ETV Bharat / state

ಡಿ.ಕೆ.ರವಿ ಕುರಿತು ಸಿನಿಮಾ ಮಾಡುವುದಾಗಿ ಪರೋಕ್ಷ ಹೇಳಿಕೆ ನೀಡಿದ ಶಾಸಕ ಸಾ.ರಾ.ಮಹೇಶ್

author img

By

Published : Jun 9, 2021, 1:24 PM IST

Updated : Jun 9, 2021, 2:02 PM IST

ರೋಹಿಣಿ ಸಿಂಧೂರಿ ಬಯೋಪಿಕ್​​ ನಿರ್ಮಾಣ ಸುದ್ದಿ ಚರ್ಚೆಯಲ್ಲಿರುವ ವೇಳೆ ಶಾಸಕ ಸಾ.ರಾ.ಮಹೇಶ್ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ.

sa ra mahesh
ಶಾಸಕ ಸಾ.ರಾ. ಮಹೇಶ್

ಮೈಸೂರು: ಬಡ ರೈತನ ಮಗ ಕಷ್ಟಪಟ್ಟು IAS ಮಾಡಿ ನಂತರ ಆತನ ನಿಗೂಢ ಆತ್ಮಹತ್ಯೆಯ ಬಗ್ಗೆ ಸಿಬಿಐ ವರದಿಯನ್ನು ತೆಗೆದುಕೊಂಡು ಸಿನಿಮಾ ಮಾಡುತ್ತೇನೆ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದ್ದಾರೆ.

ನಿರ್ಗಮಿತ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕುರಿತು ಮಂಡ್ಯದ ವ್ಯಕ್ತಿಯೊಬ್ಬರು ಚಲನಚಿತ್ರ ನಿರ್ಮಾಣ ಮಾಡಲು ಹೊರಟಿದ್ದಾರೆ. ಆ ಚಿತ್ರ ಬಿಡುಗಡೆಯಾದ ನಂತರ ಒಬ್ಬ ಬಡ ರೈತನ ಮಗ ಕಷ್ಟಪಟ್ಟು ಐ.ಎ.ಎಸ್.‌ ಅಧಿಕಾರಿಯಾಗಿ ಅವರು ಹೇಗೆ ಸಾವನ್ನಪಿದರು ಎಂಬ ಕುರಿತು ಸಿ.ಬಿ.ಐ. ವರದಿಯನ್ನಾಧರಿಸಿ ನಾನೇ ಸಿನಿಮಾ ನಿರ್ಮಾಣ ಮಾಡುತ್ತೇನೆ ಎಂದು ಸಾ.ರಾ.ಮಹೇಶ್, ಡಿ.ಕೆ.ರವಿಯ ಸಾವಿನ ಕುರಿತು ಸಿನಿಮಾ ಮಾಡುವುದಾಗಿ ಪರೋಕ್ಷವಾಗಿ ಹೇಳಿಕೆ ನೀಡಿದರು.

ಶಾಸಕ ಸಾ.ರಾ. ಮಹೇಶ್

ಸುದೀರ್ಘ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಹಿಣಿ ಸಿಂಧೂರಿ ವಿರುದ್ಧ ವಾಗ್ದಾಳಿ ನಡೆಸಿದರು. 7 ತಿಂಗಳು ಜಿಲ್ಲಾಧಿಕಾರಿಯಾಗಿದ್ದು, ಒತ್ತುವರಿಯಾಗಿದ್ದ ಒಂದೇ ಒಂದು ಗುಂಟೆಯನ್ನು ತೆರವು ಮಾಡಿಸಿಲ್ಲ. ನೀವೇ ಸೃಷ್ಟಿಸಿಕೊಂಡಿರುವ ಸಾಮಾಜಿಕ ಜಾಲತಾಣಗಳಲ್ಲಿ ಬಿಲ್ಡ್ ಆಪ್ ಕೊಡುತ್ತಿದ್ದೀರಿ. ಜನರನ್ನು ದಿಕ್ಕು ತಪ್ಪಿಸುತ್ತಿದ್ದೀರಿ ಎಂದು ಆರೋಪಿಸಿದರು.

ಹತ್ತು ಅಂಶಗಳಿರುವ ಆರೋಪಗಳನ್ನೊಳಗೊಂಡ ಪತ್ರಗಳನ್ನು ಸಿಎಂಗೆ ಬರೆದಿದ್ದು, ಅದರಲ್ಲಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆ ಮಾಡಿಸಬೇಕೆಂದಿದ್ದಾರೆ. ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡುವುದಾಗಿ ಹೇಳಿದ ಸಾ.ರಾ. ಮಹೇಶ್​​, ಪಾರಂಪರಿಕ ಜಿಲ್ಲಾಧಿಕಾರಿಯ ನಿವಾಸದ ಒಳಗೆ ಯಾವುದೇ ಅನುಮತಿ ಪಡೆಯದೇ ಈಜುಕೊಳ ಮತ್ತು ಜಿಮ್ ಅನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಈ ಹಿಂದೆ ಜಿಲ್ಲಾಧಿಕಾರಿಗಳ ಮನೆಯ ವಿದ್ಯುತ್ ಬಿಲ್‌ 3 ರಿಂದ 7 ಸಾವಿರದವರೆಗೆ ಬರುತ್ತಿತ್ತು. ಆದರೆ "ದಿ ಗ್ರೇಟ್ ಲೇಡಿ ಸಿಗಂ" ಸಿಂಧೂರಿ ವಾಸವಿದ್ದ ಮನೆಯ ಮೇ ತಿಂಗಳ‌ ವಿದ್ಯುತ್ ಬಿಲ್ 50 ಸಾವಿರ ರೂ. ಬಂದಿದೆ, ಹೇಗಿದೆ ನೋಡಿ ಇವರ ದರ್ಬಾರ್ ಎಂದು ವಾಗ್ದಾಳಿ ನಡೆಸಿದರು. ಮೊದಲು ಸಿಂಧೂರಿಯನ್ನು ಅಮಾನತು ಮಾಡಿ ನಂತರ ತನಿಖೆ ನಡೆಸಿ ಎಂದರು.

ಕೋವಿಡ್ ನಿರ್ವಹಣೆಯಲ್ಲಿ ಸಿಂಧೂರಿ ಸಂಪೂರ್ಣ ವಿಫಲವಾಗಿದ್ದಾರೆ. ಜಿಲ್ಲೆಯಲ್ಲಿ 5 ಸಾವಿರ ಜನರು ಸಾವನ್ನಪ್ಪಿದ್ದು, ಕೇವಲ 3 ಸಾವಿರ ಸಾವಾಗಿದೆ ಎಂದು ತೋರಿಸಿದ್ದಾರೆ. ಸರಿಯಾಗಿ ಕ್ರಮ ಕೈಗೊಂಡಿದ್ದರೆ 1 ಸಾವಿರ ಜನರ ಸಾವನ್ನು ತಪ್ಪಿಸಬಹುದಿತ್ತು ಎಂದು ಸಿದ್ದರಾಮಯ್ಯ ಆರೋಪಕ್ಕೆ ತನಿಖೆ ನಡೆಸಲಿ ಎಂದು ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ: 'ಭಾರತ ಸಿಂಧೂರಿ': ಬಯೋಪಿಕ್‌ ಆಗಿ ಬರಲಿದೆ ರೋಹಿಣಿ ಸಿಂಧೂರಿ ಜೀವನಕಥೆ

ಜೂನ್-11 ರಂದು ನಡೆಯಲಿರುವ ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಲು ನಾವು ಸಿದ್ಧರಿದ್ದೇವೆ. ಆದರೆ ಮುಂದಿನ 2 ವರ್ಷ ಜೆ.ಡಿ.ಎಸ್.ಗೆ ಮೇಯರ್ ಸ್ಥಾನ ಕೊಡಬೇಕು. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಜೆಡಿಎಸ್ ಜೊತೆ ಮಾತನಾಡಬೇಕು. ಇಲ್ಲದಿದ್ದರೆ ನಾವು ನಮ್ಮ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತೇವೆ ಎಂದು ಸಾ.ರಾ.ಮಹೇಶ್ ಹೇಳಿದರು.

Last Updated : Jun 9, 2021, 2:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.