ETV Bharat / state

ಅಂತರ್ಜಲ ಮಟ್ಟ ಅಭಿವೃದ್ಧಿ ಪಡಿಸಿ ಕುಡಿವ ನೀರಿನ ಕೊರತೆಯಾಗದಂತೆ ಕ್ರಮವಹಿಸಿ: ಪ್ರಿಯಾಂಕ ಖರ್ಗೆ

author img

By ETV Bharat Karnataka Team

Published : Nov 3, 2023, 10:08 PM IST

ಮುಂದಿನ 6 ತಿಂಗಳುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬರುವ ಗ್ರಾಮಗಳನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸಚಿವ ಪ್ರಿಯಾಂಕ್​ ಖರ್ಗೆ ಸೂಚಿಸಿದ್ದಾರೆ.

ಪ್ರಗತಿ ಪರಿಶೀಲನಾ ಸಭೆ
ಪ್ರಗತಿ ಪರಿಶೀಲನಾ ಸಭೆ

ಮೈಸೂರು: ಕಾವೇರಿ, ಕಪಿಲಾ ನದಿಗಳು ಹರಿಯುವ ಜಿಲ್ಲೆ ಮೈಸೂರು ಆಗಿದ್ದು, ಇಲ್ಲಿ ನೀರಿನ ಲಭ್ಯತೆ ಹೆಚ್ಚಿದೆ. ಸಿಗುವ ನೀರನ್ನು ಇಂಗಿಸುವ ಮೂಲಕ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟವನ್ನು ಅಭಿವೃದ್ಧಿ ಪಡಿಸಿ, ಇದರಿಂದ ಕುಡಿಯುವ ನೀರಿನ ಕೊರತೆ ಆಗುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ ಖರ್ಗೆ ಅವರು ತಿಳಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಬರ ಇದೆ. ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಬೇಕು. ಮುಂದಿನ 6 ತಿಂಗಳುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬರುವ ಗ್ರಾಮಗಳನ್ನು ಗುರುತಿಸಿ, ಕುಡಿಯುವ ನೀರು ಪೂರೈಸುವ ಕ್ರಮಗಳನ್ನು ಗುರುತಿಸಿಕೊಳ್ಳಿ. ಸಮಸ್ಯೆ ಇರುವ ಗ್ರಾಮಗಳನ್ನು ಗುರುತಿಸುವ ಮುನ್ನ ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನರೇಗಾ ಅಡಿ ಮಾನವ ದಿನಗಳ ಸೃಜನೆಯಲ್ಲಿ ಟಿ.ನರಸೀಪುರ, ನಂಜನಗೂಡು ಹಾಗೂ ಪಿರಿಯಾಪಟ್ಟಣ ತಾಲ್ಲೂಕುಗಳು ಶೇ 50ಕ್ಕಿಂತ ಕಡಿಮೆ ಇದೆ. ಈ ಬಾರಿ ಎಲ್ಲ ಕಡೆ ಬರ ಇದೆ. ನರೇಗಾ ಯೋಜನೆಯಡಿ ಹೆಚ್ಚು ಮಾನವ ದಿನಗಳ ಕೆಲಸ ಆಗಬೇಕಿತ್ತು. ರಾಜ್ಯದಲ್ಲಿ 13 ಕೋಟಿ ಮಾನವ ದಿನಗಳ ಗುರಿ ಇತ್ತು. ಇದರಲ್ಲಿ 10 ಕೋಟಿ ಮಾನವ ದಿನಗಳ ಗುರಿ ಸಾಧಿಸಿದ್ದೇವೆ. ಆದರೆ, ಜಿಲ್ಲೆಯಲ್ಲಿ ಪ್ರಗತಿ ಉತ್ತಮವಾಗಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.

34 ಲಕ್ಷ ಮಾನವ ದಿನಗಳ ಗುರಿ: ಮೈಸೂರು ಜಿಲ್ಲೆಯಲ್ಲಿ 34 ಲಕ್ಷ ಮಾನವ ದಿನಗಳ ಗುರಿ ನಿಗದಿಪಡಿಸಲಾಗಿದೆ. ಆರ್ಥಿಕ ವರ್ಷದ ಅಂತ್ಯದೊಳಗೆ ಈ ಗುರಿ ಸಾಧಿಸಬೇಕು. ನಂಜನಗೂಡು, ಚಾಮುಂಡಿ ಬೆಟ್ಟದ ವ್ಯಾಪ್ತಿ ಹಾಗೂ ಜಿಲ್ಲೆಯ ಇತರೆ ಕಡೆ ಸೈಕಲ್ ಅಗರಬತ್ತಿ ಅವರೊಂದಿಗೆ ಎನ್ಆರ್​ಎಲ್​ಎಂ ಯೋಜನೆಯಡಿ ಟೈ ಅಪ್ ಆಗಿ, ಗುಡಿ ಕೈಗಾರಿಕೆಗಳನ್ನು ಉತ್ತೇಜಿಸುವ ಯೋಜನೆಗಳನ್ನು ರೂಪಿಸಲಾಗುವುದು. ಮೈಸೂರು ಜಿಲ್ಲೆ ಪ್ರವಾಸಿ ತಾಣಗಳನ್ನು ಹೆಚ್ಚು ಹೊಂದಿದ್ದು, ಇಲ್ಲಿ ಇರುವ ಪುರಾತನ ಕಲ್ಯಾಣಿಗಳನ್ನು ನರೇಗಾ ಯೋಜನೆಯಡಿ ಸ್ವಚ್ಛಗೊಳಿಸಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.

ಗ್ರಾಮ ಪಂಚಾಯಿತಿಗಳಲ್ಲಿ ಕಾಮಗಾರಿಗಳಲ್ಲಿ ಅಕ್ರಮಗಳು ಆಗಿರುವ ಕುರಿತು ಸೋಷಿಯಲ್ ಆಡಿಟ್​ನಲ್ಲಿ ರಿಕವರಿಗೆ ಬರೆದಿರುವ ಮೊತ್ತವನ್ನು ಸಂಬಂಧಿಸಿದ ಅಧಿಕಾರಿಗಳಿಂದ ವಸೂಲಿ ಮಾಡಬೇಕು. ಬ್ಯಾಂಬೋ ಕಲ್ಟಿವೇಶನ್ ಅನ್ನು ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ, ಹುಣಸೂರು, ಪಿರಿಯಾಪಟ್ಟಣ ತಾಲೂಕಿನ ಅರಣ್ಯ ಪ್ರದೇಶಗಳಲ್ಲಿ ಮಾಡಲು ಅವಕಾಶವಿದೆ. ನರೇಗಾ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳಲ್ಲಿ ಶೇಕಡಾ 20 ರಷ್ಟು ಕಾಮಗಾರಿಗಳು ಬಾಕಿ ಉಳಿದಿವೆ. ಇವುಗಳನ್ನು ಪೂರ್ಣಗೊಳಿಸಲು ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.

ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಸೂಚನೆ: ಜಲಜೀವನ್ ಮಿಷನ್ ಯೋಜನೆಯಡಿ ಏಕ ಗ್ರಾಮ ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಹಂತ 1 ರಿಂದ 4 ಹಂತಗಳ ಕಾಮಗಾರಿಗಳು ಬಾಕಿ ಉಳಿದಿವೆ. ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಗುಣಮಟ್ಟದಲ್ಲಿ ಕಾಮಗಾರಿಗಳನ್ನು ಮುಗಿಸದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಎಂದು ತಿಳಿಸಿದರು.

ತೆರಿಗೆ ವಸೂಲಾತಿ ಹೆಚ್ಚಿಸಲು ಸೂಚನೆ: ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ವಸೂಲಾತಿಯು ಸಮರ್ಪಕವಾಗಿ ಆಗಿಲ್ಲ. ತೆರಿಗೆ ವಸೂಲಾತಿಯಲ್ಲಿ ನಿಗದಿತ ಗುರಿ ಮುಟ್ಟಿಲ್ಲ. ಇದರಿಂದ ಗ್ರಾಮ ಪಂಚಾಯಿತಿಗಳಲ್ಲಿ ಸಿಬ್ಬಂದಿಗಳ ಸಂಬಳ ನೀಡಲು ಕೊರತೆ ಉಂಟಾಗುತ್ತಿದೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಿ ತೆರಿಗೆ ವಸೂಲಾತಿ ಹೆಚ್ಚಿಸಬೇಕು ಎಂದು ಸೂಚನೆ ನೀಡಿದರು. ಸಾರ್ವಜನಿಕರಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ದೂರು ಬಂದಾಗ ಪರಿಶೀಲನೆ ನಡೆಸಬೇಕು. ನವೆಂಬರ್ 20ರೊಳಗೆ ಇಲಾಖಾ ವಿಚಾರಣೆ ಪ್ರಕರಣಗಳನ್ನು ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಲಾಗಿದೆ. 15ನೇ ಹಣಕಾಸು ಯೋಜನೆಯಡಿ ಜಿಲ್ಲೆಯಲ್ಲಿ 78 ಕೋಟಿ ಬಳಕೆಯಾಗದ ಅನುದಾನ ಬಾಕಿ ಉಳಿದಿದೆ. ಶಾಸಕರ ಗಮನಕ್ಕೆ ತಂದು ಈ ಹಣವನ್ನು ಅಗತ್ಯವಾದ ಕಾಮಗಾರಿಗಳಿಗೆ ಬಳಕೆ ಮಾಡುವಂತೆ ಸೂಚನೆ ನೀಡಿದರು. ಗ್ರಾಮ ಪಂಚಾಯತ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಕಡ್ಡಾಯವಾಗಿ ಇ ಅಟೆಂಡೆನ್ಸ್ ಹಾಕಬೇಕು ಎಂದು ಸೂಚನೆ ನೀಡಿದರು.

ಇದನ್ನೂ ಓದಿ: ನಮ್ಮ ಸರ್ಕಾರದಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ : ಸಚಿವ ಕೃಷ್ಣ ಬೈರೇಗೌಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.