ETV Bharat / state

ಜಾತಿಗಣತಿ ವರದಿ ವಿಚಾರ ಇಟ್ಟುಕೊಂಡು ಸರ್ಕಾರ ರಾಜಕೀಯ ಮಾಡುತ್ತಿದೆ: ಹೆಚ್ ಡಿ ಕುಮಾರಸ್ವಾಮಿ

author img

By ETV Bharat Karnataka Team

Published : Oct 8, 2023, 7:27 PM IST

ಕಾಂಗ್ರೆಸ್ ಪಕ್ಷಕ್ಕೆ ಜಾತಿ ವ್ಯವಸ್ಥೆ ಎನ್ನುವುದು ವೋಟ್ ಬ್ಯಾಂಕ್ ರಾಜಕೀಯಕ್ಕೆ ಇರುವ ಸಾಧನ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.

ಹೆಚ್.ಡಿ ಕುಮಾರಸ್ವಾಮಿ
ಹೆಚ್.ಡಿ ಕುಮಾರಸ್ವಾಮಿ

ರಾಮನಗರ : ಕಾಂಗ್ರೆಸ್​ನವರು ಒಂದು ಕಡೆ ಜಾತ್ಯತೀತ ಎನ್ನುತ್ತಾರೆ. ಇನ್ನೊಂದು ಕಡೆ ಜಾತಿಗಣತಿ ವರದಿ ಇಟ್ಟುಕೊಂಡು ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತಲು ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಿಡದಿಯ ತಮ್ಮ ತೋಟದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಾತಿಗಣತಿ ವರದಿ ವಿಚಾರ ಇಟ್ಟುಕೊಂಡು ಸರ್ಕಾರವು ರಾಜಕೀಯ ಮಾಡುತ್ತಿದೆ. ಕಾಂತರಾಜು ಎಂಬುವರಿಂದ ವರದಿ ಕೊಡಿಸಿದ್ದೀವಿ. ಕುಮಾರಸ್ವಾಮಿ ಅವರು ಒಪ್ಪಲಿಲ್ಲ ಎಂದು ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ. ಆದರೆ, ಸದಸ್ಯ ಕಾರ್ಯದರ್ಶಿ ಸಹಿ ಇಲ್ಲದೆ ಆ ವರದಿಯನ್ನು ಸ್ವೀಕಾರ ಮಾಡುವುದು ಹೇಗೆ..? ಎನ್ನುವ ಅರಿವು ಸಿಎಂ ಆದವರಿಗೆ ಇಲ್ಲ ಎಂದು ತಿರುಗೇಟು ನೀಡಿದರು.

ಹಾಗೆಯೇ ನನ್ನ ಕಡೆ ಬೆರಳು ತೋರಿಸುವ ಅವರು, ಆ ಸಂದರ್ಭದಲ್ಲಿ ಸಮನ್ವಯ ಸಮಿತಿಯ ಅಧ್ಯಕ್ಷರಾಗಿ ಒಮ್ಮೆಯಾದರೂ ಕಾಂತರಾಜು ವರದಿ ಬಗ್ಗೆ ಚರ್ಚೆ ಮಾಡಿದರಾ? ಇಲ್ಲ. ಪ್ರತಿ ಸಭೆಯಲ್ಲಿಯೂ ಟವೆಲ್ ಕೊಡವಿ ಎದ್ದು ಹೋಗುತ್ತಿದ್ದರು. ಒಮ್ಮೆಯೂ ಈ ಬಗ್ಗೆ ಸಿಎಂ ಆಗಿದ್ದ ನನ್ನ ಬಳಿ 14 ತಿಂಗಳಲ್ಲಿ ಚರ್ಚೆ ನಡೆಸಲೇ ಇಲ್ಲ ಎಂದು ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

ಜಾತಿ ಗಣತಿ ಮುಖ್ಯವಲ್ಲ. ಎಲ್ಲ ಜಾತಿಯಲ್ಲಿರುವ ಬಡವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಪ್ರತಿಪಾದಿಸಿದ ಕುಮಾರಸ್ವಾಮಿ, ಜಾತಿ ಎನ್ನುವ ಪದ ತೆಗೆದುಹಾಕಿ ಎಂದು ಹೇಳುತ್ತಾರೆ. ಜಾತ್ಯತೀತ ಸಮಾಜ ನಿರ್ಮಾಣ ಮಾಡೋಣ ಎಂದು ಭಾಷಣ ಬಿಗಿಯುತ್ತಾರೆ. ಅದರ ಅರ್ಥವೇನು? ಜಾತ್ಯತೀತ ಅಂದರೆ ಜಾತಿಯ ವ್ಯವಸ್ಥೆ ತೆಗೆದುಹಾಕಬೇಕು ಎಂದಲ್ಲವೇ? ಆದರೆ, ಕಾಂಗ್ರೆಸ್ ಪಕ್ಷಕ್ಕೆ ಜಾತಿ ವ್ಯವಸ್ಥೆ ಎನ್ನುವುದು ವೋಟ್ ಬ್ಯಾಂಕ್ ರಾಜಕೀಯಕ್ಕೆ ಇರುವ ಸಾಧನ ಎಂದು ಟೀಕಾಪ್ರಹಾರ ನಡೆಸಿದರು.

ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಜಾತಿ ರಾಜಕೀಯ ಮಾಡಿಕೊಂಡೇ ಬರುತ್ತಿದೆ. ಇವರು ಜಾತಿಗಣತಿ ಮಾಡಿ ಏನು ಸಾಧನೆ ಮಾಡುತ್ತಾರೆ? ಅದರ ಉಪಯೋಗ ಏನು? ಸಮಾಜ ಒಡೆಯಲು ಜಾತಿ ಗಣತಿ ಮಾಡುತ್ತೀರೋ ಅಥವಾ ಜಾತಿ ಬದಿಗಿಟ್ಟು ಸರ್ವೆ ಜನಾಂಗದ ಶಾಂತಿಯ ತೋಟ ನಿರ್ಮಾಣ ಮಾಡುತ್ತೀರೋ? ಮೊದಲು ಜನರಿಗೆ ಅದನ್ನು ತಿಳಿಸಿ ಎಂದು ಹೆಚ್​ಡಿಕೆ ಆಕ್ರೋಶ ಆಗ್ರಹಿಸಿದರು.

ಪಟಾಕಿ ದುರಂತ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ : ಅತ್ತಿಬೆಲೆಯಲ್ಲಿ ನಡೆದ ಪಟಾಕಿ ಸಂಗ್ರಹಗಾರದ ಅಗ್ನಿ ದುರಂತ ಅತ್ಯಂತ ದುರದೃಷ್ಟಕರ. ಮುಗ್ಧ ಕಾರ್ಮಿಕರು ಸಾವನ್ನಪ್ಪಿದ ಘಟನೆ ನನಗೆ ಬಹಳ ವೇದನೆ ಉಂಟು ಮಾಡಿದೆ. ಮುಂದೆ ಇಂತಹ ಘಟನೆಗಳು ನಡೆಯದಂತೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಹೆಚ್​ಡಿಕೆ ಒತ್ತಾಯಿಸಿದರು.

ದೀಪಾವಳಿ ಹಬ್ಬ ಬರುತ್ತಿರುವುದರಿಂದ ಅವರೆಲ್ಲರೂ ಬದುಕು ಕಟ್ಟಿಕೊಳ್ಳುವ ಕನಸು ಕಾಣುತ್ತಿದ್ದರು. ಅವರೆಲ್ಲ ಬೆಳೆಯುವ ಹುಡುಗರು. ನಿರ್ಲಕ್ಷ್ಯದಿಂದ ಅವರ ಮನೆಗಳಲ್ಲಿ ಈಗ ಕತ್ತಲು ತುಂಬಿದೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪಟಾಕಿ ಸಂಗ್ರಹ, ಮಾರಾಟದ ಬಗ್ಗೆ ಸರ್ಕಾರ ಅತ್ಯಂತ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕು. ಮೃತ ಕಾರ್ಮಿಕರ ಕುಟುಂಬಗಳಿಗೆ ಸರ್ಕಾರ ನೆರವು ನೀಡಿರುವುದು ಒಂದೆಡೆ, ಮತೊಂದೆಡೆ ಇಂಥ ಘಟನೆಗಳನ್ನು ತಡೆಯುವ ನಿಟ್ಟಿನಲ್ಲಿ ಹದ್ದಿನ ಕಣ್ಣು ಇಡಬೇಕು ಎಂದು ಹೆಚ್​ಡಿಕೆ ಸಲಹೆ ನೀಡಿದರು.

ಈ ಘಟನೆಯ ಬಗ್ಗೆ ಆಮೂಲಾಗ್ರ ತನಿಖೆ ನಡೆಸಿ, ಯಾರೇ ತಪ್ಪಿತಸ್ಥರಿದ್ದರೂ ಕಠಿಣ ಕ್ರಮ ಕೈಗೊಳ್ಳಬೇಕು. ಅಮಾಯಕರ ಸಾವಿಗೆ ನ್ಯಾಯ ಕೊಡಿಸಬೇಕು. ಪಟಾಕಿಗಳ ದಾಸ್ತಾನು, ತಯಾರು ಮಾಡುವ ಪ್ರದೇಶ ಜನನಿಬಿಡ ಪ್ರದೇಶದಿಂದ ದೂರ ಇರುವಂತೆ ನೋಡಿಕೊಳ್ಳಬೇಕು ಎಂದರು. ಜೆಡಿಎಸ್ ಪಕ್ಷದ ರಾಮನಗರ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಎ. ಮಂಜುನಾಥ್, ಬೆಂಗಳೂರು ನಗರ ಘಟಕದ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ಇದನ್ನೂ ಓದಿ : ಪಟಾಕಿ ದುರಂತ: ಪ್ರಕರಣದ ಸೂಕ್ತ ತನಿಖೆ, ಶೀಘ್ರ ಪರಿಹಾರ ಬಿಡುಗಡೆಗೆ ಬೊಮ್ಮಾಯಿ ಒತ್ತಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.