ETV Bharat / state

ಸಂತ್ರಸ್ತರ ಬೇಡಿಕೆಗೆ ಸ್ಪಂದಿಸಲು ಜಿಲ್ಲಾಡಳಿತ ಬದ್ಧ : ಕೆ.ಬಿ.ಅಶೋಕನಾಯ್ಕ್

author img

By

Published : Aug 24, 2020, 5:09 PM IST

ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಭೂಮಿಯನ್ನು ಕಳೆದುಕೊಂಡ ಸಂತ್ರಸ್ತರ ಪ್ರತಿ ಕುಟುಂಬಕ್ಕೆ ಒಂದು ನಿವೇಶನ ನೀಡಲು ಸರ್ಕಾರ ಹಾಗೂ ಜಿಲ್ಲಾಡಳಿತ ಬದ್ಧವಾಗಿದೆ ಎಂದು ಶಾಸಕ ಕೆ.ಬಿ.ಅಶೋಕನಾಯ್ಕ ಹೇಳಿದ್ದಾರೆ.

Shivmogga
Shivmogga

ಶಿವಮೊಗ್ಗ: ಸೋಗಾನೆ ಬಳಿ ನಿರ್ಮಾಣಗೊಳ್ಳುತ್ತಿರುವ ವಿಮಾನ ನಿಲ್ದಾಣಕ್ಕಾಗಿ ಭೂಮಿಯನ್ನು ಕಳೆದುಕೊಂಡ ಸಂತ್ರಸ್ತರಿಗೆ ಈ ಹಿಂದೆ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯದಂತೆ ಪರಿಹಾರ ಕ್ರಮಗಳನ್ನು ಒದಗಿಸಲು ಜಿಲ್ಲಾಡಳಿತ ಬದ್ಧವಾಗಿದೆ ಎಂದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಕೆ.ಬಿ.ಅಶೋಕನಾಯ್ಕ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಜೊತೆ ನಡೆದ ಸಮಾಲೋಚನೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈಗಾಗಲೇ ಭೂಮಿ ಕಳೆದುಕೊಂಡ ಸಂತ್ರಸ್ತರ ಪ್ರತಿ ಕುಟುಂಬಕ್ಕೆ ಒಂದು ನಿವೇಶನ ನೀಡಲು ಮಾತಿನಂತೆ ಬದ್ಧವಾಗಿದ್ದು, ಸಂತ್ರಸ್ತರಿಗೆ ನಿವೇಶನ ನೀಡಲು ಸೂಕ್ತ ಸ್ಥಳವನ್ನು ಹುಡುಕಲಾಗುತ್ತಿದೆ ಎಂದರು.

ಬಿ.ಎಸ್.ಯಡಿಯೂರಪ್ಪನವರು ನೀಡಿದ ಭರವಸೆಯಂತೆ ವಿಮಾನ ನಿಲ್ದಾಣಗೊಂಡ ನಂತರ ಪ್ರತಿ ಕುಟುಂಬದ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಒದಗಿಸಲು ಸಂತ್ರಸ್ತರು ಸಲ್ಲಿಸಿರುವ ಕೋರಿಕೆಯನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಈಗಾಗಲೇ ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಹಾಗೂ ಸಂತ್ರಸ್ತರೊಂದಿಗೆ ಸಮಾಲೋಚನೆ, ಅನೇಕ ಸಭೆ ನಡೆಸಲಾಗಿದೆ ಎಂದರು.

ಈ ವಿಷಯಕ್ಕೆ ಸಂಬಂಧಿಸಿದಂತೆ ಭೂ ಸಂತ್ರಸ್ತರು ಕೂಡ ಜಿಲ್ಲಾಡಳಿತದ ನಿರ್ಧಾರವನ್ನು ಸ್ವಾಗತಿಸಿದ್ದು, ಭರವಸೆಯಂತೆ ನಿವೇಶನ ನೀಡುವಂತೆ ಸೂಚಿಸಿ, ನ್ಯಾಯಾಲಯದಲ್ಲಿ ಹೂಡಿರುವ ಮೊಕದ್ದಮೆಯನ್ನು ಹಿಂಪಡೆಯುವುದಾಗಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.