ETV Bharat / state

CM Siddaramaiah: ಗುಣಮಟ್ಟದ ಬೀಜ, ಅಗತ್ಯ ರಸಗೊಬ್ಬರದ ಕೊರತೆ ಆಗದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಿ: ಸಿಎಂ ಖಡಕ್​ ಸೂಚನೆ

author img

By

Published : Jun 10, 2023, 8:08 PM IST

ಸಮಸ್ಯೆಯಾದಲ್ಲಿ ನಿಮ್ಮನ್ನೇ ಹೊಣೆ ಮಾಡಲಾಗುವುದು ಎಂದು ಕೃಷಿ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

District level officers meeting with Siddaramaiah
ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು: ಮುಂಗಾರು ಆರಂಭವಾಗುತ್ತಿದ್ದಂತೆ ಕೃಷಿ ಚಟುವಟಿಕೆ ಚುರುಕಾಗುತ್ತದೆ. ಇದಕ್ಕೆ ತಕ್ಕಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಿ. ಲೋಪಗಳಾದರೆ ನೀವೇ ಹೊಣೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾ ಪಂಚಾಯತ್ ಆವರಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಅವರು ಅಧಿಕಾರಿಗಳಿಗೆ ಈ ಸೂಚನೆಗಳನ್ನು ನೀಡಿದರು.

ನಾಡಿನ ಜನತೆ ಬದಲಾವಣೆ ಬಯಸಿ ಸರ್ಕಾರವನ್ನು ಬದಲಾಯಿಸಿದ್ದಾರೆ. ಜನರ ನಿರೀಕ್ಷೆಗೆ ತಕ್ಕಂತೆ ದಕ್ಷವಾಗಿ, ಚುರುಕಾಗಿ ಕೆಲಸ ಮಾಡಿ. ಹೆಚ್ಚೂ ಕಡಿಮೆ ಆದರೆ ನಿಮ್ಮಗಳ ಮೇಲೆ ಕ್ರಮ ಜರುಗಿಸುವುದು ಅನಿವಾರ್ಯವಾಗುತ್ತದೆ. ಕೆಡಿಪಿ ಸಭೆಗಳಿಗೆ ಸಂಪೂರ್ಣ ಫೀಲ್ಡ್ ವರ್ಕ್ ಮಾಡಿದ ವರದಿ ಸಮೇತ ಸಮಗ್ರ ಮಾಹಿತಿಯೊಂದಿಗೆ ಬರಬೇಕು. ಕೈ ಬೀಸಿಕೊಂಡು ಬರಬಾರದು ಎಂದು ಖಡಕ್ ಎಚ್ಚರಿಕೆ ನೀಡಿದರು.

ಕೃಷಿ ಕೆಲಸ ಇದ್ದಾಗ ರೈತರನ್ನು ಕಚೇರಿಗಳಿಗೆ ಅಲೆಯುವಂತೆ ಮಾಡಬೇಡಿ. ಬೀಜ, ಗೊಬ್ಬರ, ಕೀಟನಾಶಕ ಅಗತ್ಯ ಪ್ರಮಾಣದಲ್ಲಿ ಶೇಖರಿಸಿ ಇಟ್ಟುಕೊಂಡು ರೈತರಿಗೆ ನೆರವಾಗಿ. ಯಾವುದಕ್ಕೂ ಹಣದ ಕೊರತೆ ಇಲ್ಲ. ನಿಮ್ಮಲ್ಲಿ ಕೊರತೆ ಇದ್ದರೆ ನಮಗೆ ಕೇಳಿ. ನಿಮ್ಮಿಂದ ಏನೇ ಲೋಪ ಆಗಿ ಬೆಳಗಳಿಗೆ ಮತ್ತು ರೈತರಿಗೆ ತೊಂದರೆ ಆದರೆ ನಿಮ್ಮನ್ನೇ ಹೊಣೆ ಮಾಡಲಾಗುವುದು ಎಂದು ಕೃಷಿ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಖಡಕ್​ ಆಗಿ ಹೇಳಿದ್ರು.

District level officers meeting with Siddaramaiah
ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಬೇಕು. ಕೊರತೆಯನ್ನು ಮೊದಲೇ ಅಂದಾಜಿಸಿ ಅಗತ್ಯ ನೆರವಿನ ನೀಲನಕ್ಷೆ ಸಿದ್ಧಪಡಿಸಿಕೊಳ್ಳಿ. ನಿಮ್ಮ ಲೋಪದಿಂದ ಜನರಿಗೆ ಸಮಸ್ಯೆ‌ ಆದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ಎಂದರು. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ. ಮಹದೇವಪ್ಪ ಮತ್ತು ಜಿಲ್ಲೆಯ ಎಲ್ಲಾ ಶಾಸಕರುಗಳು ಉಪಸ್ಥಿತರಿದ್ದರು.

ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಕೊಟ್ಟ ಸೂಚನೆಗಳು:

  • ಕೆಡಿಪಿ ಸಭೆಗಳಿಗೆ ಒಂದು ದಿನ ಮುಂಚಿತವಾದರೂ ವರದಿಗಳನ್ನು ನೀಡಬೇಕು.
  • ಅಧಿಕಾರಿಗಳು ಕಡ್ಡಾಯವಾಗಿ ಫೀಲ್ಡ್ ವರ್ಕ್ ಮಾಡಬೇಕು.
  • ಬರೀ ಕಚೇರಿಯಲ್ಲಿ ಕುಳಿತು ವರದಿ ಸಿದ್ಧಪಡಿಸಬಾರದು.
  • ಎಸ್​ಪಿಗಳು ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು.
  • ಜಿಲ್ಲಾ ಮತ್ತು ವಿಭಾಗೀಯ ಮಟ್ಟದ ಅಧಿಕಾರಿಗಳು ಬಿಗಿಯಾಗಿದ್ದರೆ ನಿಮ್ಮ ಕೆಳಗಿನ ಅಧಿಕಾರಿಗಳು ಜವಾಬ್ದಾರಿಯಿಂದ ಇರುತ್ತಾರೆ. ನೀವೇ ಮೈಗಳ್ಳರಾದರೆ ಕೆಳಗಿನವರು ಸೋಮಾರಿಗಳಾಗುತ್ತಾರೆ.
  • ಠಾಣಾಧಿಕಾರಿ ಗಮನಕ್ಕೆ ಬಾರದಂತೆ ಠಾಣೆ ವ್ಯಾಪ್ತಿಯಲ್ಲಿ ರೌಡಿ ಚಟುವಟಿಕೆ, ಅಕ್ರಮ ಚಟುವಟಿಕೆಗಳು ನಡೆಯಲು ಸಾಧ್ಯವಿಲ್ಲ.
  • ಪೊಲೀಸರ ಬಗ್ಗೆ ರೌಡಿಗಳಿಗೆ ಭಯ ಇಲ್ಲದಿದ್ದರೆ ಪೊಲೀಸರು ಇದ್ದರೇನು, ಬಿಟ್ಟರೇನು ಎಂದು ಸಿಎಂ ಹೇಳಿದ್ರು
  • ತಹಶೀಲ್ದಾರ್ ಕಚೇರಿಗಳಲ್ಲಿ ಎಷ್ಟು ಲಂಚ ನಡೆಯುತ್ತಿದೆ, ರೈತರಿಗೆ ಎಷ್ಟು ಗೋಳಾಡಿಸುತ್ತಿದ್ದಾರೆ ಎನ್ನುವುದು ಗೊತ್ತಾ ಜಿಲ್ಲಾಧಿಕಾರಿಗಳೇ? ಎಂದು ಸಿಎಂ ಪ್ರಶ್ನಿಸಿದರು.
  • ಕಳೆದ ವರ್ಷ ಬೆಳೆ ಹಾನಿ ಆದ ಎಲ್ಲರಿಗೂ ಸಮರ್ಪಕವಾಗಿ ಪರಿಹಾರ ವಿತರಿಸಬೇಕು.
  • ತಾಂತ್ರಿಕ ಸಮಸ್ಯೆ ಕಾರಣದಿಂದ ಯಾರಿಗಾದರೂ ಪರಿಹಾರ ದೊರಕದಿದ್ದರೆ, ಆದಷ್ಟು ಬೇಗ ಸಮಸ್ಯೆ ಬಗೆಹರಿಸಿ ಪರಿಹಾರ ವಿತರಿಸಿ.
  • ಗುಣಮಟ್ಟದ ಬೀಜ ಮತ್ತು ಅಗತ್ಯ ರಸಗೊಬ್ಬರ ಸಂಗ್ರಹ ಇರಬೇಕು.
  • ಜೂನ್ ಆರಂಭದಲ್ಲಿ ಬರಬೇಕಾದ ಮಳೆ ಬಂದಿಲ್ಲ. ಇದರಿಂದ ಕುಡಿಯುವ ನೀರು ಮತ್ತು ಬೆಳೆಗೆ ನೀರು ಕೊರತೆ ಆಗದಂತೆ ಮುಂಜಾಗ್ರತಾ ಕ್ರಮ ವಹಿಸಿ.
  • ಮಳೆ ಬರುವವರೆಗೆ ಬೆಳೆಗಳಿಗೆ ಅಗತ್ಯ ನೀರು ಒದಗಿಸಿ, ಬೆಳೆ ನಷ್ಟ ಆಗದಂತೆ ಕ್ರಮ ವಹಿಸಿ. ಪ್ರಥಮ ಆದ್ಯತೆ ಕುಡಿಯುವ ನೀರಿಗೆ ಒದಗಿಸಿ.
  • ಪ್ರತಿ ದಿನ ನೀರಿನ ಪ್ರಮಾಣದ ಮೇಲೆ ನಿಗಾ ವಹಿಸಿ. ಕುಡಿಯುವ ನೀರಿಗೆ ಕೊರತೆ ಆಗದಂತೆ ಸಿದ್ಧತೆ ಮಾಡಿಕೊಳ್ಳಿ.
  • ಗ್ಯಾರಂಟಿಗಳನ್ನು ಬಡವರಿಗೆ-ಮಧ್ಯಮ ವರ್ಗದವರಿಗೆ ತಲುಪಿಸಿ

ನಮ್ಮ ಬಡವರು ಮತ್ತು ಮಧ್ಯಮ ವರ್ಗದವರು ಬಹಳ ಸಂಕಷ್ಟದಲ್ಲಿದ್ದಾರೆ. ಅವರ ಸಂಕಷ್ಟ ಕಡಿಮೆ ಆಗಲಿ ಎಂದು 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಆದ್ದರಿಂದ ಅತ್ಯಂತ ಕಾಳಜಿ ವಹಿಸಿ ಹೆಚ್ಚಿನ ಕಾರ್ಯಕ್ಷಮತೆಯಿಂದ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಿ ಎಂದು ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದ್ರು.

ಇದನ್ನೂ ಓದಿ: Congress Guarantee Scheme.. ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆ ಜಾರಿಯಲ್ಲಿ ಗೊಂದಲವಿಲ್ಲ: ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.