ETV Bharat / state

ಮೈಸೂರು ದಸರಾ - 2023: ತುಲಾ ಲಗ್ನದಲ್ಲಿ ಪುಷ್ಪಾರ್ಚನೆ ಮಾಡುವ ಮೂಲಕ ಗಜಪಯಣಕ್ಕೆ ಚಾಲನೆ

author img

By ETV Bharat Karnataka Team

Published : Sep 1, 2023, 11:12 AM IST

Updated : Sep 1, 2023, 1:31 PM IST

Mysore Dussehra-2023: ಇಂದು ಗಜಪಡೆಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಗಜಪಯಣಕ್ಕೆ ಅಧಿಕೃತ ಚಾಲನೆ ನೀಡಲಾಯಿತು.

Mysore Dussehra-2023
Mysore Dussehra-2023

ಮೈಸೂರು ದಸರಾ 2023-ಗಜಪಯಣಕ್ಕೆ ಚಾಲನೆ

ಮೈಸೂರು: ಶುಭ ಶುಕ್ರವಾರದ ಬೆಳಗ್ಗೆ 9:45 ರಿಂದ 10:15ರ ತುಲಾ ಲಗ್ನದಲ್ಲಿ ಗಜಪಡೆಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಗಜಪಯಣಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು. ಆ ಮೂಲಕ 2023 ರ ನಾಡಹಬ್ಬ ದಸರಾಗೆ ಮುನ್ನುಡಿ ಬರೆಯಲಾಯಿತು.

ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಹೆಬ್ಬಾಗಿಲು ವೀರನಹೊಸಳ್ಳಿಯ ಬಳಿ ಅಭಿಮನ್ಯು ನೇತೃತ್ವದ 9 ಗಜಪಡೆಗಳಾದ ಮಹೇಂದ್ರ, ಅರ್ಜುನ, ವರಲಕ್ಷ್ಮಿ, ಧನಂಜಯ, ಗೋಪಿ, ವಿಜಯ, ಪಾರ್ಥಸಾರಥಿ, ರೋಹಿತ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಉಸ್ತುವಾರಿ ಸಚಿವ ಮಹಾದೇವಪ್ಪ ಜೊತೆಗೂಡಿದ ಗಣ್ಯರಿಂದ ಗಜಪಡೆಗೆ ಪುಷ್ಪಾರ್ಚನೆ ಮಾಡಲಾಯಿತು.

ಕಲಾತಂಡಗಳ ಆಕರ್ಷಣೆ: ಗಜಪಡೆಯ ಮುಂದೆ ಸಾಂಪ್ರದಾಯಿಕ ಕಂಸಾಳೆ, ಡೊಳ್ಳು, ವೀರಗಾಸೆ, ಪೂಜಾ ಕುಣಿತ, ಗೊರವರ ಕುಣಿತ, ಗುರುಪುರದ ಟಿಬೇಟಿಯನ್ ಶಾಲಾ ಮಕ್ಕಳು ಹಾಗೂ ಆದಿವಾಸಿ ಮಕ್ಕಳ ನೃತ್ಯ ಸೇರಿದಂತೆ ಕಲಾತಂಡಗಳ ವೈಭವದ ಪ್ರದರ್ಶನ ಸಹ ನಡೆಯಿತು. ವೇದಿಕೆ ಕಾರ್ಯಕ್ರಮದಲ್ಲಿ ಸ್ಥಳೀಯ ಹುಣಸೂರಿನ ಶಾಸಕ ಜಿ ಡಿ.ಹರೀಶ್ ಗೌಡ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾದೇವಪ್ಪ ಸೇರಿದಂತೆ, ಅರಣ್ಯ ಸಚಿವ ಈಶ್ವರ ಖಂಡ್ರೆ ದಸರಾ ಆನೆಗಳ ಪಟ್ಟಿ ಹಾಗೂ ಕಿರು ಪುಸ್ತಕ ಬಿಡುಗಡೆ ಮಾಡಿದರು. ಇವರ ಜೊತೆಗೆ ಹಲವು ಸಚಿವರು, ಶಾಸಕರು, ಹಿರಿಯ ಅರಣ್ಯಾಧಿಕಾರಿಗಳು ಭಾಗವಹಿಸಿದ್ದರು.

ಜಿಲ್ಲಾ ಉಸ್ತುವಾರಿ ಸಚಿವರಿಂದ ಪುಷ್ಪಾರ್ಚನೆ: ದಸರಾ ಗಜ ಪಯಣಕ್ಕೆ ವೀರನ ಹೊಸಹಳ್ಳಿ ಬಳಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಾ.ಹೆಚ್ ಸಿ ಮಹದೇವಪ್ಪ ಅವರು ಚಾಲನೆ ನೀಡಿದರು. ಅಭಿಮನ್ಯು ನೇತೃತ್ವದ 9 ಆನೆಗಳು ಮೈಸೂರಿಗೆ ಆಗಮಿಸಲು ಸಜ್ಜಾಗಿವೆ. ಗಜ ಪಯಣ ದಲ್ಲಿ ಅಭಿಮನ್ಯು ಸೇರಿದಂತೆ ಅರ್ಜುನ, ಬೀಮ, ಗೋಪಿ, ಧನಂಜಯ, ವರಲಕ್ಷ್ಮಿ, ವಿಜಯ, ಮಹೇಂದ್ರ ಹಾಗೂ ಕಂಜನ್ ಆನೆಗಳು ಮೈಸೂರಿಗೆ ಆಗಮಿಸಲಿವೆ.

ಸಚಿವರಾದ ಹೆಚ್ ಸಿ ಮಹದೇವಪ್ಪ ಅವರು ಮಾತನಾಡಿ ವಿಶ್ವ ವಿಖ್ಯಾತ ದಸರಾ ಆಚರಣೆಯ ಹಿನ್ನೆಲೆ ಯಲ್ಲಿ ದಸರಾ ಗಜ ಪಯಣಕ್ಕೆ ಧಾರ್ಮಿಕ ವಿಧಿ ವಿಧಾನಗಳ ಅನ್ವಯ ಮಾಡಲಾಗಿದೆ. ದಸರಾ ಎನ್ನುವುದು ಕುಣಿತಕ್ಕೆ, ಸಂತೋಷಕ್ಕೆ ಸೀಮಿತವಲ್ಲ, ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಆಚರಣೆ ಆದ್ದರಿಂದ ಇದು ವಿಶ್ವ ವಿಖ್ಯಾತಿ ಯನ್ನು ಪಡೆದಿದೆ. ಸ್ವಾತಂತ್ಯ ಬಂದ ಮೇಲೆ 75 ವರ್ಷಗಳನ್ನು ಕಳೆದಿದ್ದೇವೆ. ಅನೆ ಮೇಲೆ 800 ಕೆಜಿ ತೂಕದ ಅಂಭಾರಿಯನ್ನು ಮೆರವಣಿಗೆ ಮಾಡಿ ನಮ್ಮ ಸಂಸ್ಕೃತಿಯನ್ನು ಬಿಂಬಿಸಲಾಗುತ್ತದೆ. ಇಡೀ ದೇಶದ 140 ಕೋಟಿ ಜನರು ಎಲ್ಲರೂ ಒಂದೇ ಎಂಬ ಸಂದೇಶವನ್ನು ಬಿಂಬಿಸಲಾಗುತ್ತದೆ ಎಂದರು.

ಅರಣ್ಯ ಜೀವಿಶಾಸ್ತ್ರ ಹಾಗೂ ಪರಿಸರ ಇಲಾಖೆಯ ಸಚಿವರಾದ ಈಶ್ವರ್ ಖಂಡ್ರೆ ಅವರು ದಸರಾ ಆನೆಗಳ ಪಟ್ಟಿ ಹಾಗೂ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿ ಮಾತನಾಡಿ ಗಜ ಪಯಣ ದಸರಾ ಮಹೋತ್ಸವದ ಆರಂಭ. ನಾವು ಯಾವುದೇ ಶುಭ ಕಾರ್ಯ ಮಾಡಲು ಗಣಪತಿ ಯನ್ನು ಪೂಜಿಸುತ್ತೇವೆ. ದಸರಾಗೆ 14 ಆನೆಗಳನ್ನು ಕಳುಹಿಸುತ್ತೇವೆ. ಇದರಲ್ಲಿ ಮೊದಲ ಹಂತವಾಗಿ 9 ಆನೆಗಳನ್ನು ಕಳುಹಿಸಲಾಗುತ್ತಿದೆ. ಸೆಪ್ಟಂಬರ್ 05 ರಂದು ಅರಮನೆ ದ್ವಾರದಲ್ಲಿ ಸ್ವಾಗತಿಸಲಾಗುತ್ತದೆ ಎಂದು ಮಾಹಿತಿ ತಿಳಿಸಿದರು.

ಈ ಹಿಂದೆ ದಸರಾ ಗೆ ಆನೆಗಳನ್ನು ಕಾಲು ನಡಿಗೆಯಲ್ಲಿ ಕರೆದುಕೊಂಡು ಹೋಗಲಾಗುತ್ತಿತ್ತು. ಆಗ ದಾರಿಯುದ್ದಕ್ಕೂ ಜನರು ಆನೆಗಳಿಗೆ ಮಾವುತರಿಗೆ ಪೂಜೆ ಮಾಡಿ ಆಹಾರ ನೀಡಿ ಮುಂದೆ ಕಳುಹಿಸುತ್ತಿದ್ದರು. ಆದರೆ ಇತ್ತೀಚೆಗೆ ಲಾರಿ ಮೂಲಕ ಕರೆದುಕೊಂಡು ಹೋಗಲಾಗುತ್ತದೆ. ಪ್ರಕೃತಿ ಪರಿಸರವನ್ನು ಉಳಿಸಬೇಕು ಎಂದರು. ಪ್ರಾಣಿ ಮತ್ತು ಮಾನವ ಸಂಘರ್ಷ ನಡೆಯುತ್ತಿದ್ದು, ಇದನ್ನು ತಡೆಯಬೇಕು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಮಹಾ ಪೌರರಾದ ಶಿವಕುಮಾರ್ ಅವರು ಮಾತನಾಡಿ ಮೈಸೂರಿನ ಅರಸರು ದಸರಾ ಆಚರಣೆಯನ್ನು ಜಾರಿಗೆ ತಂದರು. 100 ವರ್ಷಗಳ ಹಿಂದೆಯೇ ಮೈಸೂರು ನಗರ ವಿದ್ಯುತ್ ಶಕ್ತಿ ಯನ್ನು ಪಡೆಯಿತು. ರಾಜರು ಉತ್ತಮ ನಗರವನ್ನು ನಿರ್ಮಾಣ ಮಾಡಿದರು. ಉತ್ತಮ ರಸ್ತೆ ನಿರ್ಮಾಣ ಮಾಡಿದರು. ಮೈಸೂರು ಬೆಳವಣಿಗೆಗೆ ಮೈಸೂರು ರಾಜರ ಕೊಡುಗೆಯನ್ನು ನಾವೆಲ್ಲರೂ ನೆನೆಯಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹುಣಸೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಜಿ ಡಿ ಹರೀಶ್ ಗೌಡ ಅವರು ಮಾತನಾಡಿ ಗಜ ಪಯಣ ಕಾರ್ಯಕ್ರಮಕ್ಕೆ ಅದ್ದೂರಿಯಾಗಿ ಚಾಲನೆ ನೀಡಲಾಗಿದೆ. ಮಾನ್ಯ ಮುಖ್ಯಮಂತ್ರಿ ಗಳಾದ ಸಿದ್ದರಾಮಯ್ಯ ಅವರು ಈ ಭಾರಿ ದಸರಾವನ್ನು ಅದ್ದೂರಿಯಾಗಿ ಆಚರಣೆ ಮಾಡಲು ತೀರ್ಮಾನಿಸಿದ್ದಾರೆ. ದಸರಾ ಆಚರಣೆಯ ಪ್ರಮುಖ ಆಕರ್ಷಣೆ ಜಂಭೂಸವಾರಿ. ಇದನ್ನು ನೋಡಲು ವಿಶ್ವದ ವಿವಿಧ ಭಾಗಗಳಿಂದ ಜನರು ಆಗಮಿಸುತ್ತಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಹುಣಸೂರು ತಾಲ್ಲೂಕು ಕಾಡಿನ ಗಡಿಯನ್ನು ಹೆಚ್ಚಾಗಿ ಹೊಂದಿದೆ. ಇಲ್ಲಿ ಪ್ರಾಣಿ ಹಾಗೂ ಮಾನವ ಸಂಘರ್ಷ ನಡೆಯುತ್ತಿದೆ. ಇದನ್ನು ತಡೆಯಲು ರೈಲ್ವೆ ಬ್ಯಾರಿಕೇಡ್ ಅಳವಡಿಸಬೇಕು ಎಂದು ಮಾನ್ಯ ಅರಣ್ಯ ಸಚಿವರಲ್ಲಿ ಮನವಿ ಮಾಡಿದಾಗ 5 ಕೋಟಿ ಅನುಧಾನ ನೀಡಲಾಗುವುದು ಎಂದು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು. ಅರಣ್ಯ ಇಲಾಖೆಯ ಗುತ್ತಿಗೆ ಆಧಾರದ ಸಿಬ್ಬಂದಿಗಳು ದಿನದ 24 ಗಂಟೆ ಕೆಲಸ ನಿರ್ವಹಿಸುತ್ತಾರೆ ಇವರಿಗೆ ಸಕಾಲದಲ್ಲಿ ಸಂಬಳ ನೀಡಬೇಕು. ಅರಣ್ಯ ಇಲಾಖೆಯ ಗುತ್ತಿಗೆ ಆಧಾರದ ಸಿಬ್ಬಂದಿಗಳಿಗೆ ಸೇವಾ ಭದ್ರತೆ ಇಲ್ಲ. ಇವರನ್ನು ಖಾಯಂ ಮಾಡಿ ಸೇವಾ ಭದ್ರತೆ ನೀಡಬೇಕು ಎಂದು ಅರಣ್ಯ ಸಚಿವರಲ್ಲಿ ಮನವಿ ಮಾಡಿದರು. ಇನ್ನು ವೇದಿಕೆಯಲ್ಲಿ ಮಾವುತರಿಗೆ ಗಣ್ಯರಿಂದ ಸನ್ಮಾನ ಮಾಡಿಸಿ ಕಳುಹಿಸಿ ಕೊಡಲಾಯಿತು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮಹಾ ಪೌರರಾದ ಶಿವ ಕುಮಾರ್, ವಿಧಾನ ಪರಿಷತ್ ಸದಸ್ಯರಾದ ಸಿ ಎನ್ ಮಂಜೇಗೌಡ, ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ, ಮೈಸೂರು ನಗರ ಪೊಲೀಸ್ ಆಯುಕ್ತರಾದ ರಮೇಶ್ ಬಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾ, ಡಿ ಸಿ ಫ್ ಸೌರಭ್ ಕುಮಾರ್ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: ಮೈಸೂರು ದಸರಾ: ನಾಳೆ ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ಗಜಪಯಣಕ್ಕೆ ಚಾಲನೆ

Last Updated :Sep 1, 2023, 1:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.