ETV Bharat / state

ಮೈಸೂರು: ನೇಮಕಾತಿ ಪತ್ರ ಹಿಡಿದು ಏರ್​ಪೋರ್ಟ್​ಗೆ ಬಂದಿದ್ದ ಯುವಕರಿಗೆ ಕಾದಿತ್ತು ಶಾಕ್​!

author img

By

Published : Nov 6, 2020, 1:24 PM IST

ವಿಮಾನ ನಿಲ್ದಾಣದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ, ಕೆಲ ಯುವಕರಿಂದ ಹಣ ಪಡೆದು ಇ-ಮೇಲ್​​ ಮೂಲಕ ನಕಲಿ ನೇಮಕಾತಿ ಪತ್ರ ನೀಡಿ ವಂಚಿಸಿರುವ ಘಟನೆ ಮೈಸೂರಲ್ಲಿ ನಡೆದಿದೆ. ಲಾಕ್​ಡೌನ್​ ಸಮಯದಲ್ಲಿ ಕೆಲಸ ಕಳೆದುಕೊಂಡ ಹಲವಾರು ಯುವಕರು, ಕೆಲಸದ ಆಸೆಗಾಗಿ ಹಣ ಕೊಟ್ಟು ಕೈಸುಟ್ಟುಕೊಂಡಿದ್ದಾರೆ.

File Photo
ಸಂಗ್ರಹ ಚಿತ್ರ

ಮೈಸೂರು: ನಗರದಲ್ಲಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ನೌಕರಿ ಕೊಡಿಸುವುದಾಗಿ ಆಮಿಷವೊಡ್ಡಿ, ಕೆಲ ಯುವಕರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಮಂಡಕಳ್ಳಿ ವಿಮಾನ ನಿಲ್ದಾಣದ ನಿರ್ವಹಣಾ ಜವಾಬ್ದಾರಿ ಹೊಂದಿರುವ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ)ದಲ್ಲಿ ಕೆಲಸ ಕೊಡಿಸುತ್ತೇವೆ ಎಂದು ಯುವಕರಿಗೆ ಆಮಿಷವೊಡ್ಡಿದ ವಂಚಕರು, ಲಕ್ಷಾಂತರ ರೂಪಾಯಿ ಹಣ ಪಡೆದು ನಕಲಿ ನೇಮಕಾತಿ ಪತ್ರ ನೀಡಿ ಮೋಸ ಮಾಡಿದ್ದಾರೆ.

ಉದ್ಯೋಗಾಕಾಂಕ್ಷಿ ಯುವಕರನ್ನು ಟಾರ್ಗೆಟ್ ಮಾಡಿದ್ದ ವಂಚಕರು, ಮೈಸೂರು ವಿಮಾನ ನಿಲ್ದಾಣದಲ್ಲಿ ಕೆಲಸ ಕೊಡಿಸುವುದಾಗಿ ಯುವಕರೊಂದಿಗೆ ಇ-ಮೇಲ್ ನಲ್ಲಿ ವ್ಯವಹಾರ ನಡೆಸಿದ್ದಾರೆ. ಕೆಲಸ ಬೇಕೆಂದರೆ ಹಣ ನೀಡಬೇಕು ಎಂದು ಯುವಕರಿಗೆ ಹೇಳಿ, ಉದ್ಯೋಗಾಕಾಂಕ್ಷಿಗಳಿಂದ ಕಂತುಗಳಲ್ಲಿ ಹಣ ಪಡೆದು ನಕಲಿ ನೇಮಕಾತಿ ಪತ್ರವನ್ನು ಇ-ಮೇಲ್‌ ಮೂಲಕವೇ ನೀಡಿದ್ದಾರೆ ಎನ್ನಲಾಗ್ತಿದೆ.

ಇ-ಮೇಲ್​​ ಮೂಲಕ ದೊರೆತ ನೇಮಕಾತಿ ಪತ್ರವನ್ನು ಹಿಡಿದು ಕೆಲಸಕ್ಕೆ ಸೇರಿಕೊಳ್ಳಲು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಕೆಲ ಯುವಕರು ಆಗಮಿಸಿದ್ದಾರೆ. ಈ ವೇಳೆ ವಿಮಾನ ನಿಲ್ದಾಣದ ಅಧಿಕಾರಿಗಳಿಂದ ವಿಷಯ ತಿಳಿದುಬಂದಿದ್ದು, ತಾವು ಮೋಸ ಹೋಗಿರುವುದು ಅರಿವಿಗೆ ಬಂದಿದೆ. ವಂಚನೆಗೊಳಗಾದವರ ಪೈಕಿ ಅತೀ ಹೆಚ್ಚು ಯುವಕರು ಲಾಕ್​​ಡೌನ್ ಸಂದರ್ಭದಲ್ಲಿ ನೌಕರಿ ಕಳೆದುಕೊಂಡವರು ಎಂದು ತಿಳಿದುಬಂದಿದೆ.

ಈ ಬಗ್ಗೆ ದೂರವಾಣಿಯಲ್ಲಿ ಪ್ರತಿಕ್ರಿಯಿಸಿದ ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಮಂಜುನಾಥ್, ಕೆಲ ವಂಚಕರು ವಿಮಾನ ನಿಲ್ದಾಣದಲ್ಲಿ ಕೆಲಸ ಕೊಡಿಸುವುದಾಗಿ ಮೋಸ ಮಾಡಿರುವುದು ನಮ್ಮ ಗಮನಕ್ಕೆ ಬಂದಿದೆ. ಯಾವುದೇ ಕಾರಣಕ್ಕೂ ವಿಮಾನ ನಿಲ್ದಾಣದಲ್ಲಿ ನೇಮಕಾತಿ ಮಾಡಿಕೊಳ್ಳುವ ಪ್ರಕ್ರಿಯೆ ಹೀಗೆ ಇರುವುದಿಲ್ಲ. ಇದರಲ್ಲಿ ಖಾಸಗಿ ವ್ಯಕ್ತಿಗಳು ಇ-ಮೇಲ್ ಮೂಲಕ ಜಾಹೀರಾತು ನೀಡಲು ಸಾಧ್ಯವಿಲ್ಲ. ಯುವಕರನ್ನು ಮೋಸ ಮಾಡುವ ಉದ್ದೇಶದಿಂದಲೇ ಈ ರೀತಿ ಮಾಡಿರಬಹುದು, ವಿಮಾನ ನಿಲ್ದಾಣದಲ್ಲಿ ಕೆಲಸ ಪಡೆಯಲು ಯಾವುದೇ ಹಣ ಕೊಡಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಸ್ತುತ ಸಮಯದಲ್ಲಿ ಯುವಕರು ಎಚ್ಚರಿಕೆಯಿಂದ ಇರಬೇಕು, ನಕಲಿ ನೇಮಕಾತಿ ಪತ್ರ ಹಿಡಿದು ಕೆಲವರು ಮೈಸೂರು ವಿಮಾನ ನಿಲ್ದಾಣಕ್ಕೆ ಬಂದಿದ್ದು, ಅವರಿಗೆ ನೇಮಕಾತಿ ಪ್ರಕ್ರಿಯೆ ಬಗ್ಗೆ ತಿಳಿಸಿ ಹೇಳಿದ್ದೇನೆ. ಯಾವುದೇ ಕಾರಣಕ್ಕೂ ಯುವಕರು ಈ ರೀತಿಯ ವಂಚನೆಯ ಬಲೆಗೆ ಬೀಳದೆ, ಎಚ್ಚರವಾಗಿರಬೇಕು ಎಂದು ಸಲಹೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.