ETV Bharat / state

'ಮತದಾರರು ಪಾಸ್ ಕೇಳಿದಾಗ ಕೊಡಬೇಕಾಗುತ್ತೆ, ಪ್ರತಾಪ್​ ಸಿಂಹರ ತಪ್ಪಿಲ್ಲ'

author img

By ETV Bharat Karnataka Team

Published : Dec 17, 2023, 3:18 PM IST

ಇತ್ತೀಚಿಗೆ ಸಂಸತ್ತಿನಲ್ಲಿ ನಡೆದ ಸ್ಮೋಕ್ ಬಾಂಬ್ ಪ್ರಕರಣದ ಬಗ್ಗೆ ಸಂಸದ ರಮೇಶ ಜಿಗಜಿಣಗಿ ಪ್ರತಿಕ್ರಿಯಿಸಿದ್ದಾರೆ.

ಸಂಸದ ರಮೇಶ್​ ಜಿಗಜಿಣಗಿ
ಸಂಸದ ರಮೇಶ್​ ಜಿಗಜಿಣಗಿ

ಸಂಸತ್ತಿನಲ್ಲಿ ಸ್ಮೋಕ್ ಬಾಂಬ್ ಪ್ರಕರಣದ ಕುರಿತು ಸಂಸದ ರಮೇಶ್​ ಜಿಗಜಿಣಗಿ ಹೇಳಿಕೆ

ರಾಯಚೂರು: ನೂತನ ಸಂಸತ್ ಭವನದಲ್ಲಿ ನಡೆದ ಸ್ಮೋಕ್ ಬಾಂಬ್ ಪ್ರಕರಣದಲ್ಲಿ ಸಂಸದ ಪ್ರತಾಪ್ ಸಿಂಹ ಅವರ ತಪ್ಪಿಲ್ಲ ಎಂದು ಸಂಸದ ರಮೇಶ‌ ಜಿಗಜಿಣಗಿ ಹೇಳಿದರು. ನಗರದಲ್ಲಿಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಸಂಸತ್ ಭವನದಲ್ಲಿ ನಡೆದಿರುವ ಘಟನೆ ಕೆಟ್ಟದ್ದು. ಆ ಸಮಯದಲ್ಲಿ ನಾನೂ ಸಹ ಸಂಸತ್ ಭವನದಲ್ಲಿ ಹಾಜರಿದ್ದೆ. ಘಟನೆಯನ್ನು ಕಣ್ಣಾರೆ ನೋಡಿದ್ದೇನೆ. ಇದರಲ್ಲಿ ಯಾರದ್ದು ತಪ್ಪು, ಒಪ್ಪು ಎನ್ನುವುದನ್ನು ಹೇಳಲ್ಲ. ಈ ರೀತಿ ಮಾಡುವುದು ಮಾಡೋದೇ ಕಾಂಗ್ರೆಸ್. ನಾಲ್ಕು ದಿನ ಕಾಯಿರಿ, ಸತ್ಯಾಂಶ ಹೊರಗೆ ಬರುತ್ತದೆ. ನಾನು 11 ಲಕ್ಷ ಮತಗಳನ್ನು ಪಡೆದು ಸಂಸದನಾಗಿದ್ದೇನೆ. ಮತದಾರರು ಬಂದು ಪಾಸ್ ಕೇಳಿದಾಗ ಅವರ ಹಿನ್ನೆಲೆ ನೋಡೋಕೆ ಆಗಲ್ಲ. ಪಾಸ್ ಕೇಳಿದಾಗ ಕೊಡಬೇಕಾಗುತ್ತದೆ. ಇದರಲ್ಲಿ ಪ್ರತಾಪಸಿಂಹ ಅವರ ತಪ್ಪಿಲ್ಲ ಎಂದು ತಿಳಿಸಿದರು.

ಮಾದಿಗ ಸಮುದಾಯದ ಜನರಿಗೆ ಒಳಮೀಸಲಾತಿ ಕಲ್ಪಿಸಬೇಕು ಎಂದು ನಾವು ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಒಳಮೀಸಲಾತಿ ವಿಚಾರವಾಗಿ ಕಾಂಗ್ರೆಸ್‌ನವರು ಸದಾಶಿವ ಆಯೋಗ ರಚನೆ ಮಾಡಿದ್ದರು. ಅದಕ್ಕೆ ಹಣ ಕೊಡಲಿಲ್ಲ. ನಂತರ ಸಿದ್ದರಾಮಯ್ಯನವರು ಸಿಎಂ ಆದರೂ ಅದಕ್ಕೆ ಪ್ರೋತ್ಸಾಹ ನೀಡಲಿಲ್ಲ. ಆದರೆ ಬಿಜೆಪಿ ರಾಜ್ಯದಲ್ಲಿ ಆಡಳಿತದಲ್ಲಿರುವಾಗ ಅದಕ್ಕೆ ಬೆಂಬಲ‌ ನೀಡುತ್ತಾ ಬಂದಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿಯವರು ಸಮುದಾಯಕ್ಕೆ ಮೀಸಲಾತಿ ದೊರೆಯಬೇಕು ಎನ್ನುವ ಮಾತುಗಳನ್ನು ಆಡಿದ್ದಾರೆ ಎಂದು ಜಿಗಜಿಣಗಿ ಹೇಳಿದರು.

ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮಾತುಗಳಿಂದ ಪಕ್ಷಕ್ಕೆ ಡ್ಯಾಮೇಜ್ ಆಗುವುದರ ಬಗ್ಗೆ ನಾನೇನೂ ಹೇಳುವುದಿಲ್ಲ. ಯತ್ನಾಳ್ ಹಾಗೂ ಬಿ.ವೈ.ವಿಜಯೇಂದ್ರ ನಡುವೆ ವೈಯಕ್ತಿಕವಾಗಿ ಏನಿದೆಯೋ ಗೊತ್ತಿಲ್ಲ. ಈ ಕುರಿತು ಅವರನ್ನೇ ಕೇಳಬೇಕು. ಡ್ಯಾಮೇಜ್ ಕಂಟ್ರೋಲ್ ಮಾಡುವ ವಿಚಾರವಾಗಿ ಪಕ್ಷದ ನಾಯಕರೂ ಸಹ ಹೇಳಿದ್ದಾರೆ, ಆದರೂ ಅವರು ಕೇಳಿಲ್ಲ. ನಮ್ಮ ಐದು ಬೆರಳುಗಳು ಸಮವಾಗಿವೆಯೇ ಎಂದು ಅವರು ಹೇಳಿದರು.

ಇದನ್ನೂ ಓದಿ: ಸಂಸತ್‌ ಸದಸ್ಯ ಸ್ಥಾನದಿಂದ ಪ್ರತಾಪ್‌ ಸಿಂಹ ಉಚ್ಚಾಟನೆಗೆ ಆಪ್​ ಒತ್ತಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.