ರಾಜಮನೆತನದ ಆನೆಗಳನ್ನು ಗುಜರಾತ್​ಗೆ ಕಳುಹಿಸಲು ಪ್ರಮೋದಾ ದೇವಿ ನಿರ್ಧರಿಸಿದ್ದೇಕೆ?

author img

By

Published : Sep 22, 2021, 4:49 PM IST

ಮೈಸೂರು ರಾಜಮನೆತನದ ಆನೆ

ಅರಮನೆಯ ರಾಜಪರಂಪರೆಯ ಪ್ರತೀಕ ಹಾಗೂ ಶರನ್ನವರಾತ್ರಿಯ ಸಂದರ್ಭದಲ್ಲಿ ಪೂಜೆಗಳಿಗೆ ಬಳಸಲಾಗುವ ರಾಜಮನೆತನದ ಹೆಣ್ಣಾನೆಗಳನ್ನು ಕಳೆದ ಹಲವಾರು ವರ್ಷಗಳಿಂದ ರಾಜಮನೆತನದವರು ಸಾಕುತ್ತಾ ಬಂದಿದ್ದರು.ಆದರೆ ಇತ್ತೀಚೆಗೆ ಈ ಆನೆಗಳು ಯಾವುದೇ ಚಟುವಟಿಕೆ ಇಲ್ಲದೇ ಕಟ್ಟಿದ ಜಾಗದಲ್ಲೇ ಕಟ್ಟಿರುವುದರಿಂದ ಖಿನ್ನತೆಗೆ ಒಳಗಾಗಿರುವ ಬಗ್ಗೆ ಆತಂಕ ಉಂಟಾಗಿದೆ.

ಮೈಸೂರು: ರಾಜಮನೆತನಕ್ಕೆ ಸೇರಿದ 6 ಆನೆಗಳ ಪೈಕಿ 4 ಆನೆಗಳನ್ನು ಗುಜರಾತ್​ನ ರಾಧಾಕೃಷ್ಣ ದೇವಾಲಯಕ್ಕೆ ನೀಡಲು ಮಹಾರಾಣಿ ಪ್ರಮೋದಾ ದೇವಿ ಒಡೆಯರ್ ಒಪ್ಪಿಗೆ ನೀಡಿದ್ದಾರೆ.

ಮೈಸೂರು ರಾಜಮನೆತನದವರು ಹಿಂದಿನಿಂದಲೂ ದಸರಾ ಸಂದರ್ಭದಲ್ಲಿ ನಡೆಯುವ ಶರನ್ನವರಾತ್ರಿಯ 10 ದಿನಗಳ ಕಾಲ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವ ಸಂದರ್ಭದಲ್ಲಿ ಆನೆಗಳಿಗೂ ಸಹ ಪೂಜೆ ಸಲ್ಲಿಸುತ್ತಿದ್ದರು. ಆ ನಂತರ ಈ ಆನೆಗಳನ್ನು ಅರಮನೆಗೆ ಭೇಟಿ ನೀಡುವ ಪ್ರವಾಸಿಗರ‌ ರೈಡಿಂಗ್​ಗೆ ಬಳಸಲಾಗುತ್ತಿತ್ತು. ಆದರೆ ಪ್ರಾಣಿಪ್ರಿಯರು ಇದನ್ನು ಪ್ರಶ್ನಿಸಿ ಕೋರ್ಟ್​ನಲ್ಲಿ ಮನವಿ ಸಲ್ಲಿಸಿದ ಪರಿಣಾಮ ರೈಡಿಂಗ್ ನಿಲ್ಲಿಸಲಾಗಿದೆ.

ದುಬಾರಿಯಾದ ಆನೆ‌ ನಿರ್ವಹಣೆ:

ಅರಮನೆಯಲ್ಲಿ ಇರುವ 6 ಹೆಣ್ಣಾನೆಗಳಾದ ಸೀತಾ, ರೂಬಿ, ರಾಜೇಶ್ವರಿ, ಜಮಿನಿ, ಚಂಚಲ, ಪ್ರೀತಿ ಆನೆಗಳ ನಿರ್ವಹಣೆಗೆ ಪ್ರತಿದಿನ ಒಂದು ಆನೆಗೆ ಕನಿಷ್ಟ 8 ರಿಂದ 10 ಸಾವಿರ ರೂಪಾಯಿ ಹಣ ಬೇಕು. 6 ಆನೆಗಳಿಗೆ ದಿನಕ್ಕೆ 40 ರಿಂದ 60 ಸಾವಿರ ರೂ. ವೆಚ್ಚವಾಗಲಿದೆ.

ತಿಂಗಳಿಗೆ ₹15 ಲಕ್ಷದವರೆಗೆ ವೆಚ್ಚವಾಗುತ್ತದೆ. ಆದರೆ ಈ ವೆಚ್ಚವನ್ನು ನೀಡಲು ಅರಮನೆಗೆ ಕಷ್ಟವಿಲ್ಲ. ಆದರೆ ಆನೆಗಳನ್ನು ನೋಡಿಕೊಳ್ಳುವ ಸಿಬ್ಬಂದಿ ಕೊರತೆ ಅವುಗಳ ಆರೋಗ್ಯ ತಪಾಸಣೆ ಕಷ್ಟವಾಗಿದ್ದು, ಈ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳ ಹಿಂದೆಯೇ ಅರಮನೆ ಆನೆಗಳನ್ನು ಅರಣ್ಯ ಇಲಾಖೆ ಪಡೆಯುವಂತೆ ಮಹಾರಾಣಿಯವರು ಮನವಿ ಮಾಡಿದ್ದರು. ಆದರೆ ಅರಣ್ಯ ಇಲಾಖೆ ಈ ಆನೆಗಳನ್ನು ಪಡೆಯಲು ನಿರಾಕರಿಸಿತ್ತು.

ಈ ಹಿನ್ನೆಲೆಯಲ್ಲಿ ನಾಲ್ಕು ಆನೆಗಳಾದ ಸೀತಾ, ರೂಬಿ, ರಾಜೇಶ್ವರಿ, ಜಮಿನಿ ಆನೆಗಳನ್ನು ಗುಜರಾತ್​ನ ರಾಧಾಕೃಷ್ಣ ದೇವಾಲಯಕ್ಕೆ ನೀಡಲು ನಿರ್ಧರಿಸಿದ್ದಾರೆ. ಇದಕ್ಕೆ ಅನುಮತಿ ಕೊಡುವಂತೆ ಮಹಾರಾಣಿ ಪ್ರಮೋದಾ ದೇವಿ ಒಡೆಯರ್ ಮನವಿ ಮಾಡಿದ್ದಾರೆ.

ಅರಮನೆ ಹೆಣ್ಣಾನೆಗಳು ಖಿನ್ನತೆಗೊಳಗಾಗಿರುವ ಸಾಧ್ಯತೆ?

ಪ್ರವಾಸಿಗರ ಆನೆ ರೈಡಿಂಗ್ ನಿಂತ ನಂತರ ಚಟುವಟಿಕೆ ಇಲ್ಲದೇ ಅರಮನೆ ಆವರಣದಲ್ಲಿ ಜನ ಸಂಪರ್ಕವಿಲ್ಲದ ಜಾಗದಲ್ಲಿ ಈ ಆನೆಗಳನ್ನು ಕಟ್ಟಿ ಹಾಕಲಾಗಿದೆ. ಜೊತೆಗೆ ಬೇರೆ ಗಂಡಾನೆಗಳು ಇಲ್ಲದ ಕಾರಣ ಈ ಆನೆಗಳು ಖಿನ್ನತೆಗೆ ಒಳಗಾಗುವ ಸಾಧ್ಯತೆ ಇದೆ.

ಜೊತೆಗೆ ಸರ್ಕಸ್ ಆನೆಗಳು ರಾಜಮನೆತನಕ್ಕೆ ಕೊಟ್ಟಿರುವುದರಿಂದ ಸದಾ ಜನರ ನಡುವೆ ಇರುವ ಆನೆಗಳನ್ನು ಒಂಟಿಯಾಗಿ ಕಟ್ಟಿದರೆ ಖಿನ್ನತೆಗೊಳಗಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ‌

ಸ್ಥಳಾಂತರ ಯಾವಾಗ?

ರಾಜಮನೆತನಕ್ಕೆ ಸೇರಿರುವ ಈ 6 ಆನೆಗಳಲ್ಲಿ 4 ಆನೆಗಳನ್ನು ಗುಜರಾತ್​ನ ರಾಧಾಕೃಷ್ಣ ದೇವಾಲಯ ಹಾಗೂ ಟ್ರಸ್ಟ್​ಗೆ ನೀಡಲು ಮಹಾರಾಣಿಯವರು ನಿರ್ಧರಿಸಿದ್ದಾರೆ. ಇದಕ್ಕಾಗಿ ಅನುಮತಿ ನೀಡುವಂತೆ ಅರಣ್ಯ ಇಲಾಖೆಗೆ ಪತ್ರ ಬರೆದಿದ್ದಾರೆ ಎಂದು ಡಿಸಿಎಫ್ ಕರಿಕಾಳನ್ ತಿಳಿಸಿದ್ದಾರೆ.

ರಾಜಮನೆತನಕ್ಕೆ ಸೇರಿದ ಆನೆಗಳ ಆರೋಗ್ಯ ತಪಾಸಣೆ ನಡೆಸಲು ಅರಣ್ಯಾಧಿಕಾರಿಗಳು ಹಾಗೂ ವೈದ್ಯರ ತಂಡ ನಿರ್ಧರಿಸಿದ್ದಾರೆ. ಆ ನಂತರ ಅನುಮತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಮಧ್ಯೆ ಕಳೆದ 20 ವರ್ಷಗಳಿಂದ ಯಾವುದೇ ಲಾರಿಯನ್ನು ಹತ್ತದ ಅರಮನೆ ಆನೆಗಳನ್ನು ಯಾವ ರೀತಿ ಲಾರಿ ಮೇಲೆ ಹತ್ತಿಸಿ ಸಾಗಾಣಿಕೆ ಮಾಡಬೇಕು? ಅದಕ್ಕಾಗಿ ದಸರಾಗೆ ಬಂದಿರುವ ಅಭಿಮನ್ಯು ಆನೆಯ ಸಹಾಯದಿಂದ ಅವುಗಳನ್ನು ಸಾಗಾಟ ಮಾಡಲು ಸಾಧ್ಯವಾ? ಅಥವಾ ದಸರಾ ಮುಗಿಸಿ ಕಾಡಿಗೆ ದಸರಾ ಆನೆಗಳು ಮರಳುವಾಗ ಅವುಗಳ ಜೊತೆಯಲ್ಲೇ ಈ ಆನೆಗಳನ್ನು ಸಾಗಿಸಬಹುದಾ? ಎಂಬ ಬಗ್ಗೆ ಚರ್ಚೆ ನಡೆಸಲಾಗುತ್ತಿದೆಯಂತೆ.

ದಸರಾ ಆನೆಗಳು ಅರಮನೆ ಆವರಣದಲ್ಲಿದ್ದಾಗ ಈ ಹೆಣ್ಣಾನೆಗಳನ್ನು ಗುಜರಾತ್​ಗೆ ಸಾಗಿಸುವ ಪ್ರಯತ್ನದ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎನ್ನಲಾಗಿದೆ.

ಈ ನಿರ್ಧಾರಕ್ಕೆ ಕಾರಣವೇನು?

ಅರಮನೆಯ ರಾಜಪರಂಪರೆಯ ಪ್ರತೀಕ ಹಾಗೂ ಶರನ್ನವರಾತ್ರಿಯ ಸಂದರ್ಭದಲ್ಲಿ ಪೂಜೆಗಳಿಗೆ ಬಳಸಲಾಗುವ ರಾಜಮನೆತನದ ಹೆಣ್ಣಾನೆಗಳನ್ನು ಕಳೆದ ಹಲವಾರು ವರ್ಷಗಳಿಂದ ರಾಜಮನೆತನದವರು ಸಾಕುತ್ತಾ ಬಂದಿದ್ದರು.

ಆದರೆ ಇತ್ತೀಚೆಗೆ ಈ ಆನೆಗಳು ಯಾವುದೇ ಚಟುವಟಿಕೆ ಇಲ್ಲದೇ ಕಟ್ಟಿದ ಜಾಗದಲ್ಲೇ ಕಟ್ಟಿರುವುದರಿಂದ ಖಿನ್ನತೆಗೆ ಒಳಗಾಗಿರುವ ಬಗ್ಗೆ ಆತಂಕ ಉಂಟಾಗಿದೆ. ಕಳೆದ ವಾರ ಮೊಮ್ಮಗನ ಜೊತೆಯಲ್ಲಿ ಈ ಆನೆಗಳನ್ನು ನೋಡಲು ಬಂದಾಗ ಮಹಾರಾಣಿ ಪ್ರಮೋದಾ ದೇವಿ ಅವರಿಗೆ ಈ ಬಗ್ಗೆ ಗೊತ್ತಾಗಿದೆಯಂತೆ.

ಆಗಲೇ ಈ 4 ಹೆಣ್ಣಾನೆಗಳನ್ನು ಗುಜರಾತ್​ನ ರಾಧಾಕೃಷ್ಣ ದೇವಾಲಯದ ಪುನರ್ ವಸತಿ ಕೇಂದ್ರಕ್ಕೆ ನೀಡಲು ನಿರ್ಧರಿಸಿದ್ದಾರಂತೆ. ತಮ್ಮ ಪ್ರೀತಿಯ ಎರಡು ಆನೆಗಳಾದ ಚಂಚಲ ಹಾಗೂ ಪ್ರೀತಿಯನ್ನು ಅರಮನೆಯಲ್ಲಿಯೇ ಉಳಿಸಿಕೊಳ್ಳಲು ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ. ಈ ನಾಲ್ಕು ಆನೆಗಳನ್ನು ಗುಜರಾತ್​ಗೆ ಹೇಗೆ ಸಾಗಾಣೆ ಮಾಡುವುದು ಎಂಬುದು ಈಗಿರುವ ಪ್ರಶ್ನೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.