ETV Bharat / state

ಶಿವಮೊಗ್ಗ: ರೌಡಿಶೀಟರ್‌ಗಳ ಪಟ್ಟಿಯಿಂದ 1,423 ಜನರನ್ನು ಕೈ ಬಿಟ್ಟ ಜಿಲ್ಲಾ ಪೊಲೀಸ್ ಇಲಾಖೆ

author img

By

Published : Feb 8, 2022, 7:19 AM IST

ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿ ರೌಡಿ ಶೀಟರ್‌ಗಳ ಪಟ್ಟಿಯಿಂದ 1,420 ಮಂದಿಯ ಹೆಸರನ್ನು ತೆಗೆದುಹಾಕಲಾಗಿದೆ.

1420 people taken off rowdy sheeters list in Shivamogga
ರೌಡಿ ಶೀಟರ್‌ಗಳ ಪಟ್ಟಿಯಿಂದ 1420 ಜನರನ್ನು ಕೈ ಬಿಟ್ಟ ಜಿಲ್ಲಾ ಪೊಲೀಸ್ ಇಲಾಖೆ

ಶಿವಮೊಗ್ಗ: ಜಿಲ್ಲೆಯಲ್ಲಿ ಸುಮಾರು 2 ಸಾವಿರ ಮಂದಿ ರೌಡಿಶೀಟರ್​​ ಪಟ್ಟಿಯಲ್ಲಿದ್ದು, ಸೋಮವಾರ ಸುಮಾರು 1,423 ಜನರನ್ನು ಈ ಪಟ್ಟಿಯಿಂದ ಕೈ ಬಿಡಲಾಗಿದೆ. ರೌಡಿಶೀಟರ್​ ಪಟ್ಟಿಯಿಂದ ಶಿವಮೊಗ್ಗ ಉಪ ವಿಭಾಗ ಒಂದರಲ್ಲಿಯೇ 698 ಜನರನ್ನು ಬಿಡುಗಡೆ ಮಾಡಲಾಯಿತು.

ಕೊಲೆ, ಬೆದರಿಕೆ, ಹಫ್ತಾ ವಸೂಲಿ ಸೇರಿದಂತೆ ಅನೇಕ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದವರನ್ನು ರೌಡಿಶೀಟರ್​ ಪಟ್ಟಿಗೆ ಸೇರಿಸಲಾಗುತ್ತದೆ. ಇವರ ಮೇಲೆ ನಿಗಾ ಇಡಲು ಪೊಲೀಸರು ಆಗಾಗ ಇವರ ಮನೆ, ಕೆಲಸ ನಿರ್ವಹಿಸುವ ಕಡೆಗೆ ಹೋಗಿ ವಿಚಾರಿಸುತ್ತಿರುತ್ತಾರೆ. ಅಲ್ಲದೇ, ಆಗಾಗ ಪೊಲೀಸ್ ಪರೇಡ್ ನಡೆಸಿ, ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಲಾಗುತ್ತದೆ.

ಇದನ್ನೂ ಓದಿ: ಸದ್ಯಕ್ಕಿಲ್ಲ ಸಚಿವ ಸಂಪುಟ ವಿಸ್ತರಣೆ: ಪಂಚ ರಾಜ್ಯ ಚುನಾವಣೆವರೆಗೂ ಬದಲಾವಣೆ ಬೇಡ ಎಂದ ಅಮಿತ್ ಶಾ!

ಹೀಗೆ ಕಳೆದ ಐದಾರು ವರ್ಷಗಳಿಂದ ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗದವರನ್ನು ಗುರುತಿಸಿ ಅವರನ್ನು ರೌಡಿಶೀಟರ್​ ಪಟ್ಟಿಯಿಂದ ಕೈ ಬಿಡಲಾಗುತ್ತದೆ. ಈ ರೀತಿಯ ರೌಡಿಶೀಟರ್​ ಪಟ್ಟಿಯಲ್ಲಿ ಹಲವಾರು ಜನ ವಯಸ್ಸಾದವರು ಇದ್ದಾರೆ. ಇಂತಹವರನ್ನು ಕೈ ಬಿಡಿ ಎಂದು ಗೃಹ ಸಚಿವರು ಇಲಾಖೆಗೆ ಸೂಚಿಸಿದ್ದರು. ಇದರಿಂದ ಜಿಲ್ಲೆಯಲ್ಲಿ 1,423 ಜನರನ್ನು ರೌಡಿಪಟ್ಟಿಯಿಂದ ಬಿಡುಗಡೆ ಮಾಡಲಾಗಿದೆ.

ಶಿವಮೊಗ್ಗ ಉಪವಿಭಾಗದ ದೊಡ್ಡಪೇಟೆ, ಕೋಟೆ, ವಿನೋಬ ನಗರ, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಸೇರಿದಂತೆ ಕುಂಸಿ ಪೊಲೀಸ್ ಠಾಣೆಯಿಂದ ಹಲವರನ್ನು ರೌಡಿ ಪಟ್ಟಿಯಿಂದ ಬಿಡುಗಡೆ ಮಾಡಲಾಗಿದೆ.

ರೌಡಿಪಟ್ಟಿಯಿಂದ ಕೈ ಬಿಟ್ಟವರನ್ನು ಮುಂದೆ ಅಗತ್ಯವಾದಾಗ ಪೊಲೀಸ್ ಇಲಾಖೆ ಬಳಸಿಕೊಳ್ಳಲಿದೆ. ಇದಕ್ಕಾಗಿ ಶಿವಮೊಗ್ಗ ಉಪವಿಭಾಗದವರನ್ನು ಶಿವಮೊಗ್ಗದ ಡಿಎಆರ್ ಮೈದಾನದಲ್ಲಿ ಕರೆದು ಮುಂದೆ ಒಳ್ಳೆಯ ಜೀವನ ನಡೆಸಬೇಕು. ಮುಂದೆ ಯಾವುದೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಬಾರದು ಎಂದು ಎಸ್​ಪಿ ಲಕ್ಷ್ಮಿ ಪ್ರಸಾದ್ ಸೂಚನೆ ನೀಡಿದರು.

ಇದೇ ವೇಳೆ ರೌಡಿಶೀಟರ್​ ಪಟ್ಟಿಯಿಂದ ಹೊರ ಹೋಗುವವರು ತಮ್ಮನ್ನು ರೌಡಿ ಶೀಟ್​ರ್​​ ಪಟ್ಟಿಯಿಂದ ಕೈ ಬಿಟ್ಟದಕ್ಕೆ ಪೊಲೀಸ್ ಇಲಾಖೆಗೆ ಧನ್ಯವಾದ ತಿಳಿಸಿದರು.

ಜಿಲ್ಲೆಯಲ್ಲಿ ಕೋಮು ಗಲಭೆ ಸೇರಿದಂತೆ, ಹಲವಾರು ಅಪರಾಧ ಪ್ರಕ್ರಿಯೆಗಳು ಹೆಚ್ಚಾಗಿ ನಡೆಯುತ್ತವೆ. ಇದರಿಂದ ಜಿಲ್ಲೆಯಲ್ಲಿ ರೌಡಿಗಳ ಸಂಖ್ಯೆಯೂ ಹೆಚ್ಚಾಗಿದೆ. ಹೀಗಾಗಿ ರೌಡಿಗಳನ್ನು ಹತೋಟಿಗೆ ತರಲು ಹಾಗೂ ಅವರ ಮುಂದಿನ ಚಟುವಟಿಕೆಗಳ ಮೇಲೆ ನಿಗಾವಹಿಸಲು ರೌಡಿಪಟ್ಟಿಯನ್ನು ತೆರೆಯಲಾಗುತ್ತದೆ. ಹೀಗೆ ರೌಡಿಶೀಟರ್​ ಪಟ್ಟಿಯಲ್ಲಿ ಇರುವವರ ಮೇಲೆ ಪೊಲೀಸರು ಸದಾ ಕಾಲ ನಿಗಾವಹಿಸಿರುತ್ತಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.