ETV Bharat / state

ಮೈಸೂರಿನಲ್ಲಿ ಗರಿಗೆದರಿದ ಪರಿಷತ್ ಚುನಾವಣಾ ಕಾವು.. ಟಿಕೆಟ್‌ಗಾಗಿ ಮೂರು ಪಕ್ಷಗಳಲ್ಲೂ ಪೈಪೋಟಿ

author img

By

Published : Nov 12, 2021, 5:46 PM IST

ಜೆಡಿಎಸ್ ತೊರೆದು ಬಿಜೆಪಿ ಸೇರಲಿರುವ ಹಾಲಿ ಜೆಡಿಎಸ್ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಹಾಗೂ ಕಳೆದ ಬಾರಿ ಪರಾಭವಗೊಂಡಿದ್ದ ಕೌಟಿಲ್ಯ ರಘು ನಡುವೆ ಬಿಜೆಪಿ ಟಿಕೆಟ್‌ ಪಡೆಯಲು ಸ್ಪರ್ಧೆ ಇದೆ. ಎರಡರಲ್ಲಿ ಒಂದು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಸ್ಪರ್ಧೆ ಮಾಡಲಿದೆ. ಕಾಂಗ್ರೆಸ್‌ನಿಂದ ಹಾಲಿ ಪರಿಷತ್ ಸದಸ್ಯ ಆರ್.ಧರ್ಮಸೇನಾ ಅವರಿಗೆ ಕಾಂಗ್ರೆಸ್ ಟಿಕೆಟ್ ಖಚಿತವಾಗಲಿದೆ. ಇದರ ಜೊತೆಗೆ ಇನ್ನು ನಾಲ್ಕು ಜನ ಆಕಾಂಕ್ಷಿಗಳಿದ್ದಾರೆ. ಜೆಡಿಎಸ್‌ನಿಂದ ಹೊಸ ಮುಖಗಳ ಹುಡುಕಾಟ ಆರಂಭವಾಗಿದೆ. ಯಾರಿಗೆ ಟಿಕೆಟ್ ಎಂಬುದು ಇನ್ನೂ ಖಚಿತವಾಗಿಲ್ಲ..

ಮೈಸೂರಿನಲ್ಲಿ ಗರಿಗೆದರಿದ ಪರಿಷತ್ ಚುನಾವಣಾ ಕಾವು
ಮೈಸೂರಿನಲ್ಲಿ ಗರಿಗೆದರಿದ ಪರಿಷತ್ ಚುನಾವಣಾ ಕಾವು

ಮೈಸೂರು : ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್​​ಗೆ ನಡೆಯುವ ಚುನಾವಣೆಗೆ (Legislative Council Election ) ಟಿಕೆಟ್ ಪಡೆಯಲು ಮೂರು ಪಕ್ಷಗಳಲ್ಲಿ ಪೈಪೋಟಿ ಶುರುವಾಗಿದೆ.

ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಲು ನಡೆಯುವ ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿಯಿಂದ ಮೂವರು ಟಿಕೆಟ್ ಪಡೆಯಲು ಲಾಬಿ ನಡೆಸುತ್ತಿದ್ದಾರೆ. ಅದರಲ್ಲು ಜೆಡಿಎಸ್ ತೊರೆದು ಬಿಜೆಪಿ ಸೇರಲಿರುವ ಹಾಲಿ ಜೆಡಿಎಸ್ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಹಾಗೂ ಕಳೆದ ಬಾರಿ ಪರಾಭವಗೊಂಡಿದ್ದ ಕೌಟಿಲ್ಯ ರಘು ನಡುವೆ ತೀವ್ರ ಸ್ಪರ್ಧೆ ಇದೆ.

ಎರಡರಲ್ಲಿ ಒಂದು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಸ್ಪರ್ಧೆ ಮಾಡಲಿದೆ. ಕಾಂಗ್ರೆಸ್‌ನಿಂದ ಹಾಲಿ ಪರಿಷತ್ ಸದಸ್ಯ ಆರ್.ಧರ್ಮಸೇನಾ ಅವರಿಗೆ ಕಾಂಗ್ರೆಸ್ ಟಿಕೆಟ್ ಖಚಿತವಾಗಲಿದೆ. ಇದರ ಜೊತೆಗೆ ಇನ್ನು ನಾಲ್ಕು ಜನ ಆಕಾಂಕ್ಷಿಗಳಿದ್ದಾರೆ. ಜೆಡಿಎಸ್‌ನಿಂದ ಹೊಸ ಮುಖಗಳ ಹುಡುಕಾಟ ಆರಂಭವಾಗಿದೆ. ಯಾರಿಗೆ ಟಿಕೆಟ್ ಎಂಬುದು ಇನ್ನೂ ಖಚಿತವಾಗಿಲ್ಲ.

ಎರಡು ಸ್ಥಾನಗಳಿಗೆ 6,765 ಮತದಾರರು : ಮೈಸೂರು ನಗರ ಪಾಲಿಕೆ ಸೇರಿದಂತೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯತ್ ಸದಸ್ಯರು, ಆಯಾ ಕ್ಷೇತ್ರದ ಶಾಸಕರು ವಿಧಾನ ಪರಿಷತ್ ಸದಸ್ಯರು ಮತದಾನ ಚಲಾಯಿಸುವ ಹಕ್ಕು ಪಡೆದಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಒಟ್ಟು 4,229, ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟು 2,156 ಗ್ರಾಮ ಪಂಚಾಯತ್ ಸದಸ್ಯರಿದ್ದಾರೆ. ಇವರ ಜೊತೆಗೆ ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರದ MLAಗಳು ಹಾಗೂ MLCಗಳು, ಚಾಮರಾಜನಗರ ಜಿಲ್ಲೆಯ 4 MLAಗಳು, MLCಗಳು ಸೇರಿ ಒಟ್ಟು 6,765 ಮತದಾರರು ಮತ ಚಲಾಯಿಸಲಿದ್ದಾರೆ.

ಗ್ರಾಪಂ ಸದಸ್ಯರಿಗೆ ಫುಲ್​​ ಡಿಮ್ಯಾಂಡ್ : ಸ್ಥಳೀಯ ಸಂಸ್ಥೆಗಳಿಂದ ಎರಡು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಿಗೆ ಹೆಚ್ಚಿನ ಡಿಮ್ಯಾಂಡ್ ಇದೆ. ಮೈಸೂರು ಜಿಲ್ಲೆಯಲ್ಲಿ 4,229 ಹಾಗೂ ಚಾಮರಾಜನಗರ ಜಿಲ್ಲೆಯ 2,156 ಸದಸ್ಯರು ಸೇರಿ ಒಟ್ಟು 6385 ಗ್ರಾಪಂ ಸದಸ್ಯರಿದ್ದಾರೆ. ಇವರು ಪಕ್ಷದ ಚಿಹ್ನೆಯಿಂದ ಗೆದ್ದಿಲ್ಲ. ಆದ್ದರಿಂದ ಇವರು ಯಾವ ಪಕ್ಷಕ್ಕೆ ನಿಷ್ಠರಾಗಿರುತ್ತಾರೋ ಅವರು ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಮೂರು ಪಕ್ಷದ ಅಭ್ಯರ್ಥಿಗಳು ಗ್ರಾಪಂ ಸದಸ್ಯರನ್ನು ಒಲಿಸಿಕೊಳ್ಳಲು ಪ್ರಯತ್ನ ಪಡುತ್ತಾರೆ.

ಇದರ ಜೊತೆಗೆ ಎರಡು ಜಿಲ್ಲೆಯಿಂದ 65 ಮಂದಿ ನಗರ ಪಾಲಿಕೆ ಸದಸ್ಯರು, ನಗರ ಸಭೆಯ 123 ಸದಸ್ಯರು, ಪುರಸಭೆಯ 138 ಸದಸ್ಯರು, ಪಟ್ಟಣ ಪಂಚಾಯತ್‌ನ 36 ಸದಸ್ಯರು ಇವರ ಜೊತೆಗೆ 2 ಜಿಲ್ಲೆಯಿಂದ 15 ಜನ ಶಾಸಕರು ಮತದಾನದ ಹಕ್ಕು ಪಡೆದಿರುತ್ತಾರೆ.

ತ್ರಿಕೋನ ಸ್ಪರ್ಧೆ ಸಾಧ್ಯತೆ : ಕಳೆದ ಬಾರಿ ಈ ಎರಡು ಕ್ಷೇತ್ರಗಳಿಂದ ಕಾಂಗ್ರೆಸ್‌ನಿಂದ ಆರ್.ಧರ್ಮಸೇನ, ಜೆಡಿಎಸ್‌ನಿಂದ ಸಂದೇಶ್ ನಾಗರಾಜ್ ಆಯ್ಕೆಯಾಗಿದ್ದರು. ಈ ಬಾರಿ ಕಾಂಗ್ರೆಸ್‌ನಿಂದ ಧರ್ಮಸೇನಾಗೆ ಟಿಕೆಟ್ ಖಚಿತವಾಗಿದೆ. ಜೆಡಿಎಸ್ ತೊರೆದಿರುವ ಸಂದೇಶ್ ನಾಗರಾಜ್ ಬಿಜೆಪಿಯಿಂದ ಟಿಕೆಟ್ ಪಡೆಯಲು ಪ್ರಯತ್ನ ನಡೆಸುತ್ತಿದ್ದಾರೆ.

ಜೆಡಿಎಸ್‌ನಿಂದ ಹೊಸ ಮುಖ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲಿದೆ. ಮೂರು ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ನಡೆಯಲಿದೆ. ಅಭ್ಯರ್ಥಿಗಳ ವರ್ಚಸ್ಸು, ಪ್ರಭಾವ, ಆರ್ಥಿಕ ಬಲ ಹಾಗೂ ಜಾತಿ ಲೆಕ್ಕಾಚಾರಗಳು ಕೊನೆಯ ಕ್ಷಣದಲ್ಲಿ ವರ್ಕೌಟ್ ಆಗಲಿದ್ದು, ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಯಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಗ್ರಾಪಂ ಸದಸ್ಯರನ್ನು ಹೆಚ್ಚಾಗಿ ಒಲಿಸಿಕೊಳ್ಳುವ ಇಬ್ಬರು ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ.

ಅದಕ್ಕಿಂತ ಮುನ್ನ ಎರಡು ರಾಷ್ಟ್ರೀಯ ಪಕ್ಷಗಳ ಟಿಕೆಟ್ ಪಡೆಯಲು ಹಾಗೂ ಪ್ರಾದೇಶಿಕ ಪಕ್ಷ ಜೆಡಿಎಸ್‌ನ ಅಚ್ಚರಿಯ ಅಭ್ಯರ್ಥಿಯ ಆಯ್ಕೆಯ ಮೇಲೆ ಗೆಲುವಿನ ಲೆಕ್ಕಾಚಾರ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.