ETV Bharat / state

ಹೊಟ್ಟೆಪಾಡಿಗಾಗಿ ಆಫ್ರಿಕಾದಲ್ಲಿ ಗಿಡಮೂಲಿಕೆ ಮಾರುವ ಹಕ್ಕಿಪಿಕ್ಕಿಗಳು: ಇವರಿಗಿವೆ ಹಲವು ಸವಾಲು

author img

By ETV Bharat Karnataka Team

Published : Nov 26, 2023, 6:10 PM IST

Updated : Nov 26, 2023, 6:45 PM IST

ಗಿಡಮೂಲಿಕೆ ಎಣ್ಣೆ ಸೇರಿದಂತೆ ಇತರೆ ವಸ್ತುಗಳನ್ನು ಶಿವಮೊಗ್ಗದ ಹಕ್ಕಿಪಿಕ್ಕಿಗಳು ಆಫ್ರಿಕಾದಲ್ಲಿ ಮಾರಾಟ ಮಾಡುತ್ತ ಬದುಕು ಸಾಗಿಸುತ್ತಿದ್ದಾರೆ. ಇವರ ಕಥೆ - ವ್ಯಥೆಯ ಮಾಹಿತಿ ಇಲ್ಲಿದೆ.

Etv Bharathakki-pikki-community-from-shivamogga-selling-herbs-in-africa
ಹೊಟ್ಟೆಪಾಡಿಗಾಗಿ ಆಫ್ರಿಕಾದಲ್ಲಿ ಗಿಡಮೂಲಿಕೆ ಮಾರುತ್ತಿರುವ ಹಕ್ಕಿಪಿಕ್ಕಿಗಳು: ಏನಿವರ ಕಥೆ?

ಹೊಟ್ಟೆಪಾಡಿಗಾಗಿ ಆಫ್ರಿಕಾದಲ್ಲಿ ಗಿಡಮೂಲಿಕೆ ಮಾರುವ ಹಕ್ಕಿಪಿಕ್ಕಿಗಳು

ಶಿವಮೊಗ್ಗ: ಇಲ್ಲಿನ ಅಲೆಮಾರಿ ಹಕ್ಕಿಪಿಕ್ಕಿ ಜನಾಂಗದವರು ತಮ್ಮ ಜೀವನ ನಿರ್ವಹಣೆಗೆ ವಿದೇಶಗಳನ್ನು ಆಸರೆ ಮಾಡಿಕೊಂಡಿದ್ದಾರೆ. ಹೌದು, ಕಾಡಿನಿಂದ ಹೊರ ಬಂದು ತಮ್ಮ ಸಾಂಪ್ರದಾಯಿಕ ವೃತ್ತಿಯನ್ನು ಬಿಟ್ಟು ನಾಡಿನಲ್ಲಿ ಬದುಕು ಕಟ್ಟಿಕೊಳ್ಳಲು ಈ ಜನಾಂಗದವರು ಈಗ ವಿದೇಶಗಳಿಗೆ ಹೋಗಿ ವ್ಯಾಪಾರ ಮಾಡುತ್ತಿದ್ದಾರೆ.

ಶಿವಮೊಗ್ಗ ತಾಲೂಕು ಸದಾಶಿವಪುರ ಗ್ರಾಮದಲ್ಲಿ ಸುಮಾರು 2,500 ಸಾವಿರ ಜನಸಂಖ್ಯೆ ಇರುವ ಹಕ್ಕಿಪಿಕ್ಕಿಗಳು ಜೀವನ ನಿರ್ವಹಣೆಗೆ ಸಣ್ಣಪುಟ್ಟ ವ್ಯಾಪಾರ ನಡೆಸಿಕೊಂಡು ಬರುತ್ತಿದ್ದಾರೆ. ಸುಮಾರು 40 ವರ್ಷಗಳ ಹಿಂದೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಇದ್ದ ಹಕ್ಕಿಪಿಕ್ಕಿಯರನ್ನು ಒಂದೆಡೆ ನೆಲೆಸುವಂತೆ ಮಾಡಲು ಶಿವಮೊಗ್ಗ ತಾಲೂಕು ಹಸೂಡಿ ಫಾರಂ ಪಕ್ಕದ ಅರಣ್ಯ ಪ್ರದೇಶವನ್ನು ಇವರಿಗೆ ನೀಡಲಾಗಿತ್ತು. ಇಲ್ಲಿ ಬಂದು ನೆಲೆಸಿದ್ದ ಹತ್ತಾರು ಕುಟುಂಬಗಳು ಈಗ ನೂರಾರು ಕುಟುಂಬಗಳಾಗಿವೆ.

ಮೊದಲು ನಗರ, ಗ್ರಾಮಗಳಿಗೆ ಸಣ್ಣಪುಟ್ಟ ಪ್ಲಾಸ್ಟಿಕ್ ವಸ್ತುಗಳನ್ನು ಮಾರುತ್ತಿದ್ದ ಇವರು ಈಗ ಗಿಡಮೂಲಿಕೆಗಳಿಂದ ತಯಾರಿಸಿದ ತಲೆ ಕೂದಲು ಎಣ್ಣೆ (ಹೇರ್​ ಆಯಿಲ್)​ ಮಾರಾಟ ಮಾಡುತ್ತಿದ್ದಾರೆ. ಈ ಎಣ್ಣೆಗೆ ಆಫ್ರಿಕಾ ಖಂಡ, ಮಲೇಷಿಯಾ ಸೇರಿದಂತೆ ವಿವಿಧ ದೇಶಗಳಲ್ಲಿ ಡಿಮ್ಯಾಂಡ್ ಇದೆ. ಇದನ್ನು ಮನಗಂಡ ಹಕ್ಕಿಪಿಕ್ಕಿಗಳು ಆಫ್ರಿಕಾ ಖಂಡಕ್ಕೆ ತೆರಳಿ ವ್ಯಾಪಾರ ಪ್ರಾರಂಭಿಸಿದ್ದರು. ಅಲ್ಲಿ ಇವರು ತಯಾರಿಸಿದ ಗಿಡಮೂಲಿಕೆ ಎಣ್ಣೆ ಸೇರಿದಂತೆ ಇತರೆ ವಸ್ತುಗಳಿಗೆ ಹೆಚ್ಚು ಬೇಡಿಕೆ ಇರುವ ಕಾರಣ ಕರ್ನಾಟಕದಿಂದಲೇ ಸಾವಿರಕ್ಕೂ ಅಧಿಕ ಮಂದಿ ಆಫ್ರಿಕಾಕ್ಕೆ ಹೋಗಿದ್ದಾರೆ.

ವಿದೇಶಗಳಿಗೆ ಹಕ್ಕಿಪಿಕ್ಕಿಗಳು ಹೋಗುವ ಕುರಿತು ಸದಾಶಿವಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಿವು ಮಾತನಾಡಿ, "ನಮ್ಮ ಗ್ರಾಮದ ಹತ್ತಾರು ಮಂದಿ ವಿದೇಶಕ್ಕೆ ಹೋಗಿದ್ದಾರೆ. ಅಲ್ಲಿ ತಮಗೆ ತಿಳಿದಿರುವ ಗಿಡಮೂಲಿಕೆಗಳಿಂದ ತಯಾರಿಸಿರುವ ಎಣ್ಣೆ, ರುದ್ರಾಕ್ಷಿ ಸೇರಿದಂತೆ ವಿವಿಧ ಸರಗಳನ್ನು ಮಾರಾಟ ಮಾಡಿ, ಹಣ ಗಳಿಸುತ್ತಾರೆ. ತಮ್ಮ ಕುಟುಂಬ ನಿರ್ವಹಣೆಗಾಗಿ ಆಫ್ರಿಕಾ ಖಂಡಕ್ಕೆ ತೆರಳುತ್ತಾರೆ. ನಮ್ಮೂರಿನಲ್ಲಿ ದುಡಿಮೆ ಮಾಡಲು ಯಾವುದೇ ಕೆಲಸ ಸಿಗದೆ ಇರುವುದರಿಂದ ಹೊರ ದೇಶಗಳಿಗೆ ಹೋಗ್ತಾ ಇದ್ದಾರೆ" ಎಂದರು.

ವಿದೇಶಗಳಿಗೆ ಹೋಗಿ ವ್ಯಾಪಾರ ಮಾಡುವುದು ಅನಿವಾರ್ಯ: ಸೂಡಾನ್​ನಲ್ಲಿ ನಡೆದ ಆಂತರಿಕ ಯುದ್ಧದಲ್ಲಿ ಸಿಲುಕಿಕೊಂಡಿದ್ದ ವಿಶ್ವನಾಥ್ ಮಾತನಾಡಿ, "ಸೂಡಾನ್ ನಲ್ಲಿ ಯುದ್ಧ ಪ್ರಾರಂಭವಾದಾಗ ನಾವು ಮನೆಗೆ ಜೀವಂತವಾಗಿ ಬರುವ ಬಗ್ಗೆ ಯಾವುದೇ ನಂಬಿಕೆ ಇರಲಿಲ್ಲ. ಅಲ್ಲಿ ನಮಗೆ ರಕ್ಷಣೆ ಇರಲಿಲ್ಲ. ನಮ್ಮನ್ನು ಭಾರತಕ್ಕೆ ವಾಪಸ್ ಕರೆತಂದ ಕೇಂದ್ರ ಸರ್ಕಾರಕ್ಕೆ ನಾವು ಚಿರಋಣಿ. ನಮ್ಮ ತಂದೆ - ತಾಯಿ ನಮಗೆ ಓದು ಬರಹ ಕಲಿಸಲಿಲ್ಲ. ಆದರೆ ನಾವು ನಮ್ಮ ಮಕ್ಕಳಿಗೆ ಓದು ಬರಹ ಕಲಿಸಬೇಕು. ಇದಕ್ಕಾಗಿ ನಾವು ದುಡಿಯಬೇಕು. ಮಕ್ಕಳ ವಿದ್ಯಾಭ್ಯಾಸ, ಸಂಸಾರ ನಡೆಸಲು ಹಣ ಗಳಿಸಲೇಬೇಕು. ಆದರೆ ಈಗ ಮತ್ತೆ ಆಫ್ರಿಕಾ ಖಂಡಕ್ಕೆ ಹೋಗಲು ನಮ್ಮ ಬಳಿ ಪಾಸ್ ​ಪೋರ್ಟ್​ಗಳಿಲ್ಲ. ಸರ್ಕಾರ ನಮಗೆ ಯಾವುದೇ ಭೂಮಿಯನ್ನು‌ ನೀಡಿಲ್ಲ " ಎಂದು ಅಳಲು ತೋಡಿಕೊಂಡಿದ್ದಾರೆ.

ಸೂಡಾನ್​ಗೆ ಹೋಗಿ ಬಂದಿರುವ ಜ್ಯೋತಿ ಮಾತನಾಡಿ, "ನಮಗೆ ನಮ್ಮ ಊರಿನಲ್ಲಿ ಯಾವುದೇ ಕೆಲಸ ಇಲ್ಲ. ಇದರಿಂದ ನಮ್ಮ ಪೂರ್ವಿಕರಿಂದ ಕಲಿತ ಗಿಡಮೂಲಿಕೆ ತಯಾರಿಕೆ ವಿದ್ಯೆಯಿಂದ ಗಿಡಮೂಲಿಕೆಗಳನ್ನು ತಯಾರಿಸಿ ಆಫ್ರಿಕಾ ಖಂಡದ ಎಲ್ಲಾ ದೇಶಗಳಿಗೆ ಹೋಗುತ್ತೇವೆ. ಅಲ್ಲಿನ ಜನರಿಗೆ ಕೂದಲು ಉದ್ದ ಬೆಳೆಯುವುದಿಲ್ಲ. ಇದರಿಂದ ಅವರು ನಮ್ಮ ಎಣ್ಣೆಯನ್ನು ಹೆಚ್ಚು ಇಷ್ಟಪಡುತ್ತಾರೆ. ಒಮ್ಮೊಮ್ಮೆ ಲಾಭ ಆಗುತ್ತದೆ. ಕೆಲವೊಮ್ಮೆ ನಷ್ಟವಾಗುತ್ತದೆ. ಸೂಡಾನ್​ಗೆ ಹೋದ ನಮಗೆಲ್ಲಾ ನಷ್ಟ ಉಂಟಾಯಿತು. ಅಲ್ಲಿ ಒಂದು ಹೂತ್ತಿನ ಊಟಕ್ಕೂ ಪರದಾಡಿದ್ದೆವು. ವಿದೇಶಗಳಲ್ಲಿ ಗಳಿಸಿದ್ರೆ ಆ ಹಣವನ್ನು ನಮ್ಮ ಮಕ್ಕಳಿಗೆ ಕಳುಹಿಸಿಕೊಡುತ್ತೇವೆ" ಎಂದು ಹೇಳಿದರು.

ವಿದೇಶಗಳಲ್ಲಿ ಎದುರಾಗುವ ಸಮಸ್ಯೆಯ ಕುರಿತು ಅರುಣಾ ಮಾತನಾಡಿ, "ನಾವು ಇಲ್ಲಿಂದ ಗಿಡಮೂಲಿಕೆಗಳ ಎಣ್ಣೆ, ಔಷಧಿ, ಸರಗಳನ್ನು ತೆಗೆದುಕೊಂಡು ಹೋಗುವಾಗ ಭಾರತದ ಏರ್​ಪೋರ್ಟ್​ನಲ್ಲಿ ಆರ್ಯವೇದ ಔಷಧ ಎಂದು ಹೇಳಿದರೆ ಕಳುಹಿಸುತ್ತಾರೆ. ಆದರೆ ವಿದೇಶದಲ್ಲಿ ಇದಕ್ಕೆ ದಾಖಲೆ ಕೇಳುತ್ತಾರೆ. ಸರ್ಕಾರದ ಅನುಮತಿ ಪತ್ರವನ್ನು ಕೇಳುತ್ತಾರೆ. ಮೊದಲು ಇವರೆಲ್ಲಾ ಪ್ರವಾಸಿ ವೀಸಾದ ಮೇಲೆ ವಿದೇಶಕ್ಕೆ ಹೋಗುತ್ತಾರೆ. ನಂತರ ತಮ್ಮ ವೀಸಾದ ಅವಧಿಯನ್ನು ವಿಸ್ತರಿಸುತ್ತಾರೆ. 6 ತಿಂಗಳಿಗೊಮ್ಮೆ ಅಥವಾ 1 ವರ್ಷಕ್ಕೊಮ್ಮೆ ಭಾರತಕ್ಕೆ ವಾಪಸ್ ಬರುತ್ತೇವೆ" ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಬಿಸಾಡುವ ಬಾಳೆ ದಿಂಡಿನಿಂದ ಬದುಕು ಬಂಗಾರ: ಮೋದಿ 'ಮನ್ ಕಿ ಬಾತ್'ನಲ್ಲಿ ಚಾಮರಾಜನಗರದ ಮಹಿಳೆಗೆ ಮೆಚ್ಚುಗೆ

Last Updated : Nov 26, 2023, 6:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.