ತಾಯಿ ಅಗಲಿಕೆ ಬಳಿಕ ದನಗಳೊಂದಿಗೆ ಊರಿನತ್ತ ಬಂದ ಮರಿ ಆನೆ ರಕ್ಷಣೆ

author img

By

Published : Sep 9, 2022, 8:52 PM IST

Updated : Sep 9, 2022, 9:57 PM IST

baby-elephant-came-to-village-with-cows-in-ramanagar

ತಾಯಿ ಆನೆ ಅಗಲಿಕೆಯಿಂದ ಅನಾಥವಾದ ಮರಿ ಆನೆ ದನಗಳೊಂದಿಗೆ ಊರಿನತ್ತ ಬಂದ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ. ಹಳ್ಳಿಗೆ ಬಂದ ಮರಿ ಆನೆ ರಕ್ಷಣೆ ಮಾಡಲಾಗಿದೆ

ರಾಮನಗರ: ತಾಯಿ ಆನೆ ಅಗಲಿಕೆಯಿಂದ ಅನಾಥವಾಗಿ ದನಗಳ ಹಿಂಡಿನ ಜೊತೆ ನಾಡಿನತ್ತ ಬಂದ ಆನೆ ಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಆರೈಕೆ ಮಾಡುತ್ತಿದ್ದಾರೆ. ಜಿಲ್ಲೆಯ ಕನಕಪುರ ತಾಲೂಕಿನ ಸೋಲಿಗೆರೆ, ಪೋಡನಗುಂದಿ ಭಾಗದ ದನಗಳೊಂದಿಗೆ ಮರಿ ಆನೆಯೂ ಊರಿನತ್ತ ಹೆಜ್ಜೆ ಹಾಕಿತ್ತು.

ಒಂದೂವರೆ ತಿಂಗಳ ಪ್ರಾಯದ ಮರಿ ಇದಾಗಿದೆ. ಕಾವೇರಿ ವನ್ಯಜೀವಿ ಧಾಮಕ್ಕೆ ಹೊಂದಿಕೊಂಡಂತೆ ಇರುವ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಆನೆಗಳ ಓಡಾಟ ಸಾಮಾನ್ಯ. ಇತ್ತೀಚೆಗೆ ಮರಿಗೆ ಜನ್ಮ ನೀಡಿದ್ದ ಹೆಣ್ಣಾನೆ, ಬಳಿಕ ಕುದುರೆ ದಾರಿ ಎಂಬಲ್ಲಿ ಕಂದಕಕ್ಕೆ ಬಿದ್ದು ಮೃತಪಟ್ಟಿತ್ತು ಎನ್ನಲಾಗಿದೆ. ತಾಯಿಯ ಸಾವಿನಿಂದ ವಿಚಲಿತಗೊಂಡ ಮರಿಯು ಒಂದೆರಡು ದಿನ ಕಾಡಿನಲ್ಲೇ ಕಾಲ ಕಳೆದಿದೆ. ನಂತರ ದನಗಳ ಜೊತೆ ಊರಿಗೆ ಬಂದಿದೆ.

ದನಗಳೊಂದಿಗೆ ಊರಿನತ್ತ ಬಂದ ಮರಿ ಆನೆ ರಕ್ಷಣೆ

ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗೆ ವಿಷಯ ತಿಳಿಸಿದ್ದು, ಅವರು ಮರಿ ಆನೆ ರಕ್ಷಣೆ ಮಾಡಿದ್ದಾರೆ. ಬೇರೆ ಆನೆಗಳ ಗುಂಪಿನ ಜೊತೆ ಬಿಡುವ ಪ್ರಯತ್ನ ಮಾಡಿದ್ದಾರೆ. ಆದರೆ, ಇತರ ಆನೆಗಳು ಈ ಮರಿಯನ್ನು ಜೊತೆಗೆ ಸೇರಿಸಿಕೊಂಡಿಲ್ಲ. ಹೀಗಾಗಿ ಸದ್ಯ ಮರಿ ಆನೆಯನ್ನು ಭೂಹಳ್ಳಿ ಕ್ಯಾಂಪ್‌ನಲ್ಲಿ ಪಾಲನೆ ಮಾಡಲಾಗುತ್ತಿದೆ. ಸುತ್ತಲಿನ ಗ್ರಾಮಸ್ಥರು ಮರಿಯನ್ನು ಮುದ್ದು ಮಾಡಿ ಹೋಗುತ್ತಿದ್ದಾರೆ.

baby-elephant-came-to-village-with-cows-in-ramanagar
ಮರಿ ಆನೆ ರಕ್ಷಣೆ

ಸದ್ಯ ಆನೆ ಮರಿಯನ್ನು ಭೂಹಳ್ಳಿ ಪಶು ವೈದ್ಯಾಧಿಕಾರಿ ಗಿರೀಶ್ ನೇತೃತ್ವದಲ್ಲಿ ಪಾಲನೆ ಮಾಡಲಾಗುತ್ತಿದೆ. ಮರಿಯು ಹಾಲು ಕುಡಿಯುತ್ತಿದ್ದು, ಆರೋಗ್ಯವಾಗಿದೆ. ಡಿಸಿಎಫ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೊಂದು ವಾರದಲ್ಲಿ ಇದನ್ನು ಮುತ್ತತ್ತಿ ಬಳಿಯ ಭೀಮೇಶ್ವರಿ ಕ್ಯಾಂಪ್​ಗೆ ಬಿಡುತ್ತೇವೆ ಎಂದು ಕಾವೇರಿ ವನ್ಯಜೀವಿಧಾಮದ ಸಂಗಮ ವಲಯ ಅರಣ್ಯಾಧಿಕಾರಿ ದೇವರಾಜು ಮಾಹಿತಿ ನೀಡಿದರು.

ಇದನ್ನೂ ಓದಿ: ಮಣ್ಣಿನಲ್ಲಿ ನವಜಾತ ಹೆಣ್ಣು ಶಿಶು ಜೀವಂತ ಹೂತು ಅಮಾನವೀಯತೆ: ಗ್ರಾಮಸ್ಥರ ನೆರವಿನಿಂದ ರಕ್ಷಣೆ

Last Updated :Sep 9, 2022, 9:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.