ETV Bharat / state

ಮೈಸೂರು ಜಿಲ್ಲೆಯ ಜನತಾ ದರ್ಶನದಲ್ಲಿ ಉಸ್ತುವಾರಿ ಸಚಿವರು ಭಾಗಿ : ಸಮಸ್ಯೆಗಳನ್ನು ತೋಡಿಕೊಂಡ ಜನರು

author img

By ETV Bharat Karnataka Team

Published : Sep 25, 2023, 6:14 PM IST

Updated : Sep 25, 2023, 6:37 PM IST

ಮೈಸೂರು ಜಿಲ್ಲೆಯ ಜನತಾ ದರ್ಶನದಲ್ಲಿ ಸಚಿವ ಡಾ. ಎಚ್​ ಸಿ ಮಹದೇವಪ್ಪ ಅವರು ಭಾಗಿಯಾಗಿದ್ದರು. ಈ ವೇಳೆ ಜಿಲ್ಲೆಯ ಹಲವೆಡೆಯಿಂದ ಬಂದಿದ್ದ ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.

ಮೈಸೂರು ಜಿಲ್ಲೆಯ ಜನತಾ ದರ್ಶನದಲ್ಲಿ ಉಸ್ತುವಾರಿ ಸಚಿವರು ಭಾಗಿ
ಮೈಸೂರು ಜಿಲ್ಲೆಯ ಜನತಾ ದರ್ಶನದಲ್ಲಿ ಉಸ್ತುವಾರಿ ಸಚಿವರು ಭಾಗಿ

ಮೈಸೂರು : ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಿಲ್ಲೆಯ ಹಲವು ಕಡೆಯಿಂದ ಆಗಮಿಸಿದ ಜನರು ತಮ್ಮ ಸಮಸ್ಯೆಗಳನ್ನ ಸಚಿವರ ಸಮ್ಮುಖದಲ್ಲಿ ಹೇಳಿಕೊಂಡರು. ಸ್ಥಳದಲ್ಲೇ ಉಸ್ತುವಾರಿ ಸಚಿವರು ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅದರಲ್ಲಿ ಹಲವು ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕೆಂದು ಹೇಳಿದ ಸಚಿವ ಡಾ. ಎಚ್ ಸಿ ಮಹದೇವಪ್ಪ ಅವರ ಮುಂದೆ ಬಂದ ಸಮಸ್ಯೆಗಳು ಹೀಗಿವೆ.

ರೇಷನ್ ಕಾರ್ಡ್ ಬೇಕಿದೆ, ಖಾತೆ ಬದಲಾವಣೆ ಆಗಬೇಕು, ವಾಸಕ್ಕಾಗಿ ಮನೆ ಅಗತ್ಯವಿದೆ, ವಿದ್ಯುತ್ ಕಂಬ ಅಳವಡಿಸಿಕೊಡಿ, ವ್ಯವಸಾಯಕ್ಕೆ ಕೊಳವೆ ಬಾವಿ ಕೊಡಿಸಿ, ಸಣ್ಣಪುಟ್ಟ ಕೆಲಸ ಮಾಡಿಕೊಡಲು ಅಧಿಕಾರಿಗಳು ಸತಾಯಿಸುತ್ತಾರೆ. ಹೀಗೆ ವಿವಿಧ ಸಮಸ್ಯೆಗಳನ್ನು ಹೊತ್ತುಬಂದ ಜನರ ಕುಂದು ಕೊರತೆಗಳನ್ನು ಆಲಿಸಿದ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್. ಸಿ ಮಹದೇವಪ್ಪ ಅವರು ತುರ್ತಾಗಿ ಪರಿಹಾರ ಕಲ್ಪಿಸಬೇಕೆಂದು ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಸೂಚಿಸಿದರು.

ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯಾದ್ಯಂತ ನಡೆದ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮವಾದ 'ಜನತಾ ದರ್ಶನಕ್ಕೆ' ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಮಟ್ಟದಲ್ಲಿ ಸಚಿವರು ಚಾಲನೆ ನೀಡಿ, ಸಾರ್ವಜನಿಕರ ಅನೇಕ ಸಮಸ್ಯೆಗಳಿಗೆ ಕಿವಿಯಾದರು. ಸಂಕಷ್ಟಗಳನ್ನು ತ್ವರಿತವಾಗಿ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಸಚಿವರು ಮಾತನಾಡಿ, ಜನರು ತಾಲೂಕು ಕಚೇರಿಗೆ, ಪೊಲೀಸ್ ಠಾಣೆಗೆ, ಗ್ರಾಮ ಪಂಚಾಯಿತಿ ಕಚೇರಿ ಸೇರಿದಂತೆ ಅನೇಕ ಕೆಲಸಗಳಿಗಾಗಿ ಪ್ರತಿನಿತ್ಯ ಸರ್ಕಾರಿ ಕಚೇರಿಗಳಿಗೆ ತಿಂಗಳಪೂರ್ತಿ ಅಲೆಯಬಾರದು. ಅಧಿಕಾರಿಗಳು ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕು. ಜನರಿಗೆ ಅಗತ್ಯ ಸೌಲಭ್ಯ ಒದಗಿಸಿಕೊಡುವಲ್ಲಿ ತುರ್ತಾಗಿ ಕ್ರಮವಹಿಸಬೇಕು ಎಂದು ಸೂಚಿಸಿದರು.

ಬಡಜನರು ತಮ್ಮ ತಾಳಿ, ಓಲೆಗಳನ್ನು ಅಡವಿಟ್ಟು ಸರ್ಕಾರದ ಸೌಲಭ್ಯ ಪಡೆಯುವಂತಹ ಘಟನೆಗಳನ್ನು ಕಂಡಿದ್ದೇವೆ. ಇದ್ಯಾವುದಕ್ಕೂ ಅವಕಾಶ ನೀಡದೆ ನಮ್ಮ ಆಡಳಿತವನ್ನು ನೇರವಾಗಿ ಜನರ ಬಳಿಗೆ ಕರೆದೊಯ್ಯುವುದು ನಮ್ಮ ಸರ್ಕಾರದ ಉದ್ದೇಶ ಮತ್ತು ಧ್ಯೇಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದು ತಿಳಿಸಿದರು.

ಅಧಿಕಾರಿಗಳು ಹಳ್ಳಿಗಳಿಗೆ ತೆರಳಿ ಜನರೊಂದಿಗೆ ಸಂವಾದ ಮಾಡದಿದ್ದರೆ, ಅವರ ಕಷ್ಟ, ಕಾರ್ಪಣ್ಯ ಅರಿವಾಗುವುದಿಲ್ಲ. ಕಡ್ಡಾಯವಾಗಿ ತಿಂಗಳಲ್ಲಿ ಎಂಟು ದಿನ ಪ್ರವಾಸ ಕೈಗೊಳ್ಳಬೇಕು. ಜನರ ಸಮಸ್ಯೆಗಳಿಗೆ ತ್ವರಿತವಾಗಿ ಹಾಗೂ ಪರಿಣಾಮಕಾರಿಯಾಗಿ ಸ್ಪಂದಿಸಿದರೆ ನಿಮ್ಮ ಕೆಲಸಕ್ಕೆ ಸಾರ್ಥಕತೆ ದೊರಕುತ್ತದೆ. ಜನರ ಕಷ್ಟಗಳನ್ನು ಸಕಾಲಕ್ಕೆ ಬಗೆಹರಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ‌. ಇದನ್ನು ಗಮನದಲ್ಲಿರಿಸಿ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡಬೇಕು ಎಂದು ಸಚಿವರು ತಾಕೀತು ಮಾಡಿದರು.

ನಮ್ಮ ಜಿಲ್ಲೆಯನ್ನು ಪೋಡಿ ಮುಕ್ತ ಜಿಲ್ಲೆಯಾಗಿಸಲು ಅಭಿಯಾನ ನಡೆಸಬೇಕು. ಇದಕ್ಕಾಗಿ ಒಂದು ನಿರ್ದಿಷ್ಟ ಸಮಯ ನಿಗದಿಪಡಿಸಿ, ರೈತರಿಗೆ ಅನುಕೂಲ ಮಾಡಿಕೊಡಬೇಕಿದೆ. ಎರಡು ವೇದಿಕೆಯನ್ನು ಮಾಡಿ ಒಂದೆಡೆ ಸಾರ್ವಜನಿಕರು ಮತ್ತೊಂದೆಡೆ ಅಧಿಕಾರಿಗಳು ಮುಖಾಮುಖಿಯಾಗಿ ಕುಳಿತು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮೂಲಕ ಸರ್ಕಾರ ಹಾಗೂ ಜಿಲ್ಲಾಡಳಿತ ಜನಸ್ನೇಹಿಯಾಗಿದೆ ಎಂಬ ಸಂದೇಶ ರವಾನಿಸಬೇಕು ಎಂದು ಸಲಹೆ ನೀಡಿದರು.

ಅಧಿಕಾರಿಗಳು ಅತ್ಯಂತ ಪ್ರಾಮಾಣಿಕ, ಪಾರದರ್ಶಕ ಮತ್ತು ನಿಷ್ಠಾವಂತಿಕೆಯಿಂದ ಕೆಲಸ ಮಾಡಬೇಕು. ವೈಯಕ್ತಿಕ ಹಿತಾಶಕ್ತಿಗಾಗಿ ಸರ್ಕಾರಿ ಸೇವೆಯನ್ನು ದುರುಪಯೋಗ ಮಾಡಿಕೊಳ್ಳಬಾರದು. ಭ್ರಷ್ಟಾಚಾರ ನಿಯಂತ್ರಣ ಮಾಡಿ, ಹಗರಣ ರಹಿತವಾಗಿ ಕರ್ತವ್ಯ ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಸಾಗಿದರೆ ಮಾತ್ರ ಸರ್ಕಾರದ ಉದ್ದೇಶ ಹಾಗೂ ಅಧಿಕಾರಿಗಳು ಇರುವ ಉದ್ದೇಶ ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಆಡಳಿತ ಚುರುಕುಗೊಳಿಸಿ, ಜನರ ಪರವಾಗಿ ಕೆಲಸ ಮಾಡಬೇಕು. ತಾಲೂಕು ವ್ಯಾಪ್ತಿಯಲ್ಲಿ ಜನತಾ ದರ್ಶನ ಮಾಡಬೇಕು. ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೆ ಜನರಿಗೆ ಸಿಗಬೇಕಾದ ಸೌಲಭ್ಯ ದೊರಕಬೇಕು. ಕಾನೂನಿನ ಚೌಕಟ್ಟಿನಲ್ಲಿ ಸಂವಿಧಾನ ಬದ್ದವಾಗಿ ನಿಮ್ಮ ಅಧಿಕಾರದ ವ್ಯಾಪ್ತಿಗೂ ಮೀರಿ ಬಡವರು, ಸಾಮಾನ್ಯ ಜನರಿಗೆ ನ್ಯಾಯಯುತವಾಗಿ ಸಹಾಯ ಮಾಡಬೇಕು ಎಂದು ಹೇಳಿದರು.

ವೃದ್ಧೆ ವೆಂಕಟಮ್ಮ (83) ಎಂಬುವರು ತಮ್ಮ ಗಂಡು ಮಕ್ಕಳಿಂದ ಜೀವನ ನಿರ್ವಹಣೆಗಾಗಿ ಪರಿಹಾರ ಕೊಡಿಸಬೇಕೆಂದು ಸಚಿವರಲ್ಲಿ ಅವಲತ್ತುಕೊಂಡರು. ಈ ಬಗ್ಗೆ ಸಚಿವರು ಪ್ರತಿಕ್ರಿಯಿಸಿ, ಜೀವನ ನಿರ್ವಹಣೆಗೆ ಅಗತ್ಯವಿರುವ ಆರ್ಥಿಕ ವೆಚ್ಚವನ್ನು ನ್ಯಾಯಾಲಯದ ತೀರ್ಮಾನದಂತೆ ಕೊಡಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಸ್ಥಳದಲ್ಲೇ ಸೂಕ್ತ ಕ್ರಮವಹಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ನಿವೃತ್ತ ಸೈನಿಕ ಸಿದ್ದಣ್ಣಯ್ಯ ಅವರು ಸರ್ಕಾರದಿಂದ ತಮಗೆ ಬರಬೇಕಾದ ನಿವೇಶನದ ಬಗ್ಗೆ ಮನವಿ ಮಾಡಿಕೊಂಡರು. ಸೈನಿಕರು ತಮ್ಮ ಸಂಸಾರವನ್ನು ತೊರೆದು ದೇಶದ ಗಡಿಯಲ್ಲಿ ಜೀವವನ್ನು ಪಣಕ್ಕಿಟ್ಟು ಸೇವೆ ಸಲ್ಲಿಸಿರುತ್ತಾರೆ. ಮೊದಲು ಅವರನ್ನು ಗೌರವಿಸಬೇಕು. ಅವರಿಗೆ ಕಾನೂನಿಕ ಪ್ರಕಾರ, ಸಿಗಬೇಕಾದ ಸೌಲಭ್ಯವನ್ನು ಯಾವುದೇ ಕಾರಣಕ್ಕೂ ತಡಮಾಡದೆ ನಿವೇಶನ ದೊರಕಿಸಿಕೊಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಸಂಚಾರ ಪೊಲೀಸರು ಎಲ್ಲೆಂದರಲ್ಲಿ ವಾಹನ ತಡೆದು ಹೆಲ್ಮೆಟ್ ಧರಿಸದ ಕಾರಣಕ್ಕೆ ದಂಡ ವಿಧಿಸುತ್ತಾರೆ‌. ಇದರಿಂದ ಬಡಜನರಿಗೆ ತೊಂದರೆ ಉಂಟಾಗುತ್ತಿದೆ ಎಂಬ ವಿಚಾರ ಕುರಿತು ಮಾತನಾಡಿದರ ಸಚಿವರು, ಏಷ್ಯಾಖಂಡದಲ್ಲೇ ಹೆಚ್ಚು ಜನರು ರಸ್ತೆ ಅಪಘಾತದಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಬೆಂಗಳೂರಿನಲ್ಲಿ ಪ್ರತಿದಿನ ಶೇ 2.5 ರಷ್ಟು ಮಂದಿ ಅಪಘಾತಕ್ಕೆ ಒಳಗಾಗುತ್ತಾರೆ. ಇದನ್ನು ತಡೆಗಟ್ಟುವ ಉದ್ದೇಶದಿಂದ ಸಂಚಾರ ಪೊಲೀಸರು ಹೆಲ್ಮೆಟ್ ಹಾಕದವರಿಗೆ ದಂಡ ವಿಧಿಸುತ್ತಿದ್ದಾರೆ ಹೊರತು, ಜನರಿಂದ ಹಣ ವಸೂಲಿ ಮಾಡುವ ದುರುದ್ದೇಶವಿಲ್ಲ. ಮುಂದಿನ ದಿನಗಳಲ್ಲಿ ಹೆಲ್ಮೆಟ್ ಧರಿಸುವಂತೆ ಅಭಿಯಾನ ರೂಪದಲ್ಲಿ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಲು ಸೂಚಿಸಲಾಗುವುದು ಎಂದು ತಿಳಿಸಿದರು.

ಅನ್ವರ್ ಎಂಬುವರು ಮಾತನಾಡಿ, ನಮ್ಮ ಕುಟುಂಬಕ್ಕೆ ರೇಷನ್ ಕಾರ್ಡ್ ಬೇಕಿದೆ. ಆಹಾರ ಧಾನ್ಯ ಪಡೆಯಲು ಇಲ್ಲದಿದ್ದರೂ, ಆರೋಗ್ಯ ತಪಾಸಣೆಗೆ ನಮಗೆ ಅಗತ್ಯವಿದೆ ಎಂದು ಸಚಿವರಲ್ಲಿ ಮನವಿ ಮಾಡಿದರು. ಈ ವಿಷಯ ಕುರಿತು ಆಹಾರ ಇಲಾಖೆಯಲ್ಲಿ ಅಧಿಕಾರಿಯನ್ನು ಕೇಳಿದಾಗ, ಇವರು ರೇಷಾನ್ ಕಾರ್ಡ್ ಪಡೆಯಲು ಅರ್ಹರಿರುವುದಿಲ್ಲ ಎಂದು ತಿಳಿಸಿದರು.

ಈ ಬಗ್ಗೆ ಸಚಿವರು ಪ್ರತಿಕ್ರಿಯಿಸಿ, ರೇಷನ್ ಕಾರ್ಡ್ ನೀಡಲು ಸರ್ಕಾರದಿಂದ ಕೆಲವು ಮಾನದಂಡಗಳನ್ನು ರೂಪಿಸಲಾಗಿದೆ. ಆ ನಿಯಮಗಳಿಗೆ ಅನುಗುಣವಾಗಿ ಅರ್ಹರಿಗೆ ಮಾತ್ರ ನೀಡಲಾಗುತ್ತದೆ. ಆದರೆ ನೀವು ಆರೋಗ್ಯ ಚಿಕಿತ್ಸೆಗಾಗಿ ಮನವಿ ಮಾಡಿದ್ದೀರಿ. ಇದಕ್ಕೆ ಪೂರಕವಾಗಿ ನಿಮ್ಮ ಆರೋಗ್ಯವನ್ನು ಗಮನದಲ್ಲಿರಿಸಿ ಪರಿಹಾರ ಕಲ್ಪಿಸಲಾಗುವುದು ಎಂದು ಮನವರಿಕೆ ಮಾಡಿದರು.

ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸಾಕಷ್ಟು ದೂರುಗಳು ಬರುತ್ತಿವೆ. ಈ ಕುರಿತು ಅಧಿಕಾರಿಗಳು ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಒಬ್ಬರ ಸ್ವತ್ತನ್ನು ಮತ್ತೊಬ್ಬರಿಗೆ ಖಾತೆ ಮಾಡಿಕೊಡುವುದು ಹಾಗೂ ನಿಯಮ ಉಲ್ಲಂಘಿಸಿ ಬಡಜನರಿಗೆ ಮೋಸ ಮಾಡುವುದು ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಾಕೀತು ಮಾಡಿದರು.

ಈ ಸಂದರ್ಭದಲ್ಲಿ ಶಾಸಕ ತನ್ವೀರ್ ಸೇಠ್, ಹರೀಶ್ ಗೌಡ, ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ.ರೂಪ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಲ್ಲಾ ಪಂಚಾಯತ್ ಸಿಇಒ ಕೆ.ಎಂ.ಗಾಯಿತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಕಪಿಲಾ ನದಿ ಸೇತುವೆ ಮೇಲೆ ಮಲಗಿಕೊಂಡು ರೈತರ ಬೃಹತ್ ಪ್ರತಿಭಟನೆ: ತಮಿಳುನಾಡಿಗೆ ನೀರು ಬಿಟ್ಟಿರುವುದನ್ನು ಖಂಡಿಸಿ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಮತ್ತು ರಾಂಪುರ ಕಪಿಲಾ ನದಿ ಸೇತುವೆಯನ್ನು ಬಂದ್ ಮಾಡಿ ಸೇತುವೆ ಮೇಲೆ ರೈತರು ಮಲಗಿಕೊಂಡು ಪ್ರತಿಭಟನೆ ನಡೆಸಿದರು.

ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಬೃಹತ್ ಪ್ರತಿಭಟನೆ ನಡೆಸಲಾಗಿದ್ದು. ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ನೇತೃತ್ವದಲ್ಲಿ ರಾಂಪುರ ಮತ್ತು ಹುಲ್ಲಹಳ್ಳಿ ಕಪಿಲಾ ನದಿ ಸೇತುವೆಯ ಮೇಲೆ ಮಲಗಿಕೊಂಡು ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.

ಸಚಿವ ಮಹದೇವಪ್ಪ ಕಾರು ತಡೆದ ರೈತರು: ಇದಕ್ಕೂ ಮುನ್ನ ಜನತಾ ದರ್ಶನಕ್ಕೆ ಆಗಮಿಸಿದ ಸಚಿವ ಮಹದೇವಪ್ಪ ಅವರ ಕಾರನ್ನ ರೈತರು ಜಿಲ್ಲಾ ಪಂಚಾಯತ್ ಕಚೇರಿಯ ಮುಂಭಾಗದ ಗೇಟ್​ನಲ್ಲಿಯೇ ತಡೆದು, ಕೂಡಲೇ ಕೆ.ಆರ್.ಎಸ್​ ನಿಂದ ಹರಿಸುತ್ತಿರುವ ನೀರನ್ನು ನಿಲ್ಲಿಸಬೇಕು ಹಾಗೂ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಬೇಕೆಂದು ರೈತರು ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು ಹಾಗೂ ಇದೇ ಸಂದರ್ಭದಲ್ಲಿ ರೈತರು ಪ್ರತಿಭಟನೆಯನ್ನು ಸಹ ಮಾಡಿದರು.

ಸಚಿವ ಮಹದೇವಪ್ಪ ಕಾರು ತಡೆದ ರೈತರು

ನಗರದಲ್ಲಿ ವಿವಿಧ ಕಡೆ ಪ್ರತಿಭಟನೆಗಳು : ಮೈಸೂರು ನಗರದಲ್ಲಿ ಕಾವೇರಿ ಹೋರಾಟ ತೀವ್ರ ಸ್ವರೂಪವನ್ನ ಪಡೆದುಕೊಳ್ಳುತ್ತಿದ್ದು, ನಗರದ ಕಾಡಾ ಕಚೇರಿ ಮುಂಭಾಗದಲ್ಲಿ ತೆಂಗಿನಕಾಯಿ ಚಿಪ್ಪು ಹಿಡಿದು ರೈತರು ಹಾಗೂ ಸಾಹಿತಿಗಳು ಪ್ರತಿಭಟನೆ ನಡೆಸಿದರು.

ಕನ್ನಡ ಚಳವಳಿಯ ಹೋರಾಟಗಾರರು ಕೆ. ಆರ್ ಸರ್ಕಲ್​ನಲ್ಲಿ ಪ್ರತಿಭಟನೆ ನಡೆಸಿದರು. ಜೊತೆಗೆ ಜಿಲ್ಲಾ ಪಂಚಾಯತ್ ಮುಂಭಾಗದಲ್ಲಿ ರಾಜ್ಯ ರೈತ ಸಂಘದ ಸದಸ್ಯರು ಪ್ರತಿಭಟನೆ ನಡೆಸಿ, ಕೂಡಲೇ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನ ನಿಲ್ಲಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ನಮಗೆ ಕುಡಿಯಲು ನೀರಿಲ್ಲ ಎಂದು ರೈತ ಸಂಘದ ಮಹಿಳೆ ರಸ್ತೆಯಲ್ಲಿ ಉರುಳುಸೇವೆ ಮಾಡಿ, ತಮ್ಮ ಆಕ್ರೋಶವನ್ನ ವ್ಯಕ್ತಪಡಿಸಿದರು.

ಇದನ್ನೂ ಓದಿ: ಶಿವಮೊಗ್ಗ: ರಾಜ್ಯವನ್ನು ಸಂಪೂರ್ಣ ಬರಪೀಡಿತ ಎಂದು ಘೋಷಿಸುವಂತೆ ಒತ್ತಾಯಿಸಿ ರೈತ ಸಂಘದಿಂದ ಧರಣಿ

Last Updated : Sep 25, 2023, 6:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.