ETV Bharat / state

ಕೆಲವರಿಗೆ ದೊಡ್ಡ ಸಮಾಜದ ನಾಯಕರಾಗಬೇಕೆಂಬ ಆಸೆ ಇರುತ್ತೆ.. ಎಂಬಿಪಿ ವಿರುದ್ಧ ಸಚಿವ ಸಿಸಿಪಿ ವ್ಯಂಗ್ಯ

author img

By

Published : Sep 5, 2021, 5:50 PM IST

ನಾನು ಒಬ್ಬ ಸಮಾಜದ ವ್ಯಕ್ತಿಯಾಗಿ ಸರ್ಕಾರದ ಭಾಗವಾಗಿ ಎರಡನ್ನು ಸಂಬಾಳಿಸಿಕೊಂಡು ಹೋಗುವಂತಹ ಪರಿಸ್ಥಿತಿ ಇದೆ. ಇದನ್ನು ಯಶಸ್ವಿಯಾಗಿ ಮಾಡುತ್ತಿದ್ದೇನೆ. ಸಿಎಂ ಬೊಮ್ಮಾಯಿ ಹಾಗೂ ಹೋರಾಟ ಮಾಡುತ್ತಿರುವಂತಹ ಜಯಮೃತ್ಯುಂಜಯ ಸ್ವಾಮೀಜಿ ಭೇಟಿ ಮಾಡಿದ್ದಾರೆ..

cc-patil
ಸಿ. ಸಿ ಪಾಟೀಲ್

ಶಿವಮೊಗ್ಗ : ಕೆಲವು ಜನರಿಗೆ ದೊಡ್ಡ ಸಮಾಜದ ನಾಯಕರಾಗಬೇಕೆಂಬ ಆಸೆ ಇರುತ್ತದೆ. ಮಾಜಿ ಸಚಿವ ಎಂ ಬಿ ಪಾಟೀಲರು ಆ ಕನಸನ್ನು ಕಾಣುತ್ತಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್ ಕಿಚಾಯಿಸಿದ್ದಾರೆ.

ಮಾಜಿ ಸಚಿವ ಎಂಬಿಪಿ ವಿರುದ್ಧ ಸಚಿವ ಸಿ ಸಿ ಪಾಟೀಲ್ ವ್ಯಂಗ್ಯ

ಹಿಂದೆ ಲಿಂಗಾಯತ ಪ್ರತ್ಯೇಕ ಧರ್ಮದ ಕೆಲಸ ಮಾಡುವುದಕ್ಕೆ ಹೋಗಿ ಏನಾದ್ರು ಅಂತಾ ಜಿಲ್ಲೆಯ ಜನತೆ ನೋಡುತ್ತಿದ್ದಾರೆ. ಎಂ ಬಿ ಪಾಟೀಲರು ಯುವಕರಿದ್ದಾರೆ. ಅವರು ನಮ್ಮ ಸ್ನೇಹಿತರು. ಧರ್ಮ ಮತ್ತು ಜಾತಿ ಸೂಕ್ಷ್ಮ ವಿಚಾರವಾಗಿದೆ.

ಈ ವಿಚಾರವನ್ನು ನಾವು ಎಚ್ಚರಿಕೆಯಿಂದ ನೋಡಬೇಕಾಗುತ್ತದೆ. ಜನ ನಮಗೆ ಗುರುತರವಾದ ಜವಾಬ್ದಾರಿಯನ್ನು ನೀಡಿದ್ದಾರೆ. ಹಿಂದೆ ಕಾಂಗ್ರೆಸ್​ನವರಿಗೆ ನೀಡಿದ್ರು, ಈಗ ನಮಗೆ ನೀಡಿದ್ದಾರೆ ಎಂದರು. ಜನ ನಮಗೆ ಯಾವ ಕೆಲಸವನ್ನು ನೀಡಿದ್ದಾರೆ ಅದನ್ನು ಸರಿಯಾಗಿ ಮಾಡಬೇಕು.

ಪ್ರತಿಯೊಬ್ಬರಿಗೂ ಅವರ ಜಾತಿಯ ಬಗ್ಗೆ ಅಭಿಮಾನ ಇರುತ್ತದೆ. ಅದು ತಪ್ಪಲ್ಲ. ಸ್ವಧರ್ಮ ನಿಷ್ಟೆ, ಪರಧರ್ಮ ಸಹಿಷ್ಣತೆಯಿಂದ ಇರಬೇಕು. ಈ ಬಗ್ಗೆ ನಾನು ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ನಾನು ಒಬ್ಬ ಸಮಾಜದ ವ್ಯಕ್ತಿಯಾಗಿ ಸರ್ಕಾರದ ಭಾಗವಾಗಿ ಎರಡನ್ನು ಸಂಬಾಳಿಸಿಕೊಂಡು ಹೋಗುವಂತಹ ಪರಿಸ್ಥಿತಿ ಇದೆ. ಇದನ್ನು ಯಶಸ್ವಿಯಾಗಿ ಮಾಡುತ್ತಿದ್ದೇನೆ. ಸಿಎಂ ಬೊಮ್ಮಾಯಿ ಹಾಗೂ ಹೋರಾಟ ಮಾಡುತ್ತಿರುವಂತಹ ಜಯಮೃತ್ಯುಂಜಯ ಸ್ವಾಮೀಜಿ ಭೇಟಿ ಮಾಡಿದ್ದಾರೆ.

ಇದಕ್ಕೆ ಬೇಕಾದ ಪೂರಕ ವಾತಾವರಣ ನಿರ್ಮಿಸಿ, ಈ ಕುರಿತು ಚರ್ಚೆ ನಡೆಸಿದ್ದಾರೆ. ಹೋರಾಟ ಯಶಸ್ವಿಗೆ ಶ್ರಮಿಸುತ್ತೇನೆ. ಸರ್ಕಾರ ಹಾಗೂ ಸಮಾಜದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದರು.

ನಿಗದಿತ ಅವಧಿಯೊಳಗಾಗಿ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣ

ಶಿವಮೊಗ್ಗ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ ನಿಗದಿತ ಅವಧಿಯೊಳಗಾಗಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ವಿಮಾನ ನಿಲ್ದಾಣ ಕಾಮಗಾರಿ ಕುರಿತಂತೆ ಸಚಿವ ಸಿ ಸಿ ಪಾಟೀಲ್ ಮಾತನಾಡಿರುವುದು..

ಇಂದು ಸೋಗಾನೆಯಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ ನಡೆಸಿ ನಂತರ ಮಾತನಾಡಿದ್ದಾರೆ. ಶಿವಮೊಗ್ಗದಲ್ಲಿ 386 ಕೋಟಿ ರೂ. ವೆಚ್ಚದಲ್ಲಿ ಏರ್ ಬಸ್ ನಂತಹ ಬೃಹತ್ ವಿಮಾನಗಳು ಇಳಿಯಲು ಸಾಧ್ಯವಾಗುವಂತಹ ಸುಸಜ್ಜಿತ ವಿಮಾನ ನಿಲ್ದಾಣ ಕಾಮಗಾರಿ ನಿರೀಕ್ಷೆಯಂತೆ ನಡೆಯುತ್ತಿದೆ. ಮಳೆಯಿಂದಾಗಿ ಕಳೆದ ಎರಡು ತಿಂಗಳಲ್ಲಿ ಕಾಮಗಾರಿ ಸ್ವಲ್ಪ ನಿಧಾನವಾಗಿದ್ದರೂ, ನಿಗದಿತ ಅವಧಿಯೊಳಗಾಗಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

CC Patil visits airport
ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ ನಡೆಸಿದ ಸಚಿವ ಸಿ ಸಿ ಪಾಟೀಲ್

ಪ್ರಧಾನಮಂತ್ರಿ ಅವರ ಉಡಾನ್ ಯೋಜನೆಯಡಿ ವಿಮಾನ ನಿಲ್ದಾಣ ನಿರ್ಮಿಸಲಾಗುತ್ತಿದೆ. ಇದರಿಂದ ಸಾಮಾನ್ಯ ಜನರು ಸಹ ವಿಮಾನ ಯಾನ ಕೈಗೊಳ್ಳುವುದು ಸಾಧ್ಯವಾಗಲಿದೆ. ಎರಡು ಹಂತಗಳಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗಿದ್ದು, ರನ್‍ವೇ ನಿರ್ಮಾಣ ಕಾರ್ಯ ಹಾಗೂ ಟರ್ಮಿನಲ್ ನಿರ್ಮಾಣ ಕಾರ್ಯ ಜತೆಯಾಗಿಯೇ ನಡೆಯುತ್ತಿದೆ. ನಿಗದಿತ ಅವಧಿಯೊಳಗಾಗಿ ಮಾತ್ರವಲ್ಲದೆ ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸಲು ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.

CC Patil visits airport
ವಿಮಾನ ನಿಲ್ದಾಣ ಕಾಮಗಾರಿ ಸ್ಥಳಕ್ಕೆ ಸಚಿವ ಸಿಸಿ ಪಾಟೀಲ್ ಭೇಟಿ, ಪರಿಶೀಲನೆ

ವಿಮಾನ ನಿಲ್ದಾಣ ನಮ್ಮ ನೆಚ್ಚಿನ ನಾಯಕ ಯಡಿಯೂರಪ್ಪ ಅವರ ಕನಸಿನ ಕೂಸು. ಸಚಿವರಾದ ಈಶ್ವರಪ್ಪ ಹಾಗೂ ಸಂಸದ ರಾಘವೇಂದ್ರ ಅವರ ಸೂಚನೆ ಮೇರೆಗೆ ವಿಮಾನ ನಿಲ್ದಾಣ ಕಾಮಗಾರಿ ವೀಕ್ಷಣೆಗೆ ಬಂದಿದ್ದೇನೆ. ಇದು ನನ್ನ ಕರ್ತವ್ಯ ಎಂದರು.

ಓದಿ: ಶಿಕ್ಷಕರ ದಿನಾಚರಣೆ : ಬೆಂಗಳೂರಿನಲ್ಲಿ ಉತ್ತಮ ಶಿಕ್ಷಕರಿಗೆ ಸನ್ಮಾನ.. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.