ETV Bharat / state

ಸುಭಾಷ್ ಚಂದ್ರ ಬೋಸ್ ಪ್ರತಿಮೆ ಕೆತ್ತನೆಯ ಭಾಗ್ಯ ಪಡೆದ ಮೈಸೂರು ಶಿಲ್ಪಿ

author img

By

Published : Jun 1, 2022, 11:38 AM IST

ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಅವರು ಸುಭಾಷ್ ಚಂದ್ರ ಬೋಸ್ ಅವರ 30 ಅಡಿ ಪ್ರತಿಮೆಯನ್ನು ಕೆತ್ತಲಿದ್ದಾರೆ. ಇದನ್ನು ಇಂಡಿಯಾ ಗೇಟ್​ ಬಳಿ ಪ್ರತಿಷ್ಠಾಪಿಸಲಾಗುವುದು.

ಶಿಲ್ಪ ಕಲಾವಿದ ಅರುಣ್ ಯೋಗಿರಾಜ್
ಶಿಲ್ಪ ಕಲಾವಿದ ಅರುಣ್ ಯೋಗಿರಾಜ್

ಮೈಸೂರು : ದೆಹಲಿಯ ಇಂಡಿಯಾ ಗೇಟ್ ಬಳಿ ತಲೆ ಎತ್ತಲಿರುವ ಸುಭಾಷ್ ಚಂದ್ರ ಬೋಸ್ ಪ್ರತಿಮೆ ಕೆತ್ತನೆ ಮಾಡುವ ಭಾಗ್ಯ ಮೈಸೂರಿನ ಶಿಲ್ಪ ಕಲಾವಿದ ಅರುಣ್ ಯೋಗಿರಾಜ್​ಗೆ ಒಲಿದಿದೆ.

ಆಜಾದಿ ಕಾ ಅಮೃತ್ ಮಹೋತ್ಸವದ ನಿಮಿತ್ತ ದೆಹಲಿಯ ಇಂಡಿಯಾ ಗೇಟ್ ಬಳಿ ಪ್ರತಿಷ್ಠಾಪಿಸಲಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 30 ಅಡಿ ಎತ್ತರದ ಏಕಶಿಲಾ ಗ್ರಾನೈಟ್ ಕಲ್ಲಿನ ಪ್ರತಿಮೆಯ ನಿರ್ಮಾಣ ಮಾಡುವ ಅವಕಾಶ ಮೈಸೂರಿನ ಶಿಲ್ಪ ಕಲಾವಿದ ಅರುಣ್ ಯೋಗಿರಾಜ್​ಗೆ ದೊರೆತಿದ್ದು, ಯೋಗ ದಿನದಂದು ಸಾಂಸ್ಕೃತಿಕ ನಗರಿಗೆ ಪ್ರಧಾನಿ ಬರುತ್ತಿರುವ ಬೆನ್ನಲ್ಲೇ ಇದೀಗ ಮೈಸೂರಿಗೆ ಮತ್ತೊಂದು ಬಂಪರ್ ಅವಕಾಶ ಸಿಕ್ಕಿದಂತಾಗಿದೆ.

ಶಿಲ್ಪ ಕಲಾವಿದ ಅರುಣ್ ಯೋಗಿರಾಜ್
ಪ್ರತಾಪ್​ ಸಿಂಹ ಜೊತೆ ಶಿಲ್ಪ ಕಲಾವಿದ ಅರುಣ್ ಯೋಗಿರಾಜ್

ಅರುಣ್ ಯೋಗಿರಾಜ್ ಅವರಿಗೆ ನೇತಾಜಿ ಪ್ರತಿಮೆಯನ್ನು ನಿರ್ಮಾಣ ಮಾಡುವ ಜವಾಬ್ದಾರಿಯನ್ನ ಕೇಂದ್ರ ಸರ್ಕಾರ ವಹಿಸಿದ್ದು, ಈ ಪ್ರತಿಮೆಯ ನಿರ್ಮಾಣಕ್ಕೆ ದೇಶದ ಪ್ರಮುಖ ಆರು ಶಿಲ್ಪ ಕಲಾವಿದರ ಕಮಿಟಿ ರಚಿಸಲಾಗಿತ್ತು. ದಕ್ಷಿಣ ಭಾರತವನ್ನು ಪ್ರತಿನಿಧಿಸಿದ್ದ ಏಕೈಕ ಕಲಾವಿದ ಅರುಣ್ ಯೋಗಿರಾಜ್ ಅವರಿಗೆ ಅಂತಿಮವಾಗಿ ಮೂರ್ತಿ ನಿರ್ಮಾಣದ ಜವಾಬ್ದಾರಿ ದೊರೆತಿದೆ. ಈ ಹಿಂದೆಯೂ ಕೂಡ ಅರುಣ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಎರಡು ಅಡಿ ಎತ್ತರದ ಸುಭಾಷ್ ಚಂದ್ರ ಬೋಸ್ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದ್ದರು.

ಆರು ತಲೆಮಾರಿನಿಂದ ಶಿಲ್ಪ ಕಲಾಕೃತಿ ಮಾಡಿಕೊಂಡು ಬಂದ ಯೋಗಿರಾಜ್ ಕುಟುಂಬ: ಇಂಡಿಯಾ ಗೇಟ್ ಬಳಿ ನೇತಾಜಿ ಪ್ರತಿಮೆ ಸ್ಥಾಪಿಸಬೇಕೆಂಬುದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ. ಇದಕ್ಕಾಗಿ ಕಲಾವಿದರನ್ನ ಆಯ್ಕೆ ಮಾಡಲೆಂದು ಸಂಸ್ಕೃತಿ ಸಚಿವಾಲಯ ಹಾಗೂ ಎನ್.ಜಿ.ಎಂ.ಎ ಸಮಿತಿಯೊಂದನ್ನು ರಚಿಸಿತ್ತು. ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಸುದರ್ಶನ್ ಸಾಹು, ರಾಮ್ ವಿ ಸುತಾರ್ ಹೆಸರು ಕೂಡ ಇದರಲ್ಲಿ ಕೇಳಿ ಬಂದಿತ್ತು. ಜನವರಿ ತಿಂಗಳಲ್ಲಿ ಇದಕ್ಕಾಗಿ ಕಲಾವಿದರೊಟ್ಟಿಗೆ ವಿಡಿಯೋ ಕಾನ್ಫರೆನ್ಸ್ ಕೂಡ ನಡೆದಿತ್ತು. ಕೊನೆಯದಾಗಿ ಆರು ತಲೆಮಾರಿನಿಂದ ಶಿಲ್ಪಕಲಾಕೃತಿ ಮಾಡಿಕೊಂಡು ಬಂದಿರುವ ಯೋಗಿರಾಜ್ ಕುಟುಂಬಕ್ಕೆ ನೇತಾಜಿ ಪ್ರತಿಮೆ ಕೆತ್ತನೆ ಮಾಡುವ ಅವಕಾಶ ಕೂಡಿ ಬಂದಿದೆ.

ಕೇದಾರನಾಥದಲ್ಲಿರುವ ಶಂಕರಾಚಾರ್ಯರ ಪ್ರತಿಮೆಯೇ ಈ ಅವಕಾಶಕ್ಕೆ ಕಾರಣ: ಉತ್ತರಾಖಂಡದ ಕೇದಾರನಾಥ ಕ್ಷೇತ್ರದಲ್ಲಿ ನಿರ್ಮಿಸಲಾಗಿರುವ ಆದಿಗುರು ಶ್ರೀ ಶಂಕರಾಚಾರ್ಯರ ಪ್ರತಿಮೆಯನ್ನು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆ ಮಾಡಿದ್ದರು. ಈ ಪ್ರತಿಮೆಯನ್ನು ಖ್ಯಾತ ಶಿಲ್ಪಿ ಅರುಣ್ ಅವರೇ ಕೆತ್ತನೆ ಮಾಡಿದ್ದರು. 12 ಅಡಿ ಎತ್ತರವಿರುವ ಸುಮಾರು 28 ಟನ್ ತೂಕದ ಏಕಶಿಲಾ ಪ್ರತಿಮೆ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಆ ಪ್ರತಿಮೆಯನ್ನ ಕೆತ್ತನೆ ಮಾಡಲು ಕೇಂದ್ರ ಸರ್ಕಾರ ಅರುಣ್ ಅವರಿಗೆ ಜವಾಬ್ದಾರಿ ವಹಿಸಿತ್ತು. ಆ ವೇಳೆ ಇವರ ಕೆಲಸವನ್ನು ಕಂಡಿದ್ದ ಪ್ರಧಾನಿ ನರೇಂದ್ರ ಮೋದಿ, ಇದೀಗ ನೇತಾಜಿ ಪ್ರತಿಮೆಯನ್ನ ರೂಪಿಸುವ ಅವಕಾಶವನ್ನು ಅರುಣ್ ಯೋಗಿರಾಜ್ ಅವರಿಗೆ ನೀಡಿದ್ದಾರೆ.

ಪ್ರತಿಮೆ ಕೆತ್ತನೆ ಕಾರ್ಯ ಆರಂಭ ಯಾವಾಗ: ಇದು ಕಲ್ಲಿನ ಪ್ರತಿಮೆಯಾಗಿದ್ದು ಏಕಶಿಲಾ ಗ್ರಾನೈಟ್​ನಲ್ಲಿ ನೇತಾಜಿಯ ಪ್ರತಿಮೆ ತಲೆಯೆತ್ತಲಿದೆ. ಇದಕ್ಕಾಗಿ ವಿವಿಧ ಭಾಗಗಳ ದೊಡ್ಡ ಸಮಿತಿ ರಚನೆಯಾಗಿದೆ, ಆ ಸಮಿತಿ ಯಾವ ಶೈಲಿಯಲ್ಲಿ ಯಾವ ರೂಪದಲ್ಲಿ ಪ್ರತಿಮೆ ಇರಬೇಕು ಎಂಬ ವರದಿ ನೀಡಿದ ಬಳಿಕ ಕೆತ್ತನೆ ಕೆಲಸ ಶುರುವಾಗಲಿದ್ದು, ಮೋದಿಯವರು ಸಮಿತಿ ಹಾಗೂ ಶಿಲ್ಪ ಕಲಾವಿದ ಅರುಣ್ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ ಬಳಿಕ ಕೆಲಸ ಪ್ರಾರಂಭವಾಗಲಿದೆ.

ಕೆತ್ತನೆ ಕೆಲಸ ಸಿಕ್ಕಿದ ಬಗ್ಗೆ ಈ ಟಿವಿ ಭಾರತ ದೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಶಿಲ್ಪಿ ಅರುಣ್ ಯೋಗಿರಾಜ್, ಯಾವ ಕಲಾವಿದರಿಗೂ ಅಷ್ಟು ಸುಲಭವಾಗಿ ಇಂತಹ ಅವಕಾಶ ಸಿಗಲ್ಲ, ಇಂಡಿಯಾ ಗೇಟ್ ನೋಡಬೇಕು ಎಂಬುದು ಎಲ್ಲರ ಕನಸಾಗಿರುತ್ತದೆ. ಅಂತಹ ಜಾಗದಲ್ಲಿ ನನ್ನ ಕಲಾಕೃತಿ ಸ್ಥಾಪನೆ ಮಾಡಲು ಅವಕಾಶ ಸಿಕ್ಕಿರುವುದೇ ಒಂದು ಹೆಮ್ಮೆ. ಈ ಸಮಯದಲ್ಲಿ ನನ್ನ ತಂದೆ ಬಿ.ಎಸ್ ಯೋಗಿರಾಜ್ ಶಿಲ್ಪಿ ಅವರನ್ನು ನೆನಪಿಸಿಕೊಳ್ಳುತ್ತೇನೆ ಎಂದರು.

ಇದನ್ನೂ ಓದಿ: ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಕಾರು ನಿಲ್ಲಿಸಿದ ಪೊಲೀಸ್​.. ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೇ ಮಗು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.