ETV Bharat / state

ಕುಮಾರಸ್ವಾಮಿ ಪೆನ್‌ಡ್ರೈವ್ ಬಾಂಬ್: ಸಚಿವ ಭೈರತಿ ಸುರೇಶ್ ಹೇಳಿದ್ದೇನು?

author img

By

Published : Aug 6, 2023, 6:50 PM IST

ಹೆಚ್​.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಡುತ್ತಿರುವ ಆರೋಪಗಳ ವಿಚಾರವಾಗಿ ಸಚಿವ ಭೈರತಿ ಸುರೇಶ್ ವ್ಯಂಗ್ಯವಾಡಿದ್ದಾರೆ.

ಸಚಿವ ಭೈರತಿ ಸುರೇಶ
ಸಚಿವ ಭೈರತಿ ಸುರೇಶ

ಸಚಿವ ಭೈರತಿ ಸುರೇಶ ಹೇಳಿಕೆ

ರಾಯಚೂರು : "ವರ್ಗಾವಣೆ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ಹೇಳಿದ್ದನ್ನೇ ಹೇಳಿಕೊಂಡು ಹೋಗುತ್ತಿದ್ದಾರೆ. ಪ್ರತಿದಿನ ಆರೋಪ ಮಾಡುತ್ತಿದ್ದಾರೆ. ನಾವು ಪ್ರತಿದಿನ ಉತ್ತರ ಕೊಡ್ತಾ ಹೋದರೆ ಬೆಲೆ ಇರುವುದಿಲ್ಲ. ಅವರು ಏನ್ ಕೊಡ್ತಾರೋ ಕೊಡಲಿ, ತನಿಖೆ‌ ನಡೆಯಲಿ" ಎಂದು ಸಚಿವ ಭೈರತಿ ಸುರೇಶ ಹೇಳಿದ್ದಾರೆ.

ಇಂದು ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, "ನಾಳೆ ಯಾವ ಅಸಮಾಧಾನಿತ ಶಾಸಕರ ಜೊತೆಗೂ ಮೀಟಿಂಗ್ ಇಲ್ಲ. ಯಾವುದೇ ಶಾಸಕರ ಮಧ್ಯೆ ಅಸಮಾಧಾನವಿಲ್ಲ. ಹೊಸ ಸರ್ಕಾರ ಬಂದಾಗ ಹೊಸ ಶಾಸಕರಿಗೆ ಸಾರ್ವಜನಿಕರ ಹೊಸ ಕೆಲಸಗಳ ಅಪೇಕ್ಷೆಗಳು ಇರುತ್ತವೆ. ಅಂತಹ ಅಪೇಕ್ಷೆಗಳಿಗೆ ಸ್ಪಂದಿಸಬೇಕಾದದ್ದು ಸರ್ಕಾರದ ಕರ್ತವ್ಯ. ಅದನ್ನು ಮಾಡಿ ಎಂದು ಹೇಳಿದ್ದಾರೆ. ಅದರ ಪ್ರಕಾರ ಸಭೆಗಳು ನಡೆಯುತ್ತಿವೆ" ಎಂದರು.

ರಾಜ್ಯದ ಎಲ್ಲ ನಗರಗಳಲ್ಲಿ ಕುಡಿಯುವ ನೀರು ಒದಗಿಸುವ ವಿಚಾರದ ಕುರಿತು ಮಾತನಾಡಿ, "ಕುಡಿಯುವ ನೀರಿಗಾಗಿ ಕಳೆದ ಸರ್ಕಾರದ ಅವಧಿಯಲ್ಲಿ 92,000 ಕೋಟಿ ರೂ. ಮೀಸಲಿಟ್ಟಿದ್ದರು. ಅದು ಮುಖ್ಯಮಂತ್ರಿ ಸಿದ್ದರಾಮಯ್ಯರ ವಿವೇಚನೆಗೆ ಬಿಟ್ಟಿದ್ದು. ಹಣಕಾಸು ಮಂತ್ರಿ ಅವರೇ ಇದ್ದಾರೆ. ಹಾಗಾಗಿ ಮುಖ್ಯಮಂತ್ರಿ ಬಳಿ ಕೇಳಬೇಕು" ಎಂದು ತಿಳಿಸಿದರು.

ಇದೇ ವೇಳೆ, ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಜಮೀನು ಸಿಗದಿದ್ದರೆ ನಗರದ ಸುತ್ತಮುತ್ತ ನೂರಾರು ಎಕರೆಯಲ್ಲಿ ಆರ್​ಡಿಎ ಲೇಔಟ್ ಮಾಡುವಂತೆ ಪ್ರಭಾರಿ ಆಯುಕ್ತರಿಗೆ ಸೂಚನೆ ನೀಡಿದರು. ಖಾಸಗಿ ಲೇಔಟ್​ಗೆ ಪರವಾನಗಿ ನೀಡಲು ಮಾತ್ರ ಪ್ರಾಧಿಕಾರವಿಲ್ಲ. ಮಧ್ಯಮ ವರ್ಗದ ಜನರಿಗೆ ವಸತಿ ಸೌಕರ್ಯ ಕಲ್ಪಿಸಲು ಪ್ರಾಧಿಕಾರ ಇದೆ. ಖಾಸಗಿ ಲೇಔಟ್‌ಗಳಿಗೆ ತಾತ್ಕಾಲಿಕವಾಗಿ ಹೊಸದಾಗಿ ಅನುಮತಿ ನೀಡಬಾರದು ಎಂದು ಸಚಿವರು ತಾಕೀತು ಮಾಡಿದರು.

ದಿನದ 24 ಗಂಟೆ ಕುಡಿಯುವ ನೀರು ಯೋಜನೆ ಕುಂಠಿತಗೊಂಡಿರುವುದಕ್ಕೆ ಮತ್ತೊಮ್ಮೆ ಪ್ರಪೋಸಲ್ ಕಳುಹಿಸಬೇಕು. ಗುತ್ತಿಗೆದಾರರನಿಗೆ ನಾಲ್ಕು ತಿಂಗಳ ಕಾಲಾವಕಾಶ ನೀಡಿದ್ದೇನೆ. ಅಷ್ಟರಲ್ಲಿ ಕಾಮಗಾರಿ ಮುಗಿಸದಿದ್ದರೆ, 30 ಕೋಟಿ ರೂ ಅಂಡರ್ಟೇಕ್ ಹಣ ಮುಟ್ಟುಗೋಲು ಹಾಕಲಾಗುವುದು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮಾನ್ವಿ ಕುಡಿಯುವ ನೀರು ಯೋಜನೆ ತ್ವರಿತಗತಿಯಲ್ಲಿ ಮುಗಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ಕೊಟ್ಟರು.

ಸಚಿವ ಎನ್.ಎಸ್.ಭೋಸರಾಜು ಹಾಗೂ ಶಾಸಕ ಡಾ.ಶಿವರಾಜ್ ಪಾಟೀಲ್ ಹಾಗು ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಕಾಂಗ್ರೆಸ್​ ನಾಯಕರ ವಿರುದ್ದ ಹೆಚ್​ಡಿಕೆ ಕಿಡಿ : ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ನಿನ್ನೆ (ಶನಿವಾರ) ಮಾಧ್ಯಮಗೋಷ್ಟಿ ನಡೆಸಿದ್ದ ಕುಮಾರಸ್ವಾಮಿ, "ನಾನು ಹಿಟ್ ಅಂಡ್​ ರನ್ ವ್ಯಕ್ತಿಯಲ್ಲ. ಯಾವತ್ತೂ ಕೂಡ ನಾನು ಆ ರೀತಿ ಮಾಡಿದವನಲ್ಲ. ಕಾಂಗ್ರೆಸ್​ನವರು ನನ್ನ ಹೆಸರೇಳಿ ಹಿಟ್ ಅಂಡ್​ ರನ್ ಅಂತಾರೆ. ಹಲವು ಆರೋಪಗಳನ್ನು ಮಾಡಿದ್ದಾರೆ. ಈ ಹಿಂದೆ ಪೇಸಿಎಂ ಅಂತಾ ಪೋಸ್ಟರ್ ಬೇರೆ ಅಂಟಿಸಿದ್ದರು. ಆದರೆ ಅವರೀಗ ಮಾಡ್ತಿರೋದೇನು?. ಅವರ ಯಾವುದೇ ಆರೋಪಗಳಿಗೆ ದಾಖಲೆಗಳಿವೆಯಾ?" ಎಂದು ಕಾಂಗ್ರೆಸ್​ ನಾಯಕರ ಹೇಳಿಕೆಗಳಿಗೆ ತಿರುಗೇಟು ನೀಡಿದ್ದರು.

ಇದನ್ನೂ ಓದಿ : ಕುಮಾರಸ್ವಾಮಿ ಪ್ರಧಾನ ಮಂತ್ರಿವರೆಗೆ ಹೋಗಿದ್ದಾರೆ.. ಅದಕ್ಕೆ ತಕ್ಕಂತೆ ಉತ್ತರ ನೀಡುತ್ತೇನೆ: ಡಿಸಿಎಂ ಡಿ ಕೆ ಶಿವಕುಮಾರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.