ETV Bharat / state

Mysore crime: ಪ್ರೀತ್ಸೇ ಪ್ರೀತ್ಸೆ ಅಂತ ಹಿಂದೆ ಬಿದ್ದ ಯುವಕ.. ಮದುವೆ ತಯಾರಿ ನಡೆಸಿದ್ದ ಯುವತಿ ಪಾಗಲ್​ ಪ್ರೇಮಿಯ ಕಾಟಕ್ಕೆ ಬೇಸತ್ತು ಆತ್ಮಹತ್ಯೆ

author img

By

Published : Jul 2, 2023, 10:11 PM IST

ಮೈಸೂರು ತಾಲೂಕಿನ ಗಣಗರ ಹುಂಡಿ ಗ್ರಾಮದಲ್ಲಿನ ಯುವತಿಯೊಬ್ಬಳು ಪ್ರೇಮಿಯ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ.

ಯುವತಿ ಆತ್ಮಹತ್ಯೆ
ಯುವತಿ ಆತ್ಮಹತ್ಯೆ

ಮೈಸೂರು : ಪ್ರೀತ್ಸೇ ಪ್ರೀತ್ಸೇ ಎಂದು ಪಾಗಲ್​ ಪ್ರೇಮಿಯೊಬ್ಬ ಯುವತಿಯ ಹಿಂದೆ ಬಿದ್ದು ಕಿರುಕುಳ ನೀಡಿರುವ ಆರೋಪ ಕೇಳಿಬಂದಿದ್ದು, ಇದರಿಂದ ಮನನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ತಾಲ್ಲೂಕಿನ ಗಣಗರ ಹುಂಡಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿ ಹರ್ಷಿತಾ(21) ಆತ್ಮಹತ್ಯೆಗೆ ಶರಣಾದವರು. ಈ ಯುವತಿಗೆ ಅದೇ ಗ್ರಾಮದ ಯುವಕ ಶಿವು (26) ಎಂಬಾತ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿತ್ತು. ಇದರಿಂದ ಬೇಸತ್ತು ವಿಷ ಸೇವಿಸಿ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪಿಯುಸಿ ಓದಿದ್ದ ಹರ್ಷಿತಾ ಕಂಪ್ಯೂಟರ್ ಕೋರ್ಸ್‌ಗೆ ಸೇರಿದ್ದರು. ಈ ವೇಳೆ ಹರ್ಷಿತಾಳ ಬೆನ್ನು ಬಿದ್ದಿದ್ದ ಶಿವು ಪ್ರೀತಿಸುವಂತೆ ಪೀಡಿಸುತ್ತಿದ್ದನಂತೆ. ಆದರೆ, ಶಿವು ಮನವಿಯನ್ನ ಹರ್ಷಿತಾ ತಿರಸ್ಕರಿಸಿದ್ದರು.

ಈ ಮಧ್ಯೆ ಹರ್ಷಿತಾ ಮನೆಯವರು ಮದುವೆ ಸಂಬಂಧ ಕುದುರಿಸಿದ್ದರು. ಆಷಾಢ ನಂತರ ಮದುವೆ ದಿನ ಗೊತ್ತುಪಡಿಸಲು ನಿರ್ಧರಿಸಿದ್ದರು. ಈ ಮಾಹಿತಿ ಅರಿತ ಶಿವು ತನ್ನನ್ನ ಪ್ರೀತಿಸಿ ಮದುವೆ ಆಗುವಂತೆ ದುಂಬಾಲು ಬಿದ್ದಿದ್ದನಂತೆ. ಶಿವು ಕಿರುಕುಳಕ್ಕೆ ಮನನೊಂದು ಹರ್ಷಿತ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಹರ್ಷಿತಾರನ್ನು ಕೆ ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಹರ್ಷಿತಾ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಗಳ ಸಾವಿಗೆ ಶಿವು ಕಾರಣ ಎಂದು ಹರ್ಷಿತಾ ತಂದೆ ವೇಣುಗೋಪಾಲ್ ನೀಡಿದ ದೂರಿನ ಮೇರೆಗೆ ಇಲವಾಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

ಪತ್ನಿಯ ಖಾಸಗಿ ಫೋಟೋಗಳನ್ನು ಸ್ನೇಹಿತರಿಗೆ ಕಳುಹಿಸಿದ ಪತಿ : ಇನ್ನೊಂದೆಡೆ ನನ್ನಿಂದ ಪತ್ನಿ ಬೇರೆ ಹೋದಳು ಎಂದು ಆಕೆಯ ವಿರುದ್ಧ ಸೇಡು ತೀರಿಸಿಕೊಳ್ಳಲು ಪತ್ನಿಯ ಖಾಸಗಿ ಅರೆನಗ್ನ ಫೋಟೋಗಳನ್ನು ಪತಿರಾಯ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನೂ ಓದಿ: Bengaluru crime : ಮಹಿಳಾ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ಆರೋಪ : ಸರ್ಕಾರಿ ಅಧಿಕಾರಿ ವಿರುದ್ಧ ಎಫ್‌ಐಆರ್‌ ದಾಖಲು

ನಗರದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಈ ಸಂಬಂಧ ನಗರದ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ. 10 ತಿಂಗಳ ಹಿಂದೆ ಮದುವೆಯಾಗಿದ್ದ ಈ ವ್ಯಕ್ತಿ ಪತ್ನಿ ದೂರವಾದಳು ಎಂಬ ಕಾರಣಕ್ಕೆ ಒಟ್ಟಿಗೆ ಅನ್ಯೋನ್ಯವಾಗಿದ್ದ ವೇಳೆ ತೆಗೆದುಕೊಂಡಿದ್ದ ಖಾಸಗಿ ಮತ್ತು ಅರೆನಗ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸೆಂಡ್ ಮಾಡಿದ್ದಾನೆ.

ಅಲ್ಲದೇ, ಸ್ನೇಹಿತರ ವಾಟ್ಸಪ್‌ಗೂ ಕಳಿಸಿದ್ದನಂತೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಖಾಸಗಿ ಹಾಗೂ ಅರೆನಗ್ನ ಫೋಟೋಗಳನ್ನ ಹರಿದು ಬಿಟ್ಟು ತನ್ನ ಘನತೆಗೆ ಧಕ್ಕೆ ತಂದ ಪತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೆನ್ ಪೊಲೀಸ್ ಠಾಣೆಯಲ್ಲಿ ನೊಂದ ಮಹಿಳೆ ದೂರು ನೀಡಿದ್ದಾರೆ. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Doddaballapur Crime: ಕುಡಿದು ಬಂದು ನಿತ್ಯ ಕಿರುಕುಳ, ತಾಯಿ ಮೇಲೆ ಹಲ್ಲೆ.. ಪುತ್ರನನ್ನು ಮರಕ್ಕೆ ಕಟ್ಟಿಹಾಕಿ ಬೆಂಕಿ ಹಚ್ಚಿ ಕೊಂದ ತಂದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.