ETV Bharat / state

ವರುಣಾ ಕ್ಷೇತ್ರ: ಭಾರೀ ಪೈಪೋಟಿ ನಡುವೆಯೂ ಸೋಮಣ್ಣ ವಿರುದ್ಧ ಗೆಲುವು ಸಾಧಿಸಿದ ಸಿದ್ದರಾಮಯ್ಯ

author img

By

Published : May 13, 2023, 1:34 PM IST

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕ್ಷೇತ್ರವಾದ ವರುಣಾದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.

Former Chief Minister Siddaramaiah  Siddaramaiah won in Varuna constituency  Karnataka assembly election  ರಾಜ್ಯದ ಮಾಸ್​ ಲೀಡರ್ ರಾಜಕೀಯ ಇತಿಹಾಸ  ಸೋಮಣ್ಣ ವಿರುದ್ಧ ಗೆಲುವು ಸಾಧಿಸಿದ ಸಿದ್ದರಾಮಯ್ಯ  ತಮ್ಮ ಕ್ಷೇತ್ರವಾದ ವರುಣಾದಲ್ಲಿ ಭರ್ಜರಿ ಗೆಲುವು  ವರುಣಾ ವಿಧಾನಸಭಾ ಕ್ಷೇತ್ರ  ಸಿದ್ದರಾಮಯ್ಯ ತಮ್ಮ ಗೆಳೆಯನ ವಿರುದ್ಧ ಭರ್ಜರಿ ಗೆಲುವು  ಜಾತ್ಯಾತೀತ ಜನತಾದಳ  ಪ್ರಬಲ ಕೋಮಿಗೆ ಸೇರಿದ್ದ ವಿ ಸೋಮಣ್ಣ ಬಿಜೆಪಿಯಿಂದ ಅಖಾಡ
ಸೋಮಣ್ಣ ವಿರುದ್ಧ ಗೆಲುವು ಸಾಧಿಸಿದ ಸಿದ್ದರಾಮಯ್ಯ

ಮೈಸೂರು: ಈ ಭಾರಿ ದೇಶಾದ್ಯಂತ ಸದ್ದು ಮಾಡಿದ್ದ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಸೋಮಣ್ಣ ಹೀನಾಯವಾಗಿ ಸೋಲನ್ನಪ್ಪಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಗೆಳೆಯನ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. ಹೌದು, ಕಾಂಗ್ರೆಸ್​ನ ಮಾಸ್​ ಲೀಡರ್ ಸಿದ್ದರಾಮಯ್ಯ​ ವಿರುದ್ಧ ಪ್ರಬಲ ಕೋಮಿಗೆ ಸೇರಿದ್ದ ವಿ ಸೋಮಣ್ಣ ಬಿಜೆಪಿಯಿಂದ ಅಖಾಡದಲ್ಲಿದ್ದರು. ಇಬ್ಬರ ನಡುವೆ ಭಾರಿ ಸರ್ಧೆಯೇ ನಡೆದಿತ್ತು. ಸೋಮಣ್ಣ ಪರ ಅಮಿತ್​ ಶಾ, ಯಡಿಯೂರಪ್ಪ, ನಟ ಸುದೀಪ್​, ಸಿಎಂ ಬೊಮ್ಮಾಯಿ ಸೇರಿದಂತೆ ಅತಿರಥ ಮಹಾರಥ ನಾಯಕರೆಲ್ಲ ಬಂದು ಪ್ರಚಾರ ಮಾಡಿದ್ದರು. ಆದರೂ ಸಹಿತ ಸೋಮಣ್ಣ ವಿರುದ್ಧ ಸಿದ್ದರಾಮಯ್ಯ ಗೆಲುವಿನ ನಗೆ ಬೀರಿದ್ದಾರೆ.

ರಾಜ್ಯದ ಮಾಸ್​ ಲೀಡರ್ ರಾಜಕೀಯ ಇತಿಹಾಸ: ಹಿಂದುಳಿದ, ಅಹಿಂದ ಹಾಗೂ ಸಮಾಜವಾದಿ ಹಿನ್ನೆಲೆಯ, ಸಿದ್ದರಾಮನಹುಂಡಿಯ ಸಿದ್ದರಾಮಯ್ಯನವರ ಜೀವನ ಚರಿತ್ರೆ ಇತರರಿಗೆ ಸ್ಪೂರ್ತಿ. ಚಿಕ್ಕ ಹಳ್ಳಿಯಲ್ಲಿ ಹುಟ್ಟಿದ ಸಿದ್ದರಾಮಯ್ಯ, ಬಾಲ್ಯ, ಶಿಕ್ಷಣ, ವಕೀಲ ವೃತ್ತಿ, ರಾಜಕೀಯ ಪ್ರವೇಶ, ಅನಂತರ ಹಣಕಾಸು ಸಚಿವರಾಗಿ, ಉಪ ಮುಖ್ಯಮಂತ್ರಿ ಆಗಿ ಹಾಗೂ ಮುಖ್ಯಮಂತ್ರಿ ಆಗಿ ಜನಸೇವೆ ಮಾಡಿದ್ದಾರೆ.

ಬಾಲ್ಯ ಮತ್ತು ಶಿಕ್ಷಣ: ಮೈಸೂರು ಜಿಲ್ಲೆಯ ವರುಣಾ ಹೋಬಳಿಯ ಸಿದ್ದರಾಮನಹುಂಡಿಯಲ್ಲಿ 12 ಆಗಸ್ಟ್ 1948ರಲ್ಲಿ ಸಿದ್ದರಾಮಯ್ಯನವರು ಜನಿಸಿದರು. ಮಧ್ಯಮ ಕುಟುಂಬಕ್ಕೆ ಸೇರಿದ್ದರಿಂದ ಸಿದ್ದರಾಮಯ್ಯನವರು ಬಾಲ್ಯದದಲ್ಲಿ ತುಂಬಾ ಕಷ್ಟ ಎದುರಿಸಿದ್ದರು. ಇವರ ವಿದ್ಯಾಭ್ಯಾಸದ ಆಸಕ್ತಿ ಕಂಡು ಶಾಲೆಯ ಶಿಕ್ಷಕರು ಇವರನ್ನು ನೇರವಾಗಿ ನಾಲ್ಕನೇ ತರಗತಿಗೆ ಪ್ರವೇಶ ನೀಡಿದ್ದರು.

ಅನಂತರ ಕಾಲೇಜು ಶಿಕ್ಷಣಕ್ಕೆ ಮೈಸೂರಿನ ಯುವರಾಜ ಕಾಲೇಜಿಗೆ ಸೇರಿ ಬಿಎಸ್ಸಿ ಪದವಿ ಪಡೆದರು. ತಂದೆಗೆ ಸಿದ್ದರಾಮಯ್ಯನವರು ಡಾಕ್ಟರ್ ಆಗಬೇಕೆಂಬ ಆಸೆ ಇತ್ತು. ಆದರೆ, ಬಿಎಸ್ಸಿ ಪದವಿಯ ನಂತರ ಸಿದ್ದರಾಮಯ್ಯನವರು, ಶಾರದಾ ವಿಲಾಸ ಕಾಲೇಜಿನಲ್ಲಿ ಕಾನೂನು ಪದವಿ ಪಡೆದು, ಅಲ್ಲೇ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸತೊಡಗಿದರು. ಅಲ್ಪ ಕಾಲ ವಕೀಲ ವೃತ್ತಿಯನ್ನು ಸಹ ನಡೆಸಿದ ಅವರು, ಸಮಾಜವಾದಿ ಚಿಂತಕ ಡಾ. ರಾಮ್ ಮನೋಹರ್ ಲೋಹಿಯಾ ಅವರ ಪ್ರಭಾವಕ್ಕೆ ಒಳಗಾಗಿ ರಾಜಕೀಯ ಪ್ರವೇಶ ಮಾಡಿದರು.

ರಾಜಕೀಯಕ್ಕೆ ಪ್ರವೇಶ: ವಕೀಲ ವೃತ್ತಿ ಬಿಟ್ಟು ರಾಜಕೀಯಕ್ಕೆ ಪ್ರವೇಶ ಮಾಡಿದ ಸಿದ್ದರಾಮಯ್ಯ, 1978ರಲ್ಲಿ ತಾಲೂಕು ಅಭಿವೃದ್ಧಿ ಮಂಡಳಿಯ ಸದಸ್ಯರಾದರು.‌ ರೈತ ಚಳುವಳಿಯ ಪ್ರೊ.ಎಂ ಡಿ.ನಂಜುಂಡಸ್ವಾಮಿ ಅವರೊಂದಿಗೆ ಒಡನಾಟ ಆರಂಭಿಸಿದ, ಸಿದ್ದರಾಮಯ್ಯ 1980 ರಲ್ಲಿ ಮೈಸೂರಿನಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸೋಲು ಅನುಭವಿಸಿದರು.

1983ರಲ್ಲಿ ವಿಧಾನಸಭಾ ಚುನಾವಣೆಗೆ ಲೋಕದಳದ ಅಭ್ಯರ್ಥಿಯಾಗಿ ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶ ಮಾಡಿದರು. ಅನಂತರ ಮಧ್ಯಂತರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಜನತಾ ಪಕ್ಷದಿಂದ ಸ್ಪರ್ಧಿಸಿ ಮಂತ್ರಿಯಾದರು. 1991ರಲ್ಲಿ ಲೋಕಸಭೆಗೆ ಕೊಪ್ಪಳದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ ಸಿದ್ದರಾಮಯ್ಯ, 1994ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಜನತಾದಳದ ಅಭ್ಯರ್ಥಿಯಾಗಿ ಗೆದ್ದು ಮೂರನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಆಗ ಹೆಚ್​ ಡಿ.ದೇವೇಗೌಡರ ಸಂಪುಟದಲ್ಲಿ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದರು. 1996 ರಲ್ಲಿ ಉಪ ಮುಖ್ಯಮಂತ್ರಿ ಆಗಿ ಜೆ ಎಚ್.ಪಟೇಲ್ ಸಂಪುಟದಲ್ಲಿಯೂ ಕಾರ್ಯ ನಿರ್ವಹಿಸಿದ್ದರು.

1999 ರಲ್ಲಿ ಜನತಾ ದಳ ವಿಭಜನೆ ಆಯಿತು. ಆಗ ಜಾತ್ಯಾತೀತ ಜನತಾದಳದೊಂದಿಗೆ ಗುರುತಿಸಿಕೊಂಡಿದ್ದು, 1999ರ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಸೋತರು. ಅನಂತರ 2004 ರ ಚುನಾವಣೆಯಲ್ಲಿ ಗೆದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್​ನ ಸಮ್ಮಿಶ್ರ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಆದರು. ಆ ಸಂದರ್ಭದಲ್ಲಿ ಜೆಡಿಎಸ್​ನಿಂದ ಸಿದ್ದರಾಮಯ್ಯ ಅವರನ್ನು ಕೆಲವು ರಾಜಕೀಯ ಕಾರಣಗಳಿಂದ ಉಚ್ಛಾಟನೆ ಮಾಡಲಾಯಿತು.

ಕಾಂಗ್ರೆಸ್ ಸೇರ್ಪಡೆ: ಜೆಡಿಎಸ್​ನಿಂದ ಉಚ್ಛಾಟನೆಗೊಂಡ ಸಿದ್ದರಾಮಯ್ಯನವರು, ಸೋನಿಯಾ ಗಾಂಧಿ ನೇತೃತ್ವದಲ್ಲಿ 2006 ರಂದು ಕಾಂಗ್ರೆಸ್ ಪಕ್ಷ ಸೇರ್ಪಡೆ ಆದರು. ಅನಂತರ 2006 ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ, ಅಲ್ಪ ಮತಗಳಿಂದ ಗೆಲುವು ಸಾಧಿಸಿದರು. ಈ ಗೆಲುವು ಸಿದ್ದರಾಮಯ್ಯನವರ ರಾಜಕೀಯ ಜೀವನವನ್ನೇ ಬದಲಾಯಿಸಿತು.

2008 ವಿಧಾನಸಭಾ ಕ್ಷೇತ್ರ ಪುನರ್​ ವಿಂಗಡಣೆಯಾದಾಗ, ಹೊಸದಾಗಿ ಅಸ್ತಿತ್ವಕ್ಕೆ ಬಂದ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದರು. ಆ ಸಂದರ್ಭದಲ್ಲಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಐತಿಹಾಸಿಕ ಬಳ್ಳಾರಿ ಪಾದಯಾತ್ರೆ ನಡೆಸಿ, 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬಂತು.‌ ಆಗ ಸಿದ್ದರಾಮಯ್ಯ 5 ವರ್ಷ ಮುಖ್ಯಮಂತ್ರಿ ಆಗಿ ಆಡಳಿತ ನಡೆಸಿದರು. ಬಳಿಕ 2018 ರ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಹಾಗೂ ಬಾದಾಮಿ ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡಿದ ಸಿದ್ದರಾಮಯ್ಯ, ಚಾಮುಂಡೇಶ್ವರಿಯಲ್ಲಿ ಸೋಲು ಅನುಭವಿಸಿ ಬಾದಾಮಿಯಿಂದ ಗೆದ್ದರು. ಕಾಂಗ್ರೆಸ್ ಹಾಗೂ ಜೆಡಿಎಸ್​ನ ಸಮ್ಮಿಶ್ರ ಸರ್ಕಾರದಲ್ಲಿ ಸಮನ್ವಯ ಸಮಿತಿಯ ಅಧ್ಯಕ್ಷರಾಗಿ, ಬಳಿಕ ಈಗ ಬಿಜೆಪಿ ಸರ್ಕಾರದಲ್ಲಿ ವಿರೋಧ ಪಕ್ಷದ ನಾಯಕರಾಗಿ ಕೆಲಸಮಾಡಿದರು. ವರುಣಾದಿಂದ ಸ್ಪರ್ಧೆ ಮಾಡಿದ್ದ ಸಿದ್ದರಾಮಯ್ಯ ಈಗ ತಮ್ಮ ರಾಜಕೀಯ ಜೀವನದ ಕೊನೆಯ ಚುನಾವಣೆಯನ್ನು ಎದುರಿಸಿ ಗೆಲುವು ಸಾಧಿಸಿದ್ದಾರೆ.

ಓದಿ: ಕಾಂಗ್ರೆಸ್​ ಪಕ್ಷ 120ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು, ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರುತ್ತದೆ:ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.