ETV Bharat / state

ರಾಜ್ಯದ ಪ್ರಥಮ 'ಎಮ್ಮೆ' ಶಿಲ್ಪಗಳನ್ನು ಒಳಗೊಂಡ ತುರುಗೋಳು ವೀರಗಲ್ಲು ಪತ್ತೆ

author img

By

Published : Dec 6, 2020, 6:13 PM IST

ಎಮ್ಮೆಯ ಶಿಲ್ಪಗಳಿರುವ ವೀರಗಲ್ಲುಗಳು ಕರ್ನಾಟಕದಲ್ಲಿ ಅತಿ ವಿರಳ. ಆದರೆ, ಶಿವಮೊಗ್ಗದಲ್ಲಿ ದೊರಕಿರುವ ಈ ತುರುಗೋಳಿನಲ್ಲಿ ಹೆಚ್ಚಿನಾಗಿ ಎಮ್ಮೆಗಳನ್ನೇ ಚಿತ್ರಿಸಲಾಗಿದೆ. ಇದು ರಾಜ್ಯದಲ್ಲಿಯೇ ಪ್ರಥಮ ಎನ್ನಬಹುದು ಎಂಬ ಅಭಿಪ್ರಾಯವನ್ನು ಪುರಾತತ್ವ ಇಲಾಖೆಯ ನಿರ್ದೇಶಕ ಶೇಜೇಶ್ವರ್ ವ್ಯಕ್ತಪಡಿಸಿದ್ದಾರೆ.

turugol_shilpa
ತುರುಗೋಳು ವೀರಗಲ್ಲು

ಶಿವಮೊಗ್ಗ: ರಾಷ್ಟ್ರಕೂಟರ ಕಾಲದ ಅಪರೂಪದ ಎಮ್ಮೆ ಶಿಲ್ಪದ ತುರುಗೋಳು ವೀರಗಲ್ಲು ತಾಲೂಕಿನ ಗುಡ್ಡದ ಹರಕೆರೆ ಗ್ರಾಮದ ಬಳಿ ಪತ್ತೆಯಾಗಿದೆ.

ಕ್ರಿ.ಶ. 963 ರ 10 ನೇ ಶತಮಾನದ ಕನ್ನರದೇವನ ಕಾಲದ್ದು ಎನ್ನಲಾದ‌ ವೀರಗಲ್ಲು ಇದಾಗಿದೆ. ಅಪರೂಪದ ಈ ವೀರಗಲ್ಲನ್ನು ಶಿವಮೊಗ್ಗ ಪುರಾತತ್ವ ಸಂಗ್ರಹಾಲಯ ಮತ್ತು ಪಾರಂಪರಿಕ ಇಲಾಖೆಯ ನಿರ್ದೇಶಕ ಶೇಜೇಶ್ವರ್ ಅವರು ಕ್ಷೇತ್ರ ಕಾರ್ಯ ಕೈಗೊಂಡಾಗ ಇದು ಪತ್ತೆಯಾಗಿದೆ.

ತುರುಗೋಳು ವೀರಗಲ್ಲು ಪತ್ತೆ

ವೀರಗಲ್ಲಿನ ವಿಶೇಷತೆ: ಇದು 262 ಸೆಂ.ಮೀ. ಉದ್ದ ಹಾಗೂ 95 ಸೆಂ.ಮೀ ಅಗಲವಾಗಿದೆ. ಇದರಲ್ಲಿ ನಾಲ್ಕು ಸಾಲುಗಳಿದ್ದು, ವೀರಗಲ್ಲು ಸ್ಥಾಪನೆಯ ಬಗ್ಗೆ ವಿವರಿಸಲಾಗಿದೆ.

ಕೆಳಗಿನ ಪಟ್ಟಿಕೆ: ವೀರನಾದ ಅರಿಗೆರೆಯ ನಾಡಗಾವುಂಡನ ತಮ್ಮ 'ಬೆಟ್ಟುಗ'ನ ಹಿಂದೆ ಐದು ಎಮ್ಮೆಗಳ ಶಿಲ್ಪಗಳಿದ್ದು, ಈ ವೀರನು ಬಿಲ್ಲು ಬಾಣಗಳನ್ನು ಹಿಡಿದು ಆರು ಜನ ಶತ್ರುಗಳ ವಿರುದ್ಧ ಹೋರಾಡುತ್ತಿರುವುದು ಕಂಡು ಬರುತ್ತದೆ.

buffalo sculpture featuring  Inscription found at shimoga
ತುರುಗೋಳು ವೀರಗಲ್ಲು ಪತ್ತೆ
ಎರಡನೇ ಪಟ್ಟಿಕೆ: ಇಲ್ಲಿ ವೀರನಾದ ಬೆಟ್ಟಗನು ಮರಣ ಹೊಂದಿದ್ದು, ಇವನನ್ನು ಅಪ್ಸರೆಯರು ಸಂಗೀತ ವಾದ್ಯಗಳೊಂದಿಗೆ ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಿರುವ ದೃಶ್ಯವಿದೆ.
ಮೂರನೇ ಪಟ್ಟಿಕೆ: ಇದರಲ್ಲಿ ವೀರನು ಸ್ವರ್ಗದಲ್ಲಿ ಕುಳಿತಿರುವುದು ಇವನ ಪಕ್ಕದಲ್ಲಿ ಅಪ್ಸರೆಯರು ಹಾಗೂ ಚಾಮರಧಾರಣಿಯರಿರುವುದು ತಿಳಿದು ಬರುತ್ತದೆ.
ನಾಲ್ಕನೇ ಪಟ್ಟಿಕೆ: ಇಲ್ಲಿ ಶಿವಲಿಂಗ ಹಾಗೂ ಸೂರ್ಯ- ಚಂದ್ರನನ್ನು ಕಾಣಬಹುದು.
ತುರುಗೂಳು ಶಿಲ್ಪದ ವಿಶೇಷತೆ: ಶಾಸನಗಳಲ್ಲಿ ಹೇಳಿರುವಂತೆ ತುರುಗೋಳು ಅಂದರೆ ಹಸುಗಳು. ಇವು ರಾಜ್ಯದ ಸಂಪತ್ತು‌ ಇದ್ದಂತೆ. ಶತ್ರುಗಳು ಹಸು/ಎಮ್ಮೆಗಳ ಕಳ್ಳತನ ಮಾಡುವುದು ಹಾಗೂ ಯುದ್ಧ ಸಾರುವುದು ಎಂಬ ಅರ್ಥವನ್ನು ಈ ಶಾಸನ ತಿಳಿಸುತ್ತದೆ. ಇದರಂತೆ ಗುಡ್ಡದ ಅರಿಕೆರೆಯ ಗ್ರಾಮದಲ್ಲಿ ವಿಶೇಷವಾಗಿ ಎಮ್ಮೆಗಳ ಕಳ್ಳತನ ಮಾಡುವಾಗ ಶತ್ರುಗಳ ವಿರುದ್ಧ ಬೆಟ್ಟುಗ ಹೋರಾಡಿ ಮರಣ ಹೊಂದಿದಾಗ ಗೋವಿಂದ ಗಾವುಂಡನು ಈ ತುರುಗೋಳು ವೀರಗಲ್ಲನ್ನು ಸ್ಥಾಪಿಸಿರುವುದು ತಿಳಿದು ಬರುತ್ತದೆ.
buffalo sculpture featuring  Inscription found at shimoga
ತುರುಗೋಳು ವೀರಗಲ್ಲು

ಇದನ್ನೂ ಓದಿ: ಕೇಂದ್ರ ಸಚಿವರ ಎದುರೇ ಕೈ ಶಾಸಕ - ಪಾಲಿಕೆ ಮಾಜಿ ಸದಸ್ಯನ ಮಧ್ಯೆ ಮಾತಿನ ಚಕಮಕಿ

ಎಮ್ಮೆಯ ಶಿಲ್ಪಗಳಿರುವ ವೀರಗಲ್ಲುಗಳು ಕರ್ನಾಟಕದಲ್ಲಿ ಅತಿ ವಿರಳ. ಹೆಚ್ಚಿನ ತುರುಗೋಳಿನಲ್ಲಿ ಹಸುಗಳನ್ನೇ ಚಿತ್ರಿಸಿದ್ದಾರೆ. ಆದರೆ, ಈ ರೀತಿ ದೊರೆತಿರುವ ವೀರಗಲ್ಲು ಬಹುಶಃ ರಾಜ್ಯದಲ್ಲಿಯೇ ಪ್ರಥಮ ಎನ್ನಬಹುದು ಎಂಬ ಅಭಿಪ್ರಾಯವನ್ನು ಶೇಜೇಶ್ವರ್ ವ್ಯಕ್ತಪಡಿಸಿದ್ದಾರೆ. ಇವರಿಗೆ ಶಿಲ್ಪವನ್ನು ಗುರುತಿಸಲು ಡಾ. ಜಗದೀಶ್, ಡಾ.ಶೇಷಶಾಸ್ತ್ರಿ, ಡಾ.ಪರಶಿವಮೂರ್ತಿ, ರಮೇಶ್ ಹಿರೇಜಂಬೂರ್,‌ಮುರುಳಿಕೃಷ್ಣ, ಬಾಬಣ್ಣ ಸಹಕರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.