ETV Bharat / state

ರಾಯಚೂರು: ಪತ್ನಿ ಕೊಲೆಗೈದು ಆತ್ಮಹತ್ಯೆ ಕಥೆ ಕಟ್ಟಿದ ಪತಿ ಬಂಧನ

author img

By ETV Bharat Karnataka Team

Published : Dec 17, 2023, 9:01 PM IST

ಪತ್ನಿಯನ್ನು ಕೊಲೆಗೈದ ಪತಿಯನ್ನು ರಾಯಚೂರು ಪೊಲೀಸರು ಬಂಧಿಸಿದ್ದಾರೆ.

Etv Bharatpolice-arrested-husband-who-murdered-his-wife-in-raichur
ರಾಯಚೂರು: ಪತ್ನಿಯ ಕೊಲೆಗೈದು ಆತ್ಮಹತ್ಯೆ ಕಥೆಕಟ್ಟಿದ್ದ ಪತಿ ಬಂಧನ

ಎಸ್​ಪಿ​ ನಿಖಿಲ್ .ಬಿ. ಮಾಹಿತಿ

ರಾಯಚೂರು: ಪತ್ನಿಯ ಕೊಲೆಗೈದು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ್ದ ಪತಿಯನ್ನು ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ನಿಖಿಲ್.ಬಿ.ತಿಳಿಸಿದರು. ಸೋನಿ ಕೊಲೆಯಾದ ಮಹಿಳೆ. ಅವಿನಾಶ್ ಹಂತಕ.

ಎಸ್​ಪಿ​ ನಿಖಿಲ್.ಬಿ. ಮಾತನಾಡಿ, "ರಾಯಚೂರಿನ ಪಶ್ಚಿಮ​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಡಿ.13ರಂದು ಕೊಲೆ ನಡೆದಿತ್ತು. ಅವಿನಾಶ್​ ಎಂಬಾತ ತನ್ನ ಪತ್ನಿ ಸೋನಿ ಅವರನ್ನು ವೇಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದ. ಇವರು ಒಂದು ವರ್ಷದ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಒಂದು ತಿಂಗಳ ಮಗು ಇದೆ. ಮಗು ಜನಿಸಿದ ಬಳಿಕ ಸೋನಿ ನೋವಿನಿಂದ ಬಳಲುತ್ತಿದ್ದರು. ವೈದ್ಯಕೀಯ ವೆಚ್ಚ ಹೆಚ್ಚಾಗಿದ್ದರಿಂದ ಪತ್ನಿಯ ಮೇಲೆ ಕೊಪಗೊಂಡು ಆಕೆಯನ್ನು ಹತ್ಯೆ ಮಾಡಿದ್ದಾನೆ. ಆರೋಪಿ ಮೊದಲು, ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಲು ಯತ್ನಿಸಿದ್ದ. ನಂತರ ತನಿಖೆಯಲ್ಲಿ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ" ಎಂದರು.

"ಯಾವಾಗಲೂ ಅಳುತ್ತಿದ್ದುದರಿಂದ ಮಗುವನ್ನು ನಿನಗೆ ನೋಡಿಕೊಳ್ಳಲು ಬರುವುದಿಲ್ಲ ಎಂದು ತನ್ನ ಪತ್ನಿಯೊಂದಿಗೆ ಆರೋಪಿ ಜಗಳವಾಡುತ್ತಿದ್ದ. ಮೂಲತಃ ಉತ್ತರ ಪ್ರದೇಶದ ಹತ್ರಾಸ್​ನವರಾಗಿದ್ದು, ಪ್ರೀತಿಸಿ ಮದುವೆಯಾಗಿದ್ದರು. ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಮಗುವನ್ನು ಸೌಹಾರ್ದ ಕೇಂದ್ರದಲ್ಲಿ ಇರಿಸಲಾಗಿದೆ" ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ಜಿಲ್ಲಾಧಿಕಾರಿಯ ಗನ್ ಮ್ಯಾನ್ ಆತ್ಮಹತ್ಯೆ

ಯುವಕನ ಕೊಲೆ, ಇಬ್ಬರು ಸೆರೆ: ಕ್ಷುಲ್ಲಕ ಕಾರಣಕ್ಕೆ ಯುವಕನನ್ನು ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ರಾಯಚೂರು ಜಿಲ್ಲೆಯ ಲಿಂಗಸುಗೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಲಿಂಗಸುಗೂರು ತಾಲೂಕಿನ ಗುಡದನಾಳ ಗ್ರಾಮದ ಶಿವಪುತ್ರ ಅಲಿಯಾಸ್ ಶಿವು, ಅಭಿಷೇಕ ಅಲಿಯಾಸ್ ಅಭಿ ಎಂಬವರು ಸ್ನೇಹಿತ ಶರಣಬಸವನನ್ನು (21) ಕೊಲೆ ಮಾಡಿದ್ದರು.

ಶರಣಬಸವ, ಅಭಿಷೇಕ, ಶಿವಪುತ್ರ ಸ್ನೇಹಿತರಾಗಿದ್ದರು. ಆಗಾಗ ಜೂಜಾಡುತ್ತಿದ್ದರು. ಹಣ ಕಳೆದುಕೊಂಡಾಗ ಮತ್ತು ಗೆದ್ದಾಗ ಪರಸ್ಪರ ಜಗಳವಾಡುತ್ತಿದ್ದರು. ಮೊಹರಂ ಹಾಗೂ ಹಬ್ಬ-ಹರಿದಿನಗಳಲ್ಲಿ ಒಟ್ಟಿಗೆ ಸೇರಿದಾಗ ನಾ ಮೇಲು, ನೀ ಮೇಲು ಎಂದು ಸಣ್ಣಪುಟ್ಟ ವಿಷಯಕ್ಕೆ ಜಗಳವಾಡುತ್ತಿದ್ದರು. ಆದರೆ, ಈ ಸಣ್ಣಪುಟ್ಟ ಜಗಳಗಳಿಂದಲೇ ದ್ವೇಷದ ಭಾವನೆ ಮೂಡಿ ಕೊಲೆ ಮಾಡುವ ಹಂತಕ್ಕೆ ತಿರುಗಿತ್ತು.

ಅಕ್ಕಲಕೋಟಿ ಚಿಕ್ಕರೇವಣ್ಣ ಸಿದ್ದೇಶ್ವರರ ಪುಣ್ಯತಿಥಿ ಸ್ಮರಣೆ ಹಿನ್ನೆಲೆಯಲ್ಲಿ 2023ರ ಅ.5ರಂದು ರಾತ್ರಿ ವೇಳೆ ಗುರುಸ್ವಾಮಿಯೊಂದಿಗೆ ಶರಣಬಸವ ಬ್ಯಾನರ್‌ಗಳನ್ನು ಕಟ್ಟುತ್ತಿದ್ದ. ಈ ಸಮಯದಲ್ಲಿ ಶಿವಪುತ್ರ ಹಾಗೂ ಅಭಿಷೇಕ ಗುರುಸ್ವಾಮಿಗೆ ಕರೆ ಮಾಡಿ ಗ್ರಾಮದ ಸಾಲಿಗುಡಿ ಹತ್ತಿರ ತನ್ನ ಮಗನನ್ನು ಕಳುಹಿಸುವಂತೆ ಹೇಳಿದ್ದಾರೆ. ರಾತ್ರಿ 10.46ರ ಸುಮಾರಿಗೆ ಶರಣಬಸವನನ್ನು ಕೊಲೆ ಮಾಡಿ, ತಮ್ಮ ಮೇಲೆ ಆರೋಪ ಬರದಂತೆ ಘಟನೆಯನ್ನು ಮುಚ್ಚಿ ಹಾಕಲು ಯತ್ನಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.