ಮೈಸೂರು: ಮುಡಾದಲ್ಲಿ ಪ್ರಾಧಿಕಾರದ ಕಾಯ್ದೆಯ ಬಾಹಿರವಾಗಿ ಕಾಮಗಾರಿ ನಡೆಸಲಾಗುತ್ತಿದ್ದು, ಅವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿ ಮುಡಾದ ನಗರ ಯೋಜನಾ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ನಟರಾಜ ಅವರು ಸಿಬಿಐ ತನಿಖೆಯಾಗಬೇಕು ಎಂದು ಆಗ್ರಹಿಸಿ ಮುಡಾ ಕಚೇರಿ ಮುಂದೆ ಏಕಾಂಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಈಟಿವಿ ಭಾರತದ ಜೊತೆ ಮಾತನಾಡಿದ ಮುಡಾದ ನಿವೃತ್ತ ಅಧಿಕಾರಿ ನಟರಾಜ್ ಅವರು, ನಾನು ಮುಡಾದಲ್ಲಿ 10 ವರ್ಷ ನಗರಾಭಿವೃದ್ಧಿ ಪ್ರಾಧಿಕಾರ ನೌಕರ ಸಂಘದ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಆ ಸಮಯದಲ್ಲಿ ಪ್ರಾಧಿಕಾರದ ಕಾಯ್ದೆಯಲ್ಲಿ ಇಲ್ಲದ ಕಾಮಗಾರಿಗಳನ್ನು ಕಮಿಷನ್ ಆಸೆಗಾಗಿ ಮಾಡುತ್ತಿರುವುದನ್ನು ನಾನು ಗಮನಿಸಿ, ಅದನ್ನು ಪ್ರತಿಭಟಿಸಿ ಸಾಧ್ಯವಾದಷ್ಟು ಹತೋಟಿಗೆ ತಂದಿದ್ದೆ. ಆದರೆ, ನಾನು 2019 ರಲ್ಲಿ ನಿವೃತ್ತಿಯಾದ ನಂತರ ಯಾರು ಹೇಳೋರು, ಕೇಳೊರು ಇಲ್ಲದೇ ಕಾನೂನು ಬಾಹಿರವಾಗಿ ಅವ್ಯವಹಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರಾಧಿಕಾರದ ಕರ್ತವ್ಯ ಹೊಸ ಬಡಾವಣೆ ನಿರ್ಮಾಣ ಮಾಡುವುದು, ಸಾರ್ವಜನಿಕರಿಗೆ ನಿವೇಶನ ಹಂಚುವುದು. ನಿರ್ವಹಣೆ ಕಾಮಗಾರಿ ಇದಕ್ಕೆ ಇಲ್ಲ. ಪೂರ್ಣ ಆದಮೇಲೆ ನಗರ ಪಾಲಿಕೆಗೆ ವಹಿಸುವುದು. ಕಳೆದ 35 ರಿಂದ 30 ವರ್ಷಗಳಿಂದ ಯಾವುದೇ ಹೊಸ ಬಡಾವಣೆ ನಿರ್ಮಾಣ ಮಾಡಿಲ್ಲ. 4 ಯೋಜನೆಗಳು ಸಿದ್ದವಿದ್ದರು ಕಾನೂನು ಬದಲಾವಣೆಯಿಂದ ಬಲವಂತವಾಗಿ ಭೂ ಸ್ವಾಧೀನ ಮಾಡಿಕೊಳ್ಳಲು ಆಗಲ್ಲ. ಆದರೆ, ಲಂಚದ ಹಣ ಕಡಿಮೆಯಾಗಿದೆ ಎಂದು ಅನಗತ್ಯ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಹಳ್ಳಿವ್ಯಾಪ್ತಿಯಲ್ಲಿ, ಜಿಲ್ಲಾ ಪಂಚಾಯಿತಿ ಹಾಗೂ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ರಸ್ತೆಗಳು, ಚರಂಡಿಗಳು ನಿರ್ಮಾಣವಾಗಿರುತ್ತವೆ. ಆದರೂ ಅದನ್ನು ಅಲ್ಲಿ ಇಲ್ಲಿ ತ್ಯಾಪೆ ಹಾಕಿ ಹೊಸದಾಗಿ ಮಾಡಿರುವುದು ಎಂದು ಬೀಲ್ ಮಾಡುತ್ತಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: ಚುನಾವಣಾ ವೆಚ್ಚದ ವಿವರ ಸಲ್ಲಿಸದ ಪುರಸಭೆ ಸದಸ್ಯರ ಅನರ್ಹತೆ ಎತ್ತಿಹಿಡಿದ ಹೈಕೋರ್ಟ್
ನಾನು ಸರ್ಕಾರಿ ನೌಕರ ಬೀದಿಯಲ್ಲಿ ಹೋರಾಟ ಮಾಡುವುದು ಬೇಡ, ನಮ್ಮಲ್ಲೇ ಸರಿ ಮಾಡೋಣ ಅಂತ ಪ್ರಯತ್ನ ಮಾಡಿದ್ದೇನೆ. ಆದರೂ ಇವರಿಗೆ ಲಂಗು ಲಗಾಮು ಇಲ್ಲ. 600 ಕೋಟಿ ಅವ್ಯವಹಾರ ನಡೆದಿದೆ. ಈಗ 1774 ಕೋಟಿ ನಡೆದಿದೆ. ಮುಡಾದ ಆಸ್ತಿ ಇರುವುದೇ 400 ಸೈಟು-2 ಸಾವಿರ ಕೋಟಿ, ಠೇವಣಿ ಹಣ 300 ಕೋಟಿ, ಜೊತೆಗೆ ಕಚೇರಿಯ ಕಟ್ಟಡ ಅಷ್ಟೇ. ಮುಡಾದ ಈಗಿನ ಕಮಿಷನರ್ ನಂತಹ ಅಧಿಕಾರಿಯನ್ನು ನನ್ನ 34 ವರ್ಷ ವೃತ್ತಿ ಜೀವನದಲ್ಲಿ ನೋಡಿಲ್ಲ. ಅವರಿಗೆ ಕಾನೂನಿನ ಭಯವಿಲ್ಲ. ನಾನು ದಾಖಲೆ ಸಮೇತ ಹೇಳುತ್ತೇನೆ ದಾಖಲೆ ಇಲ್ಲದೇ ಏನು ಮಾತನಾಡುವುದಿಲ್ಲ ಎಂದು ತಿಳಿಸಿದರು.
ನಿವೃತ್ತ ಜಿಲ್ಲಾ ನ್ಯಾಯಾಧೀಶರು ಇಲ್ಲೇ ಇದ್ದಾರೆ ಅವರಿಂದ ಇಲಾಖೆಯನ್ನು ಸಂಪೂರ್ಣ ತನಿಖೆಯನ್ನು ಮಾಡಿಸಬೇಕು. ಯಾರು ನಷ್ಟ ಮಾಡಿದ್ದರೋ ಅವರಿಂದ ವಸೂಲಿ ಮಾಡಿ,ಶಿಸ್ತು ಕ್ರಮ ಕೈಗೊಳ್ಳಬೇಕು. ಜೊತೆಗೆ 1775 ಕೋಟಿ ಕಾಮಗಾರಿ ಟೆಂಡರ್ ಅನ್ನು ನಿಲ್ಲಿಸಬೇಕು. ಸಿಬಿಐ ತನಿಖೆಗೆ ನೀಡಬೇಕು. ಇಲ್ಲದಿದ್ದರೇ ನಾನೇ ಶಾಸಕರ ಸಮೇತ ಎಲ್ಲರ ಮೇಲೂ ದಾವೆ ಹೂಡುತ್ತೇನೆ ಎಂದು ಮುಡಾ ನಿವೃತ್ತ ಅಧಿಕಾರಿ ನಟರಾಜ್ ತಿಳಿಸಿದರು.