ETV Bharat / state

Shivamogga crime: ಹಾಡಹಗಲೇ ಪತಿಯಿಂದಲೇ ಪತ್ನಿ ಅಪಹರಣ.. ಪ್ರಕರಣ ದಾಖಲು

author img

By

Published : Jul 17, 2023, 6:05 PM IST

ಹಾಡಹಗಲೇ ಪತಿ ತನ್ನ ಪತ್ನಿಯನ್ನು ಅಪಹರಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

Shivamogga
ದೊಡ್ಡಪೇಟೆ ಪೊಲೀಸ್ ಠಾಣೆ

ಶಿವಮೊಗ್ಗ: ಹಾಡಹಗಲೇ ಜನ‌‌ನಿಬಿಡ ರಸ್ತೆಯಲ್ಲಿ ಪತಿಯೇ ತನ್ನ ಪತ್ನಿಯನ್ನು ಅಪಹರಿಸಿರುವ ಆರೋಪ ಪ್ರಕರಣ ನಗರದಲ್ಲಿ ನಡೆದಿದೆ. ದಿವ್ಯ ರೇವಣಕರ್ (23) ಅಪಹರಣವಾದ ಮಹಿಳೆ. ಶಿವಮೊಗ್ಗದ ಕೆಎಸ್​​ಆರ್​​ಟಿಸಿ ಬಸ್ ನಿಲ್ದಾಣದ ಮುಂದೆ ತಮ್ಮ ಮಗಳನ್ನು ಅಪಹರಣ ಮಾಡಲಾಗಿದೆ ಎಂದು ದಿವ್ಯ ರೇವಣಕರ್​ ಅವರ ಪೋಷಕರು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸಾಗರಕ್ಕೆ ಹೊರಡುವಾಗ ಇನ್ನೋವಾ ಕಾರಿನಲ್ಲಿ ಬಂದ ಪತಿ ರವಿ ಕುಮಾರ್ ದಿವ್ಯ ಅವರನ್ನು ಬಲವಂತವಾಗಿ ಎಳೆದುಕೊಂಡು ಕಾರಿನಲ್ಲಿ‌ ಕೂರಿಸಿಕೊಂಡು ಹೋಗಿದ್ದಾನೆ. ಈ ವೇಳೆ ದಿವ್ಯ ತಾಯಿ‌ ಜೋರಾಗಿ ಕೂಗಿಕೊಂಡಿದ್ದಾರೆ. ತಕ್ಷಣ ಪೋಷಕರು ದೊಡ್ಡಪೇಟೆ ಪೊಲೀಸ್ ಠಾಣೆಗೆ ಬಂದು ವಿಷಯ ತಿಳಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಕಾರು ಹೋದ ರಸ್ತೆಯಲ್ಲಿ ಹಿಂಬಾಲಿಸಿಕೊಂಡು ಹೋಗಿದ್ದಾರೆ. ಆದರೆ ದಿವ್ಯ ರೇವಣಕರ್ ಹಾಗೂ ರವಿ ಕುಮಾರ್ ಅವರ ಫೋನ್ ಆಗುಂಬೆಯ ಬಳಿ ಸ್ವಿಚ್ ಆಫ್ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಿವ್ಯ ಹಾಗೂ ರವಿ ಕುಮಾರ್ ಮದುವೆಯಾಗಿದ್ದು, ಒಂದೇ ತಿಂಗಳಲ್ಲಿ ಗಂಡ ಹೆಂಡತಿ‌ ನಡುವೆ ಜಗಳವಾಗಿತ್ತು. ಈ ಕುರಿತು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಸಭೆ ನಡೆಸಿ ನಂತರ ದಿವ್ಯ ವಾಪಸ್ ತನ್ನ ಪೋಷಕರ ಮನೆಗೆ ಬಂದಿದ್ದಳು. ಇಂದು ಸಾಗರಕ್ಕೆ ಹೊರಡುವಾಗ ಅಪಹರಣ ನಡೆದಿದೆ. ಬಸ್ ನಿಲ್ದಾಣಕ್ಕೆ ದಿವ್ಯ ಬರುವ ವಿಚಾರ ಹೇಗೆ ತಿಳಿಯಿತು?. ಇದು ಪೂರ್ವ ನಿರ್ಧರಿತ ಕೃತ್ಯ ಎಂದು ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ಬೆಳಗಾವಿಯಲ್ಲಿ ಬಾಲಕಿ ಅಪಹರಣ ಯತ್ನ: ಅಪರಿಚಿತ ವ್ಯಕ್ತಿಯೋರ್ವ ಬಾಲಕಿಯನ್ನು ಅಪಹರಿಸಲು ಯತ್ನಿಸಿರುವ ಘಟನೆ ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದಿತ್ತು. ಪ್ರಕರಣ ದಾಖಲಾದ 12 ಗಂಟೆಯೊಳಗೆ ಆರೋಪಿಯನ್ನು ಪೊಲೀಸರು ಖೆಡ್ಡಾಕ್ಕೆ ಬೀಳಿಸಿದ್ದರು. ಮಾರುತಿ ನಗರದ ಗಜಾನನ ಪಾಟೀಲ (40) ಖೆಡ್ಡಾಕ್ಕೆ ಬಿದ್ದ ಆರೋಪಿ.

ಪ್ರಕರಣದ ವಿವರ: ಆರೋಪಿ ಗಜಾನನ ಟ್ಯೂಶನ್​​ಗೆ ಹೊರಟಿದ್ದ ಬಾಲಕಿಗೆ ಚಾಕಲೇಟ್ ಆಮಿಷವೊಡ್ಡಿ ಹೆಗಲ ಮೇಲೆ ಎತ್ತಿಕೊಂಡು ಹೋಗಲು ಯತ್ನಿಸಿದ್ದ. ಆತನ ಕೈಯಿಂದ ತಪ್ಪಿಸಿಕೊಳ್ಳಲು ಬಾಲಕಿ ಸಾಕಷ್ಟು ಪ್ರಯತ್ನ ಮಾಡಿದ್ದಳು. ಜೋರಾಗಿ ಚೀರಾಟ ಮಾಡಿದ್ದರಿಂದ ಸಮೀಪದ ಗಾರ್ಡನ್​ನಲ್ಲಿ ವಾಕಿಂಗ್​ ಮಾಡುತ್ತಿದ್ದ ಜನರು ನೋಡಿದ್ದಾರೆ. ತಕ್ಷಣ ಅವರು ರಕ್ಷಣೆಗೆ ಧಾವಿಸಿದ್ದು ಅಷ್ಟರಲ್ಲಿ ವ್ಯಕ್ತಿ ಬಾಲಕಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದ. ಆತನನ್ನು ಹಿಡಿಯಲು ಸ್ಥಳೀಯರು ಪ್ರಯತ್ನಿಸಿದರೂ‌ ಸಾಧ್ಯವಾಗಿರಲಿಲ್ಲ.

ಘಟನೆಯಿಂದ ಈ ಪ್ರದೇಶದ ಜನರು ತುಂಬಾ ಭಯಭೀತಗೊಂಡಿದ್ದರು. ತಮ್ಮ ಮಕ್ಕಳಿಗೆ ರಕ್ಷಣೆ ನೀಡಬೇಕು. ಹಾಗಾಗಿ ಪೊಲೀಸರು ಆರೋಪಿಯನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದ್ದರು. ಬಾಲಕಿಯ ತಾಯಿ ಈ ಬಗ್ಗೆ ಟಿಳಕವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಲ್ಲದೇ ಸಿಸಿಟಿವಿ ಪರಿಶೀಲಿಸಿದಾಗ ಆರೋಪಿ ಬಾಲಕಿಯನ್ನು ಹೊತ್ತೊಯ್ಯುತ್ತಿರುವ ದೃಶ್ಯ ಸೆರೆಯಾಗಿತ್ತು. ತಕ್ಷಣ ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು. ಆರೋಪಿ ಪತ್ತೆಗಾಗಿ ಒಂದು ತಂಡ ರಚಿಸಲಾಗಿತ್ತು. ಬಾಲಕಿಯ ಕಿಡ್ನಾಪ್ ಪ್ರಕರಣ ದಾಖಲಾದ 12 ಗಂಟೆಯೊಳಗೆ ಆರೋಪಿಯನ್ನು ಪೊಲೀಸರು ಖೆಡ್ಡಾಕ್ಕೆ ಕೆಡವಿದ್ದರು.

ಇದನ್ನೂ ಓದಿ: ಬೆಳಗಾವಿಯಲ್ಲಿ ಬಾಲಕಿ ಅಪಹರಣ ಯತ್ನ: ಪ್ರಕರಣ ದಾಖಲಾದ 12 ಗಂಟೆಯೊಳಗೆ ಆರೋಪಿ ಪೊಲೀಸರ ಖೆಡ್ಡಾಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.