ETV Bharat / state

B.K.Hariprasad: ಹೆಡ್ಗೆವಾರ್ ತರಹದ ಹೇಡಿಗಳನ್ನು ನಮ್ಮ‌ ಮಕ್ಕಳ ಪಠ್ಯದಲ್ಲಿರಲು ಬಿಡಲ್ಲ-ಬಿ.ಕೆ.ಹರಿಪ್ರಸಾದ್

author img

By

Published : Jun 8, 2023, 11:01 PM IST

ಹೆಡ್ಗೆವಾರ್ ಸ್ವಾತಂತ್ರ ಹೋರಾಟಗಾರ ಎಂದು ಸಾಬೀತು ಮಾಡಲಿ. ಬ್ರಿಟೀಷರ ಕ್ಷಮಾಪಣೆ ಕೇಳಿದ ನಕಲಿ ಸ್ವಾತಂತ್ರ್ಯ ಹೋರಾಟಗಾರಿಗೆಲ್ಲ ಮನ್ನಣೆ ನೀಡಲಾಗದು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಗರಂ ಆದರು.

B K Hariprasad
ಬಿ.ಕೆ. ಹರಿಪ್ರಸಾದ್

ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮಾತನಾಡಿದರು.

ಶಿವಮೊಗ್ಗ: ''ಸಂಘ ಪರಿವಾರದ ಸಿದ್ಧಾಂತಗಳು ಯಾವುದೇ ಇಲಾಖೆಯಲ್ಲಿ ತೂರಲು ಬಿಡೋದಿಲ್ಲ. ಹೆಡ್ಗೆವಾರ್ ತರಹದ ರಣಹೇಡಿಗಳ ಪಠ್ಯ ಇರೋದಿಲ್ಲ'' ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಶಿವಮೊಗ್ಗದಲ್ಲಿ ಇಂದು ಹೇಳಿದರು.

ನಗರದಲ್ಲಿ ಮಾತನಾಡಿದ ಅವರು, ''ಭಾರತೀಯ ಜನತಾ ಪಾರ್ಟಿಯ ಅನೈತಿಕ ಸರ್ಕಾರ ಮಾಡಿದ ಮೇಲೆ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ನಾಲ್ಕು ವರ್ಷ ಇವರ ಆಡಳಿತ ನೋಡಿದ್ದೇನೆ. ಕೃಷಿ, ಕಾರ್ಮಿಕ, ಶಿಕ್ಷಣ ಇಲಾಖೆಯಲ್ಲಿ ಸಂಪೂರ್ಣ ಕೇಸರೀಕರಣ ಮಾಡಲು ಬಿಜೆಪಿ ಹೊರಟಿತ್ತು. ಭಾರತ ಸಾವಿರಾರು ವರ್ಷಗಳಿಂದಲೂ ಜಾತ್ಯತೀತ ರಾಷ್ಟ್ರವಾಗಿ ಉಳಿದುಕೊಂಡಿದೆ. ಇದನ್ನು ಬಿಜೆಪಿ ಬುಡಮೇಲು ಮಾಡಲು ಹೊರಟಿತ್ತು. ಎಲ್ಲೆಲ್ಲಿ ಸಂಘ ಪರಿವಾರದ ತತ್ವ ಸಿದ್ಧಾಂತಗಳನ್ನು ತೂರಲು ಹೊರಟಿದ್ದರೋ ಅದನ್ನು ನಾವು ಎಲ್ಲ ಕ್ಷೇತ್ರದಲ್ಲಿ ಸರಿಪಡಿಸುವ ಕೆಲಸವನ್ನು ಮಾಡುತ್ತೇವೆ'' ಎಂದರು‌.

''ಕೇಶವ್ ಬಲಿರಾಮ್ ಹೆಡ್ಗೆವಾರ್ ಸ್ವಾಂತಂತ್ರ್ಯ ಹೋರಾಟಗಾರ ಎಂದು ಸಾಬೀತು ಮಾಡಲಿ. ಬ್ರಿಟೀಷರ ಕ್ಷಮಾಪಣೆ ಕೇಳಿದ ನಕಲಿ ಸ್ವಾತಂತ್ರ್ಯ ಹೋರಾಟಗಾರಿಗೆಲ್ಲ ಮನ್ನಣೆ ನೀಡಲು ಸಾಧ್ಯವಿಲ್ಲ. ಯಾರೋ ಹೇಳಿಕೆ ನೀಡಿ ನಾಥುರಾಮ್ ಗೋಡ್ಸೆ ಕೂಡ ಸ್ವಾತಂತ್ರ್ಯ ಹೋರಾಟಗಾರ ಎಂದಿದ್ದಾರೆ. ಇವರ ಸ್ವಾತಂತ್ರ್ಯ ಹೋರಾಟಗಾರರಿಗೂ ನಮಗೂ ವ್ಯತ್ಯಾಸವಿದೆ. ಬಿಜೆಪಿ ಅಥವಾ ಸಂಘ ಪರಿವಾರದವರು ಅವರದ್ದೇ ಆದ ಗ್ರಂಥಗಳಲ್ಲಿ ಆರು ಬಾರಿ ಕ್ಷಮಾಪಣಾ ಪತ್ರ ಕೊಟ್ಟಿರೋದಾಗಿ ಉಲ್ಲೇಖಿಸಿದ್ದಾರೆ. ಬ್ರಿಟೀಷರಿಗೆ ಯಾಕೆ ಕ್ಷಮಾಪಣಾ ಪತ್ರ ನೀಡಿದರು ಎಂದು ಹೇಳಲಿ. ಇಂಥ ರಣಹೇಡಿಗಳನ್ನು ಮಕ್ಕಳು ಓದುವ ಪಠ್ಯ ಪುಸ್ತಕದಲ್ಲಿ ಇಡಲು ಬಿಡೋದಿಲ್ಲ. ಚುನಾವಣೆ ಅಜೆಂಡಾ ಮಾಡಿಕೊಳ್ಳೋದು ಬಹಳ ಸಂತೋಷ, ಬಿಜೆಪಿಯನ್ನು ಜನ ಅರಬ್ಬಿ ಸಮುದ್ರಕ್ಕೆ ಹಾಕ್ತಾರೆ'' ಎಂದು ಕಿಡಿಕಾಡಿದರು.

ಕರಾವಳಿ, ಮಲೆನಾಡಿನಲ್ಲಿ ನೈತಿಕ ಪೊಲೀಸ್‌ಗಿರಿ ಹೆಚ್ಚಿದೆ: ''ಕರಾವಳಿ, ಮಲೆನಾಡಿನಲ್ಲಿ ನೈತಿಕ ಪೊಲೀಸ್ ಗಿರಿ ಹೆಚ್ಚಿದೆ. ಬಜರಂಗದಳ ವಿರುದ್ಧ ನಾವು ಸಮರ ಸಾರಿದ್ದೆವು. ಬಿಜೆಪಿ ಅದನ್ನು ಅಜೆಂಡಾ ಮಾಡಿಕೊಂಡರೂ ಸಹ ಜನ ತಿರಸ್ಕರಿಸಿದರು. ಜನ ಸ್ಪಷ್ಟವಾಗಿ ತೀರ್ಪು ನೀಡಿದ್ದಾರೆ. ಇವುಗಳನ್ನು ಬಿಟ್ಟು ಜನರಿಗೆ ಒಳಿತಾಗುವ ಕೆಲಸ ಬಿಜೆಪಿ ಮಾಡಲಿ. ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಬೆಲೆ ನೀಡಲಿ ಎಂದ ಅವರು, ಜಾತಿ ಗಣತಿ ನಾವು ಬಹಿರಂಗ ಮಾಡ್ತೀವಿ, ನಮ್ಮ ನಾಯಕರು ರಾಹುಲ್ ಗಾಂಧಿ ಸ್ಪಷ್ಟವಾಗಿ ಹೇಳಿದ್ದಾರೆ. ಹಿಂದಿನ ಗಣತಿ ಎಂದು ಹೇಳಲಾಗದು, ಬದಲಾವಣೆ ಇದ್ದರೆ ಮಾಡ್ತೀವಿ ಎಂದರು.

ಸಮರ್ಥರಿಗೆ ಸಚಿವ ಸ್ಥಾನ ಸಿಕ್ಕಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಕಾಮೆಂಟ್ ಮಾಡೋದಿಲ್ಲ. ನಾನೂ ಕೂಡ ಅದರ ಆಸಕ್ತನಾಗಿಲ್ಲ ಎಂದ ಅವರು, ಗ್ಯಾರಂಟಿ ಗೊಂದಲಗಳು ಬೇಡ, ಜುಲೈ ಹೊತ್ತಿಗೆ ಎಲ್ಲವೂ ಬಗೆಹರಿಯಲಿದೆ ಎಂದು ಹರಿಪ್ರಸಾದ್ ಹೇಳಿದರು.

ಇದನ್ನೂ ಓದಿ: ನೆಟೆ ರೋಗದ ಮೊದಲ ಕಂತಿನ 74 ಕೋಟಿ ರೂ. ಪರಿಹಾರ ಹಣ ಬಿಡುಗಡೆ: ಕೃಷಿ ಸಚಿವ ಚಲುವರಾಯಸ್ವಾಮಿ

ಇದನ್ನೂ ಓದಿ: ರಾಜಕಾಲುವೆ ತೆರವಿಗೆ ಸಹಕಾರ ನೀಡಿದ್ರೆ ಒಳ್ಳೆದು, ಇಲ್ಲದಿದ್ದರೆ ಬೇರೆ ರೀತಿ ಹೇಳಬೇಕಾಗುತ್ತದೆ: ಡಿಕೆಶಿ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.