ETV Bharat / state

ಚಿರತೆ ದಾಳಿಗೆ ಬಲಿಯಾದ ಬಾಲಕಿಯ ಕುಟುಂಬಕ್ಕೆ 15 ಲಕ್ಷ ರೂಪಾಯಿ ಪರಿಹಾರ: ಸಚಿವ ಈಶ್ವರ್​ ಖಂಡ್ರೆ

author img

By

Published : Jul 15, 2023, 5:19 PM IST

ಗ್ಯಾರಂಟಿಗಾಗಿ 52 ಸಾವಿರ ಕೋಟಿ ಮೀಸಲಿಟ್ಟು, ಅದನ್ನು ಅನುಷ್ಠಾನಕ್ಕೆ ತರುವ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.

ishwara-khandre-announced-15-lakh-compensation-to-family-of-girl-died-by-leopard-attack
ಚಿರತೆ ದಾಳಿಗೆ ಬಲಿಯಾದ ಬಾಲಕಿಯ ಕುಟುಂಬಕ್ಕೆ 15 ಲಕ್ಷ ರೂಪಾಯಿ ಪರಿಹಾರ: ಸಚಿವ ಈಶ್ವರ್​ ಖಂಡ್ರೆ

ಮೈಸೂರು: ಚಿರತೆ ದಾಳಿಯಿಂದ ಮೃತಪಟ್ಟ ಬಾಲಕಿ ಕುಟುಂಬಕ್ಕೆ 15 ಲಕ್ಷ ಪರಿಹಾರ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿರುವುದಾಗಿ ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್​ ಖಂಡ್ರೆ ಹೇಳಿದ್ದಾರೆ. ಸುತ್ತೂರು ಮಠಕ್ಕೆ ಭೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರು ಮತ್ತು ಚಾಮರಾಜನಗರದಲ್ಲಿ ಸಾಕಷ್ಟು ಅರಣ್ಯ ಸಂಪತ್ತು ಹೊಂದಿದ್ದೇವೆ. ಇಲ್ಲಿ ಹುಲಿ ಸಂರಕ್ಷಣಾ ಪ್ರದೇಶ ಇದ್ದು, ಪರಿಸರ ಮತ್ತು ಪ್ರಾಣಿಗಳ ರಕ್ಷಣೆಗೆ ಜೊತೆಗೆ ಪ್ರಾಣಿ ಮತ್ತು ಮಾನವ ಸಂಘರ್ಷ ತಡೆಗಟ್ಟುವುದು ಮುಖ್ಯವಾಗಿದೆ ಎಂದರು.

ishwara-khandre-announced-15-lakh-compensation-to-family-of-girl-died-by-leopard-attack
ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀ ಗಳ ಆಶೀರ್ವಾದ ಪಡೆದ ಈಶ್ವರ ಖಂಡ್ರೆ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಗ್ಗಲಿಗುಂಡಿ ಗ್ರಾಮದಲ್ಲಿ, ಜೂ.26 ರಂದು ಮನೆ ಮುಂದೆ ಆಟವಾಡುತ್ತಿದ್ದ ಸುಶೀಲಾ ಎಂಬ ಬಾಲಕಿಯ ಮೇಲೆ ಚಿರತೆ ದಾಳಿ ಮಾಡಿತ್ತು. ಗಾಯಗೊಂಡಿದ್ದ ಬಾಲಕಿ ಮೈಸೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದುರಾದೃಷ್ಟವಶಾತ್​ ಚಿಕಿತ್ಸೆ ಫಲಕಾರಿಯಾಗದೇ ಇಂದು ಬಾಲಕಿ ಮೃತಪಟ್ಟಿದ್ದಾಳೆ. ಹೀಗಾಗಿ ಬಾಲಕಿಯ ಕುಟುಂಬಕ್ಕೆ 15 ಲಕ್ಷ ಪರಿಹಾರ ಹಣ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.

ಕುಟುಂಬದ ಬೇಡಿಕೆಯಂತೆ ನಾಲ್ಕು ಸಾವಿರ ರೂಪಾಯಿ ಮಾಶಾಸನ ನೀಡುವ ಕುರಿತು ಪರಿಶೀಲಿಸಲಾಗುವುದು, ಇಂದು ಅಧಿವೇಶನ ನಡೆಯುತ್ತಿದ್ದರು, ಅದನ್ನು ಬಿಟ್ಟು ಹೆಚ್.ಡಿ.ಕೋಟೆ ಕಾರ್ಯಕ್ರಮ ಹಾಗೂ ಮೈಸೂರಿನ ಅರಣ್ಯ ಭವನದಲ್ಲಿ ಪ್ರಗತಿ ಪರಿಶೀಲನೆ ನಡೆಸಲಾಗುವುದು ಎಂದು ಈಶ್ವರ್​​ ಖಂಡ್ರೆ ತಿಳಿಸಿದರು.

ಅಧಿಕಾರ ಹಂಚಿಕೆ ಪ್ರಶ್ನೆ ಅಪ್ರಸ್ತುತ: ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಅಧಿಕಾರ ಹಂಚಿಕೆಯಾಗುತ್ತದೆ ಎಂಬ ಹಿರಿಯ ಶಾಸಕ ಆರ್​.ವಿ. ದೇಶಪಾಂಡೆ ಹೇಳಿಕೆಗೆ ಪ್ರತಿಕ್ರಿಯಿಸಿ, ಈಗ ಆ ಪ್ರಶ್ನೆ ಅಪ್ರಸ್ತುತ. ಕಾಂಗ್ರೆಸ್ ಸರ್ಕಾರ ಬಡವರಿಗೆ ಏನು ಮಾಡುತ್ತಿದೆ ಎಂಬುದನ್ನು ಚರ್ಚೆ ಮಾಡಿ. ನಮ್ಮ ಸರ್ಕಾರ ಸುಭದ್ರವಾಗಿದೆ. ಉತ್ತಮ ಹಾಗೂ ಒಳ್ಳೆಯ ಆಡಳಿತವನ್ನು ಜನರಿಗೆ ಕೊಡುತ್ತಿದ್ದೇವೆ. ಗ್ಯಾರಂಟಿ ಯೋಜನೆಯನ್ನು ಜಾರಿಮಾಡುತ್ತಿದ್ದೇವೆ.

ನಿತ್ಯ 50 ಲಕ್ಷ ಜನ ಮಹಿಳೆಯರು ಶಕ್ತಿ ಯೋಜನೆಯನ್ನು ಉಪಯೋಗಿಸುತ್ತಿದ್ದಾರೆ. ಗ್ಯಾರಂಟಿಗಾಗಿ 52 ಸಾವಿರ ಕೋಟಿ ಮೀಸಲಿಟ್ಟು, ಅದನ್ನು ಅನುಷ್ಠಾನಕ್ಕೆ ತರುವ ಪ್ರಯತ್ನ ನಡೆಸುತ್ತಿದ್ದೇವೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಮಾಡಲು ಸಿದ್ದರಾಮಯ್ಯ, ಡಿಕೆಶಿ ನೇತೃತ್ವದಲ್ಲಿ ಎಲ್ಲವೂ ನಡೆಯುತ್ತಿದೆ. ಅಧಿಕಾರ ಹಂಚಿಕೆ ಎಂಬ ಪ್ರಶ್ನೆ ಅಪ್ರಸ್ತುತ ಎಂದು ಉತ್ತರಿಸಿದರು.

ಕಾಡಾನೆ ದಾಳಿ ತಡೆಯಲು ಕ್ರಮ: ಆನೆಗಳ ತುಳಿತದಿಂದ ಸಾವುಗಳು ಸಂಭವಿಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಆನೆಗಳು ಚಲಿಸುತ್ತಲೇ ಇರುತ್ತವೆ. ಅದನ್ನು ತಡೆಯಲು ಆಗುವುದಿಲ್ಲ. ಆದರೆ ಇದಕ್ಕೆ ಪರಿಹಾರವಾಗಿ ಬ್ಯಾರಿಕೇಡ್ ಅಳವಡಿಕೆ, ಸೋಲಾರ್, ಕಂದಕಗಳ ನಿರ್ಮಾಣ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದು. ರಾಜ್ಯದಲ್ಲಿ 640 ಕಿಮೀ ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ ಪ್ರಸ್ತಾವನೆ ಇದ್ದು.‌ ಈಗಾಗಲೇ 312 ಕಿಮೀ ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಇನ್ನೂ 330 ಕಿಮೀ ರೈಲ್ವೆ ಬ್ಯಾರಿಕೇಡ್ ಅಳವಡಿಸಬೇಕಾಗಿದ್ದು, ಒಂದು ಕಿಮೀ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಲು 1.5 ಕೋಟಿ ಹಣ ಬೇಕಾಗುತ್ತದೆ. ಒಂದೇ ಬಾರಿಗೆ ಅನುದಾನ ಸಿಗುವುದಿಲ್ಲ. ಈಗಾಗಲೇ ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಮನವಿ ಮಾಡಿದ್ದೇನೆ ಎಂದು ಹೇಳಿದರು.

ರಾಜ್ಯದಲ್ಲಿ 5 ನಗರಗಳನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಗುರಿ: ಚಾಮುಂಡಿ ಬೆಟ್ಟದಂತಹ ಧಾರ್ಮಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿರುವ ಬಗ್ಗೆ ಮಾತನಾಡಿದ ಸಚಿವ ಈಶ್ವರ್​ ಖಂಡ್ರೆ, ಏಕ ಬಳಕೆ ಪ್ಲಾಸ್ಟಿಕ್ ಅನ್ನು ಉಪಯೋಗಿಸುವ ಬಗ್ಗೆ ಈಗಾಗಲೇ ಕಾಯ್ದೆ ಕಾನೂನುಗಳನ್ನು ಜಾರಿ ಮಾಡಲಾಗಿದ್ದು.‌ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಇದನ್ನು ಜಾರಿಗೊಳಿಸುವ ಬಗ್ಗೆ ಜಾಗೃತಿ ಅವಶ್ಯಕವಾಗಿದೆ.

ಪ್ಲಾಸ್ಟಿಕ್ ಪರಿಸರಕ್ಕೆ ಅಪಾಯಕಾರಿಯಾಗಿದ್ದು, ಕನಿಷ್ಠ ಐದು ನಗರಗಳನ್ನಾದರೂ ಪ್ಲಾಸ್ಟಿಕ್ ಮುಕ್ತ ಮಾಡುವ ಗುರಿ ಹೊಂದಿದ್ದು, ಪ್ಲಾಸ್ಟಿಕ್ ಚೀಲದ ಬಳಕೆಗೆ ಬದಲಾಗಿ ಬಟ್ಟೆ ಚೀಲಗಳನ್ನು ಬಳಸಿದರೆ ಉತ್ತಮ. ಬಟ್ಟೆ ಚೀಲ ಉತ್ಪಾದನೆ ಮಾಡುವ ಉದ್ಯಮಕ್ಕೆ ಅನುದಾನ ನೀಡಿದರೆ ಪರಿಹಾರ ಸಿಗುತ್ತದೆ. ಬೀದರ್, ಕಲಬುರಗಿ, ಮೈಸೂರು, ಧರ್ಮಸ್ಥಳ ಸೇರಿ ಮತ್ತೊಂದು ನಗರವನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡುವ ನಿಟ್ಟಿನಲ್ಲಿ ಘೋಷಣೆ ಮಾಡುವ ಅಗತ್ಯ ಇದೆ ಎಂದು ತಿಳಿಸಿದರು.

ಇದನ್ನೂ ಓದಿ: ಹಾಸನ... ಕರಡಿ ದಾಳಿ ವೃದ್ಧ ರೈತನಿಗೆ ಗಂಭೀರ ಗಾಯ: ಆಸ್ಪತ್ರೆಗೆ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.