ETV Bharat / state

Shivamogga crime: ಎಕ್ಸಿಕ್ಯೂಟಿವ್‌ ಇಂಜಿನಿಯರ್ ಪತ್ನಿ ಅನುಮಾನಾಸ್ಪದ ಸಾವು

author img

By

Published : Jun 18, 2023, 3:15 PM IST

Updated : Jun 18, 2023, 5:50 PM IST

ಎಕ್ಸಿಕ್ಯೂಟಿವ್‌ ಇಂಜಿನಿಯರ್ ಅವರ ಪತ್ನಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

crime-suspicious-death-of-executive-engineers-wife-in-shivamogga
Shivamogga crime: ಎಕ್ಸಿಕ್ಯೂಟಿವ್‌ ಇಂಜಿನಿಯರ್ ಪತ್ನಿ ಅನುಮಾನಾಸ್ಪದ ಸಾವು

ಶಿವಮೊಗ್ಗ: ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿರುವ ಪತ್ತೆಯಾಗಿರುವ ಘಟನೆ ಜಿಲ್ಲೆಯ ವಿಜಯನಗರದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಕಮಲಮ್ಮ (54) ಎಂದು ಗುರುತಿಸಲಾಗಿದೆ. ಉಸಿರುಗಟ್ಟಿಸಿ ಮಹಿಳೆಯ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.

ಇಲ್ಲಿನ ವಿಜಯನಗರದ ಎರಡನೇ ತಿರುವಿನಲ್ಲಿರುವ ಮನೆಯಲ್ಲಿ ಕಮಲಮ್ಮ ಅವರು ಮೃತಪಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕಮಲಮ್ಮ ಅವರ ಪತಿ ಮನೆಯಲ್ಲಿ ಇಲ್ಲದ ವೇಳೆ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಶನಿವಾರ ಸಂಜೆ ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ.

ಮೃತ ಕಮಲಮ್ಮ ಅವರ ಪತಿ ಮಲ್ಲಿಕಾರ್ಜುನ ಅವರು ಹೊಸದುರ್ಗದಲ್ಲಿ ಎಕ್ಸಿಕ್ಯೂಟಿವ್‌ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.‌ ಮಲ್ಲಿಕಾರ್ಜುನ ಅವರು ತಮ್ಮ ಸ್ನೇಹಿತರೊಂದಿಗೆ ಗೋವಾಗೆ ಪ್ರವಾಸ ತೆರಳಿದ್ದರು. ಅಲ್ಲಿಂದ ಪತ್ನಿ ಕಮಲಮ್ಮಗೆ ಹಲವು ಬಾರಿ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಿರಲಿಲ್ಲ ಎಂದು ಹೇಳಲಾಗಿದೆ. ಈ ಸಂಬಂಧ ಮಲ್ಲಿಕಾರ್ಜುನ ಅವರು ಪಕ್ಕದ ಮನೆಯವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಈ ವೇಳೆ ನೆರೆ ಮನೆಯವರು ಮಲ್ಲಿಕಾರ್ಜುನ ಅವರ ಮನೆಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ.

ಘಟನೆ ಸಂಬಂಧ ತುಂಗಾ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದಾವಣಗೆರೆಯಿಂದ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು, ಶಿವಮೊಗ್ಗದ ‍ಶ್ವಾನ ದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಕೊಲೆಗೆ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.

ಇದನ್ನೂ ಓದಿ : Lovers Suicide: ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾದ ಪಶ್ಚಿಮ ಬಂಗಾಳದ ಪ್ರೇಮಿಗಳು

ತುಂಗಾನದಿಯಲ್ಲಿ ಈಜಲು ಹೋದ ಪ್ರಾಧ್ಯಾಪಕರು ನೀರುಪಾಲು : ತೀರ್ಥಹಳ್ಳಿ ತಾಲೂಕಿನ ತೀರ್ಥ ಮತ್ತೂರು ಗ್ರಾಮದ ಬಳಿ‌ ತುಂಗಾ ನದಿಯಲ್ಲಿ ಈಜಲು ಹೋದ ಇಬ್ಬರು ಪ್ರಾಧ್ಯಾಪಕರು ನೀರು ಪಾಲಾಗಿರುವ ಘಟನೆ ನಡೆದಿದೆ. ಮೃತರನ್ನು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಪಿಯು ಕಾಲೇಜಿನ ಪ್ರಾಧ್ಯಾಪಕರಾದ ಪುನೀತ್​​ (36) ಹಾಗೂ ಬಾಲಾಜಿ (36) ಎಂದು ಗುರುತಿಸಲಾಗಿದೆ.

ಶನಿವಾರ ಪ್ರವಾಸಕ್ಕೆಂದು ಬಂದಿದ್ದ ಪುನೀತ್​ ಮತ್ತು ಬಾಲಾಜಿ ಅವರು ತೀರ್ಥಹಳ್ಳಿಯ ಯೋಗಾ ನರಸಿಂಹ ಮಠದ ಬಳಿ ಇರುವ ಹೋಂ ಸ್ಟೇವೊಂದರಲ್ಲಿ ರಾತ್ರಿ ತಂಗಿದ್ದರು. ಬಳಿಕ ಇಂದು ಬೆಳಗ್ಗೆ ತಿಂಡಿ ತಿಂದು ನದಿಯ ಬಳಿಗೆ ಈಜಲು ತೆರಳಿದ್ದಾರೆ. ಈ ವೇಳೆ ಈಜಲು ನದಿಗಿಳಿದ ಪುನೀತ್ ಅವರು ನದಿ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ. ಈ ವೇಳೆ ಇವರನ್ನು ರಕ್ಷಿಸಲು ಹೋದ ಬಾಲಾಜಿ ಅವರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳ ಸಿಬ್ಬಂದಿ ಆಗಮಿಸಿ ಶೋಧ ಕಾರ್ಯ ನಡೆಸಿದ್ದು, ಒಬ್ಬರ ಶವವನ್ನು ಪತ್ತೆ ಮಾಡಲಾಗಿದೆ. ಇನ್ನೊಬ್ಬರಿಗಾಗಿ ಪತ್ತೆ ಕಾರ್ಯ ಮುಂದುವರೆದಿದೆ. ಈ ಕುರಿತು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Lovers Suicide: ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾದ ಪಶ್ಚಿಮ ಬಂಗಾಳದ ಪ್ರೇಮಿಗಳು

Last Updated :Jun 18, 2023, 5:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.