ETV Bharat / state

ಮೈಸೂರು: ಆದಿವಾಸಿಗಳಿಗೆ ಹಕ್ಕುಪತ್ರದ ಭರವಸೆ ನೀಡಿದ‌ ಸಚಿವ ಬಿ. ನಾಗೇಂದ್ರ

author img

By

Published : Aug 9, 2023, 10:41 PM IST

ಕಾಡಿನಲ್ಲಿರುವ ಹಾಡಿಗಳಿಗೆ ಖುದ್ದಾಗಿ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ ಅರಿಯಲು ಅಲ್ಲೇ ವಾಸ್ತವ್ಯ ಹೂಡಲು ಆರಂಭಿಸಿದ್ದೇನೆ ಎಂದು ಸಚಿವ ಬಿ. ನಾಗೇಂದ್ರ ತಿಳಿಸಿದ್ದಾರೆ.

minister-b-nagendra-promised-to-the-tribals-for-land-document-in-mysuru
ಮೈಸೂರು: ಆದಿವಾಸಿಗಳಿಗೆ ಹಕ್ಕುಪತ್ರದ ಭರವಸೆ ನೀಡಿದ‌ ಸಚಿವ ಬಿ. ನಾಗೇಂದ್ರ

ಮೈಸೂರು: ಹಕ್ಕುಪತ್ರಕ್ಕಾಗಿ ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಿರುವ ಹೆಚ್.ಡಿ.ಕೋಟೆ ಭಾಗದ 3318 ಕುಟುಂಬಗಳಿಗೆ ಹಕ್ಕುಪತ್ರವನ್ನು ನೀಡದಿರುವುದು ಬೇಸರ ತರಿಸಿದೆ. ನನ್ನ ಅಧಿಕಾರವಧಿಯಲ್ಲಿ ಎಲ್ಲರಿಗೂ ಹಕ್ಕುಪತ್ರ ನೀಡಿಯೇ ಸಿದ್ಧ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಮತ್ತು ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ ಬಿ. ನಾಗೇಂದ್ರ ಆದಿವಾಸಿ ಜನರಿಗೆ ಭರವಸೆ ನೀಡಿದ್ದಾರೆ.

ತಾಲೂಕಿನ ಸೊಳ್ಳೇಪುರ ಗ್ರಾಮದಲ್ಲಿರುವ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರಿನ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ ಇಂದು ಆಯೋಜಿಸಲಾಗಿದ್ದ ವಿಶ್ವ ಬುಡಕಟ್ಟು ದಿನಾಚರಣೆ ಹಾಗೂ ಫಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಕಟ್ಟಕಡೇಯ ವ್ಯಕ್ತಿಗೂ ಸಹ ಯೋಜನೆಗಳನ್ನು ತಲುಪಿಸುವ ಸಲುವಾಗಿ, ಕಾಡಿನಲ್ಲಿರುವ ಹಾಡಿಗಳಿಗೆ ಖುದ್ದಾಗಿ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ ಅರಿಯಲು ಅಲ್ಲೇ ವಾಸ್ತವ್ಯವನ್ನು ಹೂಡಲು ಆರಂಭಿಸಿದ್ದೇನೆ ಎಂದರು.

ಆದಿವಾಸಿಗಳಿಗೆ ಆದ ನೋವನ್ನು, ಸಮಸ್ಯೆಯನ್ನು ಕಣ್ಣಾರೆ ಕಂಡಿದ್ದೇನೆ. ಇಲ್ಲಿರುವ ಸಮಸ್ಯೆ ಮತ್ತು ನೋವನ್ನು ತೊಡೆದುಹಾಕುವ ನಿಟ್ಟಿನಲ್ಲಿ ನಾನು ಹೋರಾಟ ಮಾಡುತ್ತೇನೆ. ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಿಯೇ ಒದಗಿಸುತ್ತೇನೆ. ಆದಿವಾಸಿಗಳ ಕಷ್ಟ ಕಾರ್ಪಣ್ಯಗಳನ್ನು ಅರಿಯಲೆಂದೇ ಹಾಡಿ ವಾಸ್ತವ್ಯವನ್ನು ಹಮ್ಮಿಕೊಂಡಿದ್ದೇನೆ. ಮುಂದಿನ ವರ್ಷದೊಳಗಾಗಿ ಈ ಎಲ್ಲ ಸಮಸ್ಯೆಗಳಿಗೆ ಕೊನೆ ಹಾಡಲಾಗುವುದು ಎಂದು ಭರವಸೆ ನೀಡಿದರು.

ಆದಿವಾಸಿಗಳು ಪ್ರಾಣಿಗಳೊಂದಿಗೆ ನಿತ್ಯ ಸಂಘರ್ಷವನ್ನು ಎದುರಿಸುತ್ತಿದ್ದಾರೆ. ಅದು ಅವರಿಗೆ ಅಭ್ಯಾಸವಾಗಿದೆ. ಆದರೆ ನೀವು ಸರ್ಕಾರವನ್ನು ಬೇಡಿಕೊಳ್ಳುವ ಅಭ್ಯಾಸವಾಗಬಾರದು, ಆದ್ದರಿಂದ ಸರ್ಕಾರವೇ ನಿಮ್ಮ ಬೆನ್ನಹಿಂದೆ ನಿಂತು ಸಮಸ್ಯೆಯನ್ನು ಬಗೆಹರಿಸಲಿದೆ. ಮುಂದಿನ ದಿನಗಳಲ್ಲಿ ಆಶ್ರಮ ಶಾಲೆಯಲ್ಲಿ ಓದಿದ ಮಕ್ಕಳಿಗೆ ಮೊರಾರ್ಜಿ ಶಾಲೆಗೆ ಅಥವಾ ಏಕಲವ್ಯ ಶಾಲೆಗೆ ಸೇರಿಸುವ ಯೋಜನೆಯನ್ನು ಜಾರಿಗೊಳಿಸಲಾಗುವುದು. ಆದಿವಾಸಿಗಳ ಮನೆ ನಿರ್ಮಾಣಕ್ಕೆ 5 ಲಕ್ಷ ರೂ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದರು.

ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಆದಿವಾಸಿಗಳ ಅಭಿವೃದ್ಧಿಗಾಗಿ ಸದನದಲ್ಲಿ ನಾನೂ ಮಾತನಾಡುತ್ತಿದ್ದೇನೆ. ಅಭಿವೃದ್ಧಿಗೆ ಅಧಿಕಾರಿಗಳು ಶ್ರಮಿಸಬೇಕು ಎಂದರು.

ಆದಿವಾಸಿ ಮುಖಂಡ ಕಾಳ ಕಲ್ಕರ್ ಮಾತನಾಡಿ, ತಾಲೂಕಿನಲ್ಲಿ ಗಿರಿಜನ ಆಶ್ರಮ‌ ಶಾಲೆಯನ್ನು ಹೆಸರಿಗಷ್ಟೇ ತೆರೆಯಲಾಗಿದೆ. ಇಲ್ಲಿ ಖಾಯಂ ಶಿಕ್ಷಕರಿಲ್ಲ, ಖಾಯಂ ವಾರ್ಡನ್‌ಗಳಿಲ್ಲ, ಗುಣಮಟ್ಟದ ಶಿಕ್ಷಣ ಇಲ್ಲದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ಶಾಲೆಗಳನ್ನು ಶಿಕ್ಷಣ ಇಲಾಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ಹೆಚ್.ಡಿ.ಕೋಟೆ ಹಾಡಿಯಲ್ಲಿ ಸಚಿವ ನಾಗೇಂದ್ರ ವಾಸ್ಯವ್ಯ: ಮತ್ತೊಂದೆಡೆ, ಹೆಚ್‌.ಡಿ.ಕೋಟೆ ತಾಲೂಕಿನ ಕಾಡಂಚಿನ ಹಾಡಿಯಲ್ಲಿ ಪರಿಶಿಷ್ಟ ವರ್ಗಗಳ ಸಚಿವ ಬಿ‌.ನಾಗೇಂದ್ರ ವಾಸ್ತವ್ಯ ಹೂಡಿದ್ದಾರೆ. ಸಿ ಹಾಡಿ ಏಕಲವ್ಯ ವಸತಿ ಶಾಲೆಯಲ್ಲಿ ಕಾರ್ಯಕ್ರಮದಲ್ಲಿ ಸಚಿವರು ಜಮೀನಿನ ಹಕ್ಕುಪತ್ರ ವಿತರಿಸಿ ಮನೆಗಳ‌ ನಿರ್ಮಾಣಕ್ಕೆ ಒಂದು ವರ್ಷದ ಟಾರ್ಗೆಟ್ ನೀಡಿದ್ದಾರೆ. ಹಾಡಿಯ ಮಹಿಳೆಯರ ಜೊತೆ ಸಂವಾದ ನಡೆಸಿದಾಗ, ಮಹಿಳೆಯರು ಹಲವು ಸಮಸ್ಯೆಗಳನ್ನು ಹೇಳಿಕೊಂಡರು.

ದಶಕಗಳಿಂದ ಕಾಡಿನಲ್ಲಿದ್ದು ಮೂಲಭೂತ ಸೌಕರ್ಯ ವಂಚಿತರಾಗಿದ್ದೇವೆ. ನಮಗೆ ಮನೆ, ನೀರು, ಶಾಲೆಗಳಿಲ್ಲ. ಪೂರ್ವಿಕರ ಕಾಲದಿಂದ ಉಳುಮೆ‌ ಮಾಡಿಕೊಂಡು ಬಂದ ಜಮೀನಿಗೆ ಹಕ್ಕು ಪತ್ರ ನೀಡಿಲ್ಲ. ದಯಮಾಡಿ ಹಕ್ಕು ಪತ್ರ ಕೊಡಿಸಿ ಎಂದು ಮ‌ನವಿ ಮಾಡಿದರು.

ಇನ್ನು ಕೆಲವರು, ನಮ್ಮ ಬಳಿ ಆಧಾರ್ ಕಾರ್ಡ್ ಇಲ್ಲ ಎಂದರು. ಇದಕ್ಕುತ್ತರಿಸಿದ, ಸಚಿವರು ನಾಳೆಯಿಂದಲೇ ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ಡ್ರೈವ್ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ನಾಳೆ ಪ್ರತಿ ಮನೆಗೂ ಭೇಟಿ ನೀಡಿ ಸಮಸ್ಯೆ ಅಲಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಅನಿಲ್ ಚಿಕ್ಕಮಾದು, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ನಿರ್ದೇಶಕ ರಾದ ಕಲ್ಲೇಶಪ್ಪ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ನಿರ್ದೇಶಕ ಪದ್ಮನಾಭ ಸೇರಿದಂತೆ ಬುಡಕಟ್ಟು ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಇದನ್ನೂ ಓದಿ:Terracotta Snake: ಉತ್ಖನನದ ವೇಳೆ 2 ಸಾವಿರ ವರ್ಷಗಳಷ್ಟು ಹಳೆಯ ಮಣ್ಣಿನ ಹಾವಿನ ಹೆಡೆ ಪತ್ತೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.