ETV Bharat / state

ಕೊರೊನಾಮುಕ್ತ ಪ್ರಪಂಚಕ್ಕಾಗಿ ಅಧಿದೇವತೆಗೆ ಡಾ.ಸಿ.ಎನ್.ಮಂಜುನಾಥ್ ಪ್ರಾರ್ಥನೆ

author img

By

Published : Oct 17, 2020, 11:10 AM IST

ವಿಶ್ವವಿಖ್ಯಾತ ನಾಡಹಬ್ಬ ಸರಳ ದಸರಾಗೆ ಚಾಲನೆ ನೀಡಿದ ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾದ ಡಾ.ಸಿ.ಎನ್.ಮಂಜುನಾಥ್ ಅವರು, ಕೊರೊನಾ ರೋಗಕ್ಕೆ ಬೇಗ ಲಸಿಕೆ ಸಿಗಲಿ, ಪ್ರಪಂಚ ಕೊರೊನಾ ಮುಕ್ತವಾಗಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಬೇಡಿಕೊಂಡಿದ್ದಾಗಿ ತಿಳಿಸಿದ್ದಾರೆ.

Dr C. N. Manjunath prayed for a Corona free world
ಕೊರೊನಾ ಮುಕ್ತ ಪ್ರಪಂಚಕ್ಕಾಗಿ ಪ್ರಾರ್ಥಿಸಿದ ಡಾ. ಸಿ. ಎನ್. ಮಂಜುನಾಥ್

ಮೈಸೂರು: ಪ್ರಪಂಚ ಕೊರೊನಾ ಮುಕ್ತವಾಗಲಿ, ಖಾಯಿಲೆಗೆ ಬೇಗ ಲಸಿಕೆ ಸಿಗಲಿ ಎಂದು ನಾಡಹಬ್ಬ ಉದ್ಘಾಟಿಸಿದ ಡಾ.ಸಿ.ಎನ್.ಮಂಜುನಾಥ್ ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿ ದೇವಿಯಲ್ಲಿ ಪ್ರಾರ್ಥಿಸಿಕೊಂಡಿದ್ದಾಗಿ ತಿಳಿಸಿದ್ದಾರೆ.

Dr C. N. Manjunath prayed for a Corona free world
ನಾಡಹಬ್ಬ ದಸರಾ ಉದ್ಘಾಟಿಸಿದ ಡಾ.ಸಿ.ಎನ್.ಮಂಜುನಾಥ್ ಅವರಿಗೆ ಗೌರವಾರ್ಪಣೆ

ಜಗದ್ವಿಖ್ಯಾತ ನಾಡಹಬ್ಬ ಸರಳ ದಸರಾ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು. 'ದಸರಾ ಉದ್ಘಾಟನೆ ಮಾಡುವ ಸೌಭಾಗ್ಯ ಸಿಕ್ಕಿದ್ದು ನನ್ನ ಜೀವನದಲ್ಲಿ ಅತ್ಯಂತ ದೊಡ್ಡ ಗೌರವವಾಗಿದೆ. ಇದಕ್ಕೆ ನಾನು ಚಿರಋಣಿ. ಮೈಸೂರು ರಾಜ್ಯವನ್ನು ಆಳಿ ಜನಪರ ಆಡಳಿತ ಕೊಟ್ಟಿರುವ ಹಾಗೂ ಈ‌ ನಾಡಿನ ಕಲೆ, ಸಾಹಿತ್ಯಕ್ಕೆ ಹೆಚ್ಚಿನ ಕೊಡುಗೆ, ಗೌರವ ನೀಡಿರುವ ಯದುವಂಶದ ರಾಜರಿಗೂ ಧನ್ಯವಾದ ಅರ್ಪಿಸುತ್ತೇನೆ' ಎಂದರು.

ಮುಂದುವರೆದು ಮಾತನಾಡಿದ ಅವರು, 'ಪ್ರಪಂಚ ಕೊರೊನಾ ಸಂಕಷ್ಟಗಳಿಂದ ಮುಕ್ತವಾಗಲಿ, ಬೇಗ ಕೊರೊನಾ ಸೋಂಕಿಗೆ ಲಸಿಕೆ ಸಿಗಲಿ. ರಾಜ್ಯವು ಜಲ ಸಂಕಷ್ಟದಿಂದಲೂ ಮುಕ್ತವಾಗಲಿ ಎಂದು ಚಾಮುಂಡೇಶ್ವರಿ ತಾಯಿಯಲ್ಲಿ ಕೇಳಿಕೊಂಡಿದ್ದೇನೆ. ವೈಯುಕ್ತಿಕವಾಗಿ ಹಾಗೂ ಕುಟುಂಬಕ್ಕೋಸ್ಕರ ಏನನ್ನೂ ಕೇಳಿಕೊಂಡಿಲ್ಲ. ಇದು ನನ್ನ ಪತ್ನಿ ಹಾಗೂ ಮಕ್ಕಳ ಉದ್ದೇಶವೂ ಆಗಿದೆ' ಎಂದು ತಿಳಿಸಿದರು.

'ದಸರಾ ಮಹೋತ್ಸವದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಉದ್ಘಾಟನೆ ಮಾಡಲು ವೈದ್ಯರಿಗೆ ಅವಕಾಶ ಮಾಡಿಕೊಟ್ಟ ಸರ್ಕಾರ ಹಾಗೂ ಮುಖ್ಯಮಂತ್ರಿಗಳಿಗೆ ಧನ್ಯವಾದಗಳು. ಈ ದಸರಾ ಮಹೋತ್ಸವವು ನಾಡಿನ ಭಾಷೆ, ಸಂಸ್ಕೃತಿ, ಸಂಪ್ರದಾಯ ಹಾಗೂ ದೇಶೀಯತೆಯನ್ನು ಸಾರುತ್ತದೆ' ಎಂದು ಡಾ.ಸಿ.ಎನ್‌.ಮಂಜುನಾಥ್‌ ಹೇಳಿದರು.

'ಪರಿಸರವನ್ನು ನಾವು ಬೆಳೆಸಬೇಕು. ಅದನ್ನು ಹಾಳು ಮಾಡಿದರೆ ಹೇಗೆ ಸಂಕಷ್ಟ ಎದುರಾಗುತ್ತದೆ ಎಂಬುದನ್ನು ಇಂದು ಪ್ರಕೃತಿ ತೋರಿಸುತ್ತಿದೆ. ಮಹಾಮಾರಿಯಿಂದ ದೂರ ಉಳಿಯಲು ನಾವು ಶುಚಿತ್ವವನ್ನು ಕಾಪಾಡಿಕೊಳ್ಳಬೇಕು. ಸ್ಯಾನಿಟೇಶನ್‌ ಮಾಡಿಕೊಳ್ಳಬೇಕು. ಮಾಸ್ಕ್ ಹಾಕಿಕೊಂಡು ವ್ಯಕ್ತಿಗತ ಅಂತರ ಕಾಯ್ದುಕೊಳ್ಳಬೇಕು' ಎಂದು ಅವರು ಇದೇ ವೇಳೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

'ಸಮಾಜ ಜಾಲಾಡುತ್ತಿರುವ ಸಾಮಾಜಿಕ ಜಾಲತಾಣ':

'ಸಾಮಾಜಿಕ ಜಾಲತಾಣಗಳು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿವೆ. ಸಮಾಜವನ್ನು ಜಾಲಾಡಿ ಜನರ ದಿಕ್ಕು ತಪ್ಪಿಸುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಕೊರೊನಾ ಸೇರಿದಂತೆ ಹಲವು ವಿಷಯಗಳ ಬಗ್ಗೆ ತಪ್ಪು ಮಾಹಿತಿಗಳು ರವಾನೆಯಾಗುತ್ತಿವೆ. ಇವೆಲ್ಲ ನಿಲ್ಲಬೇಕಿದ್ದು, ನೈಜ ಸುದ್ದಿಯನ್ನು ಮಾತ್ರ ರವಾನಿಸಬೇಕು' ಎಂದು ಅವರು ಜನರಿಗೆ ಕಿವಿಮಾತು ಹೇಳಿದ್ದಾರೆ.

'ವಿದ್ಯೆಗಿಂತಲೂ ನಮ್ಮ ಸಂಸ್ಕಾರ ಬಹಳ ಮುಖ್ಯವಾಗುತ್ತದೆ. ನಾವು ಜೀವ ಮೊದಲು, ಶುಲ್ಕ ಆಮೇಲೆ ಎಂಬ ನಿಟ್ಟಿನಲ್ಲಿ ಕಾರ್ಯನಿರ್ವಹಣೆ ಮಾಡುತ್ತೇವೆ' ಎಂದು ಡಾ. ಮಂಜುನಾಥ್ ವೈದ್ಯಕೀಯ ಸೇವೆಯ ಮಹತ್ವವನ್ನು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.