ETV Bharat / state

ತುಂಗಭದ್ರಾ ತೀರದ ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿ: ಸಿಬ್ಬಂದಿ ಮೇಲೆಯೇ ಹಲ್ಲೆ - ದೂರು ದಾಖಲು

author img

By

Published : Aug 10, 2023, 10:44 AM IST

Updated : Aug 10, 2023, 11:04 AM IST

ತುಂಗಭದ್ರಾ ತೀರದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಹಿನ್ನೆಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಟಿಪ್ಪರ್ ಹಾಗೂ ಜೆಸಿಬಿ ಜಪ್ತಿ ಮಾಡಿಕೊಂಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

Asselt on officer
ಸಿಬ್ಬಂದಿ ಮೇಲೆ ಹಲ್ಲೆ

ರಾಯಚೂರು : ಜಿಲ್ಲೆಯ ಮಾನವಿ ತಾಲೂಕಿನ ಚಿಕಲಪರ್ವಿ ಗ್ರಾಮ ಸೇರಿದಂತೆ ವಿವಿಧೆಡೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಟಿಪ್ಪರ್ ಹಾಗೂ ಜೆಸಿಬಿ ಜಪ್ತಿ ಮಾಡಿಕೊಂಡಿದ್ದಾರೆ. ಈ ವೇಳೆ ಆರು ಜನರ ತಂಡವೊಂದು ರಕ್ಷಣಾ ಸಿಬ್ಬಂದಿಯೊಬ್ಬರ ಮೇಲೆ ಹಲ್ಲೆ ಮಾಡಿದ್ದು, ಅಧಿಕಾರಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಮಾಜಿ ಸೈನಿಕ ಹಾಗೂ ಖನಿಜಾ ರಕ್ಷಣಾ ಪಡೆಯ ಸಿಬ್ಬಂದಿ ನೀಲಪ್ಪ ಹಲ್ಲೆಗೊಳಗಾದವರು. ಕಬ್ಬಿಣದ ರಾಡ್​​ನಿಂದ ಹಲ್ಲೆ ಮಾಡಲಾಗಿದ್ದು, ತೀವ್ರವಾಗಿ ಗಾಯಗೊಂಡ ಅವರನ್ನು ಮಾನವಿ ಸರ್ಕಾರಿ‌ ಆಸ್ಪತ್ರೆಗೆ ರವಾನಿಸಲಾಯಿತು.‌ ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ತುಂಗಭದ್ರಾ ನದಿ ತೀರದಲ್ಲಿ ‌ಅಕ್ರಮ ‌ಮರಳುಗಾರಿಕೆ ದಂಧೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಾನ್ವಿ ಪೊಲೀಸರು ಮತ್ತು ಮೈನಿಂಗ್ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಜಂಟಿ ಕಾರ್ಯಾಚರಣೆ ನಡೆಸಲಾಯಿತು‌. ಮಾನ್ವಿ ತಾಲೂಕಿನ ಚಿಕಲಪರ್ವಿ ಕ್ಯಾಂಪ್ ಸುತ್ತಮುತ್ತ ದಾಳಿ ನಡೆಸಲಾಯಿತು. ಈ ವೇಳೆ, ಅಕ್ರಮ ಮರಳುಗಾರಿಕೆಗೆ ಬಳಸಿದ ಜೆಸಿಬಿ ಸೇರಿದಂತೆ ಮರಳು ಸಮೇತ ಟಿಪ್ಪರ್ ವಾಹನಗಳನ್ನು ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳ ತಂಡ ಜಪ್ತಿ ಮಾಡಿಕೊಂಡಿದೆ.

ಜಪ್ತಿ ಮಾಡಿದ ವಾಹನಗಳನ್ನು ಮಾನ್ವಿ ಠಾಣೆಗೆ ತೆಗೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಏಕಾಏಕಿ ಆಗಮಿಸಿದ ಆರು ಮಂದಿ, ಕಬ್ಬಿಣದ ರಾಡ್​ನಿಂದ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ‌ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಮಂಜುನಾಥ ಜಿ ಮಾನವಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಆಧಾರ ಮೇಲೆ ಐಪಿಸಿ ಸೆಕ್ಷನ್​ 143,147,148, 307, 323, 326, 341, 343 , 504, 506 ಸೇರಿದಂತೆ 149 ರ ಅಡಿ ಪ್ರಕರಣ ದಾಖಲಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಅಕ್ರಮ ಮರಳು ಅಡ್ಡೆಗಳ ಮೇಲೆ ಅಧಿಕಾರಿಗಳ ದಾಳಿ : 20ಕ್ಕೂ ಹೆಚ್ಚು ಟಿಪ್ಪರ್ ಮರಳು ವಶ

ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿ : ಕಳೆದ ಫೆಬ್ರವರಿ ತಿಂಗಳಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ ಕೋಡಿಹಳ್ಳಿ ಗ್ರಾಮದಲ್ಲಿ ಹಾಡಹಗಲೇ ನಡೆಯುತ್ತಿದ್ದ ಅಕ್ರಮ ಮರಳು ಅಡ್ಡೆ ಮೇಲೆ ಉಪ ವಿಭಾಗಾಧಿಕಾರಿ ಹೆಚ್ ಎಸ್ ಕೀರ್ತನಾ ಸೇರಿದಂತೆ ಇತರ ಸಿಬ್ಬಂದಿ ದಿಢೀರ್ ದಾಳಿ ನಡೆಸಿದ್ದರು. ಈ ವೇಳೆ, ದಂಧೆಕೋರರು ಪರಾರಿಯಾಗಿದ್ದು, ಮರಳನ್ನು ತೆಗೆಯುತ್ತಿದ್ದ 10ಕ್ಕೂ ಹೆಚ್ಚು ಕೊಪ್ಪರಿಕೆಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಕಳೆದ ವರ್ಷ ಸುರಿದ ಭಾರಿ ಮಳೆಯಿಂದಾಗಿ ಶಿಂಷಾ ನದಿ ಒಂದು ವರ್ಷಕ್ಕೂ ಹೆಚ್ಚು ಕಾಲ ಉಕ್ಕಿ ಹರಿದ ಪರಿಣಾಮ ಅಪಾರ ಪ್ರಮಾಣದ ಮರಳು ಹರಿದು ಬಂದು ಶೇಖರಣೆಗೊಂಡಿತ್ತು.

ಇದನ್ನೂ ಓದಿ : ಅಕ್ರಮ ಮರಳು ದಂಧೆಗೆ ಹೆಡ್‌ಕಾನ್ಸ್‌ಟೇಬಲ್ ಹತ್ಯೆ ಪ್ರಕರಣ: ಆರೋಪಿ ಕಾಲಿಗೆ ಗುಂಡು, CPI, PSI, ಕಾನ್ಸ್‌ಟೇಬಲ್‌ ಅಮಾನತು

Last Updated : Aug 10, 2023, 11:04 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.