ETV Bharat / state

ಕನಿಷ್ಟ ವೇತನ ನೀಡದ ಸಂಸ್ಥೆಗಳು ಕಪ್ಪುಪಟ್ಟಿಗೆ: ಜಿಲ್ಲಾಧಿಕಾರಿ ಎಚ್ಚರಿಕೆ

author img

By

Published : Sep 25, 2020, 9:03 PM IST

ಜಿಲ್ಲಾಧಿಕಾರಿ ಶಿವಕುಮಾರ್ ಅವರ ನೇತೃತ್ವದಲ್ಲಿ ಕರ್ಮಚಾರಿಗಳ ಕಲ್ಯಾಣ ಕಾರ್ಯಕ್ರಮಗಳ ಕುರಿತಾದ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.

DC meeting
DC meeting

ಶಿವಮೊಗ್ಗ : ಪೌರ ಕಾರ್ಮಿಕರಿಗೆ ಮತ್ತು ಸಫಾಯಿ ಕರ್ಮಚಾರಿಗಳಿಗೆ ಕನಿಷ್ಟ ವೇತನ ನೀಡದೆ ವಂಚಿಸುವ ಹೊರಗುತ್ತಿಗೆ ಸಂಸ್ಥೆಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಫಾಯಿ ಕರ್ಮಚಾರಿಗಳ ಕಲ್ಯಾಣ ಕಾರ್ಯಕ್ರಮಗಳ ಕುರಿತಾದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಕನಿಷ್ಟ ವೇತನ ನೀಡದಿರುವ ಕುರಿತು ದೂರುಗಳು ಬಂದಿರುವ ತಾಲೂಕುಗಳಲ್ಲಿ ಪರಿಶೀಲನೆ ನಡೆಸಿ ದೂರುಗಳು ಸತ್ಯವಾಗಿದ್ದರೆ ಅಂತಹ ಹೊರಗುತ್ತಿಗೆ ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಿ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾ ಕಾರ್ಮಿಕ ಕಲ್ಯಾಣ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಾರ್ಮಿಕರ ಹಿಂದಿನ ತಿಂಗಳ ಇಪಿಎಫ್ ಪಾವತಿಸಿರುವ ಕುರಿತಾದ ದಾಖಲೆಗಳನ್ನು ಸಲ್ಲಿಸಿದ ಬಳಿಕ ಮಾತ್ರ ಗುತ್ತಿಗೆ ಸಂಸ್ಥೆಗಳಿಗೆ ವೇತನ ಅನುದಾನ ಬಿಡುಗಡೆ ಮಾಡಬೇಕು ಎಂದು ಸ್ಪಷ್ಟಪಡಿಸಿದರು.

ಎಲ್ಲಾ ಸ್ಥಳೀಯ ಸಂಸ್ಥೆಗಳು ಕಡ್ಡಾಯವಾಗಿ ಸಕ್ಕಿಂಗ್ ಮತ್ತು ಜೆಟ್ಟಿಂಗ್ ಯಂತ್ರವನ್ನು ಬಳಸಬೇಕು. ಯಾವುದೇ ಕಾರಣಕ್ಕೂ ಸಫಾಯಿ ಕರ್ಮಚಾರಿಗಳಿಂದ ಮ್ಯಾನ್‍ಹೋಲ್‍ಗಳನ್ನು ಸ್ಚಚ್ಛಗೊಳಿಸಬಾರದು ಎಂದು ತಾಕೀತು ಮಾಡಿದರು.

ಎಂಪಿಎಂ ಮತ್ತು ವಿಎಸ್‍ಐಎಲ್​ನಲ್ಲಿ ಈಗಲೂ ಸಿಬ್ಬಂದಿಯಿಂದ ಮ್ಯಾನವಲ್ ಸ್ಕ್ಯಾವೆಂಜಿಂಗ್ ಮಾಡಲಾಗುತ್ತಿದೆ ಎಂಬ ದೂರಿನ ಬಗ್ಗೆ ಪರಿಶೀಲನೆ ನಡೆಸಬೇಕು. ಸದರಿ ಸಂಸ್ಥೆಗಳು ನಗರ ಸ್ಥಳೀಯ ಸಂಸ್ಥೆಗಳಿಂದ ಸಕ್ಕಿಂಗ್ ಮತ್ತು ಜೆಟ್ಟಿಂಗ್ ಯಂತ್ರದ ಸಹಾಯ ಪಡೆದಿರುವ ಬಗ್ಗೆ ಮಾಹಿತಿಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ಕೊರೊನಾ ಆರಂಭವಾದ ಬಳಿಕ ಹಲವು ಸ್ಥಳೀಯ ಸಂಸ್ಥೆಗಳಲ್ಲಿ ಸಫಾಯಿ ಕರ್ಮಚಾರಿಗಳ ಪೂರ್ಣ ಪ್ರಮಾಣದ ಆರೋಗ್ಯ ತಪಾಸಣೆ ನಡೆಸಲಾಗಿಲ್ಲ. ಹಂತ ಹಂತವಾಗಿ ಬ್ಯಾಚ್ ಮಾಡಿ ಎಲ್ಲರ ಆರೋಗ್ಯ ತಪಾಸಣೆಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ನಡೆಸಬೇಕು ಎಂದರು.

ಗೃಹಭಾಗ್ಯ ಯೋಜನೆಯಡಿ ಎಲ್ಲಾ ಪೌರಕಾರ್ಮಿಕರಿಗೆ ಮತ್ತು ಸಫಾಯಿ ಕರ್ಮಚಾರಿಗಳಿಗೆ ಮನೆ ಒದಗಿಸಬೇಕಾಗಿದೆ. ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 168 ಪೌರಕಾರ್ಮಿಕರಿಗೆ ಜಿ2 ಮಾದರಿಯಲ್ಲಿ ಮನೆ ನಿರ್ಮಿಸಲು ಟೆಂಡರ್ ಆಹ್ವಾನಿಸಲಾಗಿದೆ. ಭದ್ರಾವತಿಯಲ್ಲಿ 5 ಜನ ಪೌರಕಾರ್ಮಿಕರಿಗೆ ವೈಯಕ್ತಿಕ ಮನೆಗಳನ್ನು ಮತ್ತು 74 ಮಂದಿಗೆ ಜಿ3 ಮಾದರಿ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಇದನ್ನು ಸಹ ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಂಜುನಾಥ್, ಸಮಿತಿ ಸದಸ್ಯರು, ವಿವಿಧ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.