ETV Bharat / state

ದೊಡ್ಡ ಆಲಹಳ್ಳಿ ತಲುಪಿದ ಕಾಂಗ್ರೆಸ್​ ಪಾದಯಾತ್ರೆ: ಹುಟ್ಟೂರಲ್ಲಿ ಮೊಳಗಿತು ಡಿಕೆಶಿಯೇ ಮುಂದಿನ ಸಿಎಂ ಎಂಬ ಘೋಷಣೆ

author img

By

Published : Jan 9, 2022, 10:48 PM IST

ಮೊದಲ ದಿನದ ಮೇಕೆದಾಟು ಪಾದಯಾತ್ರೆ ಅಂತ್ಯವಾಗಿದ್ದು, ಸಂಜೆ 7 ಗಂಟೆ ಸುಮಾರಿಗೆ ಪಾದಯಾತ್ರೆ ದೊಡ್ಡ ಆಲಹಳ್ಳಿ ತಲುಪಿದೆ. ಡಿ ಕೆ ಶಿವಕುಮಾರ್ ಹುಟ್ಟೂರಿಗೆ ಪಾದಯಾತ್ರೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಪಟಾಕಿ ಸಿಡಿಸಿ ಸ್ವಾಗತಿಸಿದರು. ಪಾದಯಾತ್ರೆ ಡಿಕೆಶಿ ಅವರ ಹುಟ್ಟೂರಿಗೆ ಬರುತ್ತಿದ್ದಂತೆ ಕಾರ್ಯಕರ್ತರು ಮುಂದಿನ ಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಜೈ ಎಂದು ಘೋಷಣೆ ಕೂಗಿದರು.

ಡಿಕೆಶಿ ಹುಟ್ಟೂರು ದೊಡ್ಡ ಆಲಹಳ್ಳಿಗೆ ಆಗಮಿಸಿದ ಪಾದಯಾತ್ರೆ
ಡಿಕೆಶಿ ಹುಟ್ಟೂರು ದೊಡ್ಡ ಆಲಹಳ್ಳಿಗೆ ಆಗಮಿಸಿದ ಪಾದಯಾತ್ರೆ

ರಾಮನಗರ: ಮೊದಲ ದಿನದ ಕಾಂಗ್ರೆಸ್ ಪಕ್ಷದ ಮೇಕೆದಾಟು ಪಾದಯಾತ್ರೆ ಮುಕ್ತಾಯವಾಗಿದೆ. ಒಟ್ಟು 15 ಕಿಲೋಮೀಟರ್ ಕ್ರಮಿಸಿ ಇದೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಹುಟ್ಟೂರಾದ ದೊಡ್ಡ ಆಲಹಳ್ಳಿಗೆ ತಲುಪಿದೆ.

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮೇಕೆದಾಟು ಸಮೀಪದ ಕಾವೇರಿ ಹಾಗೂ ಅರ್ಕಾವತಿ ನದಿಗಳ ಸಂಗಮ ಸ್ಥಳದಲ್ಲಿ ಗಣ್ಯರ ಸಮ್ಮುಖದಲ್ಲಿ ಪಾದಯಾತ್ರೆಗೆ ಚಾಲನೆ ನೀಡಲಾಗಿತ್ತು. ಭಾನುವಾರ ಬೆಳಗ್ಗೆ 10.30ಕ್ಕೆ ಆರಂಭವಾದ ಪಾದಯಾತ್ರೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಸಕ್ರಿಯವಾಗಿ ಭಾಗಿಯಾಗಿದ್ದರು. 8.5 ಕಿಲೋಮೀಟರ್ ದೂರ ಕ್ರಮಿಸಿ ಮಧ್ಯಾಹ್ನದ ಊಟದ ವಿರಾಮ ಪಡೆದಿದ್ದ ಕಾಂಗ್ರೆಸ್ ನಾಯಕರು ಸಂಜೆ ಮತ್ತೆ 6.5 ಕಿಲೋಮೀಟರ್ ಸಂಚಾರ ಮಾಡಿದ್ದಾರೆ.

ಡಿಕೆಶಿ ಹುಟ್ಟೂರು ದೊಡ್ಡ ಆಲಹಳ್ಳಿಗೆ ಆಗಮಿಸಿದ ಪಾದಯಾತ್ರೆ

ಅನಾರೋಗ್ಯದ ಹಿನ್ನೆಲೆ ಮಧ್ಯಾಹ್ನದ ಭೋಜನ ವಿರಾಮದ ನಂತರ ಪ್ರತಿಪಕ್ಷನಾಯಕ ಸಿದ್ದರಾಮಯ್ಯ ಪಾದಯಾತ್ರೆಯಲ್ಲಿ ಪಾಲ್ಗೊಳ್ಳದೇ ಬೆಂಗಳೂರಿಗೆ ವಾಪಸಾಗಿದ್ದಾರೆ. ದಿನದ ಎರಡನೇ ಭಾಗದ ಪಾದಯಾತ್ರೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿಯೇ ಮುಂದುವರಿಸಲಾಯಿತು. ಸಂಜೆ 7 ಗಂಟೆ ಸುಮಾರಿಗೆ ಪಾದಯಾತ್ರೆ ದೊಡ್ಡ ಆಲಹಳ್ಳಿ ತಲುಪಿದೆ.

ಡಿಕೆ ಶಿವಕುಮಾರ್ ಹುಟ್ಟೂರಿಗೆ ಪಾದಯಾತ್ರೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಪಟಾಕಿ ಹೊಡೆದು ಸ್ವಾಗತ ಕೋರಿದರು. ಇಂದು ಪಾದಯಾತ್ರೆ ಮುಕ್ತಾಯವಾದ ನಂತರ ಕೆಲಕಾಲ ಕಾರ್ಯಕರ್ತರ ಜೊತೆ ಸಮಾಲೋಚಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಾಳೆ ಇಲ್ಲಿಂದಲೇ ಮುಂದುವರಿಯಲಿದೆ ಎಂದು ತಿಳಿಸಿದರು.

ಮತ್ತೊಮ್ಮೆ ಮುಂದಿನ ಮುಖ್ಯಮಂತ್ರಿ ಕೂಗು:

ಪಾದಯಾತ್ರೆಯುದ್ದಕ್ಕೂ ಕಾರ್ಯಕರ್ತರು ಡಿ ಕೆ ಶಿವಕುಮಾರ್ ಪರ ಘೋಷಣೆ ಕೂಗುತ್ತಲೇ ಇದ್ದರು. ಆದರೆ ಸಂಜೆ ತಮ್ಮ ಹುಟ್ಟೂರಾದ ದೊಡ್ಡ ಆಲಹಳ್ಳಿ ತಲುಪುವ ಸಂದರ್ಭ ಕನ್ನಡದ ಬಾವುಟವನ್ನು ಡಿಕೆಶಿ ಪ್ರದರ್ಶಿಸಿದರು. ಈ ಸಂದರ್ಭ ಇವರ ಪರ ಘೋಷಣೆ ಕೂಗಿದ ಕಾರ್ಯಕರ್ತರು ಮುಂದಿನ ಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಜೈ ಎಂದು ಘೋಷಣೆ ಕೂಗಿದರು. ಕಾರ್ಯಕರ್ತರು ಎರಡು ಸಾರಿ ಘೋಷಣೆ ಕೂಗಿದರೂ ಕೆಪಿಸಿಸಿ ಅಧ್ಯಕ್ಷರು ಘೋಷಣೆ ಕೂಗುವವರ ತಡೆಯುವ ಪ್ರಯತ್ನ ಮಾಡಲಿಲ್ಲ.

ಇದನ್ನೂ ಓದಿ: ಮೇಕೆದಾಟುಪಾದಯಾತ್ರೆಗೆ ಚಾಲನೆ ಬಳಿಕ ಸರ್ಕಾರದ ವಿರುದ್ಧ ಸಿದ್ದರಾಮಯ್ಯ, ಡಿಕೆಶಿ ವಾಗ್ದಾಳಿ

ಮುಂದಿನ ಸಿಎಂ ಕೂಗು ಈಗಾಗಲೇ ಕಾಂಗ್ರೆಸ್​ನಲ್ಲಿ ಸಾಕಷ್ಟು ದೊಡ್ಡ ಸಂಚಲನ ಮೂಡಿಸಿದ್ದು, ಪಕ್ಷದ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಮತ್ತು ಅವರ ಬೆಂಬಲಿಗರಿಗೆ ಯಾವುದೇ ರೀತಿ ವಿಧಾನಸಭೆ ಚುನಾವಣೆ ಮುಕ್ತಾಯದವರೆಗೂ ಮುಂದಿನ ಸಿಎಂ ವಿಚಾರದ ಪ್ರಸ್ತಾಪ ಆಗಬಾರದು ಎಂದು ಸೂಚಿಸಿದೆ. ಆದರೆ ಭಾನುವಾರ ಪಾದಯಾತ್ರೆ ಸಂದರ್ಭ ಇಂಥದ್ದೊಂದು ಘೋಷಣೆ ಕೇಳಿಬಂದಿರುವುದು ಸಾಕಷ್ಟು ಕುತೂಹಲ ಮೂಡಿಸಿದ್ದು, ಇದಕ್ಕೆ ಮುಂದೆ ಯಾವ ರೀತಿಯ ಬೆಳವಣಿಗೆಗಳು ಕಂಡುಬರುತ್ತವೆ ಎನ್ನುವುದನ್ನು ಕಾದು ನೋಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.