆ ಮನೆ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರೆದಿದೆ

ತಾಯಿ - ಮಗ ಪಾರು: ಇತ್ತ, ಸೊರಬ ತಾಲೂಕಿನ ಚಂದ್ರಗುತ್ತಿ ಸಮೀಪದ ಕತವಾಯಿ ಗ್ರಾಮದಲ್ಲಿ ಬಿರುಸಿನ ಗಾಳಿ ಮತ್ತು ಮಳೆಗೆ ಮನೆ ಮೇಲೆ ಮರಗಳು ಉರುಳಿದ ಪರಿಣಾಮ ತಾಯಿ ಮತ್ತು ಮಗ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ. 60 ವರ್ಷದ ವೃದ್ಧೆ ಕಾಮಾಕ್ಷಮ್ಮ ತಿಮ್ಮಪ್ಪ ಹಾಗೂ ದೇವರಾಜ ತಿಮ್ಮಪ್ಪ ಎಂಬುವವರೇ ಗಾಯಗೊಂಡವರು.

ಮನೆಯಲ್ಲಿ ಬೆಳಗ್ಗೆ ಉಪಹಾರ ಸೇವಿಸುವ ವೇಳೆಯಲ್ಲಿ ಗಾಳಿ, ಮಳೆಗೆ ಬೃಹತ್ ಗಾತ್ರದ ಹುಣಸೆಮರ ಹಾಗೂ ಎರಡು ತೆಂಗಿನ ಮರಗಳು ಮನೆಯ ಛಾವಣಿ ಮೇಲೆ ಬಿದ್ದಿವೆ. ಅದೃಷ್ಟವಶಾತ್​ ಮನೆಯಲ್ಲಿದ್ದ ತಾಯಿ ಮತ್ತು ಮಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಮನೆ, ಕೊಟ್ಟಿಗೆ ಮತ್ತು ಶೌಚಗೃಹ ಸಾಕಷ್ಟು ಹಾನಿಯಾಗಿದೆ. ಈ ಸಮಯದಲ್ಲಿ ಮನೆಯ ಯಜಮಾನ ತಿಮ್ಮಪ್ಪ ಮಾರ್ಯಾಪ್ಪ ನೆರೆಯ ಮೂಡಜೋಳಿಗೆ ಗ್ರಾಮದ ಸಂಬಂಧಿಕರ ಮನೆಗೆ ತೆರಳಿದ್ದರು.

ಗಾಯಾಳುಗಳಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪ್ರಭಾರ ಉಪತಹಶೀಲ್ದಾರ್ ಶಿವಪ್ರಸಾದ್, ಗ್ರಾಪಂ ಪಿಡಿಒ ನಾಗೇಂದ್ರ, ಗ್ರಾಪಂ ಅಧ್ಯಕ್ಷ ಎಂ.ಪಿ.ರತ್ನಾಕರ, ಸದಸ್ಯ ರೇಣುಕಾಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಭದ್ರಾವತಿಯಲ್ಲಿ ಉಕ್ಕಿದ ಭದ್ರೆ: ಮೂರು ಕಡೆ ಕಾಳಜಿ ಕೇಂದ್ರ ತೆರೆದ ಜಿಲ್ಲಾಡಳಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.