ETV Bharat / state

ಮೈಸೂರು: ತ್ರಿನೇಶ್ವರ ದೇವಾಲಯಕ್ಕೆ ಬಂತು 11 ಕೆ.ಜಿ ತೂಕದ ಶಿವನ ಚಿನ್ನದ ಮುಖವಾಡ

author img

By

Published : Feb 17, 2023, 9:49 PM IST

ಶಿವನ ಚಿನ್ನದ ಮುಖವಾಡ ಕೊಳಗವನ್ನು ಜಿಲ್ಲಾ ಖಜಾನೆಯಿಂದ ಪೊಲೀಸ್ ಬಿಗಿ ಭದ್ರತೆಯಲ್ಲಿ ತ್ರಿನೇಶ್ವರ ದೇವಾಲಯಕ್ಕೆ ತರಲಾಯಿತು.

11 kg gold mask of Lord Shiva arrived
ತ್ರಿನೇಶ್ವರ ದೇವಾಲಯಕ್ಕೆ ಬಂದ 11 ಕೆಜಿ ತೂಕದ ಶಿವನ ಚಿನ್ನದ ಮುಖವಾಡ

ತ್ರಿನೇಶ್ವರ ದೇವಾಲಯಕ್ಕೆ ಬಂತು 11 ಕೆಜಿ ತೂಕದ ಶಿವನ ಚಿನ್ನದ ಮುಖವಾಡ

ಮೈಸೂರು: ಅರಮನೆ ಆವರಣದ ಇತಿಹಾಸ ಪ್ರಸಿದ್ಧ ಶ್ರೀ ತ್ರಿನೇಶ್ವರ ಶಿವಲಿಂಗಕ್ಕೆ ಮಹಾಶಿವರಾತ್ರಿ ಹಬ್ಬದಂದು ಧಾರಣೆ ಮಾಡುವ 11 ಕೆ.ಜಿ ತೂಕದ ಚಿನ್ನದ ಶಿವನ ಮುಖವಾಡದ ಕೊಳಗ ಜಿಲ್ಲಾ ಖಜಾನೆಯಿಂದ ಇಂದು ಆಗಮಿಸಿತು. ನಾಳೆ ಬೆಳಗ್ಗೆ 6 ಗಂಟೆಗೆ ಇಲ್ಲಿನ ಮೂಲ ಲಿಂಗಕ್ಕೆ ಮುಖವಾಡ ಕೊಳಗ ಧಾರಣೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆ ಮುಂಭಾಗದ ಜಯಮಾರ್ತಾಂಡ ದ್ವಾರದ ಪಕ್ಕದಲ್ಲಿ ಪುರಾಣ ಪ್ರಸಿದ್ಧ ತ್ರಿನೇಶ್ವರ ದೇವಾಲಯವಿದೆ. ಇಲ್ಲಿನ ಶಿವಲಿಂಗಕ್ಕೆ ರಾಜವಂಶಸ್ಥ ಜಯಚಾಮರಾಜೇಂದ್ರ ಒಡೆಯರ್ ಅವರು 1954 ರಲ್ಲಿ ತಮಗೆ ಗಂಡು ಮಗು ಶ್ರೀ ಕಂಠದತ್ತ ನರಸಿಂಹರಾಜ ಒಡೆಯರ್ ಜನಿಸಿದ ಸಂದರ್ಭದಲ್ಲಿ 11 ಕೆಜಿ ತೂಕದ ಪರಿಶುದ್ಧ ಚಿನ್ನದ ಶಿವನ ಮುಖವಾಡದ ಕೊಳಗ ಮಾಡಿಸಿ ಕೊಟ್ಟಿದ್ದರಂತೆ. ವರ್ಷದಲ್ಲಿ ಮಹಾಶಿವರಾತ್ರಿಯ ದಿನ ಮಾತ್ರ ಈ ಚಿನ್ನದ ಕೊಳಗವನ್ನು ಶಿವನಿಗೆ ಧರಿಸಿ ಪೂಜೆ ಸಲ್ಲಿಸುವುದು ವಾಡಿಕೆ.

ಕೊಳಗದಲ್ಲಿ ಒಂದು ಚಿನ್ನದ ಜಟಾ ಮುಕುಟ, ಒಂದು ಚಿನ್ನದ ತಾಟಂಕ, ಒಂದು ಚಿನ್ನದ ಕರ್ಣಕುಂಡಲ, ಎರಡು ಕೆಂಪು ಹರಳಿನ ಓಲೆ, ಎರಡು ಲೋಲಂಕ, ಹಣೆಯ ಮೇಲೆ ಕೆಂಪು ಕಲ್ಲಿನ ತಿಲಕ, ಸಣ್ಣ ಮೂಗುತಿ ಇರುವ ಒಂದು ಚಿನ್ನದ ಗಂಗೆ, ಏಳು ಕೆಂಪು ಕಲ್ಲುಗಳು, ಬೆಳ್ಳಿಯ ಅರ್ಧ ಚಂದ್ರ ಮತ್ತು ಬೆಳ್ಳಿಯ ತಿರುಪವಿದೆ.

2 ದಿನ ಭಕ್ತರಿಗೆ ದರ್ಶನ: ತ್ರಿನೇಶ್ವರ ದೇವಸ್ಥಾನವನ್ನು ಋಷಿಮುನಿಗಳು ಕಟ್ಟಿಸಿರುವ ಉಲ್ಲೇಖವಿದೆ. ದೇವಸ್ಥಾನ ಜಯಚಾಮರಾಜೇಂದ್ರ ಒಡೆಯರ್ ಅವರಿಗೆ ಪ್ರವಚನ ಬರೆಯಲು ಶಕ್ತಿ ಕೊಟ್ಟ ಸ್ಥಳವಂತೆ.
ನಾಳೆ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಭಕ್ತರು ತ್ರಿನೇಶ್ವರ ಸ್ವಾಮಿಯ ದರ್ಶನ ಪಡೆಯಬಹುದು. ಶಿವರಾತ್ರಿಯ ನಂತರ ಬೆಳಗ್ಗೆ ಭಾನುವಾರ ಚಿನ್ನದ ಕೊಳಗವನ್ನು ತೆಗೆದುಕೊಂಡು ಹೋಗಲು ಸಾಧ್ಯವಾಗದ ಕಾರಣ ಭಾನುವಾರವೂ ಸಹ ಚಿನ್ನದ ಮುಖವಾಡದ ಕೊಳಗದ ದರ್ಶನವನ್ನು ಭಕ್ತರು ಪಡೆಯಬಹುದು ಎಂದು ಮುಜರಾಯಿ ಇಲಾಖೆಯ ತಹಸೀಲ್ದಾರ್ ಕೃಷ್ಣ ಮಾಹಿತಿ ನೀಡಿದರು.

ಇದನ್ನೂಓದಿ: Karnataka Budget: 2023-24ರ ಬಜೆಟ್​ ಮುಖ್ಯಾಂಶಗಳು ಹೀಗಿವೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.