ETV Bharat / state

ಪ್ರಾಮಾಣಿಕವಾಗಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡ್ತೇನೆ : ರಾಮನಗರ ಜನತೆಗೆ ಹೆಚ್​ಡಿಕೆ ಭರವಸೆ

author img

By

Published : Sep 1, 2022, 3:47 PM IST

ಮಳೆ ದುರಂತದ ಬಗ್ಗೆ ನಾನು ತುಂಬಾ ಡೆಪ್ತ್ ಆಗಿ ನೋಡ್ತಾ ಇದ್ದೀನಿ ಎಂದು ಮಾಜಿ‌ ಸಿಎಂ ಹೆಚ್​ ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಮಾಜಿ‌ ಸಿಎಂ ಹೆಚ್​ ಡಿ ಕುಮಾರಸ್ವಾಮಿ
ಮಾಜಿ‌ ಸಿಎಂ ಹೆಚ್​ ಡಿ ಕುಮಾರಸ್ವಾಮಿ

ರಾಮನಗರ: ಮಳೆ‌ ಹಾನಿ ವಿಚಾರದಲ್ಲಿ ನನ್ನ ಊಹೆಗೂ ಮೀರಿ ಅನಾಹುತ ಆಗಿದೆ. ನಾನು ಸ್ಥಳ ಪರಿಶೀಲನೆ ಮಾಡಿದ ವೇಳೆ ಈ ಎಲ್ಲಾ ಅಂಶಗಳು ಗೊತ್ತಾಗಿದೆ. 40-50 ವರ್ಷಗಳ ಸಮಸ್ಯೆಗಳು ಇಂದು ಕಂಡು ಬಂದಿದೆ ಎಂದು ಮಾಜಿ‌ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ಚನ್ನಪಟ್ಟಣ ತಾಲೂಕಿನ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಮಳೆ ದುರಂತದ ಬಗ್ಗೆ ನಾನು ತುಂಬಾ ಡೆಪ್ತ್ ಆಗಿ ನೋಡ್ತಾ ಇದ್ದೀನಿ. ನೂರಾರು‌ ಸಮಸ್ಯೆಗಳು ಕಂಡುಬಂದಿದೆ. ಪ್ರಾಮಾಣಿಕವಾಗಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡ್ತೇನೆ. ಸಮಸ್ಯೆಗಳು ಶಾಶ್ವತವಾಗಿ ಬಗೆಹರಿಸಲಾಗುವುದು. ಕಳೆದ ಒಂದು ವಾರದ ಮಳೆಯಿಂದಾಗಿ ಎಲ್ಲಿ ತಪ್ಪಾಗಿದೆ ಅದನ್ನು ಮೊದಲು ಹುಡುಕಲಾಗುತ್ತಿದೆ ಎಂದರು.

ಎನ್​ಡಿಆರ್​ಎಫ್​ ಪರಿಹಾರ ಸಾಕಾಗಲ್ಲ.. ಜಿಲ್ಲೆಯಲ್ಲಿ ಮಳೆ ಹಾನಿಯಿಂದಾಗಿರುವ ಪ್ರದೇಶಗಳಿಗೆ ಪರಿಹಾರ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇಲ್ಲಿನ ಪರಿಸ್ಥಿತಿಗಳನ್ನು ನೋಡಿದಾಗ ಎನ್ ಡಿಆರ್​ಎಫ್ ನಿಂದ ಕೊಡುವ ಪರಿಹಾರ ಸಾಕಾಗುವುದಿಲ್ಲ. ವಿಶೇಷವಾಗಿ ಜಿಲ್ಲೆಗೆ ಪ್ಯಾಕೇಜ್ ಘೋಷಣೆ ಮಾಡಬೇಕಾಗುತ್ತದೆ. ನಾನು ಸರ್ಕಾರದ ಮೇಲೆ ಹೆಚ್ಚಿನ ರೀತಿ ಒತ್ತಡ ಹಾಕುತ್ತೇನೆ. ಕೆಲವು ಕಡೆ ಪರಿಹಾರದಿಂದ ಸಮಸ್ಯೆ ಬಗೆಹರಿಯದಿದ್ದರೆ, ನಾನು ವೈಯಕ್ತಿಕವಾಗಿ ಕೂಡ ಸಹಾಯ ಮಾಡಲು ತೀರ್ಮಾನ ಮಾಡಿದ್ದೇನೆ ಎಂದು ಹೇಳಿದರು.

ಮಳೆ ಹಾನಿ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ್​ ನಾರಾಯಣ್​ ಭೇಟಿ ನೀಡದ ವಿಚಾರವಾಗಿ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ಮಳೆ ಹಾನಿಯಾಗಿದೆ. ಎಲ್ಲಾ ಉಸ್ತುವಾರಿ ಸಚಿವರು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಅದೇನೋ ಹೇಳ್ತಾ ಇದ್ರಲ್ಲ ಅಶ್ವತ್ಥ್​ ನಾರಾಯಣ ರಾಮನಗರದಲ್ಲಿ ಅಭಿವೃದ್ಧಿ ಆಗಿಲ್ಲ ಅಂತಾ. ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಮಾಡಿದ್ದೀನಿ ಅಂತಾ ಹೇಳಿದ್ದಾರೆ.

ನಾನು ಈಗಲೂ ಅವರಿಗೆ ಹೇಳ್ತಿನಿ. ರಾಜ್ಯದ 14-15 ಜಿಲ್ಲೆಗಳಲ್ಲಿ ಮಳೆಹಾನಿಯಿಂದ ಸಮಸ್ಯೆಯಾಗಿದೆ. ಮಳೆ ಹಾನಿಯಿಂದ ಆಗಿರುವ ರಾಮನಗರ-ಚನ್ನಪಟ್ಟಣ ತಾಲೂಕಿಗೆ ವಿಶೇಷ ಪ್ಯಾಕೇಜ್ ನೀಡಿ ಎಂದು ಸಿಎಂಗೆ ಮನವಿ ಮಾಡಿದ್ದೇನೆ. ನನಗೆ ವಿಶ್ವಾಸ ಇದ್ದು, ಸಿಎಂ ಅವರು ವಿಶೇಷ ಪ್ಯಾಕೇಜ್ ನೀಡುತ್ತಾರೆ ಎಂದರು.

ತನಿಖೆ ಮಾಡಿಸಿ.. ಬೆಂಗಳೂರು- ಮೈಸೂರು ಹೆದ್ದಾರಿ ಕಾಮಗಾರಿಯಿಂದ‌ ಕೆರೆ ಕಟ್ಟೆಗಳು ಒತ್ತುವರಿಯಾಗಿವೆ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿ, ಇದು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಕೆರೆ ಒತ್ತುವರಿ ಬಗ್ಗೆ ಯಾವುದೇ ಮುಲಾಜಿಲ್ಲದೆ ಒತ್ತುವರಿ ತೆರವು ಮಾಡಿ ಅನ್ನೋದ್ರಲ್ಲಿ ನಾನೇ ಮೊದಲು. 2016 ರಲ್ಲಿ ವಿಧಾನಸಭಾ ಕಲಾಪದಲ್ಲೇ ನಾನು ಹೇಳಿದ್ದೇನೆ. ಕೆರೆ ಒತ್ತುವರಿ ಬಗ್ಗೆ ಸಮಗ್ರ ತನಿಖೆ ಮಾಡಿ ಎಂದಿದ್ದೆ ಎಂದು ಹೇಳಿದರು.

ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ಅವರು ಮಾತನಾಡಿರುವುದು

ಕೆರೆ ಒತ್ತುವರಿ ತೆರವು ಸದನ ಸಮಿತಿ ಮಾಡಿ ಅಂದಿನ ಸಭಾಧ್ಯಕ್ಷರನ್ನೇ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.‌ ಅಂದಿನ ವರದಿ ಏನಾಗಿದೆ ಎಂಬುದು ನಿಮ್ಮ‌ ಮುಂದೆಯೇ ಇದೆ. ರಾಜ್ಯದಲ್ಲಿ ಹಲವಾರು ಕೆರೆಗಳು, ಕಾಲುವೆಗಳು ಒತ್ತುವರಿಯಾಗಿವೆ. ಇದರ ಬಗ್ಗೆ ಸಮಗ್ರ ತನಿಖೆ ಮಾಡಲಿ. ಸಂಸದ ಪ್ರತಾಪ್ ಸಿಂಹ ಅವರ ನೇತೃತ್ವದಲ್ಲಿ ಸಮಿತಿ ಮಾಡಿ ತನಿಖೆ ಆಗಲಿ ಎಂದು ಇದೇ ವೇಳೆ ಕುಮಾರಸ್ವಾಮಿ ಒತ್ತಾಯಿಸಿದರು.

ಬೊಂಬೆನಗರಿಯಲ್ಲಿ ಹೆಚ್ಚು‌ ಸಮಸ್ಯೆ - ಚನ್ನಪಟ್ಟಣದಲ್ಲಿ ಹೆಚ್ಚಾಗಿ ಮಳೆಹಾನಿಯಿಂದ ಸಮಸ್ಯೆಯಾಗಿದೆ. ನಾನು ಕಳೆದ 4 ವರ್ಷಗಳಿಂದ ಶಾಸಕನಾಗಿ ಇಲ್ಲಿ ಕೆಲಸ ಮಾಡ್ತಿದ್ದೇನೆ. 25 ವರ್ಷಗಳ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕವಾಗಿ ಕೆಲಸ ಮಾಡ್ತಿದ್ದೇನೆ. ಹಲವು ಗ್ರಾಮಗಳಿಗೆ ಭೇಟಿ ಕೊಟ್ಟ ವೇಳೆ, ಅಲ್ಲಿನ ನಿವಾಸಿಗಳು 50 ವರ್ಷಗಳಿಂದ ವಾಸ ಮಾಡ್ತಿರುವುದಾಗಿ ಹೇಳಿದ್ದಾರೆ. ನಾನು ಅವರಿಗೆ ಈಗ ಹಕ್ಕು ಪತ್ರ ಕೊಟ್ಟಿದ್ದೇನೆ.‌ ಕಳೆದ 25 ವರ್ಷಗಳಿಂದ ನನಗೆ ವೋಟ್ ಹಾಕಿದ್ರೆ ಮಾತ್ರ ಹಕ್ಕುಪತ್ರ ನೀಡ್ತೀನಿ ಅಂತಾ ಮಾಜಿ ಶಾಸಕರು ಹೇಳಿದ್ರು. ಇದೀಗ ನಾನು ಬಂದ ಮೇಲೆ ಸಾಕಷ್ಟು ಕಡೆ ಹಕ್ಕು ಪತ್ರಗಳನ್ನು ನೀಡಿದ್ದೇನೆ. ಮನೆಯನ್ನು ಸಹ ನಾನೇ ಕಟ್ಟಿಸಿಕೊಡುತ್ತೇನೆ, ಮಾರಾಟ ಮಾಡಿಕೊಳ್ಳಬೇಡಿ ಎಂದು ತಿಳಿಸಿದ್ದೇನೆ. ಶೆಡ್ ನಲ್ಲಿ ವಾಸ ಮಾಡುವವರ ಬಗ್ಗೆ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ನನಗೆ ಇನ್ನೂ ಒಂದು ವರ್ಷ ಅಧಿಕಾರ ಸಿಕ್ಕಿದ್ರೆ ಈ ರೀತಿ ಚಿತ್ರಣ ಇರುತ್ತಿರಲಿಲ್ಲ ಎಂದರು.

ಹೆಚ್​ಡಿಕೆ ತಿರುಗೇಟು‌: ನಾನು ಒಂದು ಕಡೆ ರಾಜ್ಯ ನೋಡಬೇಕು. ಮತ್ತೊಂದು ಕಡೆ ಒತ್ತಡ. ನಾನು ಜನರನ್ನು ರೀಚ್ ಆಗೋಕೆ ಸಾಧ್ಯವಾಗಿಲ್ಲ. ಈ ಕ್ಷೇತ್ರಕ್ಕೆ ನನ್ನಿಂದಲೂ ಕೂಡ ತಪ್ಪಾಗಿದೆ. ಜನರ ಬಳಿ ಕ್ಷಮೆ ಕೇಳ್ತೇನೆ. ಮುಂದಿನ ಚುನಾವಣೆಯಲ್ಲಿ ಯಾರು ಏನೇ ಹೇಳಿದ್ರೂ, 150 ಸೀಟು ಗೆಲ್ತೀನಿ ಅಂತಾ ಹೇಳಿದ್ರೂ ಮುಂದಿನ ಬಾರಿ ಜನತಾದಳ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ ಎಂದು ಎಂಎಲ್​ಸಿ ಸಿ. ಪಿ ಯೋಗೇಶ್ವರ್​ಗೆ ಹೆಚ್​ಡಿಕೆ ತಿರುಗೇಟು‌ ನೀಡಿದರು.

ಚನ್ನಪಟ್ಟಣ ತಾಲೂಕನ್ನು ಚಿನ್ನದ ನಾಡು ಮಾಡ್ತೀನಿ ಎಂದಿದ್ದರು. ಮುಂದಿನ ಬಾರಿ ಸರ್ಕಾರ ಬಂದ ನಂತರ ಯೋಗೇಶ್ವರ್ ಬಯಕೆಯನ್ನು ತೀರಿಸುತ್ತೇನೆ. ಕಳೆದ ಚುನಾವಣೆಯಲ್ಲಿ ನಾನು ಪ್ರಚಾರಕ್ಕೆ ಕೂಡ ಬಂದಿರಲಿಲ್ಲ. ಕೇವಲ ನಾಮಿನೇಶನ್ ಹಾಕಿ ಹೋಗಿದ್ದೆ. ಜನರೇ ಗೆಲ್ಲಿಸಿಕೊಟ್ಟಿದ್ರು. ನಾನೇನು ಜನರಿಗೆ ಆಶ್ವಾಸನೆ ಕೊಟ್ಟಿರಲಿಲ್ಲ. ಇಂತ ಕೆಲಸಗಳನ್ನು ಮಾಡ್ತೀನಿ ಅಂತಾ. ಸರ್ಕಾರದ ಬೀಳಿಸಲಿಕ್ಕೆ ಇವರು ಏನು ಮಾಡಿದ್ರು.‌ ಸರ್ಕಾರ ತೆಗೆದು ಏನು ಸಾಧನೆ ಮಾಡಿದ್ರು. ಇಲ್ಲಿನ‌ ಜನರು ಕಷ್ಟ ಅನುಭವಿಸೋಕೆ ಮೂಲ ಕಾರಣವೇ ಸಿಪಿ ಯೋಗೇಶ್ವರ್. ನಾನು ಕೊಟ್ಟಂತಹ ಕೆಲಸಗಳು ಜನರ ಕಣ್ಣಿಗೆ ಕಾಣುತ್ತವೆ ಎಂದು ಕುಮಾರಸ್ವಾಮಿ ಹೇಳಿದರು.

ಸಿಪಿವೈ ವಿರುದ್ಧ ವಾಗ್ದಾಳಿ: ನಾನು ಪ್ರಚಾರದ ಹಿಂದೆ ಬಿದ್ದಿಲ್ಲ. ನನಗೆ ಅಭಿವೃದ್ಧಿ ಕೆಲಸವೇ ಮುಖ್ಯ ಎಂದುಕೊಂಡಿರುವವನು. ಕ್ಷೇತ್ರಕ್ಕೆ ನಾನು ಯಾವುದಾದರೂ ಅನುದಾನ ಕೊಟ್ಟರೆ ಪೂಜೆ ಮಾಡೋಕೂ ಸಹ ಬರುತ್ತಿರಲಿಲ್ಲ‌. ಅದೇ ಯೋಗೇಶ್ವರ್ ಅವರು ಕಾಂಟ್ರಾಕ್ಟರ್ ಹತ್ತಿರ ಕಮೀಷನ್ ತಗೊಂಡು ಕೆಲಸ ಮಾಡೋಕೆ ಹೇಳ್ತಿದ್ರು ಎಂದು ಸಿಪಿವೈ ವಿರುದ್ಧ ಮಾಜಿ ಸಿಎಂ ಹೆಚ್‌ಡಿಕೆ ವಾಗ್ದಾಳಿ ನಡೆಸಿದ್ದಾರೆ.

ಓದಿ: ರಾಜ್ಯಕ್ಕೆ ಉತ್ತರ ಪ್ರದೇಶ ಸಿಎಂ ಯೋಗಿ ಆಗಮನ.. ಬೆಂಗಳೂರಿನಲ್ಲಿ ಕ್ಷೇಮವನ ಉದ್ಘಾಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.