ETV Bharat / state

Mysore Dasara: ಜಂಬೂಸವಾರಿಯಂದು ಚಾಮುಂಡೇಶ್ವರಿಗೆ ಸರ್ಕಾರದಿಂದಲೇ ಸೀರೆ ಕೊಡಲಿ- ಪ್ರತಾಪ್​ ಸಿಂಹ

author img

By

Published : Aug 14, 2023, 10:34 PM IST

ಜಂಬೂಸವಾರಿಯ ಕೊನೆಯ ದಿನ ಚಾಮುಂಡೇಶ್ವರಿ ದೇವಿಗೆ ಸರ್ಕಾರವೇ ಸೀರೆ ಕೊಡಲಿ ಎಂದು ಸಂಸದ ಪ್ರತಾಪ್​​ ಸಿಂಹ ಹೇಳಿದರು.

ಸಂಸದ ಪ್ರತಾಪ್​ ಸಿಂಹ
ಸಂಸದ ಪ್ರತಾಪ್​ ಸಿಂಹ

ಸಂಸದ ಪ್ರತಾಪ್​ ಸಿಂಹ ಹೇಳಿಕೆ

ಮೈಸೂರು: ಜಂಬೂಸವಾರಿ ದಿನ ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಸೀರೆ ಕೊಡಲು ಯುದ್ದ ಬೇಡ, ಸರಕಾರದಿಂದಲ್ಲೇ ಸೀರೆ ಕೊಡಲಿ ಎಂದು ಸಂಸದ ಪ್ರತಾಪಸಿಂಹ ಸಲಹೆ ನೀಡಿದರು. ಅಶೋಕಪುರಂ ರೈಲ್ವೆ ನಿಲ್ದಾಣದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಂಬೂಸವಾರಿಯ ಅಂತಿಮ ದಿನ, ಚಾಮುಂಡೇಶ್ವರಿ ದೇವಿಗೆ ಯಾರು ಸೀರೆ ಕೊಡಿಸಬೇಕು ಎಂಬ ಯುದ್ಧ ನಡೆಯುತ್ತಿತ್ತು. ವಿ.ಸೋಮಣ್ಣ ಅವರು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಸರಕಾರದಿಂದಲ್ಲೇ ಸೀರೆ ತರುವುದು ಎಂಬ ತೀರ್ಮಾನವಾಗಿತ್ತು. ಅದನ್ನು ಮುಂದುವರಿಸಿಕೊಂಡು ಹೋಗುವಂತೆ ದಸರಾ ಸಭೆಯಲ್ಲಿ ಸಲಹೆ ನೀಡಲಾಗಿದೆ ಎಂದರು.

ಯುವದಸರಾ, ಕ್ರೀಡಾದಸರಾ, ರೈತ, ಗ್ರಾಮೀಣ ದಸರಾವನ್ನು ಮೂರು ವರ್ಷಗಳಿಂದ ಕೋವಿಡ್, ಹಣದ ಕೊರತೆಯಿಂದ ಅದ್ಧೂರಿಯಾಗಿ ಮಾಡಿರಲಿಲ್ಲ. ಈ ಬಾರಿ ಅದ್ಧೂರಿಯಗಿ ಮಾಡಬೇಕು ಎಂದು ಹೇಳಿದರು. ಮಹಿಷ ದಸರಾ ಮುಗಿದ ಅಧ್ಯಾಯ, ಅದರ ಬಗ್ಗೆ ಯಾರೂ ಚಕಾರ ಎತ್ತುವುದಿಲ್ಲವೆಂದು ಭಾವಿಸುತ್ತೇನೆ. ಮೈಸೂರು ಜನ ಚಾಮುಂಡೇಶ್ವರಿ ಭಕ್ತರು. ಅದನ್ನು ಅರ್ಥಮಾಡಿಕೊಂಡು ಸಂವೇದನೆಯಿಂದ ಎಲ್ಲರೂ ಮುಂದಿನ ದಿನಗಳಲ್ಲಿ ದಸರಾವನ್ನು ಅಚ್ಚುಕಟ್ಟಾಗಿ ಮಾಡೋಣ ಎಂದು ಮನವಿ ಮಾಡಿದರು.

30 ಕೋಟಿ ರೂ.ವೆಚ್ಚದ ಕಾಮಗಾರಿ ಪರಿಶೀಲನೆ: ಅಶೋಕಪುರಂ ರೈಲ್ವೆ ನಿಲ್ದಾಣದಲ್ಲಿ 30 ಕೋಟಿ ರೂ.ವೆಚ್ಚದ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿ, ನಿಲ್ದಾಣದಲ್ಲಿ ನಿರ್ಮಾಣವಾಗುತ್ತಿರುವ ಮತ್ತೊಂದು ಟಿಕೆಟ್ ಕೌಂಟರ್ ಕಚೇರಿ, ಮೇಲ್ಸೇತುವೆ, ಪಾರ್ಕಿಂಗ್ ಸ್ಥಳಗಳನ್ನು ಪರಿಶೀಲಿಸಿ, ಸೆಪ್ಟಂಬರ್ ಅಂತ್ಯದೊಳಗೆ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮೈಸೂರು ರೈಲ್ವೆ ನಿಲ್ದಾಣದಿಂದ ಅಶೋಕಪುರಂ ರೈಲ್ವೆ ನಿಲ್ದಾಣದವರೆಗೆ ಡಬ್ಲಿಂಗ್ ಮಾಡಿಕೊಡುವಂತೆ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಕೇಳಿದ್ದೇನೆ, ಅವರು ಒಪ್ಪಿಗೆ ಸೂಚಿಸಿದ್ದಾರೆ. ಅದಷ್ಟು ಬೇಗ ಈ ಕಾಮಗಾರಿಯನ್ನು ಶುರು ಮಾಡುವ ಉದ್ದೇಶವಿದೆ ಎಂದರು.

ಅಶೋಕಪುರಂ ರೈಲ್ವೆ ಯಾರ್ಡ್ ಮೈಸೂರಿನ ಎರಡನೇ ರೈಲ್ವೆ ನಿಲ್ದಾಣವಾಗಿ ಪರಿವರ್ತನೆ ಮಾಡುವಂತಹ ಕಾರ್ಯವನ್ನು ಮುಗಿಸಿ, ಆ.15ರಂದು ಲೋಕಾರ್ಪಣೆ ಮಾಡುತ್ತೇವೆ ಎಂದು ಸಾರ್ವಜನಿಕವಾಗಿ ವಾಗ್ದಾನ ಮಾಡಲಾಗಿತ್ತು. ಆದರೆ, ಕಾಮಗಾರಿ ಪೂರ್ಣಗೊಳಲು ಇನ್ನೂ ಕಾಲಾವಕಾಶ ಬೇಕಾಗಿದೆ. ಹಾಗಾಗಿ, ಸೆಪ್ಟೆಂಬರ್ 15ರೊಳಗೆ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡುತ್ತೇವೆ. ರೈಲ್ವೆ ನಿಲ್ದಾಣದ ಕಾಮಗಾರಿ ಪೂರ್ಣಗೊಂಡರೆ, ಈ ಭಾಗದ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ. ಮುಖ್ಯ ರೈಲ್ವೆ ನಿಲ್ದಾಣಕ್ಕೆ ಹೋಗುವ ಅಗತ್ಯ ಬರುವುದಿಲ್ಲ. ಪ್ಯಾಸೆಂಜರ್ ರೈಲುಗಳನ್ನು ಅಶೋಕಪುರಂ ರೈಲ್ವೆ ನಿಲ್ದಾಣಗಳಿಂದ ಪ್ರಾರಂಭಿಸಬೇಕು ಎಂಬ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.

ಮೈಸೂರು ರೈಲ್ವೆ ನಿಲ್ದಾಣದಲ್ಲಿ ಆರು ಪ್ಲಾಟ್​ಫಾರ್ಮ್​ಗಳಿವೆ. ಅಶೋಕಪುರಂನಲ್ಲಿ 5 ಪ್ಲಾಟ್​ಫಾರಮ್​​ಗಳು ಬರುತ್ತಿವೆ. ಇದೊಂದು ರೀತಿಯಲ್ಲಿ ಮುಖ್ಯ ರೈಲ್ವೆ ನಿಲ್ದಾಣಕ್ಕೆ ಸ್ಪರ್ಧೆ ಕೊಡುವಂತೆ ಬೆಳೆದಿದೆ. ಪ್ರವೇಶದ್ವಾರ, ದ್ವಿಚಕ್ರವಾಹನಗಳ ಪಾರ್ಕಿಂಗ್, ಪ್ರಯಾಣಿಕರ ಅನುಕೂಲಕ್ಕಾಗಿ ಮೇಲ್ಸೇತುವೆ ಮಾಡಲಾಗಿದೆ. ಇದರೊಂದಿಗೆ ಕ್ರಾಡ್ ಹಾಲ್, ರಿಂಗ್ ರೋಡ್‌ನಲ್ಲಿರುವ ನಾಲ್ಕು ಅಂಡರ್ ಪಾಸ್ ಕಾಮಗಾರಿಗಳು ಪ್ರಾರಂಭವಾಗಿದೆ. ಕ್ರಾರ್ಡ್‌ಹಾಲ್ ಬಳಿ ಅಂಡರ್‌ಪಾಸ್‌ಗೆ ಅಪ್ರೋಚ್ ರೋಡ್‌ಗೆ ನಗರಪಾಲಿಕೆಯಿಂದ ದುಡ್ಡು ಕೊಡಬೇಕು. ಅದರಿಂದಾಗಿ ವಿಳಂಬವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಅಧಿಕಾರದ ಆಸೆಗೆ ಕಾಂಗ್ರೆಸ್‌ನಿಂದ ತುಷ್ಟೀಕರಣ ರಾಜಕಾರಣ: ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.