ETV Bharat / state

ಬಿಜೆಪಿಯಿಂದ ನಮ್ಮ ಪ್ರಣಾಳಿಕೆ ನಕಲು: ಹೆಚ್.ಡಿ.ಕುಮಾರಸ್ವಾಮಿ

author img

By

Published : May 2, 2023, 1:18 PM IST

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್​ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹೆಚ್.ಡಿ.ಕುಮಾರಸ್ವಾಮಿ
ಹೆಚ್.ಡಿ.ಕುಮಾರಸ್ವಾಮಿ

ರಾಯಚೂರು: ಬಿಜೆಪಿಯವರು ಜೆಡಿಎಸ್‌ ಪ್ರಣಾಳಿಕೆಯನ್ನು ನಕಲು ಮಾಡಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದರು. ನಗರದ ಖಾಸಗಿ ಹೋಟೆಲ್‌ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ತಮ್ಮ ಪ್ರಣಾಳಿಕೆಗಳು ಬಿಡುಗಡೆ ಮಾಡಿದ್ದಾರೆ. ಇಸ್ರೇಲ್ ಮಾದರಿಯ ನೀರಾವರಿ ಯೋಜನೆಯನ್ನು ಬಗ್ಗೆ ನಮ್ಮ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಲಾಗಿದೆ. ಆದರೀಗ ಬಿಜೆಪಿಯವರು ತಮ್ಮ ಪ್ರಣಾಳಿಕೆಯಲ್ಲೂ ಈ ಯೋಜನೆಯನ್ನು ಘೋಷಣೆ ಮಾಡಿದ್ದು, ಜೆಡಿಎಸ್ ಪ್ರಣಾಳಿಕೆಯನ್ನು ಕಾಪಿ ಮಾಡಿದ್ದಾರೆ ಎಂದು ದೂರಿದರು.

ನಾವು ಬಿಸಿಲು, ಮಳೆ ಲೆಕ್ಕಿಸದೇ ಪ್ರಚಾರ ಶುರು‌ ಮಾಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಕರ್ನಾಟಕದಲ್ಲಿ ಠಿಕಾಣಿ ಹೂಡಿದ್ದಾರೆ. ರಾಯಚೂರು ಜಿಲ್ಲೆಯ ಸಿಂಧನೂರಿಗೆ ಇಂದು ಮೋದಿ ಬರುತ್ತಿದ್ದಾರೆ. ಪ್ರವಾಹ ಎದುರಾದಾಗ, ಕೋವಿಡ್ ವೇಳೆಯಲ್ಲಿ ಪ್ರಧಾನಿ ಹಾಗೂ ಡಬಲ್ ಎಂಜಿನ್ ಸರ್ಕಾರ ಕರ್ನಾಟಕಕ್ಕೆ ಬರಲಿಲ್ಲ. ಇನ್ನು ನರೇಂದ್ರ ಮೋದಿಯವರು ಪರಿವಾರದ ಬಗ್ಗೆ ಚರ್ಚೆ ಮಾಡುತ್ತಾರೆ. ಆದರೆ, ಕೊಪ್ಪಳದಲ್ಲಿ ಟಿಕೆಟ್ ನೀಡಿದ್ದು, ಯಾರಿಗೆ? ಎಂದು ಕೇಳಿದರು.

ಭ್ರಷ್ಟಾಚಾರದ ಬಗ್ಗೆ ಮೋದಿ ಮಾತನಾಡುತ್ತಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಬಿಜೆಪಿಗೆ ನೈತಿಕತೆ ಇದೆಯೇ?, ಭ್ರಷ್ಟಾಚಾರದ ಬಗ್ಗೆ ಮೋದಿ ಮಾತ‌‌ನಾಡಿದರೆ ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತೆ ಎಂದು ಲೇವಡಿ ಮಾಡಿದರು. ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಲಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳುತ್ತಾರೆ. ಪ್ರಚಾರದಲ್ಲಿ ಬಿಡುವಿಲ್ಲದೆ ಇರುವುದರಿಂದ ಅವರಿಗೆ ನೆನಪಿನ ಶಕ್ತಿ ಕಡಿಮೆ ಆಗಿರಬಹುದು. ನಾನು ಸಿಎಂ ಆಗಿದ್ದಾಗ ಎರಡು ಬಾರಿ ಸಾಲಮನ್ನಾ ಮಾಡಿರುವುದಾಗಿ ಸಿದ್ದರಾಮಯ್ಯರಿಗೆ ನೆನಪಿಸುತ್ತೇನೆ ಎಂದು ಹೆಚ್​ಡಿಕೆ ಹೇಳಿದರು.

75 ವರ್ಷ ಆಡಳಿತ ಮಾಡಿದವರು ಈಗ ನಿರುದ್ಯೋಗ ಭತ್ಯೆ ಕೊಡುತ್ತೇವೆ ಅಂತಾರೆ. ನಿರುದ್ಯೋಗ ಭತ್ಯೆಯಲ್ಲಿ ನಿಮ್ಮ ವೈಫಲ್ಯತೆ ಎದ್ದು ಕಾಣುತ್ತಿದೆ. ಜಿಎಸ್​​ಟಿಯಿಂದ ದಾಖಲೆ ಮಟ್ಟದಲ್ಲಿ ಕೇಂದ್ರದ ಖಜಾನೆಯಲ್ಲಿ ಹಣ ಸಂಗ್ರಹವಾಗಿದೆ. ಜನರು ಸಂಕಷ್ಟದಲ್ಲಿಯೂ ಜಿಎಸ್​​ಟಿ ಕಟ್ಟಿದ್ದಾರೆ. ಆ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದನ್ನು ಮೋದಿ ಹೇಳಬೇಕಾಗಿದೆ ಎಂದರು.

ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಜನರು ಹಣಬಲಕ್ಕಿಂತ ಜನಬಲವೇ ಮೇಲು ಎಂಬುವುದನ್ನು ಸಾಬೀತು ‌ಮಾಡುತ್ತಾರೆ. ಜೆಡಿಎಸ್​ ಗೆಲುವಿನ ಬಗ್ಗೆ ಜೆ.ಪಿ.ನಡ್ಡಾ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 60-70 ಸೀಟು ಗೆಲ್ಲಲೂ ಬೆವರು ಸುರಿಸಬೇಕು. ಜೆಡಿಎಸ್ ಬಗ್ಗೆ ಹಗುರವಾಗಿ ಮಾತನಾಡಬೇಡಿ, ನಾವು ರಾಜ್ಯದಲ್ಲಿ ಬಹುಮತ ಪಡೆಯುತ್ತೇವೆ. ನಾವು ಕಾಂಗ್ರೆಸ್ - ಬಿಜೆಪಿಯ ಬಿ ಟೀಂ ಅಲ್ಲ. ನಾವು ನಾಡಿನ ಜನತೆಯ ಬಿ ಟೀಂ, ಜೆಡಿಎಸ್​ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ರಾಯಚೂರು ನಗರ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿ ಈ.ವಿನಯಕುಮಾರ್, ರಾಜ್ಯ ವಕ್ತಾರ ಶಿವಶಂಕರ ಇನ್ನಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ಕಾಂಗ್ರೆಸ್ ಪ್ರಣಾಳಿಕೆಯಲ್ಲಿರುವ ಪ್ರಮುಖ ಅಂಶಗಳೇನು? ಇಲ್ಲಿದೆ ಫುಲ್​ ಡಿಟೇಲ್ಸ್​​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.