ETV Bharat / state

ಕಾಂಗ್ರೆಸ್​ ಭದ್ರಕೋಟೆ ರಾಯಚೂರು ಲೋಕಸಭಾ ಕ್ಷೇತ್ರಾವಲೋಕನ... ಇಲ್ಲಿ ಮೂಲಭೂತ ಸೌಕರ್ಯದೇ ಕೊರತೆ!

author img

By

Published : Mar 26, 2019, 4:53 AM IST

ಮೋದಿ ಅಲೆಯಲ್ಲೂ ತನ್ನ ಪಾರುಪತ್ಯ ಮೆರೆದಿದ್ದ ಕಾಂಗ್ರೆಸ್​​ ಅಭ್ಯರ್ಥಿ ಬಿ.ವಿ.ನಾಯಕ ಕಡಿಮೆ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಬಾರಿ ಕೂಡ ಕೈ ಟಿಕೆಟ್​ ಪಡೆದಿರುವ ಬಿ.ವಿ.ನಾಯಕ ಮತ್ತೆ ತಮ್ಮ ಪ್ರಾಬಲ್ಯ ಸಾಧಿಸುತ್ತಾರಾ. ಹೇಗಿದೆ ಗೊತ್ತಾ ರಾಯಚೂರು ಲೋಕಸಭಾ ಕ್ಷೇತ್ರದ ಪರಿಸ್ಥಿತಿ.

ರಾಯಚೂರು ಲೋಕಸಭಾ ಕ್ಷೇತ್ರಾವಲೋಕನ

ರಾಯಚೂರು: ಕೃಷ್ಣೆ-ತುಂಗೆಯ ಮಧ್ಯ ಇರುವ ರಾಯಚೂರು ಜಿಲ್ಲೆ ದೇಶದ ಹಿಂದುಳಿದ ಜಿಲ್ಲೆಗಳ ಪಟ್ಟಿಗೆ ಸೇರಿದೆ. ಭೌಗೋಳಿಕ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶಕ್ಕೆ ಸರಕಾರ ವಿಶೇಷ ಅನುದಾನ ಕಲ್ಪಿಸುವ ಮೂಲಕ ಸಮರ್ಪಕವಾಗಿ ಯೋಜನೆಗಳನ್ನ ಅನುಷ್ಠಾನಕ್ಕೆ ಜಾರಿಗೊಳಿಸಬೇಕು. ಜತೆಗೆ ಜಿಲ್ಲೆಯಿಂದ ಚುನಾಯಿತಗೊಂಡ ಜನ ಪ್ರತಿನಿಧಿಗಳು ಸಹ ಕಾಳಜಿವಹಿಸಿ ಅಭಿವೃದ್ದಿ ಪಥದತ್ತ ತೆಗೆದುಕೊಂಡು ಹೋಗಬೇಕಾಗಿದೆ. ಆದರೆ ಈ ಪ್ರದೇಶದಲ್ಲಿ ಜನರು ಮೂಲಭೂತ ಸೌಲಭ್ಯದ ಕೊರತೆ ಎದುರಿಸಬೇಕಾದ ಅನಿವಾರ್ಯತೆಯಿದೆ.

ಮೂಲಭೂತ ಸೌಕರ್ಯ ಕೊರತೆ: ರಾಯಚೂರು ಜಿಲ್ಲೆಯ ಬಲ ಭಾಗದಲ್ಲಿ ಕೃಷ್ಣ, ಎಡ ಭಾಗಕ್ಕೆ ತುಂಗಭದ್ರಾ ನದಿಗಳು. ಎರಡು ವಿಶಾಲವಾಗಿ ಹರಿಯುತ್ತಿರುವ ಹಿನ್ನಲೆಯಿಂದಾಗಿ ಜಲ ಮೂಲಕ್ಕೆ ಏನು ಕೊರತೆಯಿಲ್ಲ. ಹೀಗಾಗಿ ಕುಡಿಯುವ ನೀರಿನ ಯೋಜನೆಗಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸೇರಿದಂತೆ ನಾನಾ ಯೋಜನೆಗಳ ಮೂಲಕ ಪ್ರತಿವರ್ಷ ಕೋಟ್ಯಾಂತರ ರೂಪಾಯಿ ಅನುದಾನ ಬರುತ್ತದೆ. ಆದ್ರೆ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳದ ಪರಿಣಾಮ ಗ್ರಾಮೀಣ ಮತ್ತು ಪಟ್ಟಣ, ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಬೇಕಾದ ಅನಿವಾರ್ಯತೆಯಿದೆ. ಜನರು ಕಿಲೋ ಮೀಟರ್ ಗಟ್ಟಾಲೆ ಕ್ರಮಿಸಿ ನೀರು ತೆಗೆದುಕೊಂಡು ಹೋಗುತ್ತಿರುವ ದೃಶ್ಯಗಳು ಜಿಲ್ಲೆಯಲ್ಲಿ ಕಾಣ ಸಿಗುತ್ತವೆ.

ರಸ್ತೆಗಳ ವಿಚಾರಕ್ಕೆ ಬಂದ್ರೆ ಗ್ರಾಮೀಣ ಪ್ರದೇಶದಲ್ಲಿ ಮಳೆಗಾಲದಲ್ಲಿ ರಸ್ತೆಗಳು ಚರಂಡಿಗಳಾಗಿ ಮಾರ್ಪಟ್ಟರೆ, ಪಟ್ಟಣ ಮತ್ತು ನಗರ ಪ್ರದೇಶದಲ್ಲಿ ಚರಂಡಿ, ಮತ್ತು ರಸ್ತೆಗಳಿಗೆ ವ್ಯತ್ಯಾಸ ಕಂಡು ಬರುವುದಿಲ್ಲ. ಬದಲಾಗಿ ಮೂಲಸೌಕರ್ಯಗಳ ಹೆಸರಿನಲ್ಲಿ ಬರುವ ಅನುದಾನ ಅರೆಬರೆ ಕಾಮಗಾರಿ ನಡೆಸುವ ಮೂಲಕ ಚುನಾಯಿತ ಪ್ರತಿನಿಧಿಗಳು, ಕೆಲ ಅಧಿಕಾರಿಗಳು, ಗುತ್ತಿಗೆದಾರರ ಜೇಬು ಸೇರುತ್ತಿರುವ ಆರೋಪ ಗಂಭೀರವಾಗಿ ಕೇಳಿ ಬರುತ್ತಿದೆ.

ಸಾಕ್ಷರತೆ, ಅನಕ್ಷರತೆ: ರಾಯಚೂರು ಜಿಲ್ಲೆಯಲ್ಲಿ ಶೈಕ್ಷಣಿಕವಾಗಿ ತೀರ ಹಿಂದುಳಿದ ಪ್ರದೇಶವೆಂದು ಬಿಂಬಿಸಿಕೊಂಡಿದ್ದು, ಶೈಕ್ಷಣಿಕವಾಗಿ ಹೆಚ್ಚಿನ ಆದ್ಯತೆ ನೀಡುವ ದೊಡ್ಡ ಶಿಕ್ಷಣ ಕೇಂದ್ರಗಳನ್ನ ಸ್ಥಾಪಿಸಬೇಕೆಂದು ಡಾ.ನಂಜುಡಪ್ಪ ವರದಿಯಲ್ಲಿ ಉಲ್ಲೇಖಿಸಲಾಗಿದೆ. 2011ರ ಜನಗಣತಿಯಲ್ಲಿ ಸರಿ ಸುಮಾರು 59.56 ಸಾಕ್ಷರತೆ ಪ್ರಮಾಣ ದಾಖಲಾಗಿದೆ. ಇದರಲ್ಲಿ ಪುರುಷರು ಸಾಕ್ಷರತೆ ಪ್ರಮಾಣ 70.47 ಇದ್ದಾರೆ, 48.73ರಷ್ಟು ಮಹಿಳೆ ಸಾಕ್ಷರತೆ ಹೊಂದಿದ್ದರೆ, ಸುಮಾರು 40 ರಷ್ಟು ಅನರಕ್ಷತೆ ಎದು ಕಾಣುತ್ತಿದೆ.

ಜನಸಂಖ್ಯೆ: 19.29 ಲಕ್ಷ ಜನಸಂಖ್ಯೆಯಿದೆ ಎನ್ನುವುದು 2011ರಲ್ಲಿ ನಡೆದ ಜನಗಣತಿಯಲ್ಲಿ ತಿಳಿದು ಬಂದಿದ್ದು, ಸದ್ಯ21 ಲಕ್ಷದ ಅಸುಪಾಸು ತಲುಪಿರುವ ಸಾಧ್ಯತೆಯಿದೆ ಎಂದು ಆಂದಾಜಿಸಲಾಗುತ್ತಿದೆ.

ರಾಯಚೂರು ಲೋಕಸಭಾ ಕ್ಷೇತ್ರಾವಲೋಕನ

ಮತದಾರರ ಸಂಖ್ಯೆ: ರಾಯಚೂರು ಲೋಕಸಭೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿಗೆ ಒಳಪಡುತ್ತದೆ. ರಾಯಚೂರು ಜಿಲ್ಲೆಯ 5 ವಿಧಾನಸಭೆ ಕ್ಷೇತ್ರಗಳು, ಯಾದಗಿರಿ ಜಿಲ್ಲೆಯ 3 ಕ್ಷೇತ್ರಗಳು. ಈ 8 ಕ್ಷೇತ್ರಗಳಲ್ಲಿ ಒಟ್ಟು 18,93,630 ಮತದಾರರಿದ್ದಾರೆ. ಇದರಲ್ಲಿ ಮಹಿಳೆಯರು-9,53,878, ಪುರುಷ-9,39,752 ಮತದಾರಿದ್ದು, ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿದೆ.

ಜಾತಿವಾರು ಮತದಾರರ ಸಂಖ್ಯೆ(ಅಂದಾಜು):
ಪರಿಶಿಷ್ಟ ಪಂಗಡ-3.80 ಲಕ್ಷ
ಪರಿಶಿಷ್ಟ ಜಾತಿ-3.40 ಲಕ್ಷ
ಲಿಂಗಾಯತ-2.90 ಲಕ್ಷ
ಮುಸ್ಲಿಂ-2.55 ಲಕ್ಷ
ಕುರುಬ-2.50 ಲಕ್ಷ
ಗಂಗಾಮಸ್ತ-1.90
ಇತರರು- 2

ಆದರ್ಶ ಗ್ರಾಮ: ರಾಯಚೂರು ಲೋಕಸಭೆ ಕ್ಷೇತ್ರದ ಹಾಲಿ ಸಂಸದ ಬಿ.ವಿ.ನಾಯಕ ಸಂಸದರ ಆದರ್ಶ ಗ್ರಾಮವನ್ನಾಗಿ ಜಿಲ್ಲಾಡಳಿತ ಪ್ರದೇಶದಿಂದ ಕೂಗಳತೆ ದೂರದಲ್ಲಿರುವ ಜಾಗೀರ ವೆಂಕಟಪುರ ಗ್ರಾಮವನ್ನ ಆಯ್ಕೆ ಮಾಡಿದ್ರು. ಈ ಗ್ರಾಮ ಮೂಲಭೂತ ಸೌಕರ್ಯಗಳಿಂದ ವಂಚಿತಗೊಂಡಿತ್ತು. ಸಂಸದ ಆದರ್ಶ ಗ್ರಾಮದಡಿ ಆಯ್ಕೆ ಮಾಡಿಕೊಂಡ ಗ್ರಾಮದಲ್ಲಿ ಅಭಿವೃದ್ದಿ ಪರ್ವ ಆರಂಭವಾಗುತ್ತದೆ ಎನ್ನುವ ನಿರೀಕ್ಷೆ ಗ್ರಾಮಸ್ಥರಲ್ಲಿ ಮನೆ ಮಾಡಿತ್ತು. ಆದ್ರೆ ಗ್ರಾಮಸ್ಥರ ನಿರೀಕ್ಷೆ ಸುಳ್ಳಾಗಿದೆ. ಯಾಕೆಂದರೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಸುಮಾರು ಒಂದೂವರೆ ಕಿಲೋ ಮೀಟರ್ ದೂರದ ನಿಮದ ಹಳ್ಳದಿಂದ ನೀರು ತರಬೇಕಾದ ಪರಿಸ್ಥಿತಿಯಿದೆ. ರಾಯಚೂರಿನಿಂದ ಜಾಗೀರ ವೆಂಕಟಪುರ ಗ್ರಾಮಕ್ಕೆ ತೆರಳು ರಸ್ತೆ ದುರಸ್ಥಿ ಕಾರ್ಯ ನಡೆದಿದ್ದು, ಗ್ರಾಮದಲ್ಲಿ ಸೋಲಾರ್ ದೀಪಗಳ ಆಳವಡಿಕೆ ಆಗದಿದ್ದರೂ, ಸರಕಾರಿ ಪ್ರೌಢಶಾಲೆ ಕಟ್ಟಡ ನಿರ್ಮಾಣ ಮಾಡಲಾಗಿದೆ.

ಸಂಸದರ ಅನುದಾನ: ಕಳೆದ ಐದು ವರ್ಷ ಅಧಿಕಾರ ನಡೆಸಿದ ಸಂಸದ ಬಿ.ವಿ.ನಾಯಕ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲಸುವ ಯೋಜನೆಯಾಗಲಿ, ಕೆಲಸವಾಗಲಿ ಮಾಡಿಲ್ಲ. ಕೇಂದ್ರ ಸರಕಾರದಿಂದ ಜಿಲ್ಲೆಗೆ ಐಐಐಟಿ ನೀಡಿದ್ರೂ, ಬಿಜೆಪಿ ಒತ್ತಡದ ಮೇಲೆ ಆಗಿರುವುದರಿಂದ ಸಂಸದರು ಈ ಬಗ್ಗೆ ಹೇಳಿಕೊಳ್ಳುವಂತಹ ಪರಿಸ್ಥಿತಿಯಿಲ್ಲ. ಸಂಸದರ ಅನುದಾನದಲ್ಲಿ ಸಮುದಾಯ ಭವನ, ಅಗಸೆಕಟ್ಟೆ, ದೇವಸ್ಥಾನಗಳಿಗೆ ಅನುದಾನ ಬಳಕೆ ಮಾಡಿಕೊಂಡಿದ್ದು, ಹಿಂದಿನ ರಾಜ್ಯ ಸರ್ಕಾರದ ಅವಧಿಯಲ್ಲಿ ಅನುದಾನವನ್ನ ಹೆಚ್ಚಾಗಿ ತಂದಿರುವ ಕುರಿತು ಸ್ವತ ಸಂಸದರು ಹೇಳಿಕೊಳ್ಳುತ್ತಿದ್ದಾರೆ.

ಕಾಂಗ್ರೆಸ್​ನ ಭದ್ರಕೋಟೆ: ಇದುವರೆಗೆ ನಡೆದ ಒಟ್ಟು 16 ಲೋಕಸಭೆ ಚುನಾವಣೆಗಳಲ್ಲಿ 1967ರಲ್ಲಿ ಪಕ್ಷೇತರ ಅಭ್ಯರ್ಥಿ, 1996ರಲ್ಲಿ ಜೆಡಿಎಸ್ ಅಭ್ಯರ್ಥಿ, 2009ರಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದು ಹೊರತು ಪಡಿಸಿದ್ರು ಉಳಿದ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಪ್ರಾಬಲ್ಯ ಸಾಧಿಸಿಕೊಂಡು ಬಂದಿದೆ. 2014 ಲೋಕಸಭೆ ಚುನಾವಣೆ ವೇಳೆ ಮೋದಿ ಅಲೆಯಲ್ಲೂ ಬಿಜೆಪಿ ಅಭ್ಯರ್ಥಿ ಕೆ.ಶಿವನಗೌಡ ನಾಯಕ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಬಿ.ವಿ.ನಾಯಕ 1,499 ಮತಗಳ ಅಂತರದಿಮದ ಜಯಶಾಲಿಯಾಗಿದ್ದರು. ಈ ಮೂಲಕ ಕಾಂಗ್ರೆಸ್ ತನ್ನ ಕ್ಷೇತ್ರವನ್ನ ಬೇರೆ ಪಕ್ಷಕ್ಕೆ ಬಿಟ್ಟು ಕೊಟ್ಟಿಲ್ಲ.

ಒಟ್ಟಿನಲ್ಲಿ, ಕಾಂಗ್ರೆಸ್ ಭದ್ರಕೋಟೆ ಎಂದು ಬಿಂಬಿಸಿಕೊಂಡಿರುವ ರಾಯಚೂರು ಲೋಕಸಭೆ ಕ್ಷೇತ್ರ ಮೋದಿ ಅಲೆಯಲ್ಲಿ ಸಹ ಪಾರುಪತ್ಯ ಮೆರಯುವ ಮೂಲಕ ಕೈ ಪಕ್ಷ ತನ್ನ ಕ್ಷೇತ್ರವನ್ನ ಉಳಿಸಿಕೊಂಡಿದೆ. ಈ ಬಾರಿ ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ಅಖಾಡಕ್ಕೆ ಧುಮುಕಿದೆ. ಕ್ಷೇತ್ರವನ್ನ ತನ್ನ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳದಂತೆ ಹಾಲಿ ಸಂಸದ ಬಿ.ವಿ.ನಾಯಕರನ್ನ ಕಣಕ್ಕೆ ಇಳಿಸಿದ್ದು, ಬಿಜೆಪಿ ಅಭ್ಯರ್ಥಿ ವಿರುದ್ಧ ಈ ಬಾರಿಯೂ ಗೆಲುವು ಸಾಧಿಸುತ್ತಾರಾ ಕಾದು ನೋಡಬೇಕು.

sample description

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.