ETV Bharat / state

ಸ್ವಾತಂತ್ರ್ಯ ಬಂದು 77 ವರ್ಷ ಕಳೆದರೂ ಮಹದೇವ ನಗರ ನಿವಾಸಿಗಳಿಗೆ ಇಲ್ಲ ಮೂಲ ಸೌಕರ್ಯ

author img

By

Published : Aug 16, 2023, 10:18 AM IST

Updated : Aug 16, 2023, 12:35 PM IST

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಮಹದೇವ ನಗರ ನಿವಾಸಿಗಳು ಒಳ ಚರಂಡಿ, ರಸ್ತೆ, ಶುದ್ಧ ಕುಡಿಯುವ ನೀರಿನ ಸೌಲಭ್ಯ ಹಾಗೂ ವಿದ್ಯುತ್ ದೀಪ ಇಲ್ಲದೇ ದಿನ ದೂಡುತ್ತಿದ್ದಾರೆ.

Lack of basic amenities in  Mahadev Nagar
ಮಹದೇವ ನಗರ

ಮೂಲ ಸೌಕರ್ಯ ಒದಗಿಸುವಂತೆ ಸ್ಥಳೀಯರ ಆಗ್ರಹ..

ಮೈಸೂರು: ದೇಶಕ್ಕೆ ಸ್ವಾತಂತ್ರ್ಯ ಬಂದು 77 ವರ್ಷಗಳು ಪೂರೈಸಿವೆ. ಆದರೆ, ನಂಜನಗೂಡು ತಾಲೂಕಿನ ಮಹದೇವ ನಗರದ ನಿವಾಸಿಗಳು ಇನ್ನೂ ಕೂಡ ಮೂಲ ಸೌಕರ್ಯಗಳಿಲ್ಲದೇ ಪರದಾಡುವಂತಾಗಿದೆ. ಹೌದು ಮುಖ್ಯಮಂತ್ರಿಗಳ ತವರು ಜಿಲ್ಲೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಬದನವಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹದೇವ ನಗರ ಗ್ರಾಮದಲ್ಲಿ ನಿವಾಸಿಗಳು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ.

ಮಾಜಿ ಸಚಿವ ದಿ. ಬೆಂಕಿ ಮಹದೇವು ಅವರು ಅಂದು ಆಶ್ರಯ ಯೋಜನೆಯಡಿ ಗುಂಪು ಮನೆಗಳನ್ನು ನಿರ್ಮಿಸಿ ಕೊಟ್ಟಿದ್ದರು. ಆದರೆ, ಇನ್ನೂ ಅಭಿವೃದ್ಧಿ ಕಾಣದೇ ಅವರ ಕನಸು ಭಗ್ನಗೊಂಡಿದೆ. ಒಳ ಚರಂಡಿ, ರಸ್ತೆ, ಶುದ್ಧ ಕುಡಿವ ನೀರಿನ ಸೌಲಭ್ಯ, ವಿದ್ಯುತ್ ದೀಪ ಇಲ್ಲದೇ ಗ್ರಾಮಸ್ಥರು‌ ದಿನ ದೂಡುತ್ತಿದ್ದಾರೆ. ತೆಂಗಿನ ಗರಿಯ ಸೆಡ್ಡು ಹಾಗೂ ತಗಡಿನಲ್ಲೇ ಮನೆ ನಿರ್ಮಿಸಿ ಜನರು ವಾಸಿಸುತ್ತಿದ್ದಾರೆ. ಮಳೆ ಬಂದಾಗ ಜನರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕು ಸಾಗಿಸುತ್ತಿದ್ದಾರೆ.

"ನಮ್ಮನ್ನು ಬರಿ ವೋಟ್ ಬ್ಯಾಂಕ್​ಗಾಗಿ ಬಳಸಿಕೊಳ್ಳುತ್ತಾರೆ. ಸರ್ಕಾರದಿಂದ ಮನೆಗಳನ್ನು ಮಂಜೂರು ಮಾಡಿಲ್ಲ. ನಾವು ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದೇವೆ. ನಮಗೆ ಮನೆ ನಿರ್ಮಿಸಿ ಕೊಡಿ" ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ರಾತ್ರಿ ಸಮಯದಲ್ಲಿ ವಿದ್ಯುತ್ ಇಲ್ಲ, ವಿದ್ಯಾರ್ಥಿಗಳಿಗೆ ಓದಿಕೊಳ್ಳಲು ತುಂಬಾ ತೊಂದರೆಯಾಗಿದೆ. ಜಲ ಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ನಲ್ಲಿಗಳನ್ನು ಹಾಕಲಾಗಿದೆ. ಆದರೆ, ಕಾಮಗಾರಿ ಮುಗಿದರೂ ಕುಡಿಯಲು ನೀರು ಬರುತ್ತಿಲ್ಲ. ಇನ್ನಾದರೂ ಎಚ್ಚೆತ್ತುಕೊಂಡು ಗ್ರಾಮಕ್ಕೆ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಗ್ರಾಮಸ್ಥರ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಮೂಲ ಸೌಕರ್ಯಗಳಿಲ್ಲದೇ ಬಳಲುತ್ತಿರುವ ಕಳಸ ತಾಲೂಕಿನ ಗ್ರಾಮಗಳು: ಸಮಸ್ಯೆ ಪರಿಹರಿಸುವಂತೆ ಗ್ರಾಮಸ್ಥರ ಆಗ್ರಹ

ಮೂಲ ಸೌಕರ್ಯಗಳಿಲ್ಲದೇ ಬಳಲುತ್ತಿರುವ ಕಳಸ ತಾಲೂಕಿನ ಗ್ರಾಮಗಳು: ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹತ್ತಾರು ಹಳ್ಳಿಗಳು ಇಂದಿಗೂ ಕನಿಷ್ಠ ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. ತಾಲೂಕಿನ ಎಸ್​​ಕೆ ಮೇಗಲ್, ಕೊಣೆಗೋಡು, ವಾಟೆಹಳ್ಳ ಗ್ರಾಮಸ್ಥರು ಮಳೆಗಾಲದಲ್ಲಿ ಹಳ್ಳ ದಾಟಲು ಪರದಾಟ ನಡೆಸುತ್ತಿದ್ದಾರೆ. ಈ ಪ್ರದೇಶಗಳಲ್ಲಿ ರಸ್ತೆ, ಕಿರು ಸೇತುವೆ ಜೊತೆಗೆ ನೆಟ್‌ವರ್ಕ್ ಸಮಸ್ಯೆ ಇದೆ. ಶೀಘ್ರವೇ ಸಮಸ್ಯೆ ಸರಿಪಡಿಸಿದರೆ ಸಾಕು. ನಮಗೆ ಬೇರೇನೂ ಬೇಡ ಎಂದು ಗ್ರಾಮಸ್ಥರು ಇತ್ತೀಚೆಗೆ ಮನವಿ ಮಾಡಿದ್ದರು.

ಈ ಗ್ರಾಮಗಳಲ್ಲಿ ಜನರು ತಾವೇ ನಿರ್ಮಿಸಿರುವ ಸಂಕದ ಮೂಲಕವೇ ಹಳ್ಳ ದಾಟಬೇಕು. ಚುನಾವಣೆ ಹೊತ್ತಲ್ಲಿ ಬಂದು ಹೋಗುವ ರಾಜಕಾರಣಿಗಳು ಇಲ್ಲಿಗೆ ಬಂದು ರಸ್ತೆ ಸೇತುವೆಗೆ ದುಡ್ಡು ಮಂಜೂರಾಗಿದೆ ಎಂದು ಬಣ್ಣದ ಮಾತನಾಡುತ್ತಾರೆ. ಆಮೇಲೆ ನಮ್ಮ ಗೋಳು ಕೇಳುವವರಿಲ್ಲ. ಮೂಗಿಗೆ ತುಪ್ಪ ಸವಾರಿ ಹೋಗಿರುವರೇ ಹೆಚ್ಚು. ಇನ್ನಾದರೂ ಸಂಬಂಧ ಪಟ್ಟವರು ಈ ಗ್ರಾಮಗಳ ಸಮಸ್ಯೆಯನ್ನು ಬಗೆ ಹರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದರು.

ಇದನ್ನೂ ಓದಿ: ಮತದಾನ ಬಹಿಷ್ಕರಿಸಿದರೂ ಗ್ರಾಮಸ್ಥರಿಗೆ ಸಿಗದ ಮೂಲಭೂತ ಸೌಕರ್ಯ

Last Updated : Aug 16, 2023, 12:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.