ಹುಣಸೋಡು ಸ್ಫೋಟ ಪ್ರಕರಣ : ಕಾಣೆಯಾದವರ ಕುಟುಂಬದವರ ಗೋಳು ಕೇಳೋರು ಯಾರು!?

author img

By

Published : Sep 20, 2021, 7:03 PM IST

Updated : Sep 20, 2021, 9:52 PM IST

Explosion case in Shimoga taluk Hunasodu village

ಬೆಳಗ್ಗೆ ಪ್ರವೀಣ್ ಸಾವನ್ನಪ್ಪಿದ್ದಾರೆ. ಅವನ ಜೊತೆ ಹೋದ ನಾಗರಾಜ್ ಸಹ ಸಾವನ್ನಪ್ಪಿದ್ದಾರೆ ಅಂತಾ ಶವಗಳನ್ನು ನೋಡಿದ್ರೆ ಗುರುತು ಪತ್ತೆಯಾಗಲಿಲ್ಲ. ನಾಗರಾಜ್ ಕೈಮೇಲೆ ಮೀನಿನ ಹಚ್ಚೆ ಜೊತೆ ಪತ್ನಿ ಹಾಗೂ ಮಗನ ಹೆಸರು ಹಚ್ಚೆ ಹಾಕಿಸಿಕೊಂಡಿದ್ದನು. ಇದರಿಂದ ಅವರ ಗುರುತು ಪತ್ತೆಯಾಗಿಲ್ಲ.‌ ಅಂದೇ ನಾಗರಾಜ್ ಮಿಸ್ಸಿಂಗ್ ಅಂತಾ ಅವರ ಪತ್ನಿ ಶಾಂತಮ್ಮ ದೂರ‌ು ದಾಖಲಿಸಿದ್ದರು.‌.

ಶಿವಮೊಗ್ಗ : ಜನವರಿ 21ರ ರಾತ್ರಿ ನಡೆದ ಶಿವಮೊಗ್ಗ ತಾಲೂಕು ಹುಣಸೋಡು ಗ್ರಾಮದ ಎಸ್ ಎಸ್ ಸ್ಟೋನ್ ಕ್ರಷರ್ ಬಳಿ ನಡೆದ ಸ್ಫೋಟದಲ್ಲಿ ಒಟ್ಟು ಆರು ಜನ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಇಲಾಖೆ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದೆ.

ಇದರಲ್ಲಿ ಆರನೇಯವರ ಗುರುತನ್ನು ಪೊಲೀಸ್ ಇಲಾಖೆ ಪತ್ತೆ ಮಾಡಿದೆ. ಆದರೆ, ಸ್ಫೋಟ ನಡೆದ ದಿನ ಭದ್ರಾವತಿಯ ಗೌರಪುರ ಗ್ರಾಮದ ಪುನೀತ್‌ ಗೌಡ ಎಂಬಾತ ಹಾಗೂ ಹನುಮಂತನಗರದ ನಾಗರಾಜ್ ಎಂಬ ಇಬ್ಬರು ಸಹ ಕಾಣೆಯಾಗಿದ್ದಾರೆ.

ಇವರನ್ನು ಹುಡುಕಿಕೊಡಿ ಎಂದು ಇಬ್ಬರು ಕುಟುಂಬದವರು ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿದ್ದಾರೆ. ಆದರೆ, ಈವರೆಗೂ ಜಿಲ್ಲಾಡಳಿತವಾಗಲಿ, ಪೊಲೀಸ್ ಇಲಾಖೆಯಾಗಲಿ ಈ ಬಗ್ಗೆ ಗಮನ ಹರಿಸಿಲ್ಲ ಎಂದು ಕಾಣೆಯಾದವರ ಕುಟುಂಬದವರು ಆರೋಪಿಸಿದ್ದಾರೆ.

ಕಾಣೆಯಾದವರ ಕುಟುಂಬದವರ ಗೋಳು ಕೇಳೋರು ಯಾರು!?

ಜನವರಿ 21ರ ರಾತ್ರಿ ಗೌರಪುರದ ಪುನೀತ್ ಗೌಡ ಪ್ರವೀಣ್ ಎಂಬಾತನ ಜೊತೆ ಹೋಗಿದ್ದ. ಅದೇ ರೀತಿ ಹನುಮಂತನಗರದ ನಾಗರಾಜ್ ಸಹ ಪ್ರವೀಣ್ ಕರೆದಿದ್ದಾನೆ ಎಂದು ಹೋಗಿದ್ದ. ಆದರೆ, ಪ್ರವೀಣ್ ಸ್ಫೋಟದ ದಿನದಂದೇ ಸಾವನ್ನಪ್ಪಿದ್ದರು. ಈತನ ಮೃತದೇಹ ಪತ್ತೆಯಾಗಿತ್ತು.‌ ಆದರೆ, ಪುನೀತ್ ಗೌಡ ಹಾಗೂ ನಾಗರಾಜ್ ಅವರ ದೇಹ ಪತ್ತೆಯಾಗಿಲ್ಲ.

ಈವರೆಗೂ ಎಲ್ಲಿದ್ದಾರೆ ಅಂತಾ ತಿಳಿದಿಲ್ಲ. ಪುನೀತ್​ಗೆ ತಂದೆ ಇಲ್ಲ. ತಾಯಿ ಹಾಗೂ ಸಹೋದರಿ ಇದ್ದಾರೆ. ಸ್ಫೋಟದ ದಿನದಂದು ಪುನೀತ್ ಗೌಡ ತನ್ನ ತಾಯಿ ರಾಜಮ್ಮನಿಗೆ ಮಧ್ಯಾಹ್ನ 3 ಗಂಟೆಗೆ ತನಗೆ ಡ್ರೈವಿಂಗ್​ಗೆ ಕರೆದಿದ್ದಾರೆ, ಹೋಗುತ್ತಿದ್ದೇನೆ ಎಂದು ಹೇಳಿದ್ದರು. ನಂತರ ರಾತ್ರಿ 9.30ಕ್ಕೆ ರಾಜಮ್ಮ ಫೋನ್ ಮಾಡಿದಾಗ ತಾನು ಶಿವಮೊಗ್ಗದಲ್ಲಿ ಇದ್ದೇನೆ. ಇಲ್ಲಿಯೇ ಊಟ ಮಾಡುತ್ತೇನೆ ಅಂತಾ ಹೇಳಿದ್ದಾರೆ.

ಬೆಳಗ್ಗೆ ಫೋನ್ ಮಾಡಿದಾಗ ಸ್ವಿಚ್ ಆಫ್ ಬಂದಿದೆ. ಸ್ಫೋಟ ಆಗಿದೆ, ಪ್ರವೀಣ್ ಸಾವನ್ನಪ್ಪಿದ್ದಾನೆ ಎಂದು ಹೇಳಿದಾಗ ಗ್ರಾಮದವರು ಹೋಗಿ ಶವಗಳನ್ನು ನೋಡಿದಾಗ ಪುನೀತ್‌ ಗೌಡನ ಯಾವ ಗುರುತು ಪತ್ತೆಯಾಗಿಲ್ಲ. ಮಧ್ಯಾಹ್ನ ಪೊಲೀಸರು ಬಂದು ನಿಮ್ಮ ಮಗ ಸಾವನ್ನಪ್ಪಿದ್ದಾನೆ. ಗಾಡಿ ಛಿದ್ರ ಛಿದ್ರ ಆಗಿದೆ ಅಂತಾ ತಿಳಿಸಿದ್ದಾರೆ. ತಾಯಿ ರಾಜಮ್ಮ ಹೋಗಿ ನೋಡಿದಾಗಲೂ ಸಹ ಪುನೀತನ ಗುರುತು ಪತ್ತೆಯಾಗಿಲ್ಲ. ನಂತರ ಪೊಲೀಸರು ಡಿಎನ್ಎ ವರದಿ ಬಂದ‌ ಮೇಲೆ ತಿಳಿಸುವುದಾಗಿ ಹೇಳಿದ್ದಾರೆ.‌

ಓದಿ: ಶಿವಮೊಗ್ಗ ಹುಣಸೋಡಿಯಲ್ಲಿ ಸ್ಫೋಟ... ಜಿಲ್ಲಾಡಳಿತದ ವಿರುದ್ಧ ಸ್ಥಳೀಯರ ಆಕ್ರೋಶ

ಆದರೆ, ಈಗ ವರದಿ ಬಂದಿದೆ. ವರದಿಯಲ್ಲಿ ಶಶಿ ಅಲಿಯಾಸ್ ದೇವೇಂದ್ರ ಎಂಬುವರ ಶವ ಎಂದು ತಿಳಿದು ಬಂದಿದೆ. ಹಾಗಾದ್ರೆ, ಪುನೀತನ ಶವ ಎಲ್ಲಿ? ಆತ ಎಲ್ಲಿಗೆ ಹೋದ ಅಂತಾ ತಾಯಿ ರಾಜಮ್ಮ ಆತಂಕಕ್ಕೊಳಗಾಗಿದ್ದಾರೆ. ಮಿಸ್ಸಿಂಗ್ ಆದ ನಂತರ ಆತನ ಫೇಸ್​ಬುಕ್ ಅಕೌಂಟ್​ನಿಂದ ಮುಸ್ಲಿಂ ಬಾಲಕನ ಒಂದು ಫೋಟೋ ಹಾಕಿದ್ದಾನೆ. ನಂತರ ಸ್ನೇಹಿತರ ವಾಟ್ಸ್‌ಆ್ಯಪ್ ಗ್ರೂಪ್​ನಿಂದ ಲೆಫ್ಟ್ ಆಗಿದ್ದಾನೆ.‌ ದಯಮಾಡಿ ನನ್ನ ಮಗನನ್ನು ಹುಡುಕಿ ಕೊಡಿ ಎಂದು ರಾಜಮ್ಮ ಕಣ್ಣೀರು ಹಾಕುತ್ತಿದ್ದಾರೆ.

ಅದೇ ಹನುಮಂತನಗರದ ನಾಗರಾಜ್ ಸಹ‌‌ ಮಿಸ್ಸಿಂಗ್ ಆಗಿದ್ದಾರೆ.‌ ನಾಗರಾಜ್ ಅಂದು ಸಂಜೆ 7ಗಂಟೆಗೆ ಪ್ರವೀಣ್‌ಗೆ ಫೋನ್ ಮಾಡಿ ಮುಖ್ಯರಸ್ತೆಗೆ ಬನ್ನಿ ಎಂದು ಕರೆದುಕೊಂಡು ಹೋಗಿದ್ದಾನೆ. ನಾಗರಾಜ್ ಕೊಲಿ ಕೆಲಸ ಮಾಡುತ್ತಿದ್ದು, ಮೀನು ಹಿಡಿದು ಜೀವನ ನಡೆಸುತ್ತಿದ್ದರು. ನಾಗರಾಜ್​ಗೆ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳು ಇದ್ದಾರೆ. ಕಾಣೆಯಾದ ದಿನದಂದು ತನ್ನ ಕಿರಿಯ ಮಗನ ಜೊತೆ ಕೆರೆಗೆ ಬಲೆ ಬಿಟ್ಟು ಬಂದಾಗ ಪ್ರವೀಣ್ ಫೋನ್ ಮಾಡಿ ಕರೆಸಿಕೊಂಡಿದ್ದ. ನಂತರ ಸ್ಫೋಟದ ಶಬ್ಧ ಬಂದಾಗ ಮನೆಗೆ ಬರಲು ಹೇಳಲು ಫೋನ್ ಮಾಡಿದಾಗ ನಾಟ್ ರಿಚೇಬಲ್ ಬಂದಿದೆ.

ಬೆಳಗ್ಗೆ ಪ್ರವೀಣ್ ಸಾವನ್ನಪ್ಪಿದ್ದಾರೆ. ಅವನ ಜೊತೆ ಹೋದ ನಾಗರಾಜ್ ಸಹ ಸಾವನ್ನಪ್ಪಿದ್ದಾರೆ ಅಂತಾ ಶವಗಳನ್ನು ನೋಡಿದ್ರೆ ಗುರುತು ಪತ್ತೆಯಾಗಲಿಲ್ಲ. ನಾಗರಾಜ್ ಕೈಮೇಲೆ ಮೀನಿನ ಹಚ್ಚೆ ಜೊತೆ ಪತ್ನಿ ಹಾಗೂ ಮಗನ ಹೆಸರು ಹಚ್ಚೆ ಹಾಕಿಸಿಕೊಂಡಿದ್ದನು. ಇದರಿಂದ ಅವರ ಗುರುತು ಪತ್ತೆಯಾಗಿಲ್ಲ.‌ ಅಂದೇ ನಾಗರಾಜ್ ಮಿಸ್ಸಿಂಗ್ ಅಂತಾ ಅವರ ಪತ್ನಿ ಶಾಂತಮ್ಮ ದೂರ‌ು ದಾಖಲಿಸಿದ್ದರು.‌

ಪೊಲೀಸರು ಇಷ್ಟು ದಿನ ಹುಡುಕಿಕೊಡುತ್ತಾರೆ ಅಂತಾ ಸುಮ್ಮನಿದ್ದ ಕುಟುಂಬ ಈಗ ಶಶಿ ಅಲಿಯಾಸ್ ದೇವೇಂದ್ರನ ಶವ ಪತ್ತೆಯಾದ ನಂತರ ನಾಗರಾಜ್ ಎಲ್ಲಿಗೆ ಹೋದ ಎಂಬ ಅನುಮಾನ ಪ್ರಾರಂಭವಾಗಿದೆ.‌ ಹಾಗಾದ್ರೆ, ನಾಗರಾಜ್ ಸತ್ತಿಲ್ಲ. ಅವರನ್ನು ಹೊರಗೆ ಬಿಟ್ಟರೆ ಉಳಿದವರ ಬಂಡವಾಳ ಹೊರಕ್ಕೆ ಬರುತ್ತೆ ಅಂತಾ ಬಚ್ಚಿಟ್ಟಿರಬಹುದು. ಕಾಣೆಯಾದ ದಿನದಿಂದ ನಾಟ್ ರಿಚೇಬಲ್ ಅಂತಾ ಬರುತ್ತಿತ್ತು. ಕಳೆದ 15 ದಿನಗಳಿಂದ ಕರೆನ್ಸಿ ಇಲ್ಲದೆ ಇನ್ ಕಮಿಂಗ್ ಕಾಲ್ ಸ್ಥಗಿತಗೊಳಿಸಲಾಗಿದೆ ಎಂದು ಮೊಬೈಲ್​ನಲ್ಲಿ ಬರುತ್ತಿದೆ ಎಂದು ನಾಗರಾಜ್ ಪತ್ನಿ ಶಾಂತಮ್ಮ ಹೇಳಿದ್ದಾರೆ.

ಓದಿ: ಶಿವಮೊಗ್ಗ ಸ್ಫೋಟ ಪ್ರಕರಣ: ಕಲ್ಲು ಕ್ವಾರಿಯ ಮಾಲೀಕ‌ ಸೇರಿ ಮೂವರ ವಿಚಾರಣೆ

Last Updated :Sep 20, 2021, 9:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.