ETV Bharat / state

ಮೈಸೂರು ದಸರಾ 2023 : ಗಜಪಯಣಕ್ಕೆ ಮೊದಲ ಹಂತದ 9 ಆನೆಗಳನ್ನು ಆಯ್ಕೆ ಮಾಡಿದ ಅರಣ್ಯ ಇಲಾಖೆ

author img

By

Published : Aug 9, 2023, 2:13 PM IST

Mysuru dasara-2023: ದಸರಾ ಆನೆಗಳ ಆಯ್ಕೆ ಸಂಬಂಧ 7 ಗಂಡಾನೆ ಹಾಗೂ 2 ಹೆಣ್ಣಾನೆಗಳನ್ನು ಮೊದಲ ಹಂತದ ಗಜಪಯಣಕ್ಕೆ ಆಯ್ಕೆ ಮಾಡಲಾಗಿದೆ.

mysuru dasara
ಗಜಪಯಣ

ಮೈಸೂರು : ಈ ಬಾರಿಯ ವಿಶ್ವ ವಿಖ್ಯಾತ ನಾಡಹಬ್ಬ ದಸರಾದಲ್ಲಿ ಮೊದಲ ಹಂತದ 9 ಆನೆಗಳ ಗಜಪಡೆಯನ್ನು ಅರಣ್ಯ ಇಲಾಖೆ ಆಯ್ಕೆ ಮಾಡಿದೆ. ಇದರಲ್ಲಿ ಏಳು ಗಂಡಾನೆ ಹಾಗೂ ಎರಡು ಹೆಣ್ಣಾನೆಗಳು ಇದ್ದು, ಸೆಪ್ಟೆಂಬರ್ ಒಂದರಂದು ವೀರನಹೊಸಹಳ್ಳಿಯಲ್ಲಿ ಗಜಪಯಣಕ್ಕೆ ಚಾಲನೆ ನೀಡಲಾಗುವುದು. ಒಂಭತ್ತು ಆನೆಗಳು ಗಜಪಯಣದ ಮೂಲಕ ಮೈಸೂರಿಗೆ ಆಗಮಿಸಲಿದ್ದು, ಸೆಪ್ಟೆಂಬರ್ 4 ರಂದು ಸಾಂಪ್ರದಾಯಿಕ ಸ್ವಾಗತದ ಮೂಲಕ ಆನೆಗಳನ್ನು ಅರಮನೆಗೆ ಬರಮಾಡಿಕೊಳ್ಳಲಾಗುತ್ತದೆ.

ದಸರಾದಲ್ಲಿ ಪಾಲ್ಗೊಳ್ಳುವ ಮೊದಲ ಹಂತದ ಗಜಪಡೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಮಂಗಳವಾರ ಮೈಸೂರಿನ ಅರಣ್ಯ ಭವನದಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಿತು. ಸೆಪ್ಟೆಂಬರ್ 1 ರಂದು ನಾಗರಹೊಳೆ ಹೆಬ್ಬಾಗಿಲು ಹುಣಸೂರು ತಾಲೂಕಿನ ವೀರನ ಹೊಸಹಳ್ಳಿಯಲ್ಲಿ ಗಜಪಯಣ ಕಾರ್ಯಕ್ರಮ ನಡೆಸಿ, ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವ ಮೂಲಕ ಆನೆಗಳನ್ನು ಸಾಂಸ್ಕೃತಿಕ ನಗರಿಗೆ ಕರೆತರಲಾಗುವುದು. ಹೀಗೆ ಕರೆತಂದ ಗಜಪಡೆ ಮೈಸೂರಿನ ಅರಣ್ಯ ಭವನದಲ್ಲಿ ವಾಸ್ತವ್ಯ ಹೂಡಲಿದೆ. ನಂತರ ಸೆಪ್ಟೆಂಬರ್ 4 ರಂದು ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಅರಮನೆಗೆ ಸ್ವಾಗತಿಸಲಾಗುವುದು. ಬಳಿಕ, ಅರಮನೆಯಲ್ಲಿ ವಾಸ್ತವ್ಯ ಹೂಡಲಿರುವ ಗಜಪಡೆ ಹಾಗೂ ಮಾವುತರು ಮತ್ತು ಕಾವಾಡಿಗರ ಕುಟುಂಬ ನಂತರ 45 ದಿನಗಳ ಕಾಲ ತಾಲೀಮು ನಡೆಸಲಿದ್ದಾರೆ.

mysuru dasara
ಅರಣ್ಯ ಇಲಾಖೆ ಅಧಿಕಾರಿಗಳ ಸಭೆ

ಗಜಪಡೆ ಆಯ್ಕೆಯ ಮಾನದಂಡವೇನು? : ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ 14 ಆನೆಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು, ವೈದ್ಯರು ಹಾಗೂ ಇತರೆ ಸಿಬ್ಬಂದಿ ಆನೆ ಶಿಬಿರಗಳಿಗೆ ಹೋಗಿ, ಆನೆ ನೋಡಿಕೊಳ್ಳುವ ಮಾವುತರು ಹಾಗೂ ಕಾವಾಡಿಗಳಿಂದ ಆನೆಗಳ ಚಲನವಲನ ಹಾಗೂ ಇತರೆ ವಿಚಾರಗಳ ಬಗ್ಗೆ ಮಾಹಿತಿ ಪಡೆದುಕೊಂಡು ನಂತರ ಆನೆಗಳ ಆರೋಗ್ಯ ಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸುತ್ತಾರೆ. ಬಳಿಕ, ಹೆಣ್ಣಾನೆಗಳಿಗೆ ಪ್ರೆಗ್ನೆನ್ಸಿ ಟೆಸ್ಟ್ ಮಾಡುತ್ತಾರೆ. ಕಳೆದ ಬಾರಿ ಹಾಗೂ ಹಿಂದೆ ಈ ಆನೆಗಳು ದಸರಾದಲ್ಲಿ ಪಾಲ್ಗೊಂಡ ಬಗ್ಗೆ ಸಹ ಮಾಹಿತಿ ಕಲೆಹಾಕುತ್ತಾರೆ. ಈ ಆಯ್ಕೆ ಪ್ರಕ್ರಿಯೆಯಲ್ಲಿ ಆನೆಗಳನ್ನು ನೋಡಿಕೊಳ್ಳುವ ಮಾವುತರು ಹಾಗೂ ಕಾವಾಡಿಗಳಿಂದ ಪಡೆದ ಮಾಹಿತಿ ಮುಖ್ಯವಾಗಿರುತ್ತದೆ.

ಮೊದಲ ಹಂತದ ಗಜಪಯಣಕ್ಕೆ ಆಯ್ಕೆಯಾದ ಅನೆಗಳು : ನಿನ್ನೆ ನಡೆದ ಅರಣ್ಯಾಧಿಕಾರಿಗಳ ಸಭೆಯಲ್ಲಿ ನಾಡ ಹಬ್ಬ ದಸರಾದಲ್ಲಿ ಪಾಲ್ಗೊಳ್ಳಲು ಗಂಡಾನೆಗಳಾದ ಭೀಮ, ಅಭಿಮನ್ಯು, ಮಹೇಂದ್ರ, ಅರ್ಜುನ, ಧನಂಜಯ, ಗೋಪಿ, ಪಾರ್ಥಸಾರಥಿ ಹಾಗೂ ಹೆಣ್ಣಾನೆಗಳಾದ ವಿಜಯ ಮತ್ತು ವರಲಕ್ಷ್ಮಿ ಹೆಸರನ್ನು ಅಂತಿಮಗೊಳಿಸಲಾಗಿದೆ.

mysuru dasara
ಮೈಸೂರು ದಸರಾ

ದಸರಾ ಮೊದಲ ಹಂತದ ಗಜಪಯಣದಲ್ಲಿ ಆಗಮಿಸುವ ಆನೆಗಳ ಪೈಕಿ ಅಭಿಮನ್ಯು ಅನುಭವಿ ಆನೆಯಾಗಿದ್ದು, ಇದು 5000 -5300 ಕೆಜಿ ತೂಕವಿದೆ. ಅಭಿಮನ್ಯು ಆನೆ ಕಳೆದ 20 ವರ್ಷಗಳಿಂದ ದಸರಾದಲ್ಲಿ ಭಾಗವಹಿಸುತ್ತಿದ್ದು, 1977 ರಲ್ಲಿ ಕೊಡಗಿನ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಇದನ್ನು ಸೆರೆಹಿಡಿಯಲಾಯಿತು. ಹೆಣ್ಣಾನೆಗಳಲ್ಲಿ ವಿಜಯಾ ಆನೆ ಅನುಭವಿಯಾಗಿದ್ದು, ಇದು 3250 -3300 ಕೆಜಿ ತೂಕವಿದೆ. ಸಾಧು ಸ್ವಭಾವದ ಈ ಆನೆಯನ್ನು 1963 ರಲ್ಲಿ ದುಬಾರೆಯಲ್ಲಿ ಸೆರೆ ಹಿಡಿಯಲಾಗಿತ್ತು. ಸುಮಾರು 11 ವರ್ಷಗಳಿಂದ ಈ ಆನೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದೆ.

ಇದನ್ನೂ ಓದಿ : Dasara: ಸೆಪ್ಟೆಂಬರ್ 1ಕ್ಕೆ ದಸರಾ ಗಜಪಯಣ- ಸಚಿವ ಹೆಚ್.ಸಿ.ಮಹಾದೇವಪ್ಪ

ಯಾವ ಯಾವ ಶಿಬಿರಗಳಿಂದ ಆನೆಗಳ ಆಯ್ಕೆ : ನಾಡಹಬ್ಬ ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಮತ್ತಿಗೋಡು, ಬಳ್ಳೆ, ಭೀಮನಕಟ್ಟೆ ಮತ್ತು ಮಡಿಕೇರಿ ಅರಣ್ಯ ವಿಭಾಗದ ದುಬಾರೆ, ಬಂಡೀಪುರ ಅರಣ್ಯ ವಿಭಾಗದ ರಾಮಪುರ ಶಿಬಿರಗಳಿಂದ ಆಯ್ಕೆ ಮಾಡಲಾಗಿದೆ. ಎರಡನೇ ಹಂತದಲ್ಲಿ ಬರುವ 5 ಆನೆಗಳನ್ನು ಇನ್ನೂ ಆಯ್ಕೆ ಮಾಡಿಲ್ಲ.

ಇನ್ನು ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳ ಆಯ್ಕೆ ಸಭೆಯಲ್ಲಿ ಹುಲಿ ಯೋಜನೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಿ ವಿ ರಂಗರಾವ್, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಾಶ್ವತಿ ಮಿಶ್ರಾ, ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯಾ, ವನ್ಯಜೀವಿ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಪಾಲ್ಗೊಂಡಿದ್ದರು.

ಇದನ್ನೂ ಓದಿ : ಅರ್ಥಪೂರ್ಣ, ಅದ್ಧೂರಿ ದಸರಾ ಆಚರಣೆಗೆ ನಿರ್ಧಾರ, ಉದ್ಘಾಟಕರಾಗಿ ಸುತ್ತೂರು ಸ್ವಾಮೀಜಿ ಹೆಸರು ಪ್ರಸ್ತಾಪ : ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.