ETV Bharat / state

ಆತ್ಮಹತ್ಯೆಗೆ ಶರಣಾದ ರೈತನ ಕುಟುಂಬಕ್ಕೆ ಸರ್ಕಾರದಿಂದ ₹5 ಲಕ್ಷ ಪರಿಹಾರ: ಯತೀಂದ್ರ

author img

By ETV Bharat Karnataka Team

Published : Nov 20, 2023, 3:44 PM IST

Updated : Nov 20, 2023, 4:33 PM IST

ಜಮೀನು ಪಡೆದ ಕಂಪನಿ ಉದ್ಯೋಗ ನೀಡಿಲ್ಲ ಎಂದು ಮನನೊಂದು ಯುವ ರೈತ ಆತ್ಮಹತ್ಯೆ ಮಾಡಿಕೊಂಡಿದ್ದು, ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

ತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ಪರಿಹಾರ
ತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ಪರಿಹಾರ

ಪರಿಹಾರ ಕೊಡಿಸುವುದಾಗಿ ಯತೀಂದ್ರ ಸಿದ್ದರಾಮಯ್ಯ ಭರವಸೆ

ಮೈಸೂರು: ಜಮೀನು ಪಡೆದು ಉದ್ಯೋಗ ನೀಡದ ಕಾರ್ಖಾನೆಯ ವಿರುದ್ಧ ಮನನೊಂದ ಯುವ ರೈತ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಶವಾಗಾರದ ಬಳಿ ರೈತರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಗ ಯತೀಂದ್ರ ಸಿದ್ದರಾಮಯ್ಯ ಭೇಟಿ ನೀಡಿದ್ದರು. ಪ್ರತಿಭಟನಾನಿರತ ರೈತರ ಜೊತೆ ಮಾತುಕತೆ ನಡೆಸಿ, ಸರ್ಕಾರದಿಂದ ನೀಡುವ 5 ಲಕ್ಷ ರೂಪಾಯಿ ಪರಿಹಾರವನ್ನು ಹಾಗೂ ಕಾರ್ಖಾನೆ ಮತ್ತು ಕೆಐಡಿಬಿಯಿಂದಲೂ ಸಹ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

ನಂಜನಗೂಡು ಕೈಗಾರಿಕಾ ಪ್ರದೇಶದ ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಡಕನಹಳ್ಳಿ ಗ್ರಾಮದ ಯುವ ರೈತ ಸಿದ್ದರಾಜು ಕೈಗಾರಿಕೆ ಸ್ಥಾಪನೆಗೆ ಭೂಮಿ ನೀಡಿದ್ದಾರೆ. ಆದರೆ, ಕೈಗಾರಿಕೆಯವರು ಉದ್ಯೋಗ ನೀಡದೇ ಸತಾಯಿಸುತ್ತಿದ್ದಾರೆಂದು ಆರೋಪಿಸಿ ರೈತ ಸಿದ್ದರಾಜು ಪ್ರತಿಭಟನೆ ನಡೆಸಿದ್ದರು. ಇದಕ್ಕೂ ಬಗ್ಗದ ಕಾರ್ಖಾನೆಯವರು ರೈತ ಕುಟುಂಬದ ವಿರುದ್ಧವೇ ಐದಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲು ಮಾಡಿದ್ದರು. ಇದರಿಂದ ಮನನೊಂದ ಯುವ ರೈತ ಸಿದ್ದರಾಜು ಕಳೆದ ರಾತ್ರಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮೃತದೇಹ ಮೈಸೂರಿನ ಕೆ ಆರ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಅಲ್ಲಿ ರೈತ ಸಂಘದ ಮುಖಂಡರು ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಗ ಯತೀಂದ್ರ ಸಿದ್ದರಾಮಯ್ಯ ಪ್ರತಿಭಟನೆ ನಡೆಸುತ್ತಿದ್ದ ರೈತರ ಜೊತೆ ಮಾತುಕತೆ ನಡೆಸಿದ್ದಾರೆ. ಬಳಿಕ ಸರ್ಕಾರದಿಂದ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ಘೋಷಣೆ ಮಾಡಿದ್ದಾರೆ.

ಬಳಿಕ ಮೃತ ಯುವರೈತನ ಪತ್ನಿಗೆ ಸಾಂತ್ವನ ಹೇಳಿ ಮಾಧ್ಯಮಗಳ ಜೊತೆ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ಕಾರ್ಖಾನೆ ಸ್ಥಾಪನೆಗೆ ರೈತರಿಂದ ಜಮೀನು ಪಡೆದು ಕೆಐಎಡಿಬಿಯವರು ಕಾರ್ಖಾನೆಗಾಗಿ ಜಮೀನನ್ನು ನೀಡಿದ್ದಾರೆ. ಆ ಜಮೀನಿನಲ್ಲಿ ಕಂಪನಿಯವರು ಕಾರ್ಖಾನೆ ಕಟ್ಟಿಸಿದ್ದು, ಕಾನೂನು ಪ್ರಕಾರ ಜಮೀನು ನೀಡಿದ ರೈತ ಕುಟುಂಬದವರಿಗೆ ಕೆಲಸ ನೀಡಬೇಕು. ಆದರೆ, ಕೆಲ ಕಾರ್ಖಾನೆಯವರು ಕೆಲಸ ನೀಡಿಲ್ಲ. ಈ ಸಂಬಂಧ ರೈತ ಪ್ರತಿಭಟನೆ ನಡೆಸಿ ಕೆಲಸ ನೀಡದ ಹಿನ್ನೆಲೆಯಲ್ಲಿ ದುಡುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಎಲ್ಲಾ ವಿಷಯಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಎಂದು ಯತೀಂದ್ರ ಸಿದ್ದರಾಮಯ್ಯ ಮಾಹಿತಿ ನೀಡಿದರು.

ರೈತ ಮುಖಂಡ ಹೊಸಕೋಟೆ ಕುಮಾರ್ ಆಗ್ರಹ

ರೈತ ಮುಖಂಡ ಹೊಸಕೋಟೆ ಕುಮಾರ್ ಈಟಿವಿ ಭಾರತ್ ಜೊತೆ ಮಾತನಾಡಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಸಿದ್ದರಾಜು ಕಳೆದ ನಾಲ್ಕು ವರ್ಷಗಳಿಂದ ಕಂಪನಿಯಲ್ಲಿ ಕೆಲಸ ಕೊಡಬೇಕು ಎಂದು ಜಿಲ್ಲಾಡಳಿತ ಆದೇಶ ಮಾಡಿದ್ದರು ಕೆಲಸ ನೀಡಿರಲಿಲ್ಲ. ಇದರ ವಿರುದ್ಧ ಕಾರ್ಖಾನೆಯ ಮುಂದೆ ಕುಟುಂಬ ಸಮೇತ ಪ್ರತಿಭಟನೆ ನಡೆಸಿದ್ದರು. ಈ ಸಂಬಂಧ ಕುಟುಂಬದವರ ಮೇಲೆ ಕೇಸ್​ ಗಳನ್ನು ದಾಖಲು ಮಾಡಲಾಗಿದೆ. ಈ ಎಲ್ಲಾ ಬೆಳವಣಿಗೆಗಳಿಂದ ಮನನೊಂದ ಸಿದ್ದರಾಜು, ಕಾರ್ಖಾನೆಯ ಎಚ್ ಆರ್ ಹಾಗೂ ಮತ್ತೊಬ್ಬ ವ್ಯಕ್ತಿಯ ಹೆಸರನ್ನು ಉಲ್ಲೇಖ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೂಡಲೇ ಡೆತ್ ನೋಟ್ ನಲ್ಲಿ ನಮೂದಾಗಿರುವ ವ್ಯಕ್ತಿಗಳನ್ನು ಬಂಧಿಸಬೇಕು ಎಂದು ಇದೇ ವೇಳೆ ಕುಮಾರ್​​ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಒಂದು ವರ್ಷ: ಆಟೋ ಚಾಲಕನಿಗೆ ಇನ್ನೂ ಸಿಗದ ಪರಿಹಾರ

Last Updated :Nov 20, 2023, 4:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.