ETV Bharat / state

ಮೈಸೂರಿನಲ್ಲಿ ಇಂದು ಗೃಹ ಲಕ್ಷ್ಮಿ ಯೋಜನೆ ಅನುಷ್ಠಾನ ಕಾರ್ಯಕ್ರಮ: ಬೃಹತ್ ವೇದಿಕೆ ಸಜ್ಜು

author img

By ETV Bharat Karnataka Team

Published : Aug 29, 2023, 8:27 PM IST

Updated : Aug 30, 2023, 7:00 AM IST

Gruha Lakshmi Scheme Launch: ಮೈಸೂರಿನ ಮಹಾರಾಜ ಕಾಲೇಜಿನ ಮೈದಾನದಲ್ಲಿ ಗೃಹ ಲಕ್ಷ್ಮಿ ಯೋಜನೆ ಅನುಷ್ಠಾನ ಕಾರ್ಯಕ್ರಮಕ್ಕೆ ಬೃಹತ್ ವೇದಿಕೆ ಸಿದ್ಧವಾಗಿದೆ.

huge-platform-was-prepared-for-the-griha-lakshmi-scheme-implementation-in-mysuru
Gruha Lakshmi scheme: ಮೈಸೂರಿನಲ್ಲಿ ಗೃಹ ಲಕ್ಷ್ಮಿ ಯೋಜನೆ ಅನುಷ್ಠಾನ ಕಾರ್ಯಕ್ರಮಕ್ಕೆ ಸಿದ್ಧವಾಯ್ತು ಬೃಹತ್ ವೇದಿಕೆ

ಮೈಸೂರಿನಲ್ಲಿ ಗೃಹ ಲಕ್ಷ್ಮಿ ಯೋಜನೆ ಅನುಷ್ಠಾನ ಕಾರ್ಯಕ್ರಮದ ಪೂರ್ವ ಸಿದ್ಧತೆ

ಮೈಸೂರು: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆ ಅನುಷ್ಠಾನ ಕಾರ್ಯಕ್ರಮ ಇಂದು ಬೆಳಗ್ಗೆ ನಗರದಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ಕಾಂಗ್ರೆಸ್ ಮುಖಂಡ, ಸಂಸದ ರಾಹುಲ್ ಗಾಂಧಿ ಆಗಮಿಸಲಿದ್ದು, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಉದ್ಘಾಟನೆ ಮಾಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಹಿಸಲಿದ್ದಾರೆ.

ಕಾರ್ಯಕ್ರಮಕ್ಕೆ ಮಹಾರಾಜ ಕಾಲೇಜಿನ ಮೈದಾನದಲ್ಲಿ ಬೃಹತ್ ವೇದಿಕೆ ಸಿದ್ಧವಾಗಿದೆ. ಹಲವಾರು ರೀತಿಯ ವೈಶಿಷ್ಟ್ಯತೆಗಳಿಂದ ಕೂಡಿರುವ ಈ ಬೃಹತ್ ವೇದಿಕೆಯ ಸಿದ್ಧತೆಯ ಕಾರ್ಯ ಮಹಾರಾಜ ಕಾಲೇಜು ಮೈದಾನದಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮೇಲ್ವಿಚಾರಣೆಯಲ್ಲಿ ನಡೆದಿದೆ. ಡಿಸಿಎಂ ಸೋಮವಾರ ಸಂಜೆ ಮೈದಾನದಲ್ಲಿ ಸಿದ್ಧವಾಗುತ್ತಿರುವ ವೇದಿಕೆ ನಿರ್ಮಾಣ ಕಾರ್ಯವನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದ್ದರು.

huge-platform-was-prepared-for-the-griha-lakshmi-scheme-implementation-in-mysuru
ಗೃಹ ಲಕ್ಷ್ಮಿ ಯೋಜನೆ ಅನುಷ್ಠಾನ ಕಾರ್ಯಕ್ರಮಕ್ಕೆ ಸಿದ್ಧವಾಗಿರು ಬೃಹತ್ ವೇದಿಕೆ

ವೇದಿಕೆಯ ವಿಶೇಷತೆಗಳೇನು: ವೇದಿಕೆಯು ಸುಮಾರು 80 ಅಡಿ ಉದ್ದ, 60 ಅಡಿ ಅಗಲ, 8 ಅಡಿ ಎತ್ತರದಲ್ಲಿ ನಿರ್ಮಾಣವಾಗಿದೆ. ವೇದಿಕೆ ಹಿಂಭಾಗ 140 ಅಡಿಯ ಬೃಹತ್ ಎಲ್ಇಡಿ ಪರದೆಯನ್ನು ಇರಿಸಲಾಗಿದೆ. ವಿಐಪಿ, ವಿವಿಐಪಿಗಳಿಗೆ ವಿಶ್ರಾಂತಿ ಕೊಠಡಿಗಳು ಸಹ ಸಿದ್ಧವಾಗಿವೆ. ಜೊತೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ವಾಟರ್ ಪ್ರೂಫ್ ಜರ್ಮನ್ ಟೆಂಟ್ ನಿರ್ಮಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಮಹಿಳೆಯರಿಗೆ ಸುಸಜ್ಜಿತ ಶೌಚಾಲಯ ವ್ಯವಸ್ಥೆ ಇದೆ. ಕುಡಿಯುವ ನೀರಿನ ವ್ಯವಸ್ಥೆ, ವೇದಿಕೆ ಮುಂಭಾಗ ಸುಮಾರು 1 ಲಕ್ಷ ಜನರಿಗೆ ಆಸನಗಳ ವ್ಯವಸ್ಥೆ ಮಾಡಲಾಗಿದೆ.

ಬೆಳಗ್ಗೆ 11:30ಕ್ಕೆ ಕಾರ್ಯಕ್ರಮ ಪ್ರಾರಂಭ: ಕಾರ್ಯಕ್ರಮವು ಬೆಳಗ್ಗೆ 11:30 ಕ್ಕೆ ಆರಂಭವಾಗಲಿದೆ. ಡಿಸಿಎಂ ಡಿ ಕೆ ಶಿವಕುಮಾರ್, ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ಡಾ. ಹೆಚ್ ಸಿ ಮಹದೇವಪ್ಪ ಸೇರಿದಂತೆ ರಾಜ್ಯದ ಮಂತ್ರಿಗಳು, ಮೈಸೂರು ಭಾಗದ ನಾಲ್ಕು ಜಿಲ್ಲೆಗಳ ಶಾಸಕರು ಭಾಗವಹಿಸಲಿದ್ದಾರೆ. ರಾಜ್ಯಾದ್ಯಂತ ಸುಮಾರು 12,600 ಕಡೆ ನೇರ ಪ್ರಸಾರ ಆಗಲಿದೆ. ಮಂಗಳವಾರ ಈ ಕಾರ್ಯಕ್ರಮದ ಪೂರ್ವ ಸಿದ್ಧತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಪರಿಶೀಲನೆ ನಡೆಸಿದ್ದರು.

DCM DK Sivakumar
ಉಡುಗೊರೆ ಆಯ್ಕೆ ಮಾಡುತ್ತಿರುವ ಡಿಸಿಎಂ ಡಿ ಕೆ ಶಿವಕುಮಾರ್

ಗಣ್ಯರಿಗೆ ವಿಶೇಷ ಉಡುಗೊರೆ: ಗೃಹ ಲಕ್ಷ್ಮಿ ಕಾರ್ಯಕ್ರಮಕ್ಕೆ ಆಗಮಿಸುವ ಸಂಸದ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಇತರ ಗಣ್ಯರಿಗೆ ನೀಡಲು ಡಿಸಿಎಂ ಡಿ ಕೆ ಶಿವಕುಮಾರ್ ಮೈಸೂರಿನ ಕಾವೇರಿ ಎಂಪೋರಿಯಂ, ಗೊಂಬೆ ಮನೆ ಸೇರಿದಂತೆ ಹಲವು ಮಳಿಗೆಗಳಿಗೆ ಭೇಟಿ ನೀಡಿ, ವಿಶೇಷ ಉಡುಗೊರೆಗಳನ್ನು ಆಯ್ಕೆ ಮಾಡಿದ್ದಾರೆ.

ಗೃಹ ಲಕ್ಷ್ಮಿ ಯೋಜನೆಯ ಕಾರ್ಯಕ್ರಮಕ್ಕೆ ಸುಮಾರು 2 ಸಾವಿರ ಬಸ್​ಗಳ ಮೂಲಕ ಆಗಮಿಸುವ ಫಲಾನುಭವಿಗಳಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಬಿಗಿ ಪೊಲೀಸ್​ ಬಂದೋಬಸ್ತ್ ಏರ್ಪಡಿಸಲಾಗಿದೆ. ಸಂಚಾರ ದಟ್ಟಣೆ ಆಗದ ರೀತಿಯಲ್ಲಿ, ವಿಶೇಷ ವ್ಯವಸ್ಥೆಯನ್ನು ಸಹ ಮಾಡಲಾಗಿದೆ ಎಂದು ನಗರ ಪೊಲೀಸ್​ ಕಮಿಷನರ್ ರಮೇಶ್ ಬಾನೋತ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ವೈಜ್ಞಾನಿಕ-ವೈಚಾರಿಕ ಶಿಕ್ಷಣ ಸಿಗದೇ ಹೋದರೆ ಸಮಾಜಕ್ಕೆ ಜಡತ್ವ ಹಿಡಿಯುತ್ತದೆ : ಮುಖ್ಯಮಂತ್ರಿ ಸಿದ್ದರಾಮಯ್ಯ

Last Updated : Aug 30, 2023, 7:00 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.