ETV Bharat / state

ಮೊದಲ ಪಟ್ಟಿಯಲ್ಲಿ ಬಾರದ ಹೆಸರು.. ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡ ಚನ್ನಪಟ್ಟಣದ ಪ್ರಸನ್ನ ಪಿ ಗೌಡ

author img

By

Published : Mar 26, 2023, 3:25 PM IST

Updated : Mar 26, 2023, 4:17 PM IST

ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಹೆಸರು ಬಾರದ ಕಾರಣ ಪ್ರಸನ್ನ ಪಿ ಗೌಡ ಪಕ್ಷ ತೊರೆದು ಜೆಡಿಎಸ್​ ಸೇರಿದ್ದಾರೆ. ​

JDS leader Prasanna P Gowda
ಜೆಡಿಎಸ್ ಮುಖಂಡ​ ಪ್ರಸನ್ನ ಪಿ ಗೌಡ

ಕಾಂಗ್ರೆಸ್​ ತೊರೆದು ಜೆಡಿಎಸ್ ಸೇರ್ಪಡೆ

ರಾಮನಗರ : ರಾಜ್ಯದಲ್ಲಿ ವಿಧಾನಸಭೆ ಚುನವಾಣೆ ಹತ್ತಿರವಾಗುತ್ತಿದ್ದಂತೆ ಆಯಾ ಪಕ್ಷದ ಮುಖಂಡರು, ಟಿಕೆಟ್​ ಆಕಾಂಕ್ಷಿಗಳ ಪಕ್ಷಾಂತರ ಪರ್ವ ಆರಂಭವಾಗಿದೆ. ಇದರ ಬೆನ್ನಲ್ಲೇ ಬೊಂಬೆನಗರಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸಂಭಾವ್ಯ ಅಭ್ಯರ್ಥಿ ಎಂದೇ ಬಿಂಬಿಸಲ್ಪಟ್ಟಿದ್ದ ಪ್ರಸನ್ನ ಪಿ ಗೌಡ ಅವರು ಜೆಡಿಎಸ್ ಸೇರುವುದಾಗಿ ಘೋಷಿಸಿದ್ದಾರೆ. ಇಂದು ಮೈಸೂರಿನಲ್ಲಿ ನಡೆದಿರುವ ಪಂಚರತ್ನ ಯಾತ್ರೆ ಸಮಾರೋಪಕ್ಕೂ‌ ಮುನ್ನ ಜೆಡಿಎಸ್​ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರ ಎದುರೇ ಪ್ರಸನ್ನ ಪಿ ಗೌಡ ಅವರು ಈ ಘೋಷಣೆ ಮಾಡಿದ್ದಾರೆ.

ಈ ಸಂದರ್ಭ ಮಾತನಾಡಿದ ಪ್ರಸನ್ನ ಪಿ ಗೌಡ ಅವರು, ನಾನು ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಗಬೇಕಿತ್ತು. ಆದರೆ ಕಾಂಗ್ರೆಸ್ ನಾಯಕತ್ವದಿಂದ ಬೇಸತ್ತಿದ್ದೇನೆ. ಆ ಪಕ್ಷದಲ್ಲಿ ಸ್ಪಷ್ಟ ನಿಲುವು ಇಲ್ಲ. ಸುಳ್ಳು ಘೋಷಣೆಗಳನ್ನು ಮಾಡಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಹೀಗಾಗಿ ಹೆಚ್.​ ಡಿ ಕುಮಾರಸ್ವಾಮಿ ಅವರ ನಾಯಕತ್ವ ಮೆಚ್ಚಿ ಜೆಡಿಎಸ್ ಪಕ್ಷ ಸೇರುತ್ತಿದ್ದೇನೆ ಎಂದು ಹೇಳಿದರು.

ಇನ್ನು, ಚನ್ನಪಟ್ಟಣ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯೂ ಆಗಿರುವ ಹೆಚ್​. ಡಿ ಕುಮಾರಸ್ವಾಮಿ ಅವರು ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಪರವಾಗಿ ಕೆಲಸ ಮಾಡುವುದಾಗಿ ಪ್ರಸನ್ನ ಹೇಳಿದ್ದಾರೆ. ಅವರನ್ನು ಪಕ್ಷಕ್ಕೆ ಸ್ವಾಗತಿಸುತ್ತೇನೆ ಎಂದರು.

ಶನಿವಾರವಷ್ಟೇ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಘೋಷಣೆ ಆಗಿದ್ದು, ಅದರಲ್ಲಿ ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಆಗಿರಲಿಲ್ಲ. ಅದರ ಬೆನ್ನಲ್ಲೇ ಪ್ರಸನ್ನ ಪಿ ಗೌಡ ಅವರು ಜೆಡಿಎಸ್ ಸೇರಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ತವರು ಜಿಲ್ಲೆಯಲ್ಲೇ ಹಿನ್ನಡೆ ಆದಂತೆ ಆಗಿದೆ. ಮುಂದಿನ ದಿನಗಳಲ್ಲಿ ಬೊಂಬೆನಗರಿಯಲ್ಲಿ ರಾಜಕೀಯ ರಂಗು ಪಡೆದುಕೊಳ್ಳಲಿದೆ.

ಪಂಚರತ್ನ ಸಮಾರೋಪ ಸಮಾರಂಭ :ಮೈಸೂರಿನಲ್ಲಿ ಜೆಡಿಎಸ್ ಪಕ್ಷದಿಂದ ಬೃಹತ್​ ಪಮಚರತ್ನ ರಥಯಾತ್ರೆಯ ಸಮಾರೋಪ ಸಮಾರಂಭವನ್ನು ಇಂದು ಹಮ್ಮಿಕೊಳ್ಳಲಾಗಿದೆ. ಈ ಹಿನ್ನಲೆ ಸಮಾರಂಭಕ್ಕೂ ಮುನ್ನ ಚಾಮುಂಡಿಬೆಟ್ಟಗೆ ಭೇಟಿ ನೀಡಿ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರು, ನಾಡ ಅಧಿದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರು, ಕಳೆದ ನವಂಬರ್​ ತಿಂಗಳ ವೇಳೆ ಪಂಚರತ್ನ ಕಾರ್ಯಕ್ರಮಕ್ಕೆ ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿ, ನಂತರ ಕೋಲಾರ ಜಿಲ್ಲೆಯಿಂದ ಆರಂಭ ಮಾಡಲಾಯಿತು. ಇದೀಗಾ ರಾಜ್ಯಾದಂತ್ಯ ಸಂಚರಿಸಿ ಬಂದಿರುವ ಪಂಚರತ್ನ ರಥಯಾತ್ರೆ ಸಮಾರೋಪ ಸಮಾರಂಭ ಇಂದು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆಯುತ್ತಿದೆ. ಈ ಸಮಾರಂಭ ಐತಿಹಾಸಿಕವಾಗಲಿದ್ದು, ಎರಡು ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಪಕ್ಷವನ್ನು ಮುಗಿಸಲು ಹುನ್ನಾರ ಮಾಡುತ್ತಿವೆ, ಇದಕ್ಕೆ ಈ ಸಮಾರಂಭ ಉತ್ತರ ನೀಡಲಿದೆ ಎಂದು ಹೇಳಿದರು.

ಇದನ್ನೂ ಓದಿ :ರಾಮನಗರ ಕ್ಷೇತ್ರದಿಂದ ಡಿಕೆ ಸುರೇಶ್​ ಸ್ಪರ್ಧೆ ವಿಚಾರ ಹೈಕಮಾಂಡ್​ನಲ್ಲಿ ಚರ್ಚೆ ಆಗಿರೋದು ನಿಜ: ಡಿಕೆಶಿ

Last Updated : Mar 26, 2023, 4:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.