ETV Bharat / state

ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ಕಾಂಗ್ರೆಸ್ ಸರ್ಕಾರ ಟೋಪಿ ಹಾಕುತ್ತಿದೆ: ಸಂಸದ ಪ್ರತಾಪ್ ಸಿಂಹ

author img

By

Published : Jun 3, 2023, 4:32 PM IST

ಕರ್ನಾಟಕಕ್ಕೆ ಶ್ರೀಲಂಕಾ, ಬಾಂಗ್ಲಾದೇಶದ ಸ್ಥಿತಿ ಬರುವ ಕಾಲ ದೂರ ಇಲ್ಲ. ಕರ್ನಾಟಕವನ್ನು ಕಾಂಗ್ರೆಸ್ಸಿಗರು ಭಿಕ್ಷಾ ರಾಜ್ಯ ಮಾಡುತ್ತಾರೆ ಎಂದು ಸಂಸದ ಪ್ರತಾಪ್​ ಸಿಂಹ ಹೇಳಿದರು.

mp-pratap-simha-talks-about-congress-guarantee-scheme
ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ಕಾಂಗ್ರೆಸ್ ಸರ್ಕಾರ ಟೋಪಿ ಹಾಕುತ್ತಿದೆ: ಸಂಸದ ಪ್ರತಾಪ್ ಸಿಂಹ

ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ಕಾಂಗ್ರೆಸ್ ಸರ್ಕಾರ ಟೋಪಿ ಹಾಕುತ್ತಿದೆ: ಸಂಸದ ಪ್ರತಾಪ್ ಸಿಂಹ

ಮೈಸೂರು: ಸ್ವಾತಂತ್ರ್ಯ ಪೂರ್ವದಲ್ಲಿ ತಲೆಯ ಮೇಲೆ ಟೋಪಿ ಹಾಕಿಕೊಂಡವರನ್ನ ಕಾಂಗ್ರೆಸ್ಸಿಗರು ಎನ್ನುತ್ತಿದ್ದರು. ‌ಈಗ ಜನರಿಗೆ ಟೋಪಿ ಹಾಕುವವರನ್ನು ಕಾಂಗ್ರೆಸ್ಸಿನವರು ಎಂದು ಕರೆಯುತ್ತಾರೆ. ಗ್ಯಾರಂಟಿ ಹೆಸರಿನಲ್ಲಿ ಲೋಕಸಭಾ ಚುನಾವಣೆಯವರೆಗೆ ಜನರನ್ನು ಮಂಗ್ಯಾ ಮಾಡುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಅವರು ಕಾಂಗ್ರೆಸ್ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿನ್ನೆ ಕಾಂಗ್ರೆಸ್​​ನವರು ಘೋಷಣೆ ಮಾಡಿರುವ ಗ್ಯಾರಂಟಿಗಳಲ್ಲಿ ಯಾವುದೇ ಸ್ಪಷ್ಟನೆ ಇಲ್ಲ. ‌ಚುನಾವಣೆಗೂ ಮುನ್ನ ಕಾಂಗ್ರೆಸ್​ನವರು ಎದೆ ಬಡಿದುಕೊಂಡು ಊರೂರಿಗೆ ಹೋಗಿ ಗ್ಯಾರಂಟಿಗಳ ಬಗ್ಗೆ ತಮಟೆ ಬಾರಿಸಿದ್ದರು. ಆದರೆ ಈಗ ಗ್ಯಾರಂಟಿ ವಿಚಾರದಲ್ಲಿ ಎಲ್ಲಾ ಷರತ್ತುಗಳನ್ನು ವಿಧಿಸಿ, ಮೋಸ ಮಾಡುತ್ತಿದ್ದಾರೆ. 200 ಯುನಿಟ್ ಉಚಿತ ಎಂದು ಹೇಳುತ್ತಾರೆ, ಆದರೆ ಷರತ್ತು ವಿಧಿಸಿದ್ದಾರೆ.

ಗೃಹ ಲಕ್ಷ್ಮಿ ಜಾರಿಗೆ ಆಧಾರ್ ಲಿಂಕ್ ಮಾಡಿದ ನಂತರ ಜಾರಿಗೆ ಮಾಡುತ್ತೇವೆ ಎನ್ನುತ್ತಾರೆ. ಹಿಂದೂಗಳ ಮನೆಗಳಲ್ಲಿ ಅತ್ತೆ-ಸೊಸೆಯರ ನಡುವೆ ಜಗಳ ತಂದಿಡುತ್ತಾರೆ. ಮುಸ್ಲಿಮರ ಮನೆಯಲ್ಲಿ ಒಬ್ಬರಿಗೆ 2 ರಿಂದ 3 ಜನ ಹೆಂಡತಿಯರಿರುತ್ತಾರೆ. ಅದರಲ್ಲಿ ಯಾರು ಯಜಮಾನಿ ಎಂಬುದರ ಬಗ್ಗೆ ಅವರವರಲ್ಲೇ ಬೆಂಕಿ ಹಾಕಿ, ಅವರ ಕುಟುಂಬವನ್ನು ಒಡೆಯುತ್ತಾರೆ ಎಂದು ಸಂಸದ ಪ್ರತಾಪ್​​ ಸಿಂಹ ಅಭಿಪ್ರಾಯಪಟ್ಟರು.

ಕರ್ನಾಟಕವನ್ನು ಭಿಕ್ಷಾ ರಾಜ್ಯ ಮಾಡಲು ಹೊರಟಿದ್ದಾರೆ: ಉಚಿತ ವಿದ್ಯುತ್, ಗೃಹ ಲಕ್ಷ್ಮಿ, 10 ಕೆಜಿ ಅಕ್ಕಿ, ಯುವ ನಿಧಿ ಸೇರಿದಂತೆ ಹಲವು ಗ್ಯಾರಂಟಿಗಳನ್ನ ಘೋಷಣೆ ಮಾಡಿರುವ ಕಾಂಗ್ರೆಸ್ ಇದಕ್ಕೆ ಸಂಪನ್ಮೂಲಗಳನ್ನು ಎಲ್ಲಿಂದ ತರುತ್ತೇವೆ ಎಂಬುದರ ಬಗ್ಗೆ ಸ್ಪಷ್ಟನೆ ನೀಡಬೇಕು. ಗ್ಯಾರಂಟಿ ಯೋಜನೆಗಳನ್ನು ಲೋಕಸಭಾ ಚುನಾವಣೆವರೆಗೆ ಜಾರಿ ಮಾಡಿ, ಜನರನ್ನು ದಿವಾಳಿ ಮಾಡಲು ಕಾಂಗ್ರೆಸ್ ಹೊರಟಿದ್ದು.

ಸದ್ಯದಲ್ಲೇ ಆಸ್ತಿ ನೊಂದಣಿ, ಮದ್ಯದ ಬೆಲೆ ಸೇರಿದಂತೆ ಹಲವು ತೆರಿಗೆಗಳನ್ನು ಹೆಚ್ಚು ಮಾಡಲಿದೆ. ಕರ್ನಾಟಕಕ್ಕೆ ಶ್ರೀಲಂಕಾ, ಬಾಂಗ್ಲಾದೇಶದ ಸ್ಥಿತಿ ಬರುವ ಕಾಲ ದೂರ ಇಲ್ಲ. ಕರ್ನಾಟಕವನ್ನು ಕಾಂಗ್ರೆಸ್ಸಿಗರು ಭಿಕ್ಷಾ ರಾಜ್ಯ ಮಾಡುತ್ತಾರೆ. ದೇಶಕ್ಕೆ ಕರ್ನಾಟಕವೇ ಮಾಡೆಲ್ ಎಂದು ಹೇಳುವ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.

ರೈಲ್ವೆ ದುರಂತಕ್ಕೆ ಸಂತಾಪ: ಒಡಿಶಾದಲ್ಲಿ ನಡೆದ ರೈಲ್ವೆ ದುರಂತಕ್ಕೆ ಸಂತಾಪ ಸೂಚಿಸಿದ ಪ್ರತಾಪ್ ಸಿಂಹ, ಕಳೆದ 9 ವರ್ಷಗಳಲ್ಲಿ ರೈಲ್ವೆ ಅವಘಡಗಳು ನಿಂತುಹೋಗಿದ್ದವು. ಅಷ್ಟರ ಮಟ್ಟಿಗೆ ರೈಲ್ವೆ ಅಧಿಕಾರಿಗಳು ಲೋಹಗಳನ್ನು ಸರಿಪಡಿಸಿದ್ದರು. ಈ ಭೀಕರ ರೈಲ್ವೆ ಅಪಘಾತಕ್ಕೆ ನನ್ನ ಸಂತಾಪವಿದ್ದು, ಈ ದುರಂತ ನಡೆದ ರೈಲಿನಲ್ಲಿ ಕನ್ನಡಿಗರು ಪ್ರಯಾಣಿಸುತ್ತಿದ್ದ ಬಗ್ಗೆ ಮಾಹಿತಿ ಇದೆ. ಅವರನ್ನು ರಕ್ಷಣೆ ಮಾಡಿ, ಕರೆದುಕೊಂಡು ಬರುವ ಕೆಲಸದಲ್ಲಿ ಅಧಿಕಾರಿಗಳು ತೊಡಗಿದ್ದಾರೆ ಎಂದು ತಿಳಿಸಿದರು.

ಅಧಿಕಾರಿಗಳ ಸಭೆ ನಡೆಸಿದ ಸಂಸದರು: ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ, ಪ್ರಗತಿ ಪರಿಶೀಲನೆ ನಡೆಸಿದರು. ಆಯುಷ್ಮಾನ್ ಕಾರ್ಡ್ ವಿತರಣೆ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಆರೋಗ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ಸಭೆಯಲ್ಲಿ ಚಾಮರಾಜ ಕ್ಷೇತ್ರದ ಎಂಎಲ್​ಎ ಹರೀಶ್ ಗೌಡ, ನಂಜನಗೂಡು ಶಾಸಕ ದರ್ಶನ್ ದೃವನಾರಾಯಣ್, ಕೃಷ್ಣ ರಾಜ ಕ್ಷೇತ್ರದ ಶಾಸಕ ಶ್ರೀವತ್ಸ ಹಾಗೂ ಮೈಸೂರು ಜಿಲ್ಲಾಧಿಕಾರಿ ಕೆ ವಿ ರಾಜೇಂದ್ರ ಸೇರಿದಂತೆ ಪ್ರಮುಖ ಅಧಿಕಾರಿಗಳು ಹಾಜರಿದ್ದರು.

ಇದನ್ನೂ ಓದಿ: ಪಠ್ಯಪುಸ್ತಕ ಪರಿಷ್ಕರಣೆ ಖಂಡಿತ ಮಾಡುತ್ತೇವೆ.. ಕಾಂಗ್ರೆಸನ್ನು ಪ್ರಶ್ನಿಸುವ ಹಕ್ಕು ಬಿಜೆಪಿಯವರಿಗೆ ಇಲ್ಲ: ಮಧು ಬಂಗಾರಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.