ETV Bharat / state

ಲೋಕಸಭಾ ಚುನಾವಣೆ ದೃಷ್ಟಿಯಲ್ಲಿ ವಿಜಯೇಂದ್ರ ಆಯ್ಕೆ ಒಳ್ಳೆಯ ಬೆಳವಣಿಗೆ : ಎಸ್ ಟಿ ಸೋಮಶೇಖರ್

author img

By ETV Bharat Karnataka Team

Published : Nov 15, 2023, 6:19 PM IST

Updated : Nov 15, 2023, 7:06 PM IST

ವಿಜಯೇಂದ್ರ ಅವರ ಆಯ್ಕೆ ಕುಟುಂಬ ರಾಜಕೀಯ ಅಲ್ಲ ಎಂದು ಶಾಸಕ ಎಸ್ ಟಿ ಸೋಮಶೇಖರ್ ಅವರು ತಿಳಿಸಿದ್ದಾರೆ.

ಎಸ್ ಟಿ ಸೋಮಶೇಖರ್
ಎಸ್ ಟಿ ಸೋಮಶೇಖರ್

ಶಾಸಕ ಎಸ್ ಟಿ ಸೋಮಶೇಖರ್

ರಾಮನಗರ : ಬಿ ವೈ ವಿಜಯೇಂದ್ರ ಅವರು ಹಿಂದೆ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿದ್ದರು. ಅವರಿಗೆ ಅನುಭವ ಇದೆ. ಎಲ್ಲಾ ಜಿಲ್ಲೆಗಳ ನಾಯಕರ ಪರಿಚಯವೂ ಅವರಿಗಿದೆ. ಹೀಗಾಗಿ, ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿ ಅವರ ಆಯ್ಕೆ ಒಳ್ಳೆಯ ಬೆಳವಣಿಗೆ ಎಂದು ಶಾಸಕ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.

ರಾಮನಗರ ಜಿಲ್ಲೆ ಕುಂಬಳಗೋಡಿನಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಅವರ ಆಯ್ಕೆ ಕುಟುಂಬ ರಾಜಕೀಯ ಅಲ್ಲ. ಅವರ ತಂದೆ ಬಿ ಎಸ್ ಯಡಿಯೂರಪ್ಪ ಅವರು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದ ಮೇಲೆ ಅವರ ಮಗನಿಗೆ ಅಧಿಕಾರ ನೀಡಿದ್ದಾರೆ. ವಿಜಯೇಂದ್ರ ಅವರು ಈಗ ಶಾಸಕರೂ ಕೂಡ ಆಗಿದ್ದಾರೆ ಎಂದರು.

ಕ್ಷೇತ್ರದ ಜನತೆ ನನ್ನನ್ನು ಕಡೆಗಣಿಸಿಲ್ಲ - ನನ್ನನ್ನು ಯಾರು ಬೇಕಿದ್ದರೂ ಕಡೆಗಣಿಸಲಿ, ಬಿಡಲಿ. ಆದರೆ, ಕ್ಷೇತ್ರದ ಜನ ನನ್ನನ್ನು ಕಡೆಗಣಿಸಿಲ್ಲ. ನಾನು ಬಿಜೆಪಿಯಿಂದ ದೂರ ಉಳಿಯುತ್ತಿಲ್ಲ. ನನ್ನ ಕ್ಷೇತ್ರದ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರನ್ನು ತಲುಪುತ್ತಿರುವ ಬಗ್ಗೆ ಕ್ಷೇತ್ರದ 40 ಮಹಿಳೆಯರ ಮೂಲಕ ಪರಿಶೀಲನೆ ನಡೆಸುತ್ತಿದ್ದೇನೆ. ಇದನ್ನು ಕೆಲವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ.‌ ಸರ್ಕಾರಿ ಯೋಜನೆಗಳು ಜನರಿಗೆ ತಲುಪಬೇಕು ಎಂಬುದಷ್ಟೇ ನನ್ನ ಉದ್ದೇಶ ಎಂದರು.

ಹಿಂದೆ ನಾನು ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವನಾಗಿದ್ದಾಗ, ಕೇವಲ ಮೂರು ಕ್ಷೇತ್ರದಲ್ಲಷ್ಟೇ ಬಿಜೆಪಿ ಇತ್ತು. ಹೀಗಿದ್ದರೂ, ಉಳಿದ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದೆ. ಅದೇ ರೀತಿ ಈಗಲೂ ನಡೆಯುತ್ತಿದೆ. ಬಿಜೆಪಿಯಲ್ಲಿ ನಾನು ಗೆದ್ದಿದ್ದೇನೆ. ಹಾಗಾಗಿ ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮ ಮಾಡಬಾರದಾ? ಎಂದು ಪ್ರಶ್ನಿಸಿದರು.

ಎಸ್ ಎಂ ಕೃಷ್ಣ ಅವರು ಬಿಜೆಪಿ ಸೇರಿದ್ದರು. ಆದರೆ, ಅವರಿಗೆ ನೀಡಿದ್ದ ಆಶ್ವಾಸನೆಗಳನ್ನು ಬಿಜೆಪಿ ಈಡೇರಿಸಿಲ್ಲ. ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸಿದ ಹಾಗೂ ಹಿಂದೆ ಸಚಿವರಾಗಿದ್ದ ಶಂಕರ್, ಬಿ ಸಿ ನಾಗೇಶ್ ಸೇರಿದಂತೆ ಅನೇಕರಿಗೆ ಕೊಟ್ಟ ಭರವಸೆ ಈಡೇರಿಸಿಲ್ಲ. ಹಾಗಾಗಿ, ನನ್ನೊಂದಿಗೆ ಬಿಜೆಪಿ ಸೇರಿದವರ ಪರಿಸ್ಥಿತಿ ಕುರಿತು ಬಿಜೆಪಿಯವರು ಮೊದಲು ಜಾಮೂನು ನೀಡಿ ಬಳಿಕ ವಿಷ ನೀಡುತ್ತಾರೆ ಎಂಬ ಹೇಳಿಕೆ ನೀಡಿದ್ದೆ. ಈ ಹೇಳಿಕೆ ವೈಯಕ್ತಿಕವಾಗಿರಲಿಲ್ಲ. ನನಗೆ ಮಂತ್ರಿ ಸ್ಥಾನ ನೀಡಿದ್ದರು. ಏಳೆಂಟು ಜನರಿಗೆ ಸ್ಥಾನ ಸಿಕ್ಕಿರಲಿಲ್ಲ‌ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಅವರು ತಮ್ಮ ಪುಸ್ತಕದಲ್ಲಿ ಸಮ್ಮಿಶ್ರ ಸರ್ಕಾರ ಉರುಳುವಾಗ ಕೆಲ ಶಾಸಕರು ಹಣ ಪಡೆದ ಬಗ್ಗೆ ಉಲ್ಲೇಖ ಮಾಡುವುದಾಗಿ ಹೇಳಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಸೋಮಶೇಖರ್, ಬುಕ್ ಏಕೆ? ಧರ್ಮಸ್ಥಳ, ಚಾಮುಂಡಿ ಬೆಟ್ಟದಲ್ಲಿ ಕುಳಿತುಕೊಂಡು, ಅಲ್ಲೇ ಬುಕ್ ಬರೆದು ಓದಲಿ. ಅವರು ಚಾಮುಂಡಿ ಬೆಟ್ಟಕ್ಕೆ ಹೆಚ್ಚಾಗಿ ಹೋಗುತ್ತಾರಲ್ಲ. ಅಲ್ಲೇ ಕುಳಿತು ಬುಕ್ ಓದಲಿ. ಅವರಿಗೂ ಬಿಜೆಪಿಯಲ್ಲಿ ಮಂತ್ರಿ ಸ್ಥಾನ ಸಿಗಲಿಲ್ಲ, ಅಲ್ಲವೇ ಎಂದು ಲೇವಡಿ ಮಾಡಿದರು.

ಇದನ್ನೂ ಓದಿ: ಪಕ್ಷಕ್ಕೆ ಬರುವಾಗ ಜಾಮೂನು, ಅಧಿಕಾರ ಮುಗಿದ ಮೇಲೆ ವಿಷ : ಬಿಜೆಪಿ ವಿರುದ್ಧ ಎಸ್ ಟಿ ಸೋಮಶೇಖರ್ ಅಸಮಾಧಾನ

Last Updated : Nov 15, 2023, 7:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.