ETV Bharat / state

ರಾಯಚೂರು: ಬೊಮ್ಮಾಯಿ ಸಂಪುಟ ಸೇರಲು ಜಿಲ್ಲೆಯ ಶಾಸಕರ ಹರಸಾಹಸ

author img

By

Published : Aug 2, 2021, 4:46 PM IST

ಕಳೆದ 10 ವರ್ಷಗಳಿಂದ ಸಹ ಅಧಿಕಾರ ನಡೆಸಿದ ಪಕ್ಷ ಸಚಿವ ಸ್ಥಾನ ನೀಡದೇ ಅನ್ಯಾಯವೆಸಗಿರುವ ಆರೋಪವಿದೆ. ಈ ಬಾರಿ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡುವ ಮೂಲಕ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಈಗಿನ ಸಿಎಂ ಮೇಲೆ ಒತ್ತಡ ಹೇರಲಾಗಿದೆ. ಜಿಲ್ಲೆಯ ಇಬ್ಬರು ಶಾಸಕರಲ್ಲಿ ಯಾರಿಗೆ ಬಸವ ಪ್ರಸಾದ ಸಿಗಲಿದೆ ಎನ್ನುವುದು ಕುತೂಹಲ ಮೂಡಿಸಿದೆ.

K. Sivanagouda Nayak and Dr. Shivaraj Patil
ಕೆ. ಶಿವನಗೌಡ ನಾಯಕ ಹಾಗೂ ಡಾ.ಶಿವರಾಜ್ ಪಾಟೀಲ್

ರಾಯಚೂರು: ರಾಜ್ಯ ರಾಜಕೀಯ ವಲಯದಲ್ಲಿ ನೂತನ ಮುಖ್ಯಮಂತ್ರಿ ಆಯ್ಕೆಯಾದ ನಂತರ ಸಚಿವ ಸಂಪುಟ ರಚನೆಗಾಗಿ ಬಾರಿ ಕಸರತ್ತು ನಡೆಸಲಾಗುತ್ತಿದೆ. ಸಚಿವ ಸ್ಥಾನ ಪಡೆಯಲು ಬಿಜೆಪಿ ಶಾಸಕರು ತಮ್ಮದೇ ಪ್ರಭಾವ ಬೀರುವ ಮೂಲಕ ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಈ ಮಧ್ಯೆ ಹಿಂದುಳಿದ ಪ್ರದೇಶ ಎಂದು ಕರೆಯುವ ಜಿಲ್ಲೆಗೆ ಈ ಬಾರಿ ಸಚಿವ ಸ್ಥಾನ ದೊರೆಯಲಿದೆ ಎನ್ನುವ ಕುತೂಹಲ ಹೆಚ್ಚಾಗಿದೆ.

ಬಿಜೆಪಿ ಮುಖಂಡ ಬಸವನಗೌಡ ಬ್ಯಾಗವಾಟ್ ಮಾತನಾಡಿದರು

ರಾಜ್ಯ ರಾಜಕೀಯದಲ್ಲಿ ಜಿಲ್ಲೆ ವಿಶೇಷವಾದ ಗಮನ ಸೆಳೆದಿದೆ. ಒಟ್ಟು 7 ವಿಧಾನಸಭಾ ಕ್ಷೇತ್ರಗಳನ್ನ ಒಳಗೊಂಡಿದೆ. ಇವುಗಳಲ್ಲಿ ಜೆಡಿಎಸ್ ಇಬ್ಬರು, ಬಿಜೆಪಿಯಿಂದ ಇಬ್ಬರು, ಕಾಂಗ್ರೆಸ್​ನ ಮೂವರು ಶಾಸಕರು ಆಯ್ಕೆಯಾಗಿದ್ದಾರೆ.

ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಬಿಜೆಪಿಯಿಂದ ರಾಯಚೂರು ನಗರ ಕ್ಷೇತ್ರದಿಂದ ಡಾ.ಶಿವರಾಜ್ ಪಾಟೀಲ್, ದೇವದುರ್ಗ ಕ್ಷೇತ್ರದಿಂದ ಕೆ.ಶಿವನಗೌಡ ನಾಯಕ ಆಯ್ಕೆಯಾಗಿದ್ದಾರೆ. ಈ ಇಬ್ಬರು ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವ ಒತ್ತಾಯ ಶಾಸಕರ ಬೆಂಬಲಿಗರು, ಮುಖಂಡರಿಂದ ಕೇಳಿ ಬಂದಿದೆ.

ರಾಯಚೂರು ನಗರ ಕ್ಷೇತ್ರದಿಂದ ಡಾ.ಶಿವರಾಜ್ ಪಾಟೀಲ್ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮೊದಲ ಬಾರಿಗೆ ಜೆಡಿಎಸ್ ಹಾಗೂ 2ನೇ ಬಾರಿಗೆ ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ. ಜೆಡಿಎಸ್​​​ನಲ್ಲಿ ಶಾಸಕರಾಗಿದ್ದ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗುವ ಮೂಲಕ 2ನೇ ಬಾರಿಗೆ ಬಿಜೆಪಿಯಿಂದ ಸ್ಪರ್ಧೆ ಮಾಡಿ ಶಾಸಕರಾಗಿ ಆಯ್ಕೆಯಾಗಿದ್ದರು. ಹಾಗೆಯೇ ಬಿಜೆಪಿಯಲ್ಲಿ ಪ್ರಬಲ ಶಾಸಕರಾಗಿಯೂ ಗುರುತಿಸಿಕೊಂಡಿದ್ದಾರೆ.

ನೀಲಕಂಠೇಶ್ವರನಿಗೆ ತೆಂಗಿನಕಾಯಿ: ಈಗಿನ ಅವಧಿಯಲ್ಲಿ ಜಿಲ್ಲೆಗೆ ಏರ್​ಪೋರ್ಟ್, ರಿಂಗ್ ರೋಡ್ ಸೇರಿದಂತೆ ಹಲವು ಅಭಿವೃದ್ದಿ ಕಾರ್ಯಗಳನ್ನ ನೀಡಿದ್ದಾರೆ. ಹೀಗಾಗಿ, ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಇತ್ತೀಚಿಗೆ ಶಾಸಕರ ಅಭಿಮಾನಿಗಳು, ಪಕ್ಷದ ಮುಖಂಡರು ಒತ್ತಾಯ ಮಾಡಿ ಬೃಹತ್ ರ‍್ಯಾಲಿಯನ್ನು ನಗರದಲ್ಲಿ ನಡೆಸಿದ್ದರು. ಇಂದು ಶಾಸಕರ ಅಭಿಮಾನಿಗಳು ಶ್ರೀ ನೀಲಕಂಠೇಶ್ವರನಿಗೆ ತೆಂಗಿನಕಾಯಿ ಒಡೆಯುವ ಕಾರ್ಯಕ್ಕೆ ಹೋಗಿದ್ದಾರೆ.

ಪಕ್ಷದ ಹಿರಿಯ ಮುಖಂಡರಿಗೆ ಒತ್ತಾಯ: ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇವರು ಹಿರಿಯ ಶಾಸಕರಾಗಿ ಗುರುತಿಸಿಕೊಂಡಿದ್ದಾರೆ. ಹಿರಿತನದ ಆಧಾರದ ಮೇಲೆ ಹಾಗೂ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಗಳನ್ನ ಆಧರಿಸಿ ಸಚಿವ ಸ್ಥಾನ ನೀಡಬೇಕೆಂದು ಶಾಸಕರ ಬೆಂಬಲಿಗರು, ಮುಖಂಡರು ಕೂಡ ಪಕ್ಷದ ಹಿರಿಯ ಮುಖಂಡರಿಗೆ ಒತ್ತಾಯ ಮಾಡಿದ್ದಾರೆ.

ಸಿಎಂ ಮೇಲೆ ಒತ್ತಡ: ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ನೀಡಿದರೆ ಅಭಿವೃದ್ದಿ ಕಾರ್ಯ ನಡೆಯಲಿದೆ. ಕಳೆದ 10 ವರ್ಷಗಳಿಂದ ಸಹ ಅಧಿಕಾರ ನಡೆಸಿದ ಪಕ್ಷ ಸಚಿವ ಸ್ಥಾನ ನೀಡದೇ ಅನ್ಯಾಯ ಎಸಗಿರುವ ಆರೋಪವಿದೆ. ಈ ಬಾರಿ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡುವ ಮೂಲಕ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಈಗಿನ ಸಿಎಂ ಮೇಲೆ ಒತ್ತಡ ಹೇರಲಾಗಿದೆ. ಜಿಲ್ಲೆಯ ಇಬ್ಬರು ಶಾಸಕರಲ್ಲಿ ಯಾರಿಗೆ ಬಸವ ಪ್ರಸಾದ ಸಿಗಲಿದೆ ಎನ್ನುವುದು ಕುತೂಹಲ ಮೂಡಿಸಿದೆ.

ಓದಿ: 'ತಿಂಗಳಿಗೊಮ್ಮೆ ಬಂದು ಹೋಗುವ ಸಚಿವರು ನಮ್ಮ ಜಿಲ್ಲೆಗೆ ಬೇಡ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.