ETV Bharat / state

ಬಾಲರಾಮ ಮೂಡಿ ಬಂದ ಕೃಷ್ಣ ಶಿಲೆ ಸಿಕ್ಕಿದ್ದು ಹೇಗೆ?: ಶಿಲೆಯ ವೈಶಿಷ್ಟ್ಯವೇನು? ಇಲ್ಲಿದೆ ಸಂಪೂರ್ಣ ಮಾಹಿತಿ

author img

By ETV Bharat Karnataka Team

Published : Jan 16, 2024, 6:05 PM IST

Updated : Jan 16, 2024, 6:52 PM IST

ಅಯೋಧ್ಯೆ ರಾಮಮಂದಿರಕ್ಕೆ ಆಯ್ಕೆಯಾಗಿರುವ ಶ್ರೀ ರಾಮನ ವಿಗ್ರಹ ಕೆತ್ತಿರುವ ಕೃಷ್ಣ ಶಿಲೆಯ ವೈಶಿಷ್ಟ್ಯತೆ ಬಗ್ಗೆ ಶಿಲ್ಪಿ ಅರುಣ್​ ಯೋಗಿರಾಜ್​ ಅವರ ಅಣ್ಣ ಶಿಲ್ಪಿ ಸೂರ್ಯಪ್ರಕಾಶ್​ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಅವರ ಸಂದರ್ಶನ ಇಲ್ಲಿದೆ.

Arun Yogiraj Brother Suryaprakash
ಅರುಣ್​ ಯೋಗಿರಾಜ್​ ಅವರ ಅಣ್ಣ ಸೂರ್ಯಪ್ರಕಾಶ್​

ಸೂರ್ಯಪ್ರಕಾಶ್​ ಅವರ ಸಂದರ್ಶನ

ಮೈಸೂರು: ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಜನವರಿ 22 ರಂದು ಪ್ರಾಣ ಪ್ರತಿಷ್ಠಾಪನೆಗೆ ಮೈಸೂರಿನ ಶಿಲ್ಪಿ ಅರುಣ್​ ಯೋಗಿರಾಜ್​ ಹಾಗೂ ತಂಡ ಕೆತ್ತಿರುವ ವಿಗ್ರಹ ಆಯ್ಕೆಯಾಗಿರುವುದು ಸಂತಸದ ವಿಷಯ. ವಿಗ್ರಹಕ್ಕೆ ಬಳಸಿರುವ ಶಿಲೆ ಹೆಚ್​.ಡಿ.ಕೋಟೆ ತಾಲೂಕಿನ ಗುಜ್ಜೆಗೌಡನಪುರದಲ್ಲಿ ಸಿಕ್ಕ ಕೃಷ್ಣ ಶಿಲೆ ಎನ್ನುವುದು ಮತ್ತೊಂದು ವಿಶೇಷ. ಆ ಶಿಲೆ ಸಿಕ್ಕಿದ್ದು ಹೇಗೆ? ಕೃಷ್ಣ ಶಿಲೆಯ ವೈಶಿಷ್ಟ್ಯತೆ ಏನು? ಎನ್ನುವುದರ ಬಗ್ಗೆ ಶಿಲ್ಪಿ ಅರುಣ್​ ಯೋಗಿರಾಜ್​ ಅವರ ಅಣ್ಣ ಶಿಲ್ಪಿ ಸೂರ್ಯಪ್ರಕಾಶ್​ ಅವರು ಈಟಿವಿ ಭಾರತ ಜೊತೆಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಕೃಷ್ಣ ಶಿಲೆ ಸಿಕ್ಕಿದ್ದು ಹೇಗೆ?: ಹೆಚ್.ಡಿ.ಕೋಟೆ ತಾಲೂಕಿನ ಹಾರೋಹಳ್ಳಿ ಸಮೀಪ ಗುಜ್ಜೆಗೌಡನ ಪುರ ಎಂಬಲ್ಲಿ ಇರುವ ರಾಮದಾಸ್ ಎಂಬುವರ ಕೃಷಿ ಜಮೀನಿನಲ್ಲಿ ದೊರೆತ ಕೃಷ್ಣ ಶಿಲೆಯನ್ನು ವಿಗ್ರಹ ತಯಾರಿಗೆ ಬಳಸಲಾಗಿದೆ. ಈ ಜಮೀನನಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ಪಡೆದಿರುವ ಶ್ರೀನಿವಾಸ್ ಎಂಬುವವರು ಕೆಲಸ ಮಾಡುತ್ತಿದ್ದಾಗ ಅಪರೂಪದ ಕೃಷ್ಣ ಶಿಲೆ ಸಿಕ್ಕಿತ್ತು. 2023ರ ಫೆಬ್ರುವರಿಯಲ್ಲಿ ಕಲ್ಲುಗಳು ದೊರಕಿದ್ದವು. ಅದೇ ಸಂದರ್ಭದಲ್ಲಿ ಅಯೋಧ್ಯೆಯ ಶ್ರೀ ರಾಮನ ವಿಗ್ರಹಕ್ಕೆ ಕಲ್ಲುಗಳನ್ನು ಹುಡುಕುತ್ತಿದ್ದರು. ಜಮೀನಿನ ಮಾಲೀಕ ನಟರಾಜ್ ಎಂಬುವವರ ತಂದೆ ಅರುಣ್ ಯೋಗಿರಾಜ್ ಅವರ ತಂದೆಯ ಸ್ನೇಹಿತರಾಗಿದ್ದು, ಕಲ್ಲು ಸಿಕ್ಕ ವಿಚಾರವನ್ನು ಅವರಿಗೆ ತಿಳಿಸಿದ್ದರು.

ತಕ್ಷಣ ಅರುಣ್​ ಯೋಗಿರಾಜ್​ ಈ ವಿಚಾರವನ್ನು ಶಿಲ್ಪಿಗಳಾದ ಮಾನಯ್ಯ ಬಡಿಗೇರ್ ಹಾಗೂ ಸುರೇಂದ್ರ ಶರ್ಮಾ ಅವರಿಗೆ ತಿಳಿಸಿದ್ದರು. ಅವರು ಸ್ಥಳಕ್ಕೆ ಬಂದು ಕಲ್ಲುಗಳನ್ನು ಪರಿಶೀಲನೆ ಮಾಡಿದಾಗ ಆ ಕಲ್ಲುಗಳು ಕೃಷ್ಣ ಶಿಲೆಯಾಗಿದ್ದು, ವಿಗ್ರಹ ಮಾಡಲು ಅನುಕೂಲವಾಗಿವೆ ಎಂದು ತೀರ್ಮಾನಿಸಿದ್ದರು. ಆನಂತರ 2023ರ ಫೆಬ್ರವರಿ 9 ರಂದು 17 ಟನ್ ತೂಕದ 5 ಕೃಷ್ಣ ಶಿಲೆಗಳನ್ನು ಅಯೋಧ್ಯೆಗೆ ಕಳುಹಿಸಲಾಗಿತ್ತು. ಬಾಲರಾಮ, ಸೀತಾಮಾತೆ ಹಾಗೂ ಲಕ್ಷ್ಮಣರ ವಿಗ್ರಹಗಳ ಕೆತ್ತನೆಗೆ ಬಳಸಲು ತೆಗೆದುಕೊಂಡು ಹೋಗಲಾಗಿತ್ತು. ಗಣಿ ಗುತ್ತಿಗೆ ಪಡೆದಿದ್ದ ಶ್ರೀನಿವಾಸ್ ಎಂಬುವವರು ಉಚಿತವಾಗಿ ಈ ಕಲ್ಲುಗಳನ್ನು ಶ್ರೀ ರಾಮ ಮಂದಿರ ಟ್ರಸ್ಟ್​ಗೆ ಕಳುಹಿಸಿಕೊಟ್ಟಿದ್ದರು. ಉಚಿತವಾಗಿ ಕೃಷ್ಣ ಶಿಲೆಯನ್ನು ನೀಡಿರುವ ಬಗ್ಗೆ ಸ್ವತಃ ಗಣಿ ಗುತ್ತಿಗೆದಾರ ಶ್ರೀನಿವಾಸ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಸೂರ್ಯಪ್ರಕಾಶ್​ ಅವರ ಸಂದರ್ಶನ

ಸೂರ್ಯಪ್ರಕಾಶ್​ ಅವರು ಮಾತನಾಡಿ, "ತಮ್ಮನ ಕೈಯಲ್ಲಿ ಮೂಡಿ ಬಂದ ಕೃಷ್ಣ ಶಿಲೆಯು ಬಾಲರಾಮ ಅಯೋಧ್ಯೆಯ ರಾಮ ಮಂದಿರಕ್ಕೆ ಆಯ್ಕೆಯಾಗಿದ್ದು ಹೆಮ್ಮೆ ಅನಿಸುತ್ತದೆ. ಒಬ್ಬ ಶಿಲ್ಪಿಗೆ ಜೀವನದಲ್ಲಿ ಇಂತಹ ಕೆಲಸ ಸಿಗುವುದೇ ಅಪರೂಪ, ಅಂತಹ ಕೆಲಸ ನನ್ನ ತಮ್ಮನಿಗೆ ಸಿಕ್ಕಿದೆ. ಅದರಲ್ಲೂ ಆತನ ಕೈಯಲ್ಲಿ ಅರಳಿದ ಬಾಲರಾಮ ಆಯ್ಕೆಯಾಗಿದ್ದು ಇನ್ನೂ ಸಂತಸ ತಂದಿದೆ " ಎಂದು ಹೇಳಿದರು.

ಕೃಷ್ಣ ಶಿಲೆಯ ವೈಶಿಷ್ಟ್ಯತೆ ಏನು?: "ಕೃಷ್ಣ ಶಿಲೆ ಎನ್ನುವುದು ಹೆಚ್.ಡಿ.ಕೋಟೆ ಭಾಗದಲ್ಲೇ ಸಿಗುವಂತಹ ಕಲ್ಲು. ರೂಢಿಗೆ ಇದನ್ನು ಬಳಪದ ಕಲ್ಲು ಎಂದು ಹೇಳುತ್ತಾರೆ. ಈ ಕಲ್ಲು 9*9 ಇಂಚು ಅಥವಾ 1*1 ಅಡಿ ಚದರದ ಒಳಗಿನ ಅಳತೆಯಲ್ಲಿ ಮಾತ್ರ ಸಿಗುತ್ತದೆ. ಬಳಪದ ಕಲ್ಲು ತೀರ ನುಣುಪಾಗಿದ್ದು, ಕೈಯ್ಯಲಿ ಕೆರೆದರೂ ಬರುತ್ತದೆ. ಅದೇ ಶೈಲಿಯಲ್ಲಿ ಹೋಲುವಂತಹದ್ದು ಕೃಷ್ಣ ಶಿಲೆ. ಕೃಷ್ಣ ಎಂದರೆ ನೀಲಿ ವರ್ಣ. ಇದು ಆಸಿಡ್ ಪ್ರೂಫ್, ವಾಟರ್ ಪ್ರೂಫ್, ಫೈರ್ ಫ್ರೂಫ್, ಡಸ್ಟ್ ಪ್ರೂಫ್ ಆಗಿದ್ದು, ಕಬ್ಬಿಣಕ್ಕಿಂತಲೂ ಗಟ್ಟಿ. ಯಾವುದೇ ಅಂಶಕ್ಕೂ ಈ ಕಲ್ಲು ಬಗ್ಗಲ್ಲ. ಇವತ್ತು ಅದಕ್ಕೆ ಸಾಕ್ಷಿಯಾಗಿ, ನಮ್ಮ ಬೇಲೂರು, ಹಳೇಬೀಡು ಹಾಗೂ ಸೋಮನಾಥ ದೇವಾಲಯಗಳ ಶಿಲ್ಪಗಳಿವೆ. ಭೂಮಿಯ ಒಳಗಡೆ 50 ರಿಂದ 60 ಅಡಿ ಕೆಲಗಡೆ ಇರುವ ಕಲ್ಲು ಇದು. ಈ ಕೃಷ್ಣ ಶಿಲೆ ಹೆಚ್​.ಡಿ.ಕೋಟೆ ತಾಲೂಕಿನ ಹಾರೋಹಳ್ಳಿ ಹಾಗೂ ಗುಜ್ಜೇಗೌಡನ ಪುರ ಭಾಗದಲ್ಲಿ ಸಿಗುತ್ತವೆ" ಎಂದು ತಿಳಿಸಿದರು.

"ಈ ಕಲ್ಲುಗಳು ಸಿಕ್ಕರೆ ಯಾವುದೇ ರೀತಿ ಡ್ಯಾಮೇಜ್ ಮಾಡದ ಹಾಗೆ ಮಣ್ಣಿನಿಂದ ಬೇರ್ಪಡಿಸಬೇಕು. ಆ ರೀತಿ ಬೇರ್ಪಡಿಸಿದ ಕಲ್ಲುಗಳನ್ನು ಶಿಲ್ಪ ಕೆತ್ತಲು ಬಳಸುತ್ತಾರೆ. ಈಗ ಬಾಲರಾಮ ಮೂರ್ತಿ ಕೆತ್ತಿರುವ ಕೃಷ್ಣ ಶಿಲೆ ಗಣಿ ಗುತ್ತಿಗೆದಾರ ಶ್ರೀನಿವಾಸ್ ಎಂಬುವವರು ಇದನ್ನು ಉಚಿತವಾಗಿ ನೀಡಿದ್ದಾರೆ. ನಮ್ಮ ಕುಟುಂಬದ ಕಸುಬು ಐದು ತಲೆಮಾರುಗಳಿಂದ ಇದೆ. ನಮ್ಮ ತಾತ ಅರಮನೆಯ ಒಳಗಿರುವ ಚಾಮುಂಡೇಶ್ವರಿ, ಭುವನೇಶ್ವರಿ, ರಾಜೇಶ್ವರಿ ಹಾಗೂ ಗಾಯತ್ರಿ ದೇವಿ ದೇವಸ್ಥಾನ ನಿರ್ಮಾಣ ಮಾಡಿದ್ದರು. ಶ್ರದ್ಧೆ ಭಕ್ತಿಯಿಂದ ಕೆಲಸ ಮಾಡಿದರೆ ಯಶಸ್ಸು ಖಚಿತ, ಇದಕ್ಕೆ ನನ್ನ ತಮ್ಮ ಅರುಣ್ ಯೋಗಿರಾಜ್ ಸಾಕ್ಷಿ" ಎಂದು ವಿವರಿಸಿದರು.

ಇದನ್ನೂ ಓದಿ: ಶ್ರೀರಾಮ ಮೂರ್ತಿ ಕೆತ್ತನೆಯಲ್ಲಿ ವಿಟ್ಲದ ಚಿದಾನಂದ ಆಚಾರ್ಯ: 'ಅಳಿಲು ಸೇವೆಯ ಧನ್ಯತೆ'

Last Updated : Jan 16, 2024, 6:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.