ETV Bharat / state

ರಾಜ್ಯದ ಜನರಿಗೆ ಮೇಕೆದಾಟು ನೀರು ಕೊಡಬಾರದು ಎಂಬುದೇ ಬಿಜೆಪಿ ಅಜೆಂಡಾ: ಸಿದ್ದರಾಮಯ್ಯ

author img

By

Published : Jan 9, 2022, 11:03 AM IST

Updated : Jan 9, 2022, 1:21 PM IST

ಈಗ ಎರಡೂವರೆ ವರ್ಷದಿಂದ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಕೂಡ ಮೇಕೆದಾಟು ಯೋಜನೆಗೆ ಕೇಂದ್ರ ಪರಿಸರ ಇಲಾಖೆಯಿಂದ ಯಾಕೆ ಅನುಮತಿ ತೆಗೆದುಕೊಳ್ಳಲಿಲ್ಲ?. ಇದು ನೀವು ರಾಜ್ಯಕ್ಕೆ ಬಗೆದ ದ್ರೋಹ ಎಂದು ಸಚಿವ ಗೋವಿಂದ ಕಾರಜೋಳ ವಿರುದ್ದ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದರು.

siddaramaiah
ಸಿದ್ದರಾಮಯ್ಯ

ರಾಮನಗರ: ತಮಿಳುನಾಡಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಮೇಕೆದಾಟು ಯೋಜನೆ ಅನುಷ್ಠಾನ ಆಗಬಾರದೆಂದು ಧರಣಿ ಕೂರುತ್ತಾರೆ. ಇದಕ್ಕೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಬೆಂಬಲವಿದೆ. ನಮ್ಮ ರಾಜ್ಯದ ಜನರಿಗೆ ಕುಡಿಯುವ ನೀರು ಕೊಡಬಾರದು ಎಂಬುದೇ ಬಿಜೆಪಿ ಅಜೆಂಡಾ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ರಾಮನಗರದ ಕಾವೇರಿ ಸಂಗಮದ ಬಳಿ ಮೇಕೆದಾಟು ಪಾದಯಾತ್ರೆ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ತಮಿಳುನಾಡು ಜೊತೆ ರಾಜ್ಯ ಬಿಜೆಪಿ ಕೂಡ ಕೈ ಜೋಡಿಸಿದೆ. ಇದು ಬಿಜೆಪಿಯವರು ಕರುನಾಡಿಗೆ ಮಾಡುತ್ತಿರುವ ದ್ರೋಹ ಅಲ್ವಾ? ಇದರ ವಿರುದ್ಧವೇ ನಮ್ಮ ಹೋರಾಟ ನಡೆಯುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.

'ಯೋಜನೆ ಪ್ರಾರಂಭ ಆಗಿದ್ದೇ ನಮ್ಮ ಕಾಲದಲ್ಲಿ'

ಮೇಕೆದಾಟು ಪಾದಯಾತ್ರೆ ಹತ್ತಿಕ್ಕಲು ಬಿಜೆಪಿ ಸರ್ಕಾರ ಶತಪ್ರಯತ್ನ ನಡೆಸುತ್ತಿದೆ. ಕೇಂದ್ರ ಸರ್ಕಾರ ಪರಿಸರ ಇಲಾಖೆಯಿಂದ ಅನುಮತಿ ನೀಡುತ್ತಿಲ್ಲ. ಇದಲ್ಲದೆ ನೀರಾವರಿ ಸಚಿವ ಗೋವಿಂದ ಕಾರಜೋಳ‌ ಅವರು ಮೇಕೆದಾಟು ಬಗ್ಗೆ ರಾಜ್ಯದ ಜನತೆಗೆ ತಪ್ಪು ಮಾಹಿತಿ ಕೊಡುತ್ತಿದ್ದಾರೆ. ಸಿದ್ದರಾಮಯ್ಯ ಕಾಲದಲ್ಲಿ ಮೇಕೆದಾಟು ಯೋಜನೆ ಮಾಡಲಿಲ್ಲ ಎನ್ನುತ್ತಿದ್ದಾರೆ.

ಆದರೆ ಈ ಯೋಜನೆ ನಮ್ಮ ಕಾಲದಲ್ಲಿಯೇ ಪ್ರಾರಂಭವಾಗಿದೆ. ರಾಜ್ಯದಲ್ಲಿ 2008ರಿಂದ 2013ರವರೆಗೆ ಬಿಜೆಪಿ ಸರ್ಕಾರ ಇದ್ದಾಗ ಯಾಕೆ ಯೋಜನೆ ಕೈಗೆತ್ತಿಕೊಳ್ಳಲಿಲ್ಲ? 2013ರಲ್ಲಿ ನಾವು ಅಧಿಕಾರಕ್ಕೆ ಬಂದ ಮೇಲೆ ಅಂದು‌ ನೀರಾವರಿ ಸಚಿವರಾಗಿದ್ದ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ಈ ಯೋಜನೆಗೆ ಮನವಿ ಮಾಡಲಾಗಿತ್ತು. 2017ರಲ್ಲಿ 5,912 ರೂ.ಗಳಿಗೆ ಡಿಪಿಆರ್ ಮಾಡಲಾಗಿತ್ತು. ಬಳಿಕ 2019ರಲ್ಲಿ ಡಿ.ಕೆ.ಶಿವಕುಮಾರ್​ ಸಚಿವರಿದ್ದಾಗ 9 ಸಾವಿರ ಕೋಟಿ ರೂ. ಪರಿಷ್ಕೃತ ಡಿಪಿಆರ್ ಸಿದ್ಧಗೊಳಿಸಲಾಯಿತು ಎಂದರು.

ಈಗ ಎರಡೂವರೆ ವರ್ಷದಿಂದ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಕೂಡ ಕೇಂದ್ರ ಪರಿಸರ ಇಲಾಖೆಯಿಂದ ಯಾಕೆ ಅನುಮತಿ ತೆಗೆದುಕೊಳ್ಳಲಿಲ್ಲ?. ಇದು ನೀವು ರಾಜ್ಯಕ್ಕೆ ಬಗೆದ ದ್ರೋಹ ಎಂದು ಸಚಿವ ಗೋವಿಂದ ಕಾರಜೋಳ ವಿರುದ್ಧ ಆಕ್ರೋಶ ಹೊರಹಾಕಿದರು.

'ಬಿಜೆಪಿ ಸಂಸದರಿಗೆ ಭಯ'

ರಾಜ್ಯದಲ್ಲಿ ಬಿಜೆಪಿ 25 ಮಂದಿ ಸಂಸದರಿದ್ದರೂ ಕೇಂದ್ರ ನಾಯಕರ ಬಳಿ ಯೋಜನೆ ಬಗ್ಗೆ ಕೇಳಲು ಹೆದರುತ್ತಿದ್ದಾರೆ. ಅವರಿಗೆ ನಿಜವಾಗಲೂ ಮಾನ, ಮರ್ಯಾದೆ ಇಲ್ಲ. ಬೆಂಗಳೂರಿನ ಶೇ.30ರಷ್ಟು ಜನರಿಗೆ ಕುಡಿಯುವ ನೀರಿಲ್ಲ. ಅವರಿಗೆ ನೀರು ಕೊಡಿಸುವ ಉದ್ದೇಶದಿಂದ ನಾವು ಪಾದಯಾತ್ರೆ ನಡೆಸುತ್ತಿದ್ದೇವೆ. ಈ ಯೋಜನೆಯಿಂದ 2 ಕೋಟಿ‌ಗೂ ಹೆಚ್ಚು ಜನರಿಗೆ ಅನುಕೂಲವಾಗಲಿದೆ ಎಂದರು.

ಹವಮಾನ ವೈಪರೀತ್ಯದಿಂದ ನಮ್ಮ ರಾಜ್ಯಕ್ಕೆ ಆಗಾಗ ಮಳೆ ಕೊರತೆ ಆಗುತ್ತದೆ. ಹೀಗಾಗಿ ನೀರು‌ ಸಂಗ್ರಹಣೆಗಾಗಿ ಅಣೆಕಟ್ಟು ಕಟ್ಟಲಾಗುತ್ತಿದೆ. ನಮ್ಮ ನೀರು ಬಳಸಿಕೊಳ್ಳಲು ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಾಗಿಲ್ಲ. ಈಗಾಗಲೇ ಮಳೆಗಾಲದಲ್ಲಿ ಸುಮಾರು 200 ಟಿಎಂಸಿ ನೀರು ಸಮುದ್ರದ ಪಾಲಾಗಿದೆ. ಯೋಜನೆಯಿಂದ ಈ ನೀರನ್ನು ನಾವು ಬಳಸಬಹುದು. ಮೇಕೆದಾಟುವಿನಿಂದ ಜಾರಿಯಾದರೆ ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಕ್ಕೆ ಅನುಕೂಲ ಆಗಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ನಮ್ಮನ್ನು ಬಂಧಿಸಿ, ನೋಡೋಣ ಎಂದ ಡಿಕೆಶಿ:

ಇದೇ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಎಂದರೆ ಬಲಿದಾನಕ್ಕೆ ಹೆಸರಾದ ಪಕ್ಷ. ನಾಯಕರ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಹೆಗ್ಗಳಿಕೆ ನಮ್ಮ ಪಕ್ಷಕ್ಕಿದೆ. ಕಾಂಗ್ರೆಸ್ ಇತಿಹಾಸವೇ ನಮ್ಮ ದೇಶದ ಇತಿಹಾಸ ಎಂದರು.

ಹಾಗೆಯೇ ಈ ಮೇಕೆದಾಟು ಪಾದಯಾತ್ರೆಗೆ ಬಿಜೆಪಿ ಕಡಿವಾಣ ಹಾಕಲು ಶತಪ್ರಯತ್ನ ಮಾಡುತ್ತಲೇ ಇದೆ. ನಿಮಗೆ ತಾಕತ್​​ ಇದ್ದರೆ ಇಲ್ಲಿರುವ ಶಾಸಕರು, ಮಠಾಧೀಶರನ್ನು ಬಂಧಿಸಿ ನೋಡೋಣ ಎಂದು ಸವಾಲು‌ ಹಾಕಿದರು.

ಈ ನಡಿಗೆಯು ನಮ್ಮ ಪಕ್ಷಕ್ಕಾಗಿ ಅಲ್ಲ, ನೀರಿಗಾಗಿ ನಮ್ಮ ಪಾದಯಾತ್ರೆ ನಡೆಯುತ್ತಿದೆ. ಬಿಜೆಪಿಯು ಅಧಿಕಾರ ದುಪಯೋಗ ಮಾಡಿಕೊಂಡು ಪಾದಯಾತ್ರೆ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಹರಿಯುವ ನೀರು, ಉರಿಯುವ ಸೂರ್ಯ, ಬೀಸುವ ಗಾಳಿಯನ್ನು ಯಾರೂ ಕೂಡ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಇಂದು ನಮ್ಮ ಹೋರಾಟ ಏನಿದ್ದರೂ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧವಾಗಿದೆ. ನಾವೇನು ಹೆದರುವ ಮಕ್ಕಳಲ್ಲ, ಹೋರಾಟ ಎಂಬುದು ನಮ್ಮಲ್ಲಿ‌ ರಕ್ತಗತವಾಗಿ ಬಂದಿದೆ ಎಂದ ಡಿಕೆಶಿ, ಪಾದಯಾತ್ರೆಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.

ಇದನ್ನೂ ಓದಿ: ಕಾಂಗ್ರೆಸ್​ ಮೇಕೆದಾಟು ಪಾದಯಾತ್ರೆಗೆ ಮಲ್ಲಿಕಾರ್ಜುನ ಖರ್ಗೆ ಚಾಲನೆ

Last Updated : Jan 9, 2022, 1:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.